ರಾಜ್ಯದ ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಟ್ಟಿರುವ ಪರಿಣಾಮ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಡಿಸಲಿರುವ ಬಜೆಟ್​ನ ಗಾತ್ರದ ಬಗ್ಗೆಯೇ ಇದೀಗ ಆತಂಕ ಶುರುವಾಗಿದೆ. ಜನಸ್ನೇಹಿ ಬಜೆಟ್ ಮಂಡನೆಗೆ ಬಿಎಸ್​ವೈ ಉತ್ಸಾಹದಿಂದ ಸಿದ್ಧತೆ ನಡೆಸಿದ್ದಾರಾದರೂ ಕೇಂದ್ರದಿಂದ ಬಿಡುಗಡೆಯಾಗದ ಹಣ, 15ನೇ ಹಣಕಾಸು ಆಯೋಗ ತಗ್ಗಿಸಿರುವ ಅನುದಾನ ಪ್ರಮಾಣ ಸರ್ಕಾರಕ್ಕೆ ಸಂಕಷ್ಟ ತಂದಿದೆ. ಈಗಾಗಲೇ ಬಹುತೇಕ ಇಲಾಖೆಗಳಿಗೆ ಬಿಡುಗಡೆ ಆಗಿರುವ ಕೊನೆಯ ಕಂತಿನ ಅನುದಾನದಲ್ಲೂ ಸರ್ಕಾರ ಕಡಿತ ಮಾಡಿರುವುದರಿಂದ ಬಜೆಟ್ ಕುತೂಹಲ ಇಮ್ಮಡಿಗೊಂಡಿದೆ.
ರಾಜ್ಯದ ಬಜೆಟ್ ಗಾತ್ರ 2.34 ಲಕ್ಷ ಕೋಟಿ ರೂ.ಗಳಿದ್ದು, ಪ್ರತಿ ವರ್ಷ ಸರಾಸರಿ ಶೇ. 10 ರಿಂದ 15 ಹೆಚ್ಚಳ ಸಾಧಿಸಲಾಗುತ್ತಿದೆ. ಅಂದರೆ ಈ ವರ್ಷ ಬಜೆಟ್ ಗಾತ್ರ 2.50 ಲಕ್ಷ ಕೋಟಿ ರೂ. ಗಡಿ ದಾಟಬೇಕು. ಆದರೆ ಜಾಗತಿಕ ಆರ್ಥಿಕ ಕುಸಿತ ತಂದಿಟ್ಟಿರುವ ಸಮಸ್ಯೆಯಿಂದ ಅಂತಹ ನಿರೀಕ್ಷೆ ಕಷ್ಟವೆಂದೇ ಹೇಳಲಾಗುತ್ತಿದೆ. ಇದರ ಜತೆಗೆ ರಾಜ್ಯವನ್ನು ಕಾಡಿದ ನೆರೆ, ಸಾಲಮನ್ನಾಕ್ಕೆ ಹೆಚ್ಚಿನ ಅನುದಾನ ವೆಚ್ಚ ಮಾಡಿದ್ದೂ ಕೂಡ ಕಾರಣಗಳೇ ಆಗಿವೆ. ಒಂದೊಮ್ಮೆ ಬಜೆಟ್ ಗಾತ್ರ ಕಡಿಮೆ ಮಾಡಿದಲ್ಲಿ ಒಟ್ಟಾರೆ ಆರ್ಥಿಕ ಸ್ಥಿತಿ ಮೇಲೆ ಪರಿಣಾಮ ಉಂಟಾಗುವುದಲ್ಲದೆ ದೊಡ್ಡ ದೊಡ್ಡ ಯೋಜನೆಗಳಿಗೂ ಅನುದಾನ ಹೊಂದಿಸುವುದು ಕಷ್ಟವಾಗುತ್ತದೆ. ಇದಕ್ಕೆ ಆಸ್ಪದವಾಗದಂತೆ ಎಚ್ಚರಿಕೆ ವಹಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಕಸರತ್ತು ನಡೆದಿದೆ ಎಂದು ಹೇಳಲಾಗುತ್ತಿದೆ.
ಕಡಿತದ ಮುನ್ಸೂಚನೆ:ವಿವಿಧ ಇಲಾಖೆಗಳ ಬಜೆಟ್​ಪೂರ್ವ ಸಭೆಗಳಲ್ಲೇ ಅನುದಾನದಲ್ಲಿ ಶೇ. 30ರ ತನಕ ಕಡಿಮೆ ಮಾಡಿಯೇ ಯೋಜನೆ ರೂಪಿಸಿಕೊಳ್ಳುವಂತೆ ಸ್ಪಷ್ಟ ಸೂಚನೆ ನೀಡಲಾಗುತ್ತಿದೆ. ಹೀಗಾಗಿ ಬಜೆಟ್ ಗಾತ್ರ ಕಡಿಮೆ ಆಗುವುದೇ ಎಂಬ ಪ್ರಶ್ನೆ ಅಧಿಕಾರಿಗಳನ್ನು ಕಾಡಲಾರಂಭಿಸಿದೆ.
ಪರಿಸ್ಥಿತಿ ಗಂಭೀರ:ಕೇಂದ್ರದಿಂದ 17,270 ಕೋಟಿ ರೂ. ಜಿಎಸ್​ಟಿ ಪಾಲು ಬರಬೇಕಾಗಿದೆ. ಜತೆಗೆ ನರೇಗಾ ಸೇರಿದಂತೆ ವಿವಿಧ ಯೋಜನೆಗಳಿಗೆ ಬರಬೇಕಾಗಿರುವ 15 ಸಾವಿರ ಕೋಟಿ ರೂ. ಕೂಡ ಇನ್ನೂ ಬಂದಿಲ್ಲ. 15 ನೇ ಹಣಕಾಸು ಆಯೋಗದ ವರದಿಯನ್ವಯ ಸುಮಾರು 9 ರಿಂದ 14 ಸಾವಿರ ಕೋಟಿ ರೂ. ತನಕ ಕಡಿತವಾಗಲಿದೆ. ಕೇಂದ್ರ ಸರ್ಕಾರದಿಂದ ಈ ಬಾಕಿಯ ಬಗ್ಗೆ ಸ್ಪಷ್ಟ ಮಾಹಿತಿ ಸಿಗದಿರುವುದು ರಾಜ್ಯ ಸರ್ಕಾರವನ್ನು ಚಿಂತೆಗೀಡು ಮಾಡಿದೆ.
14 ನೇ ಹಣಕಾಸು ಆಯೋಗದಲ್ಲೂ ರಾಜ್ಯಕ್ಕೆ ಅನುದಾನ ಕಡಿತವಾಗಿದೆ. 39806 ಕೋಟಿ ರೂ. ನಿರೀಕ್ಷೆ ಮಾಡಲಾಗಿತ್ತು. ಪರಿಷ್ಕೃತಗೊಂಡು ಆ ಮೊತ್ತ 36675 ಕೋಟಿ ರೂ.ಗಳಾಯಿತು. ಆದರೆ 15 ನೇ ಹಣಕಾಸು ಆಯೋಗದಲ್ಲಿ 31180 ಕೋಟಿ ರೂ. ಸಿಗಬಹುದು. 5495 ಕೋಟಿ ರೂ. ವಿಶೇಷ ಅನುದಾನಕ್ಕೆ ಮನವಿ ಮಾಡಲಾಗುತ್ತಿದೆ.
ರಾಜ್ಯದ ಸ್ವಂತ ಸಂಪನ್ಮೂಲ ಸಂಗ್ರಹ ಸಹ ಕಡಿಮೆ ಯಾಗಬಹುದೆಂದು ಹೇಳಲಾಗುತ್ತಿದೆ.  1,01,744 ಕೋಟಿ ರೂ. ಸಂಗ್ರಹಣೆ ಗುರಿ ಹೊಂದಲಾಗಿತ್ತು. ಡಿಸೆಂಬರ್ ಅಂತ್ಯಕ್ಕೆ  74,587 ಕೋಟಿ ರೂ. ಸಂಗ್ರಹವಾಗಿದೆ. ಉಳಿದ 3 ತಿಂಗಳಿನಲ್ಲಿ  27,157 ಕೋಟಿ ರೂ. ಸಂಗ್ರಹಿಸಬೇಕಿದೆ. ಪ್ರತಿ ತಿಂಗಳು  9,052 ಕೋಟಿ ಸಂಗ್ರಹ ಆಗಬೇಕಾಗಿದೆ. ಈಗ ಸರಾಸರಿ  8,300 ಕೋಟಿ ರೂ. ಸಂಗ್ರಹವಾಗುತ್ತಿದೆ.
ರಾಜಸ್ವ ಕೊರತೆ:ವಿತ್ತೀಯ ಹೊಣೆಗಾರಿಕೆ ಹಾಗೂ ಆಯವ್ಯಯ ನಿರ್ವಹಣೆ ಕಾಯ್ದೆ ಪ್ರಕಾರ ರಾಜಸ್ವ ಉಳಿತಾಯ ಇರಬೇಕು. ರಾಜ್ಯ ಸರ್ಕಾರ 2006ರಲ್ಲಿಯೇ ಆ ಸಾಧನೆ ಮಾಡಿದೆ. ಪ್ರತಿ ವರ್ಷ ರಾಜಸ್ವ ಉಳಿತಾಯ ಸಾಧಿಸುತ್ತ ಬರುತ್ತಿದೆ. ರಾಜಸ್ವ ವೆಚ್ಚ ಎಂದರೆ ಸರ್ಕಾರದ ದೈನಂದಿನ ಸಂಬಳ, ಸಾರಿಗೆಗಳಿಗೆ ಮಾಡುವ ವೆಚ್ಚ. ಈಗ ರಾಜಸ್ವ ಉಳಿತಾಯದಿಂದ ಕೊರತೆಯತ್ತ ಸಾಗುವ ಪರಿಸ್ಥಿತಿ ಇರುವುದರಿಂದ ಆ ರೀತಿ ಆಗದಂತೆ ನೋಡಲು ಹಣಕಾಸು ಇಲಾಖೆ ಹಾಗೂ ಸಿಎಂ ಯಡಿಯೂರಪ್ಪ ಕಸರತ್ತು ನಡೆಸಿದ್ದಾರೆ. ಅದರ ಪರಿಣಾಮವೇ ವಿವಿಧ ಇಲಾಖೆಗಳಿಗೆ ಅನುದಾನ ಕಡಿತ ಮಾಡಲು ಮುಂದಾಗಿರುವುದೆನ್ನಲಾಗಿದೆ. ನಿರೀಕ್ಷೆ ಪ್ರಕಾರ 2022-23ಕ್ಕೆ 24 ಸಾವಿರ ಕೋಟಿ ರೂ.ಗಳಷ್ಟು ರಾಜಸ್ವ ವೆಚ್ಚ ಹೆಚ್ಚಳ ಆಗುತ್ತದೆ ಎಂದು ಹೇಳಲಾಗುತ್ತಿದೆ. ಅದಕ್ಕೆ ತಕ್ಕಂತೆ ತೆರಿಗೆ ಸಂಗ್ರಹಣೆ ಆಗುತ್ತಿಲ್ಲ. ಆದ್ದರಿಂದ ಕೊರತೆ ಪ್ರಮಾಣ ಹೆಚ್ಚಾಗಬಹುದೆಂದು ಹಣಕಾಸು ಇಲಾಖೆ ಅಧಿಕಾರಿಗಳು ಹೇಳುತ್ತಾರೆ.ರಾಜಸ್ವ ವೆಚ್ಚಕ್ಕೆ ತೆರಿಗೆಯೇತರ ಆದಾಯ ಹೆಚ್ಚಳ, ಪೆಟ್ರೋಲ್ ಹಾಗೂ ಡಿಸೇಲ್ ಮೇಲೆ ತೆರಿಗೆ ಹಾಕುವುದು ಅನಿವಾರ್ಯವಾಗುತ್ತದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಡುತ್ತಾರೆ.
ಕೇಂದ್ರದಿಂದ ಬರಬೇಕಾಗಿರುವ ಅನುದಾನದಲ್ಲಿ ಕಡಿತ ಮಾಡಬಾರದು ಹಾಗೂ 5495 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಮಾಡಬೇಕೆಂದು ಸಿಎಂ ಯಡಿಯೂರಪ್ಪ ಒತ್ತಾಯಿಸಿದ್ದಾರೆ. ನೀರಾವರಿ ಹಾಗೂ ವಸತಿಯಲ್ಲಿ ಕೆಲ ವಿಶೇಷ ಯೋಜನೆ ಹಮ್ಮಿಕೊಳ್ಳಬೇಕಾಗಿರುವುದರಿಂದ ಹೆಚ್ಚಿನ ಅನುದಾನ ನೀಡಬೇಕೆಂದು ಮನವಿ ಮಾಡಿದ್ದಾರೆನ್ನಲಾಗುತ್ತಿದೆ.
ಹಿಂದೆ ಸಿಎಂ ಆಗಿದ್ದಾಗ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ್ದ ಯಡಿಯೂರಪ್ಪ ಈ ಬಾರಿಯೂ ಮಂಡಿಸುವ ನಿರೀಕ್ಷೆ ಇದೆ. ಕೃಷಿ ಹಾಗೂ ಕೃಷಿ ಆಧಾರಿತ ಇಲಾಖೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬುದು ಅವರ ಉದ್ದೇಶ.
ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಎಡವಟ್ಟಿನ ನಿಯಮಾವಳಿಯಿಂದ 1500 ಕೋಟಿ ರೂ.ಗಳಷ್ಟು ಮೊತ್ತದ ತೆರಿಗೆ ಸಂಗ್ರಹಣೆಗೆ ಕುತ್ತು ಬಂದಿದೆ. ರೆವಿನ್ಯೂ ನಿವೇಶನಗಳ ನೋಂದಣಿಗೆ ಅವಕಾಶ ನೀಡದ ಪರಿಣಾಮ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಹಿನ್ನಡೆಯಾಗಿರುವುದು ತೆರಿಗೆ ಸಂಗ್ರಹಣೆಯ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ.
ಸರ್ಕಾರ ಘೋಷಿಸಿದ್ದ ಕರ ಸಮಾಧಾನ ಯೋಜನೆ ಒಂದಷ್ಟು ಸಮಾಧಾನ ತಂದಿದೆ. ವಾಣಿಜ್ಯ ತೆರಿಗೆಯಲ್ಲಿ ಬಾಕಿ ಇದ್ದ ಸುಮಾರು 3000 ಕೋಟಿ ರೂ.ಗಳ ಪೈಕಿ 800 ಕೋಟಿ ರೂ.ಗಳಿಗಿಂತ ಹೆಚ್ಚಿನ ಮೊತ್ತ ಸಂಗ್ರಹವಾಗಿದೆ.


| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 2 =
Remember me
