ಬೆಂಗಳೂರು:ರಾಜ್ಯದಲ್ಲಿ ಮುಂದಿನ 3 ವರ್ಷ ಬಿ.ಎಸ್.ಯಡಿಯೂರಪ್ಪ ಅವರೇ ಮುಖ್ಯಮಂತ್ರಿ. ಅವರೇ ನಮ್ಮ ಪ್ರಶ್ನಾತೀತ ನಾಯಕ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದ್ದು, ಎಲ್ಲ ಊಹಾಪೋಹಗಳಿಗೆ ಬ್ರೇಕ್ ಹಾಕಿದ್ದಾರೆ.
ಬಿಎಸ್​ವೈ ನೇತೃತ್ವದ ಬಿಜೆಪಿ ಸರ್ಕಾರ ವರ್ಷಾಚರಣೆ ಮುಗಿದ ಬೆನ್ನಲ್ಲೇ ತಲೆ ಎತ್ತಿದ್ದ ಅನೂಹ್ಯ ಬೆಳವಣಿಗೆಗಳಿಗೆ ಸದ್ಯಕ್ಕೆ ಪೂರ್ಣವಿರಾಮ ಬೀಳುವ ಲಕ್ಷಣಗಳು ಸ್ಪಷ್ಟವಾಗಿವೆ. ಸವದಿ ದೆಹಲಿ ಯಾತ್ರೆ ಬಳಸಿಕೊಂಡು ಪಕ್ಷದೊಳಗೆ ತಿದಿಯೊತ್ತಲು ಪ್ರಯತ್ನಿಸಿದವರಿಗೆ ನಿರಾಸೆಯಾಗಿದೆ. ವರ್ಷದ ಸಾಧನೆಯ ಸಮಾರಂಭದ ದಿನ ಎಲ್ಲ ಉಸ್ತುವಾರಿ ಸಚಿವರಂತೆ ಸವದಿ ತಾವು ಉಸ್ತುವಾರಿ ಹೊತ್ತ ರಾಯಚೂರು ಜಿಲ್ಲೆಯಲ್ಲಿರಲಿಲ್ಲ. ಬೇರೆ ಸಚಿವರಂತೆ ಇವರೂ ಹೋಗಿಲ್ಲವೆಂದು ಭಾವಿಸಬಹುದಿತ್ತು. ಆದರೆ ಸಮಾರಂಭದ ದಿನವೇ ದೆಹಲಿಗೆ ತೆರಳಿದ್ದು ವಿಶೇಷ ಅರ್ಥ ಕಲ್ಪಿಸುವುದಕ್ಕೆ ದಾರಿಮಾಡಿಕೊಟ್ಟಿತು.
ಪೂರ್ವನಿರ್ಧಾರದಂತೆ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಭೇಟಿ ಬಳಿಕ ಸವದಿ ದೆಹಲಿಯಲ್ಲಿ ಬಿಡಾರ ಹೂಡಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಭೇಟಿಯಾದರು. ಇದು, ಪಕ್ಷದಲ್ಲಿ ಆಂತರಿಕವಾಗಿ ಬೆಂಕಿಯಿಲ್ಲದೆ ಹೊಗೆಯಾಡದು ಎಂಬರ್ಥದ ಚರ್ಚೆಗೆ ಆಸ್ಪದ ನೀಡಿ, ನಾಯಕತ್ವದ ಬದಲಾವಣೆಯಾಗಲಿದೆಯೆ ಎಂಬ ಪ್ರಶ್ನೆ ಹುಟ್ಟುಹಾಕಿತು.
ಅಳಿಯದ ಅನುಮಾನ: ಸವದಿ ಎಲ್ಲವನ್ನೂ ಅಲ್ಲಗಳೆದಿದ್ದರೂ ಅನುಮಾನವನ್ನು ಅಷ್ಟು ಸುಲಭವಾಗಿ ಅಳಿಸಿ ಹಾಕಲಾಗದು. ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲವೆಂಬುದು ಮತ್ತೆ ಸ್ಪುಟವಾಗಿದೆ ಎಂದು ಹಿರಿಯ ನಾಯಕರೊಬ್ಬರು ಹೇಳುತ್ತಾರೆ.
ಕರೊನಾ ಸಂಕಷ್ಟ ಸಮಯದಲ್ಲಿ ಬಿಎಸ್​ವೈ ತೆಗೆದುಕೊಳ್ಳುತ್ತಿರುವ ಪ್ರತಿ ನಿರ್ಧಾರಕ್ಕೆ ವರಿಷ್ಠರು ಬೆನ್ನೆಲುಬಾಗಿ ನಿಂತಿದ್ದಾರೆ. ಹಲವಾರು ಉಪಕ್ರಮಗಳನ್ನು ಕೊಂಡಾಡಿದ್ದೂ ಆಗಿದೆ. ಕರೊನಾ ಕಟ್ಟಿ ಹಾಕುವ ಕೆಲಸ ಮೊದಲು ನಂತರ ಉಳಿದದ್ದು ಎನ್ನುವ ನಿಲುವು ತಳೆದಿದ್ದು, ಇಂಥ ಸಂದಿಗ್ಧದಲ್ಲಿ ನಾಯಕತ್ವದ ಬದಲಾವಣೆ ಇರಲಿ, ಆ ಕುರಿತು ಹೈಕಮಾಂಡ್ ಯೋಚಿಸಿರಲಿಕ್ಕೂ ಸಾಧ್ಯವಿಲ್ಲ ಎಂದು ಮೂಲಗಳು ಹೇಳಿವೆ.
ವಿಸ್ತರಣೆ ಅಥವಾ ಪುನಾರಚನೆ ನಿಶ್ಚಿತ: ಸಚಿವ ಸಂಪುಟದಲ್ಲಿ ಖಾಲಿ ಇರುವ 6 ಸ್ಥಾನಗಳ ಭರ್ತಿ ಅಥವಾ ಪುನಾರಚನೆ. ಇವರೆಡರಲ್ಲಿ ಒಂದಂತೂ ಆಗಸ್ಟ್​ನಲ್ಲಿ ನಿಶ್ಚಿತವಾಗಿದೆ. ವಾಗ್ದಾನವಿತ್ತವರಿಗೆ ಮಂತ್ರಿ ಸ್ಥಾನ ಕೊಡುವ ವಿಷಯದಲ್ಲಿ ಸಿಎಂ ನಿರ್ಧಾರ ಅಚಲವಾಗಿದ್ದು, ಈ ಕಸರತ್ತಿನ ಭಾಗವಾಗಿ ನಿಗಮ-ಮಂಡಳಿ ನೇಮಕ ಪೂರ್ಣಗೊಳಿಸಿದ್ದಾರೆ. ಕರೊನಾ ಸೋಂಕು ಹತೋಟಿ ಹಾಗೂ ಸಮರ್ಪಕ ನಿರ್ವಹಣೆ ಸಾಧಿಸಿದ ನಂತರ ಹೈಕಮಾಂಡ್ ಜತೆ ಈ ಬಗ್ಗೆ ರ್ಚಚಿಸುವ ಚಿಂತನೆ ನಡೆಸಿದ್ದು, ನಿಗಮ-ಮಂಡಳಿ ಒಲ್ಲೆನೆನ್ನುವ ಶಾಸಕರನ್ನು ಮನವೊಲಿಸುವಲ್ಲಿ ಯಶಸ್ವಿಯಾಗುವ ವಿಶ್ವಾಸ ಸಿಎಂ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಾಲಿ ಮೂರು ವರ್ಷಗಳ ಸಿಎಂ ಅವಧಿ ಯಡಿಯೂರಪ್ಪ ಅವರಿಗೆ ಮೀಸಲು. ನಂತರ ಅರ್ಹತೆ ಇದ್ದವರಿಗೆ ಅವಕಾಶ ಸಿಗುತ್ತ್ತೆ. ಮುಂದಿನ ಚುನಾವಣೆಯನ್ನು ಬಿಎಸ್​ವೈ ನೇತೃತ್ವದಲ್ಲೇ ಎದುರಿಸಿ, ಗೆಲ್ಲಲು ದೃಢಸಂಕಲ್ಪ ಮಾಡಿದ್ದೇವೆ.
| ಲಕ್ಷ್ಮಣ ಸವದಿ ಡಿಸಿಎಂ
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
Sign in to your account
Please enter an answer in digits:19 − 6 =
Remember me
