|ರುದ್ರಣ್ಣ ಹರ್ತಿಕೋಟೆಬೆಂಗಳೂರು
ಹಣಕಾಸು ಇಲಾಖೆಯಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ ಬದ್ಧವೆಚ್ಚಗಳು ಸೇರಿದಂತೆ ಒಟ್ಟಾರೆ ಜನವರಿ ಅಂತ್ಯದ ತನಕ ವೆಚ್ಚ ಶೇ.55 ರಿಂದ 58 ರಷ್ಟು ಆಗುತ್ತದೆ. ಬಜೆಟ್ ಪ್ರಕಾರ, 2.09 ಲಕ್ಷ ಕೋಟಿ ರೂ.ಗಳನ್ನು ವೆಚ್ಚ ಮಾಡಬೇಕಾಗಿದೆ. ಜನವರಿ ಅಂತ್ಯದ ತನಕ ಸರ್ಕಾರ 1.43 ಲಕ್ಷ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು ಅದರಲ್ಲಿ 1.19 ಲಕ್ಷ ಕೋಟಿ ರೂ.ಗಳು ವೆಚ್ಚವಾಗಿದೆ. ಮಾರ್ಚ್ ಅಂತ್ಯದೊಳಗೆ 90 ಸಾವಿರ ಕೋಟಿ ರೂ.ಗಳಷ್ಟು ಮೊತ್ತ ವೆಚ್ಚ ಮಾಡುವುದಕ್ಕೆ ಸಾಧ್ಯವೇ ಎಂಬ ಪ್ರಶ್ನೆ ಇದೆ. ಆದ್ದರಿಂದ ಈ ಸಾಲಿನ ವೆಚ್ಚ ಶೇ. 75ರಷ್ಟಕ್ಕೆ ನಿಲ್ಲಬಹುದೆಂದು ಅಂದಾಜು ಮಾಡಲಾಗುತ್ತಿದೆ.
ಕೇಂದ್ರದಿಂದ ಸಿಗದ ಸ್ಪಂದನೆ:ಕೇಂದ್ರದಿಂದ ರಾಜ್ಯಕ್ಕೆ ಸೂಕ್ತ ಸ್ಪಂದನೆ ಸಿಕ್ಕಿಲ್ಲದಿರುವುದು ನಿರೀಕ್ಷಿತ ಪ್ರಗತಿ ಕುಂಠಿತವಾಗಲು ಕಾರಣವಾಗಿದೆ. ರಾಜ್ಯದಲ್ಲಿ ಸಂಗ್ರಹಣೆಯಾದ ತೆರಿಗೆಯ ಜತೆಗೆ ಕೇಂದ್ರದ ಪಾಲು ಸಿಕ್ಕಿದ್ದರೆ ಇನ್ನಷ್ಟು ಅಭಿವೃದ್ಧಿ ಸಾಧಿಸಬಹುದಾಗಿತ್ತು. ಕೇಂದ್ರದಿಂದ ತೆರಿಗೆಯ ಪಾಲು 28,591 ಕೋಟಿ ರೂ.ಗಳು ಬರಬೇಕಾಗಿತ್ತು. ಆದರೆ ಬಂದಿರುವುದು 14,907 ಕೋಟಿ ರೂ.ಗಳು. ಕೇಂದ್ರದಿಂದ ಸಹಾಯಾನುದಾನ 31,570 ಕೋಟಿ ರೂ.ಗಳಲ್ಲಿ 22,960 ಕೋಟಿ ರೂ.ಗಳು ಬಂದಿವೆ. ಜಿಎಸ್​ಟಿ ಪರಿಹಾರ ಜನವರಿ ಅಂತ್ಯದ ತನಕ 11,200 ಕೋಟಿ ರೂ.ಗಳು ಬಾಕಿ ಉಳಿದಿದೆ. ಆದ್ದರಿಂದ ಬರಬೇಕಾದ ಸುಮಾರು 40 ಸಾವಿರ ಕೋಟಿ ರೂ. ಮೊತ್ತದಲ್ಲಿ ಮಾರ್ಚ್ ಅಂತ್ಯದೊಳಗೆ ಸಿಕ್ಕುವುದೆಷ್ಟು ಎಂಬುದು ಕಾಡುತ್ತಿರುವ ಪ್ರಶ್ನೆಯಾಗಿದೆ.
ಸಂಪನ್ಮೂಲಕ್ಕೆ ಮಾಡಿರುವ ಪ್ಲ್ಯಾನ್ ಏನು?:ಬಜೆಟ್ ಗಾತ್ರವನ್ನು ಹೆಚ್ಚಿಸಬೇಕೆಂಬುದು ಮುಖ್ಯಮಂತ್ರಿಗಳ ಇರಾದೆ. ಆದರೆ ಹೀಗೆ ಮಾಡಿದರೆ ಸಂಪನ್ಮೂಲವನ್ನು ಹುಡುಕಬೇಕಾಗಿದೆ. ತೆರಿಗೆ ಹೆಚ್ಚಳಕ್ಕೆ ಇರುವುದು ಸೀಮಿತ ಅವಕಾಶ. ಆದ್ದರಿಂದ ಮುಖ್ಯಮಂತ್ರಿ ಬೇರೆಯದ್ದೇ ಪ್ಲಾ್ಯನ್ ಮಾಡಿದ್ದಾರೆಂದು ಮೂಲಗಳು ಹೇಳುತ್ತವೆ. ವರ್ಷದ ಕೊನೆಗೆ ಅಗತ್ಯಬಿದ್ದರೆ ಭೂಮಿ ಗುತ್ತಿಗೆ ಅಥವಾ ಮಾರಾಟದ ಮೂಲಕ ಸುಮಾರು 10 ಸಾವಿರ ಕೋಟಿ ರೂ.ಗಳನ್ನು ಹೆಚ್ಚುವರಿ ಸಂಗ್ರಹಿಸಬಹುದೆ ಎಂಬ ಬಗ್ಗೆ ಚರ್ಚೆ ನಡೆದಿದೆ. ಅದೇ ರೀತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಮಿಯನ್ನು ಬಾಡಿಗೆ ನೀಡುವುದು, ತೆರಿಗೆಯೇತರ ಆದಾಯ ಹೆಚ್ಚಳ ಮಾಡುವುದು, ಗಣಿಗಾರಿಕೆಯಿಂದ ಆದಾಯ ವೃದ್ಧಿಸಿಕೊಳ್ಳುವುದು- ಹೀಗೆ ವಿವಿಧ ರೀತಿಯ ಚಿಂತನೆ ನಡೆದಿದೆ.
ಸಾಲ ಹೆಚ್ಚು ಮಾಡಲಾಗಲ್ಲ:ತೆರಿಗೆ ಸಂಗ್ರಹಣೆ ಗಣನೀಯವಾಗಿ ಇಳಿಕೆಯಾಗಿರುವುದರಿಂದ ರಾಜ್ಯದ ಜಿಡಿಪಿ ಸಹ ಕಡಿಮೆಯಾಗಬಹುದೆಂದು ಅಂದಾಜಿದೆ. ಜಿಡಿಪಿ ಕಡಿಮೆಯಾದರೆ ಒಪ್ಪಂದ ಸಾಲ ಪಡೆಯುವುದು ಕೂಡ ಕಡಿಮೆಯಾಗುತ್ತದೆ. ಆದರೆ ಇದೆಲ್ಲವನ್ನೂ ಈಗಲೇ ಅಂದಾಜು ಮಾಡಲಾಗದು. ಈ ಸಾಲಿಗೆ ರಾಜ್ಯದ ಜಿಡಿಪಿಯನ್ನು 18,05,742 ಕೋಟಿ ರೂ.ಗಳೆಂದು ಅಂದಾಜು ಮಾಡಲಾಗಿತ್ತು. ಆದರೆ ಅದು ಕಡಿಮೆಯಾಗಿದೆ. ಏಕೆಂದರೆ ಕೃಷಿ ಹೊರತುಪಡಿಸಿ ಉತ್ಪಾದನಾ ಹಾಗೂ ಸೇವಾ ಕ್ಷೇತ್ರದ ಕೊಡುಗೆ ಕುಸಿದಿದೆ. ಬಡ್ಡಿ ಪಾವತಿ ಸಹ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ.
ಎಷ್ಟಾಗಿದೆ ಸಾಲ?:ರಾಜ್ಯ ಸರ್ಕಾರ ಬಜೆಟ್​ನಲ್ಲಿ 52 ಸಾವಿರ ಕೋಟಿ ರೂ. ಸಾಲ ಮಾಡುವ ಉದ್ದೇಶ ಹೊಂದಿತ್ತು. ಕೇಂದ್ರ ಸರ್ಕಾರ ಹೆಚ್ಚುವರಿ ಸಾಲಕ್ಕೆ ಅವಕಾಶ ನೀಡಿತು. ಜನವರಿ ಅಂತ್ಯದ ತನಕ 68 ಸಾವಿರ ಕೋಟಿ ರೂ.ಗಳ ಸಾಲ ಮಾಡಲಾಗಿದೆ.
ಎಷ್ಟು ಕಡಿಮೆಯಾಗಿದೆ?:ರಾಜ್ಯದ ತೆರಿಗೆ ಸಂಗ್ರಹ, ತೆರಿಗೆಯೇತರ ಆದಾಯ ಹಾಗೂ ಕೇಂದ್ರದಿಂದ ಬರುವುದು ಸೇರಿದಂತೆ ಒಟ್ಟಾರೆ ಮಾರ್ಚ್ ಅಂತ್ಯದೊಳಗೆ 1,79,919 ಕೋಟಿ ರೂ. ಸಂಪನ್ಮೂಲ ಬರಬೇಕು. ಡಿಸೆಂಬರ್ ಅಂತ್ಯದ ತನಕದ ಅಂಕಿಅಂಶಗಳ ಪ್ರಕಾರ ಬಂದಿರುವುದು 1,19,091 ಕೋಟಿ ರೂ.ಗಳು. ಅಂದರೆ ಇನ್ನೂ 60,828 ಕೋಟಿ ರೂ. ಸಂಗ್ರಹವಾಗಬೇಕು. ಜನವರಿ ತಿಂಗಳಿನಲ್ಲಿ ಬಂದಿರುವ ಆದಾಯ 13 ಸಾವಿರ ಕೋಟಿ ರೂ.ಗಳು ಮಾತ್ರ. ಮಾರ್ಚ್ ಅಂತ್ಯದ ತನಕ ಇದರಲ್ಲಿ 25 ರಿಂದ 30 ಸಾವಿರ ಕೋಟಿ ರೂ.ಗಳು ಸಂಗ್ರಹವಾದರೂ ಇನ್ನೂ 30 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಕೊರತೆ ಇರುತ್ತದೆ.
ಅನುದಾನ ಕಟ್:ಎಲ್ಲ ಇಲಾಖೆಗಳಿಗೂ ಅನುದಾನ ಕಡಿಮೆ ಮಾಡಲಾಗುತ್ತದೆ ಎಂದು ಹಣಕಾಸು ಇಲಾಖೆ ಸ್ಪಷ್ಟವಾಗಿ ಹೇಳಿದೆ. ಎಲ್ಲ ಇಲಾಖೆಗಳಿಗೂ ಮುಂದಿನ ಬಜೆಟ್​ನಲ್ಲಿ ಶೇ.20ರಿಂದ 25ರಷ್ಟು ಅನುದಾನ ಕಡಿಮೆ ಮಾಡಲಾಗುತ್ತಿದೆ ಎಂದು ಮೂಲಗಳು ಹೇಳುತ್ತವೆ. ಸಿಎಂ ಅವರು ಸಹ ಬಜೆಟ್​ಪೂರ್ವ ಸಭೆಗಳಲ್ಲಿ ಎಲ್ಲ ಸಚಿವರಿಗೂ ಹೆಚ್ಚುವರಿ ಅನುದಾನ ಕೇಳದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಈ ಬಗ್ಗೆ ಎಲ್ಲ ಇಲಾಖೆಗಳಿಗೂ ಪತ್ರ ಬರೆದೂ ತಿಳಿಸಿದ್ದಾರೆ.
ಕೈಬಿಟ್ಟ ಯೋಜನೆಗಳು:ಮುಖ್ಯಮಂತ್ರಿ ಯಡಿಯೂರಪ್ಪ 2020-21ನೇ ಸಾಲಿನ ಬಜೆಟ್​ನಲ್ಲಿ 150 ಯೋಜನೆಗಳನ್ನು ಘೋಷಣೆ ಮಾಡಿದ್ದರು. ಅದರಲ್ಲಿ 63 ಮುಂದುವರಿದ ಯೋಜನೆಗಳಾದರೆ, ಹಣಕಾಸಿನ ಕೊರತೆಯ ಹಿನ್ನೆಲೆಯಲ್ಲಿ 55 ಯೋಜನೆಗಳನ್ನು ಕೈ ಬಿಡಲಾಗಿದೆ. ಇದನ್ನು ಬಜೆಟ್ ಜತೆಗೆ ಸದನದಲ್ಲಿ ಮಂಡಿಸಲಾಗುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
