ಬೆಂಗಳೂರು:ಕರೊನಾಘಾತ, ಲಾಕ್​ಡೌನ್ ತಂದ ಸಂಕಷ್ಟದಿಂದ ಪಾರಾಗಲು ಭೂತಾಯಿಯನ್ನು ನಂಬಿ ಹೊಸ ಬದುಕು ಕಟ್ಟಿಕೊಳ್ಳಲು ಹಳ್ಳಿಗಳತ್ತ ಮುಖಮಾಡಿದ್ದವರಿಗೆ ಈಗ ಮತ್ತೊಂದು ಆತಂಕ ಎದುರಾಗಿದೆ. ರಾಜ್ಯದಲ್ಲಿ ಈ ಸಲ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯಾಗಿದ್ದರೂ ಹವಾಮಾನ ವೈಪರೀತ್ಯದಿಂದಾಗಿ ಭತ್ತ, ಶೇಂಗಾ, ಅಡಕೆ, ಈರುಳ್ಳಿ, ಶುಂಠಿ, ತೊಗರಿ, ಹತ್ತಿ, ಮೆಕ್ಕೆಜೋಳ, ರಾಗಿ… ಹೀಗೆ ಅನೇಕ ಬೆಳೆಗಳು ರೋಗಬಾಧೆಯಿಂದ ಹಾಳಾಗುತ್ತಿದ್ದು, ಅನ್ನದಾತರನ್ನು ಕಂಗಾಲಾಗಿಸಿದೆ.
ಕಾಲಕಾಲಕ್ಕೆ ಸುರಿದ ಮಳೆಯಿಂದಾಗಿ ಬೆಳೆ ಹುಲುಸಾಗಿ ಬೆಳೆದಿದೆಯಾದರೂ ಮತ್ತೆ ಮತ್ತೆ ನಿರಂತರವಾಗಿ ಕಾಡಿದ ಮಳೆಯಿಂದ ಬೆಳೆ ಕೈಸೇರದಂತಾಗಿದೆ. ಕರೊನಾ ಲಾಕ್​ಡೌನ್ ಬಳಿಕ ಉದ್ಯೋಗ ಕಳೆದುಕೊಂಡವರೂ ಸೇರಿದಂತೆ ನಗರ ಪ್ರದೇಶಗಳಿಂದ ಸಾವಿರಾರು ಕುಟುಂಬಗಳು ಹಳ್ಳಿಗಳಿಗೆ ವಲಸೆ ಹೋಗಿ ಕೃಷಿ ಕಾಯಕಕ್ಕೆ ಇಳಿದಿವೆ. ಇದರಿಂದಾಗಿ, 2020-21ನೇ ಸಾಲಿನಲ್ಲಿ ಸರ್ಕಾರ ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚು ಬಿತ್ತನೆಯಾಗಿದೆ. ಆದರೆ ಫಲ ಕೊಡುವ ವೇಳೆ ಫಸಲಿಗೆ ರೋಗಬಾಧೆ ತಟ್ಟಿರುವುದರಿಂದಾಗಿ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬ ಸ್ಥಿತಿ ರೈತನದ್ದಾಗಿದೆ. ಕಳೆದ 2 ವರ್ಷದಿಂದ ಬೆಳೆ ವಿಮೆ ಸಂಸ್ಥೆಗಳು, ಬೆಳೆ ಹಾನಿಯಾದ ರೈತರಿಗೆ ವಿಮಾ ಪರಿಹಾರ ನೀಡುವಲ್ಲಿ ಹಿಂದೆ ಬಿದ್ದಿದ್ದರಿಂದಾಗಿ ರೈತ ಹಾಕಿದ ಬಂಡವಾಳಕ್ಕೆ ಪ್ರತಿಫಲ ಸಿಗದಂತಾಗಿದೆ.
ಇಲಾಖಾ ಸೂಚನೆ ಪಾಲಿಸಿಹವಾಮಾನ ವೈಪರೀತ್ಯದಿಂದಾಗಿ ಕೆಲವು ಬೆಳೆಗಳಿಗೆ ರೋಗಗಳು ಕಾಣಿಸಿಕೊಂಡ ಬಳಿಕ ಅಧಿಕಾರಿಗಳು, ವಿಜ್ಞಾನಿಗಳು ಕ್ಷೇತ್ರ ಭೇಟಿ ಮಾಡಿದ್ದಾರೆ. ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ಕಣೆ ಹುಳು ರೋಗ ಹೆಚ್ಚಾಗಿದ್ದು, ರೋಗ ನಿಯಂತ್ರಣಕ್ಕೆ ಜಿಲ್ಲಾ ಕೃಷಿ ಉಪನಿರ್ದೇಶಕರಿಗೆ ಸೂಚನೆ ನೀಡಲಾಗಿದೆ. ಜತೆಗೆ, ಎಲ್ಲ ರೈತರು ಸ್ಥಳೀಯ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ನೀಡುವ ಮಾಹಿತಿ ಅನುಸಾರ ಔಷಧ ಸಿಂಪಡಣೆ ಮತ್ತು ರೋಗ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವ ಮೂಲಕ ಬೆಳೆ ರಕ್ಷಿಸಿಕೊಳ್ಳಬೇಕೆಂದು ಕೃಷಿ ಇಲಾಖೆ ನಿರ್ದೇಶಕ ಬಿ.ವೈ. ಶ್ರೀನಿವಾಸ್ ಹೇಳಿದ್ದಾರೆ.
ಜಿಲ್ಲಾವಾರು ಮಾಹಿತಿ
ಶಿವಮೊಗ್ಗ:ಜಿಲ್ಲೆಯಲ್ಲಿ 52,097 ಹೆಕ್ಟೇರ್ ಮೆಕ್ಕೆಜೋಳ ಬಿತ್ತನೆಯಾಗಿದ್ದು, ಮಳೆಯಿಂದಾಗಿ 1,358 ಹೆಕ್ಟೇರ್ ಬೆಳೆ ಹಾನಿಯಾಗಿದೆ. 5,460 ಹೆಕ್ಟೇರ್​ನಲ್ಲಿ ಶುಂಠಿ ಬಿತ್ತನೆ ಮಾಡಲಾಗಿದ್ದು, ಸೊರಬ, ಶಿಕಾರಿಪುರ, ಶಿವಮೊಗ್ಗ ಮತ್ತು ಹೊಸನಗರ ತಾಲೂಕಿನಲ್ಲಿ ಕೊಳೆ ರೋಗ ಬಾಧಿಸುತ್ತಿದೆ. ಶುಂಠಿ ಇಳುವರಿ ಕುಸಿತವಾಗುವ ಸಾಧ್ಯತೆಗಳಿವೆ. ಸಾಗರ, ಹೊಸನಗರ, ತೀರ್ಥಹಳ್ಳಿಯಲ್ಲಿ ಅಡಕೆ ಬೆಳೆಗೆ ಕೊಳೆ ರೋಗ ಬಾಧಿಸುತ್ತಿದೆ.
ಹಾಸನ:ಆಗಸ್ಟ್ ಮೊದಲ ವಾರದಲ್ಲಿ ಸುರಿದ ಮಳೆಗೆ ಜಿಲ್ಲೆಯ 5 ತಾಲೂಕುಗಳಲ್ಲಿ ಸುಮಾರು 4,460 ಹೆಕ್ಟೇರ್ ಬೆಳೆ ಹಾನಿಗೀಡಾಗಿದೆ. 750 ಹೆಕ್ಟೇರ್ ಮುಸುಕಿನ ಜೋಳ, 570 ಹೆ. ಭತ್ತ ಹಾಗೂ 140 ಹೆ. ತಂಬಾಕು ಹಾಗೂ ವಿವಿಧ ಬೆಳೆ ನಾಶವಾಗಿದೆ. ಹಾಸನ, ಸಕಲೇಶ ಪುರ, ಬೇಲೂರು, ಆಲೂರು ಹಾಗೂ ಚನ್ನರಾಯಪಟ್ಟಣ ತಾಲೂಕಿನಲ್ಲಿ ಕೊಳೆ ರೋಗದಿಂದ ಸುಮಾರು 50 ಹೆಕ್ಟೇರ್ ಭತ್ತ ನಾಶವಾಗಿದೆ. ಮುಂದಿನ 15 ದಿನಗಳಲ್ಲಿ ಮಳೆಯಾಗದಿದ್ದರೆ ಅರಸೀಕೆರೆ, ಚನ್ನರಾಯಪಟ್ಟಣ ತಾಲೂಕಿನ ರಾಗಿ ಬೆಳೆಗೆ ಹಿನ್ನೆಡೆಯಾಗಲಿದೆ.
ಬಳ್ಳಾರಿ:ಶೇ.85 ಈರುಳ್ಳಿ ಬೆಳೆ ಹಾನಿ, ಜಿಲ್ಲೆಯಲ್ಲಿ 8,200 ಹೆಕ್ಟೇರ್​ನಲ್ಲಿ ಈರುಳ್ಳಿ ಬೆಳೆಯಲಾಗಿದೆ. ಈ ಪೈಕಿ 7,300 ಹೆಕ್ಟೇರ್ ಈರುಳ್ಳಿ ಬೆಳೆ ಹವಾಮಾನ ವೈಪರೀತ್ಯದಿಂದ ಫಂಗಸ್ ಕಾಯಿಲೆ ಬಂದು ಹಾನಿಯಾಗಿದೆ. ಕಂಪ್ಲಿಯಲ್ಲಿ ಭತ್ತದ ಬೆಳೆಗೆ ಕಣೆ ಕೀಟ ಬಾಧೆ ಕಾಣಿಸಿಕೊಂಡಿದೆ.
ಬೆಳಗಾವಿ:ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೆಳೆಗಳ ಒಕ್ಕಣೆಗೆ ಮಳೆಯಿಂದ ತೊಂದರೆಯಾಗಿದ್ದು, ಶೇಂಗಾ, ಈರುಳ್ಳಿ, ಸೋಯಾಬೀನ್ ಭೂಮಿಯಲ್ಲಿಯೇ ಕೊಳೆತು ಹೋಗುತ್ತಿವೆ. 2020-21ನೇ ಸಾಲಿನ ಮುಂಗಾರು ಹಂಗಾಮು ಪೂರ್ವದಲ್ಲಿ ಸುರಿದ ಮಳೆಗೆ ಹೆಸರು, ಶೇಂಗಾ, ತೊಗರಿ, ಹತ್ತಿ, ಮೆಕ್ಕಜೋಳ, ಸಜ್ಜೆ, ಸೋಯಾಬೀನ್, ಕಬ್ಬು, ಈರುಳ್ಳಿ, ತಂಬಾಕು ಸೇರಿ 6.88 ಲಕ್ಷ ಹೆಕ್ಟೇರ್ ಬಿತ್ತನೆಯಾಗಿತ್ತು. ಇದರಲ್ಲಿ 3.45 ಲಕ್ಷ ಹೆಕ್ಟೇರ್​ಗೂ ಅಧಿಕ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ನಿರಂತರ ಮಳೆ, ಕಾರ್ವಿುಕರ ಸಮಸ್ಯೆಯಿಂದ ಬೆಳೆ ಒಕ್ಕಣೆ ಮಾಡಲಾಗದೆ ಕೊಳೆಯುತ್ತಿವೆ.
ಧಾರವಾಡ:ಮುಂಗಾರುಪೂರ್ವದ ಉತ್ತಮ ಮಳೆಯಿಂದಾಗಿ 2.41 ಲಕ್ಷ ಹೆಕ್ಟೇರ್ ಬಿತ್ತನೆ ಮಾಡಲಾಗಿತ್ತು. ಆದರೆ, ಸತತ ಮಳೆಯಿಂದ ಹೆಸರು, ಉದ್ದು, ಮೆಕ್ಕೆಜೋಳ, ಶೇಂಗಾ ಸೇರಿ 1.20 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಹತ್ತಿಗೆ ಕಾಯಿಕೊರಕ ರೋಗ ಕಾಣಿಸಿಕೊಂಡಿದೆ.
ಚಿಕ್ಕಮಗಳೂರು:ಕಡೂರು, ತರೀಕೆರೆ, ಅಜ್ಜಂಪುರ ತಾಲೂಕುಗಳಲ್ಲಿ 15 ಸಾವಿರ ಎಕರೆ ಈರುಳ್ಳಿ ಬೆಳೆಯಲಾಗಿದ್ದು, ಸತತ ಮಳೆಗೆ ಕಪ್ಪುಹುಳು ಬಾಧೆ, ಕೊಳೆರೋಗ ಕಾಣಿಸಿಕೊಂಡು ಇಳುವರಿ ತಗ್ಗಿದೆ. ಮಜ್ಜಿಗೆ ರೋಗದ ಜತೆಗೆ ಬಿಳಿ ಕೀಟಗಳು ಆಕ್ರಮಿಸಿ ತೊಂಡೆ ಮುರಿದು ಬೀಳುತ್ತಿದೆ. ಅಡಕೆ ಬೆಳೆಗೆ ಮೂಡಿಗೆರೆ, ಶೃಂಗೇರಿ, ಕೊಪ್ಪದಲ್ಲಿ ಕೊಳೆ ರೋಗ ಬಾಧಿಸುತ್ತಿದ್ದು, ಕಳಸ ತಾಲೂಕಿನಲ್ಲಿ ಶಿಲೀಂಧ್ರ ರೋಗ ಕಾಣಿಸಿಕೊಂಡಿದೆ. ಕಳೆದ 15 ದಿನಗಳಿಂದ ಅಡಕೆ ಮರದ ಗರಿಗಳು ಒಣಗಿವೆ.
ಮಂಡ್ಯ:ಏಪ್ರಿಲ್​ನಿಂದ ಸೆಪ್ಟೆಂಬರ್​ವರೆಗೆ ಮಳೆ, ಬಿರುಗಾಳಿ, ಆಲಿಕಲ್ಲು ಮಳೆಯಿಂದಾಗಿ 191.1 ಎಕರೆ ಬೆಳೆ ಹಾನಿಯಾಗಿದೆ. 96 ಹೆಕ್ಟೇರ್ ಬಾಳೆ, 12 ಹೆ. ತೆಂಗು, 3 ಹೆ. ಚೆಂಡು ಹೂ, 1.1 ಹೆ. ಅಡಕೆ, 32 ಹೆ. ಟೊಮ್ಯಾಟೊ ಹಾಗೂ ತರಕಾರಿ ಬೆಳೆ ನಾಶವಾಗಿದೆ. ಈ ಸಂಬಂಧ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗಿದ್ದು, ಸರ್ಕಾರದಿಂದ ಪರಿಹಾರ ಬರಬೇಕಿದೆ.
ಚಾಮರಾಜನಗರ:ಜಿಲ್ಲೆಯಲ್ಲಿ ಕಳೆದ ಏಪ್ರಿಲ್​ನಿಂದ ಸುರಿದ ಮಳೆಗೆ 630 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಬಾಳೆ, ಕಲ್ಲಂಗಡಿ, ಟಮ್ಯಾಟೋ, ಈರುಳ್ಳಿ, ಕೋಸು, ಬೀನ್ಸ್ ಬೆಳೆ ನಾಶವಾಗಿದ್ದು, ಪರಿಹಾರ ವಿತರಣೆ ಆರಂಭವಾಗಿದೆ.
ಕೊಪ್ಪಳ:ಜಿಲ್ಲೆಯಲ್ಲಿ 4 ಸಾವಿರ ಹೆಕ್ಟೇರ್​ನಲ್ಲಿ ಈರುಳ್ಳಿ ಬಿತ್ತನೆಯಾಗಿದ್ದು, ಮಳೆಯಿಂದ 800 ಹೆಕ್ಟೇರ್ ಬೆಳೆ ಹಾನಿಯಾಗಿದೆ. 45 ಸಾವಿರ ಹೆಕ್ಟೇರ್ ಮೆಕ್ಕೆಜೋಳ ಬಿತ್ತನೆಯಾಗಿದ್ದು, ಮಳೆಯಿಂದ ಕಟಾವಿಗೆ ತೊಂದರೆಯಾಗಿದೆ.
ರಾಯಚೂರು:ವಾಡಿಕೆಗಿಂತ ಶೇ.54 ಹೆಚ್ಚಿನ ಮಳೆಯಾಗಿದ್ದರಿಂದ ಜಿಲ್ಲೆಯಲ್ಲಿ ಈರುಳ್ಳಿ, ಭತ್ತ, ತೊಗರಿ, ಹತ್ತಿ ಬೆಳೆಗಳಲ್ಲಿ ರೋಗ ಬಾಧೆ ಕಾಣಿಸಿಕೊಂಡಿದೆ. ಭತ್ತಕ್ಕೆ ಕಣೆ ನೊಣದ ಹಾವಳಿ ಹೆಚ್ಚಾಗಿದ್ದು, ಈರುಳ್ಳಿ ಕೊಳೆಯುತ್ತಿದೆ. ತೊಗರಿಯಲ್ಲಿ ನಟೆ ರೋಗ ಕಾಣಿಸಿಕೊಂಡರೆ, ಹತ್ತಿ ಬೆಳೆಯಲ್ಲಿ ಕಾಯಿಗಳು ಉದುರಿ ಬಿದ್ದು ಇಳುವರಿ ಕುಸಿತವಾಗುತ್ತಿದೆ.
ವಿಜಯಪುರ :ನಿರಂತರ ಮಳೆಯಿಂದಾಗಿ 13,591 ಹೆಕ್ಟೇರ್ ಬೆಳೆ ಹಾನಿಯಾಗಿದೆ. ತೊಗರಿ 10,497 ಹೆಕ್ಟೇರ್, ಸೂರ್ಯಕಾಂತಿ 38.68 ಹೆ. ಬೆಳೆ ನಷ್ಟವಾಗಿದೆ. ಈರುಳ್ಳಿ 1,296 ಹೆಕ್ಟೇರ್, ದ್ರಾಕ್ಷಿ 8.40 ಹೆ., ಪಪ್ಪಾಯ 18 ಹೆ., ದಾಳಿಂಬೆ 223 ಹೆ., ನಿಂಬೆ 138 ಹೆಕ್ಟೇರ್ ಹಾನಿಯಾಗಿದೆ.
ಬಾಗಲಕೋಟೆ :ಜಿಲ್ಲೆಯಲ್ಲಿ ದಾಳಿಂಬೆ 2,800 ಹೆಕ್ಟೇರ್, ದ್ರಾಕ್ಷಿ 2,400 ಹೆ., ಈರುಳ್ಳಿ 31,000 ಹೆ. ಹಾಗೂ ಬೆಂಡಿ, ಬದನೆ, ಪಾಲಕ ಸೇರಿ 45,000 ಹೆಕ್ಟೇರ್ ತರಕಾರಿ ಬೆಳೆಯಲಾಗಿದೆ. ಸತತ ಮಳೆಯಿಂದ ಈರುಳ್ಳಿ ಸಂಪೂರ್ಣ ಹಾಳಾಗಿದ್ದು, ಉಳಿದ ಬೆಳೆಗಳು ರೋಗಬಾಧೆಯಿಂದ ನಲಗುತ್ತಿವೆ. ಸಮೀಕ್ಷೆ ಪ್ರಕಾರ 13,110 ಹೆಕ್ಟೇರ್ ತೋಟಗಾರಿಕೆ ಬೆಳೆಗಳು ಹಾನಿಯಾಗಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಲಬುರಗಿ :4.50 ಲಕ್ಷ ಹೆಕ್ಟೇರ್ ತೊಗರಿ ಬಿತ್ತನೆಯಾಗಿದೆ. ಕೆಲವೆಡೆ ಎಲೆಗಳಿಗೆ ಹಳದಿ ರೋಗಬಾಧೆ ಕಾಣಿಸಿಕೊಂಡಿದೆ. ಸೆಪ್ಟೆಂಬರ್​ನಲ್ಲಿ ಹೆಚ್ಚು ಮಳೆ ಸುರಿದಿರುವುದರಿಂದ ಶೇ.40 ಇಳುವರಿ ಕಡಿಮೆಯಾಗಬಹುದು. ಶೇ.50 ಉದ್ದು, ಹೆಸರು ಬೆಳೆ ಹಾನಿಯಾಗಿದೆ.
ಬೀದರ್ :ಸೆಪ್ಟಂಬರ್​ನಲ್ಲಿ ಸುರಿದ ಮಳೆಗೆ ತೊಗರಿ, ಕಬ್ಬು ಹಾನಿಯಾಗಿದೆ. ತೇವಾಂಶ ಹೆಚ್ಚಳದಿಂದ ತೊಗರಿಯಲ್ಲಿ ಶೇ. 15 ಇಳುವರಿ ಕುಸಿತವಾಗುವ ಆತಂಕವಿದೆ. 65 ಸಾವಿರ ಹೆಕ್ಟೇರ್​ನಲ್ಲಿ ತೊಗರಿ ಬೆಳೆಯಲಾಗಿದ್ದು, ಅತಿವೃಷ್ಟಿಯಿಂದ 44 ಸಾವಿರ ಹೆಕ್ಟೇರ್ ಬೆಳೆ ನಷ್ಟವಾಗಿದೆ.
ಯಾದಗಿರಿ:1.56 ಲಕ್ಷ ಹೆಕ್ಟೇರ್ ಹತ್ತಿ ಬಿತ್ತನೆಯಾಗಿದ್ದು ನಿರಂತರ ಮಳೆಗೆ ತೇವಾಂಶ ಹೆಚ್ಚಳವಾಗಿ ಕೊಳೆಯಲಾರಂಭಿಸಿದೆ. ಹತ್ತಿಗೆ ತಾಮ್ರ ರೋಗ ಬಾಧೆ ಕಾಣಿಸುತ್ತಿದೆ. ಹತ್ತಿ ಕಾಯಿ ಬಿಡುವ ಹಂತದಲ್ಲಿ ಅಧಿಕ ಮಳೆಯಾಗಿದ್ದು ಗಿಡಗಳು ನೆಲಕಚ್ಚಿವೆ. ಹೆಚ್ಚು ತೇವಾಂಶದಿಂದ ತೊಗರಿ ಶೇ.30 ಬೆಳೆ ಹಾನಿಯಾಗಿದೆ.
ಕೊಡಗು:ಅಕಾಲಿಕ ಮಳೆಯಿಂದ ಶುಂಠಿ ಬೆಳೆ ಕೊಳೆರೋಗದಿಂದ ಹಾಳಾಗಿದೆ. ಬೆಲೆಯೂ ಕುಸಿತವಾಗಿದ್ದು, ಬಿತ್ತನೆಗೆ ಮಾಡಿದ ವೆಚ್ಚವೂ ಬರುವುದು ಕಷ್ಟವಾಗಿದೆ.
ಮೈಸೂರು: ಭಾರಿ ಮಳೆ, ನೆರೆಯಿಂದಾಗಿ 872 ಹೆಕ್ಟೇರ್ ಬೆಳೆ ಹಾನಿಗೀಡಾಗಿದೆ. ಇದರಿಂದ 2.46 ಕೋಟಿ ರೂ. ನಷ್ಟ ಉಂಟಾಗಿದೆ. ಬೆಳೆಹಾನಿಗೆ ಪರಿಹಾರ ನೀಡಲು ವರದಿ ಸಿದ್ಧಡಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ.
ಹಾವೇರಿ:ಆಗಸ್ಟ್​ನಲ್ಲಿ ಮಳೆಗೆ ಮೆಕ್ಕೆಜೋಳ 1,126 ಹೆಕ್ಟೇರ್, ಸೋಯಾಬೀನ್ 860 ಹೆ., ಬಿಟಿಹತ್ತಿ ಹಾಗೂ ಗೆಜ್ಜೆಶೇಂಗಾ ಸೇರಿ ಒಟ್ಟು 2,713.70 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಮೆಣಸಿನಕಾಯಿ, ಈರುಳ್ಳಿ, ಶುಂಠಿ ಸೇರಿ 1,154.14ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ.
ಉತ್ತರ ಕನ್ನಡ:ಶಿರಸಿ, ಬನವಾಸಿ, ಮುಂಡಗೋಡ ಭಾಗದಲ್ಲಿ 850 ಹೆಕ್ಟೇರ್ ಶುಂಠಿ ಬೆಳೆಯಲಾಗಿತ್ತು. ಅದರಲ್ಲಿ 147 ಹೆಕ್ಟೇರ್ ಅತಿವೃಷ್ಟಿಯಿಂದಾಗಿ ಕೊಳೆ ರೋಗ ಬಂದು ಹಾನಿಯಾಗಿದೆ. ಜಿಲ್ಲೆಯಲ್ಲಿ ಬೆಳೆ ಹಾನಿ ಪ್ರಮಾಣ ಕಡಿಮೆಯಾಗಿದೆ.
ಗದಗ:ಸತತ ಸುರಿದ ಮಳೆಯಿಂದ ಶೇಂಗಾ 16 ಸಾವಿರ ಹೆಕ್ಟೇರ್, ಈರುಳ್ಳಿ 7 ಸಾವಿರ ಹೆ., ಹತ್ತಿ 9,900 ಹೆ ಮತ್ತು ಮೆಕ್ಕೆಜೋಳ 19 ಸಾವಿರ ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕೋಲಾರ:ಸೆಪ್ಟೆಂಬರ್ ಮಳೆಗೆ 7,700 ಹೆಕ್ಟೇರ್ ಶೇಂಗಾ (ನೆಲಗಡಲೆ) ಇಳುವರಿಯಲ್ಲಿ ಕುಸಿತವಾಗಿದೆ. ಜೂನ್​ನಲ್ಲಿ ಬಿತ್ತನೆ ಮಾಡಿದ ರೈತರಿಗೆ ಉತ್ತಮ ಫಸಲು ಬಂದಿದ್ದರೆ, ಜುಲೈನಲ್ಲಿ ಬಿತ್ತನೆಯಾಗಿದ್ದ ಬೆಳೆ ತೇವಾಂಶ ಹೆಚ್ಚಾಗಿದ್ದರಿಂದ ಶೇ.30 ಇಳುವರಿ ಕುಂಠಿತವಾಗಿದೆ.
ಚಿಕ್ಕಬಳ್ಳಾಪುರ:ಭಾರಿ ಮಳೆಯಿಂದಾಗಿ ನೆಲಗಡಲೆ ಬೆಳೆಯಲ್ಲಿ ನೀರು ಬುಡ್ಡೆಗಳು ಹೆಚ್ಚಾಗಿದ್ದು, ಮೂರರಿಂದ ನಾಲ್ಕು ಕಾಯಿಗಳಿವೆ. ಹೂವು ಬಿಡುವ ಸಮಯದಲ್ಲಿ ಹೆಚ್ಚು ಮಳೆಯಾಗಿದ್ದೇ ಹಾನಿಗೆ ಕಾರಣ ಎಂದು ಕೃಷಿ ತಜ್ಞರು ಮಾಹಿತಿ ನೀಡಿದ್ದಾರೆ.
ತುಮಕೂರು:ಹೆಚ್ಚಿನ ಮಳೆಯಿಂದಾಗಿ ಶೇಂಗಾ ಬೆಳೆಯಲ್ಲಿ ನೀರುಗಾಯಿ ಹೆಚ್ಚಿದ್ದು ನಿರೀಕ್ಷಿತ ಇಳುವರಿಗಿಂತ ಶೇ.5 ಜೊಳ್ಳಾಗಲಿದೆ. 121314 ಹೆಕ್ಟೇರ್ ಶೇಂಗಾ ಬಿತ್ತನೆ ಮಾಡಲಾಗಿದ್ದು 107355 ಮೆಟ್ರಿಕ್ ಟನ್ ಉತ್ಪಾದನೆ ನಿರೀಕ್ಷೆ ಇದೆ. ಇನ್ನೂ ರಾಗಿ ಈಗ ಕಾಳು ಕಟ್ಟುವ ಸಮಯವಾಗಿದ್ದು ಶುಷ್ಕ ವಾತಾವರಣ ಇದ್ದು ಮುಂದಿನ ವಾರದೊಳಗೆ ಮಳೆ ಬೇಕಿದೆ. ಕೆಲವೆಡೆ ಬೆಂಕಿರೋಗ ಕಾಣಿಸಿದೆ.
ಚಿತ್ರದುರ್ಗ:20,981 ಹೆಕ್ಟೇರ್ ಈರುಳ್ಳಿ ಬೆಳೆಯಲ್ಲಿ 7186.30 ಹೆ. ನಷ್ಟವಾಗಿದೆ. ಮೆಕ್ಕೆಜೋಳಕ್ಕೆ ಲದ್ದಿ ಹುಳುವಿನ ಕಾಟ ಬಾಧಿಸುತ್ತಿದೆ. 1.5 ಲಕ್ಷ ಹೆ.ಶೇಂಗಾ ಬೆಳೆ ಇದ್ದು, ತಗ್ಗು ಪ್ರದೇಶದಲ್ಲಿರುವ ಕಾಯಿ ಜೊಳ್ಳಾಗುತ್ತಿದೆ. ಸತತ ಮಳೆಯಿಂದಾಗಿ ಬಾಳೆ, ತೆಂಗು, ಪಪ್ಪಾಯ ಬೆಳೆ ನಷ್ಟವಾಗಿದೆ. ರಾಗಿ ಬೆಳೆಗೆ ಜಡಕೆ ರೋಗ ಕಾಣಿಸಿಕೊಂಡಿದ್ದು, ಸುಳಿ ಮುದುಡಿ ಗಿಡವೇ ಹಾನಿಯಾಗುತ್ತಿದೆ.
ಬೆಂಗಳೂರು ನಗರ/ ಗ್ರಾಮಾಂತರ :ಸತತ ಮಳೆಯಿಂದಾಗಿ ರಾಗಿ ಬೆಳೆಗೆ ಬ್ಲಾಸ್ಟ್ ರೋಗ ಕಾಣಿಸಿಕೊಂಡಿದೆ. ಸತತವಾಗಿ ಒಂದು ವಾರ ಮಳೆ ಮತ್ತು ಒಂದು ವಾರ ಬಿಸಿಲು ಬೀಳುತ್ತಿದ್ದು, ರೋಗ ನಿಯಂತ್ರಣ ಮಾಡದಿದ್ದಲ್ಲಿ ಬೆಂಕಿ ರೋಗ ಕಾಣಿಸಿಕೊಂಡು ಆರ್ಥಿಕ ನಷ್ಟವಾಗಲಿದೆ ಎಂದು ಜಿಲ್ಲಾ ಕೃಷಿ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − eighteen =
Remember me
