ರುದ್ರಣ್ಣ ಹರ್ತಿಕೋಟೆ ಬೆಂಗಳೂರುಗ್ಯಾರಂಟಿಗಳಿಗೆ ಹಣ ಹೊಂದಾಣಿಕೆಯ ಜತೆಗೆ ಅಭಿವೃದ್ಧಿ ಕಡೆ ಲಕ್ಷ್ಯ ಹರಿಸುವ ಸವಾಲುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಗೆ ಎದುರಿಸಲಿದ್ದಾರೆ ಎಂಬ ಕುತೂಹಲಕ್ಕೆ ಕಾರಣವಾಗಿರುವ 2024-25ನೇ ಸಾಲಿನ ರಾಜ್ಯ ಬಜೆಟ್, ಬಸವಣ್ಣ ಅವರ ಕಾಯಕ ಹಾಗೂ ದಾಸೋಹ ತತ್ವದ ಆಧಾರದಲ್ಲಿ ರೂಪುಗೊಂಡಿರುವ ನಿರೀಕ್ಷೆ ಮೂಡಿಸಿದೆ.
ಬರ, ಕೇಂದ್ರದ ಅಸಹಕಾರಗಳ ನಡುವೆ ಆರ್ಥಿಕ ಸಂಕಷ್ಟ ಇರುವುದರಿಂದಲೇ ಬಸವಣ್ಣ ಅವರ ಕಾಯಕ ಹಾಗೂ ದಾಸೋಹ ತತ್ವವನ್ನು ಅಳವಡಿಸಿಕೊಳ್ಳಲಾಗಿದೆ. ಉತ್ಪಾದನೆ ಮತ್ತು ಹಂಚಿಕೆ ಎಂಬುದು ಕಾಯಕ ಮತ್ತು ದಾಸೋಹದ ಮೂಲ ಆಶಯ. ಸಾಮಾಜಿಕ ಅಭಿವೃದ್ಧಿ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಒಟ್ಟಾಗಿಟ್ಟು ಬಜೆಟ್ ಸಿದ್ಧಗೊಂಡಿದೆ ಎಂದು ಸರ್ಕಾರದ ಉನ್ನತ ಮೂಲಗಳು ಖಚಿತಪಡಿಸಿವೆ.
ತಮ್ಮ ದಾಖಲೆಯ 15ನೇ ಬಜೆಟ್ ಮಂಡಿಸುತ್ತಿರುವ ಸಿದ್ದರಾಮಯ್ಯ ಅವರು 3.80 ಲಕ್ಷ ಕೋಟಿ ರೂ.ಗಳ ಬಜೆಟ್ ಮಂಡಿಸುತ್ತಿದ್ದಾರೆ. ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡೇ ಎಲ್ಲ ವರ್ಗಗಳನ್ನು ಸೆಳೆಯುವ ಪ್ರಯತ್ನ ಬಜೆಟ್​ನಲ್ಲಿ ಇರಲಿದೆ ಎಂದು ಹೇಳಲಾಗುತ್ತಿದೆ.
ಆರೋಗ್ಯ, ಶಿಕ್ಷಣ, ಕೈಗಾರಿಕೆ, ಅಭಿವೃದ್ಧಿ, ಕಲ್ಯಾಣ, ಜಾತಿ, ಲಿಂಗತ್ವ ಹಾಗೂ ಸಾಮಾಜಿಕ ತಾರತಮ್ಯ ನಿವಾರಣೆ ಹಾಗೂ ಗ್ಯಾರಂಟಿ ಇವುಗಳ ಸುತ್ತ ಬಜೆಟ್ ರೂಪುಗೊಂಡಿದೆ ಎಂದು ಮೂಲಗಳು ತಿಳಿಸಿವೆ. ರಾಜ್ಯಪಾಲರ ಭಾಷಣದ ಮೂಲಕ ಅಧಿವೇಶನದಲ್ಲಿ ಸರ್ಕಾರ ತನ್ನ ಮುಂದಿನ ದಾರಿಯನ್ನು ಹೇಳಿಸಿದೆ. ಅದರ ಆಧಾರದಲ್ಲಿಯೇ ಬಜೆಟ್ ಇರಲಿದೆ.
ಈಗಾಗಲೇ ಹೆಚ್ಚಿನ ತೆರಿಗೆಯ ರಾಜ್ಯ ಎಂಬ ಹೆಸರು ಇರುವುದರಿಂದ ಜನರ ಮೇಲೆ ಮತ್ತಷ್ಟು ತೆರಿಗೆ ವಿಧಿಸದೆ ಸಂಪನ್ಮೂಲಕ್ಕೆ ಪರ್ಯಾಯ ಮೂಲಗಳನ್ನು ಹುಡುಕಬೇಕಿದೆ. ಜತೆಗೆ ವಿತ್ತೀಯ ಕೊರತೆಯನ್ನು ತಗ್ಗಿಸುವ ಸವಾಲಿದೆ. 2022-23ರಲ್ಲಿ ಶೇಕಡ 2.8 ಇದ್ದ ವಿತ್ತೀಯ ಕೊರತೆಯನ್ನು 2023-24ಕ್ಕೆ ಶೇ,2.6ಕ್ಕೆ ಇಳಿಸಲಾಗಿತ್ತು. ಈ ಬಜೆಟ್​ನಲ್ಲಿಯೂ ಶೇ.2.5ಕ್ಕೆ ತರುವ ಗುರಿಯನ್ನು ಹೊಂದಲಾಗಿದೆ. ಆದರೆ ಅದನ್ನು ಹೇಗೆ ಸಾಧ್ಯ ಮಾಡಿದ್ದಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಜತೆಗೆ ರಾಜಸ್ವ ಉಳಿತಾಯವನ್ನು ಸಾಧಿಸುವ ಪ್ರಯತ್ನವನ್ನು ಮಾಡಲೇಬೇಕಾಗಿದೆ.
ಸಂಪನ್ಮೂಲ ಕ್ರೋಡೀಕರಣ:ರಾಜ್ಯದ ಜನರ ಮೇಲೆ ಇನ್ನಷ್ಟು ತೆರಿಗೆ ಹಾಕಲು ಸಾಧ್ಯವಿಲ್ಲ. ಸಾಲದ ಹೊರತಾಗಿ ರಾಜ್ಯ ಹೊಸ ಸಂಪನ್ಮೂಲದ ದಾರಿಗಳನ್ನು ಕಂಡುಕೊಳ್ಳ ಬೇಕಾಗಿದೆ. ಹಣಕಾಸು ಇಲಾಖೆಯ ಅಧಿಕಾರಿಗಳ ತಂಡ ಬಜೆಟ್​ನಲ್ಲಿ ಇಂತಹ ಕೆಲವೊಂದು ಹೊಸದಾರಿಗಳನ್ನು ಹುಡುಕಿದೆ. ಅದನ್ನು ಬಜೆಟ್​ನಲ್ಲಿ ಪ್ರಕಟಿಸಲಾಗುತ್ತದೆ ಎಂದು ಮೂಲಗಳು ಖಚಿತಪಡಿಸಿವೆ. ಏಕೆಂದರೆ ಬಜೆಟ್ ಗಾತ್ರ ಸುಮಾರು 53 ಸಾವಿರ ಕೋಟಿ ರೂ.ಗಳಷ್ಟು ಹೆಚ್ಚಾಗುತ್ತಿದೆ. ಅಷ್ಟು ದೊಡ್ಡ ಮೊತ್ತ ಹೊಂದಾಣಿಕೆ ಮಾಡುವುದು ಸುಲಭದ ಕಾರ್ಯವೇನೂ ಅಲ್ಲ. ಅದು ಹಣಕಾಸು ಸಚಿವರಾಗಿ 13 ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರಿಗೂ ಚೆನ್ನಾಗಿಯೇ ತಿಳಿದಿದೆ.
ಗ್ಯಾರಂಟಿಗಳಿಗೆ ವೆಚ್ಚ:ಕಳೆದ ಬಜೆಟ್​ನಲ್ಲಿ ಗ್ಯಾರಂಟಿಗಳಿಗೆ ಒಂಭತ್ತು ತಿಂಗಳಿಗೆ ಆಗುವಷ್ಟು ಮೊತ್ತ ಕ್ರೋಡೀಕರಿಸಬೇಕಾಗಿತ್ತು. ಆದ್ದರಿಂದ ಸುಮಾರು 38 ಸಾವಿರ ಕೋಟಿ ರೂ.ಗಳು ವೆಚ್ಚವಾಗಿ ತ್ತು. ಆದರೆ ಮುಂದಿನ ವರ್ಷದ ಬಜೆಟ್​ನಲ್ಲಿ 5 ಗ್ಯಾರಂಟಿಗಳಿಗೆ ಅಂದಾಜು 58 ಸಾವಿರ ಕೋಟಿ ರೂ.ಗಳ ಅಗತ್ಯ ಬೀಳಲಿದೆ. ಸರ್ಕಾರ ಬಜೆಟ್​ನಲ್ಲಿ ಅಷ್ಟು ಹಣವನ್ನು ಮೀಸಲಿಟ್ಟು ಉಳಿದ ವೆಚ್ಚಗಳತ್ತ ಗಮನ ಹರಿಸಬೇಕಾಗಿದೆ. ತಮ್ಮ 3.80 ಕೋಟಿ ರೂ.ಗಳ ಬಜೆಟ್​ನಲ್ಲಿ 58 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿಗಳಿಗೆ ತೆಗೆದಿರಿಸಿ ಉಳಿದ ಮೊತ್ತದಲ್ಲಿ ಸರ್ಕಾರಿ ನೌಕರರ ಸಂಬಳ, ಪಿಂಚಣಿ, ಬಂಡವಾಳ ಸೃಷ್ಟಿ, ಸಾಲ ಮರುಪಾವತಿಯಂತಹ ವೆಚ್ಚಗಳನ್ನು ಸರಿದೂಗಿಸುವ ಸರ್ಕಸ್ ಮಾಡಲಾಗುತ್ತಿದೆ.
ಬರಲಿದೆ ವಚನ ಮಂಟಪ:ಬಸವಣ್ಣರಾದಿಯಾಗಿ ಶರಣರ ವಚನಗಳು ಹಾಗೂ ಅವರ ಬದುಕನ್ನು ಬಿಂಬಿಸುವ ವಚನ ಮಂಟಪವನ್ನು ನಿರ್ಮಾಣ ಮಾಡುವ ಬಗ್ಗೆ ಬಜೆಟ್​ನಲ್ಲಿ ಘೋಷಣೆ ಮಾಡುವ ಸಾಧ್ಯತೆಗಳಿವೆ. ಬೆಂಗಳೂರು ಅಥವಾ ಕಲಬುರಗಿಯಲ್ಲಿ ಈ ವಚನ ಮಂಟಪ ನಿರ್ವಣವಾಗಲಿದೆ ಎಂದು ತಿಳಿದುಬಂದಿದೆ. ವಚನಗಳ ಬಗ್ಗೆ ಹೆಚ್ಚಿನ ಅಧ್ಯಯನಕ್ಕಾಗಿ ವಚನ ಅಕಾಡೆಮಿ ಸ್ಥಾಪಿಸುವ ಕುರಿತು ಬಜೆಟ್​ನಲ್ಲಿ ಘೋಷಣೆ ಮಾಡುವ ನಿರೀಕ್ಷೆ ಇದೆ.
ಲೋಕಸಭಾ ಚುನಾವಣೆಯತ್ತ ಕಣ್ಣು:ಮೇ ತಿಂಗಳಿನಲ್ಲಿ ಲೋಕಸಭಾ ಚುನಾವಣೆ ಇರುವುದರಿಂದ ಮತದಾರರನ್ನು ಸೆಳೆಯುವಂತಹ ಕೆಲವೊಂದು ಯೋಜನೆಗಳನ್ನು ಸಿದ್ದರಾಮಯ್ಯ ಬಜೆಟ್​ನಲ್ಲಿ ಘೋಷಣೆ ಮಾಡಲಿದ್ದಾರೆ. ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್ ಮಂಡಿಸಿದ್ದರೂ ರಾಜ್ಯ ಸರ್ಕಾರ ಮಾತ್ರ ಪೂರ್ಣ ಪ್ರಮಾಣದ ಬಜೆಟನ್ನೇ ಮಂಡಿಸುತ್ತಿದೆ. ಯುವ ಸಮುದಾಯವನ್ನು ಆಕರ್ಷಿಸುವುದು ಬಜೆಟ್​ನ ಉದ್ದೇಶವಾಗಿದೆ.
ಶ್ವೇತಪತ್ರದ ಮಾದರಿ:ಸಿದ್ದರಾಮಯ್ಯ ತಮ್ಮ 2ನೇ ಅವಧಿಯ ಮೊದಲ ಬಜೆಟ್ ರಾಜ್ಯದ ಹಣಕಾಸು ಸ್ಥಿತಿಯನ್ನು ವಿವರಿಸುವ ಶ್ವೇತಪತ್ರದ ಮಾದರಿಯಲ್ಲಿ ರೂಪಿಸಿದ್ದರು. ಈ ಬಜೆಟ್ ಸಹ ಬಹುತೇಕ ಮಾದರಿಯನ್ನು ಇರುವ ಸಾಧ್ಯತೆಗಳಿವೆ. ರಾಜ್ಯದ ಆರ್ಥಿಕ ಸ್ಥಿತಿ ಜತೆಗೆ ಕೇಂದ್ರ ಸರ್ಕಾರ ತೆರಿಗೆ ಹಂಚಿಕೆ, ಅನುದಾನಗಳನ್ನು ಒದಗಿಸಿಲ್ಲದಿರುವುದು, ಬರಕ್ಕೆ ನೆರವಾಗದಿರುವ ಬಗ್ಗೆ ಅಂಕಿಅಂಶಗಳ ಸಹಿತ ವಿವರಿಸಲಿದ್ದಾರೆ. ಸರ್ಕಾರದ ಅಂದಾಜಿನ ಪ್ರಕಾರ 1.2 ಕೋಟಿ ಜನ ಬಡತನ ರೇಖೆಯಿಂದ ಮೇಲ್ಮಟ್ಟಕ್ಕೆ ಬಂದಿದ್ದಾರೆ. ಅದನ್ನು ಬಜೆಟ್​ನಲ್ಲಿ ತಿಳಿಸಲಿದ್ದಾರೆ.
ಮುಟ್ಟದ ಜನವರ್ಗಕ್ಕೆ:ಇದುವರೆಗೂ ಬಜೆಟ್ ತಲುಪದ ಜನವರ್ಗವನ್ನು ಗಮನದಲ್ಲಿಟ್ಟುಕೊಂಡೇ ಕೆಲವೊಂದು ಯೋಜನೆಗಳನ್ನು ರೂಪಿಸಲಾಗಿದೆ. ತಳ ಸಮುದಾಯದಿಂದ ಹಿಡಿದು ಮೇಲ್ವರ್ಗದ ಜನರ ತನಕ ಎಲ್ಲ ಜನರಿಗೆ ಬಜೆಟ್​ನ ಲಾಭ ತಲುಪುವಂತೆ ಕೆಲವೊಂದು ಯೋಜನೆಗಳನ್ನು ಘೋಷಣೆ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಬರದ ಮುನ್ನೆಚ್ಚರಿಕೆ:ಮುಂದಿನ ವರ್ಷ ಬರವೋ, ಪ್ರವಾಹವೋ ಎಂಬ ಬಗ್ಗೆ ಹವಾಮಾನ ತಜ್ಞರಿಂದ ಮಾಹಿತಿ ಇಲ್ಲ. ಆದರೆ ಎದುರಾಗುವ ಪ್ರಕೃತಿ ವಿಕೋಪದ ನಿವಾರಣೆಗೆ ಕೆಲವೊಂದು ನಿರ್ಧಾರಗಳು ಬಜೆಟ್​ನಲ್ಲಿರಲಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + ten =
Remember me
