ಬೆಂಗಳೂರು:ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ಪೈಕಿ ಬಿಎಂಟಿಸಿ ಹೊರತುಪಡಿಸಿ ಉಳಿದ ನಿಗಮಗಳ ಪ್ರಯಾಣ ದರ ಶೇ. 12 ಹೆಚ್ಚಳ ಮಾಡಿ ಸರ್ಕಾರ ಪ್ರಯಾಣಿಕರಿಗೆ ಶಾಕ್ ನೀಡಿದೆ. ನೂತನ ಪ್ರಯಾಣ ದರ ಮಂಗಳವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ. ಕೆಎಸ್​ಆರ್​ಟಿಸಿ, ಈಶಾನ್ಯ ಮತ್ತು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರ ಏರಿಕೆಯಾಗಿದೆ. ಡೀಸೆಲ್ ದರ ಏರಿಕೆ ಮತ್ತು ನೌಕರರ ವೇತನ ಹೆಚ್ಚಳದಿಂದಾಗಿ ಸಾರಿಗೆ ನಿಗಮಗಳ ಮೇಲೆ ಹೊರೆ ಬೀಳುತ್ತಿದೆ ಎಂಬ ಕಾರಣ ನೀಡಿ 2014ರ ಮೇನಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಶೇ. 7.96 ದರ ಹೆಚ್ಚಳ ಮಾಡಿತ್ತು.
ಕೆಲ ವರ್ಷಗಳಿಂದ ಇಳಿಕೆಯಾಗದ ಡೀಸೆಲ್ ಬೆಲೆ, ಸಿಬ್ಬಂದಿ ವೇತನ ಹೆಚ್ಚಳ ಭಾರದಿಂದಾಗಿ ಸಾರಿಗೆ ಸಂಸ್ಥೆಗಳು 1 ಸಾವಿರ ಕೋಟಿ ರೂ. ಗೂ ಹೆಚ್ಚಿನ ನಷ್ಟದಲ್ಲಿದೆ. ಅದರಲ್ಲೂ ಈಶಾನ್ಯ ಮತ್ತು ವಾಯವ್ಯ ನಿಗಮಗಳೇ 600 ಕೋಟಿ ರೂ.ಗೂ ಹೆಚ್ಚಿನ ಹಾನಿಯಲ್ಲಿವೆ.
ಬೆಂ.ಗಬಿಎಂಟಿಸಿ ದರ ಇಳಿಕೆ?:ಸಾರಿಗೆ ಸಚಿವರೂ ಆದ ಡಿಸಿಎಂ ಲಕ್ಷ್ಮಣ ಸವದಿ ಹೇಳಿದಂತೆ, ಬಿಎಂಟಿಸಿ ಪ್ರತಿದಿನ 1 ಕೋಟಿ ರೂ. ನಷ್ಟ ಅನುಭವಿಸುತ್ತಿದೆ. ಉಳಿದ ಮೂರು ನಿಗಮಗಳಿಗಿಂತ ಬಿಎಂಟಿಸಿ ಪ್ರಯಾಣ ದರ ಏರಿಕೆ ಮಾಡಬೇಕಿತ್ತು. ಅದರ ಬದಲು ಪ್ರಯಾಣ ದರ ಇಳಿಸುವ ಕುರಿತು ಸರ್ಕಾರ ಚಿಂತನೆ ನಡೆಸಿದೆ. ದರ ಏರಿಕೆ ಮಾಡದಿರಲು ಈ ವರ್ಷ ನಡೆಯಲಿರುವ ಬಿಬಿಎಂಪಿ ಚುನಾವಣೆಯೂ ಕಾರಣ ಎನ್ನಲಾಗುತ್ತಿದೆ.
ಮೈತ್ರಿ ಸರ್ಕಾರದ ಪ್ರಸ್ತಾವನೆ:ಸಾರಿಗೆ ನಿಗಮಗಳು ನಷ್ಟದಲ್ಲಿದ್ದು ಪ್ರಯಾಣ ದರ ಹೆಚ್ಚಳ ಮಾಡುವಂತೆ ಮೈತ್ರಿ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದ ಡಿ.ಸಿ.ತಮ್ಮಣ್ಣ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಶೇ. 15ರಿಂದ 20 ಪ್ರಯಾಣ ದರ ಹೆಚ್ಚಳಕ್ಕೆ ಪ್ರಸ್ತಾಪಿಸಲಾಗಿತ್ತು. ಅದರಂತೆ ಶೇ.18 ಪ್ರಯಾಣ ದರ ಹೆಚ್ಚಿಸಿ ಬಳಿಕ ರಾತ್ರೋರಾತ್ರಿ ನಿರ್ಧಾರ ಹಿಂಪಡೆಯಲಾಗಿತ್ತು.
ನಿತ್ಯ 1,539 ಕಿ.ಲೀ. ಡೀಸೆಲ್: ನಾಲ್ಕೂ ನಿಗಮಗಳಿಗೆ ಸೇರಿ ನಿತ್ಯ 1,539 ಕಿಲೋಲೀಟರ್ ಡೀಸೆಲ್ ಅವಶ್ಯವಿದೆ. ಅದರಲ್ಲಿ ಕೆಎಸ್​ಆರ್​ಟಿಸಿಗೆ ಅಂದಾಜು 610 ಕಿ.ಲೀ., ಬಿಎಂಟಿಸಿ 324, ಎನ್​ಡಬ್ಲ್ಯುಕೆಆರ್​ಟಿಸಿ 331, ಎನ್​ಇಕೆಆರ್​ಟಿಸಿ 274 ಕಿ.ಲೀ. ಡೀಸೆಲ್ ಬಳಕೆ ಮಾಡುತ್ತಿವೆ. ಡೀಸೆಲ್​ಗಾಗಿ ವಾರ್ಷಿಕ 250 ಕೋಟಿ ರೂ.ಗೂ ಹೆಚ್ಚಿನ ಹಣ ವ್ಯಯಿಸಲಾಗುತ್ತಿದೆ.
ಡೀಸೆಲ್ ದರ -ಠಿ;11.27 ಹೆಚ್ಚಳ
2014 ಮೇ ತಿಂಗಳಲ್ಲಿ ಪ್ರಯಾಣ ದರ ಏರಿಕೆಯಾದ ನಂತರದಿಂದ 2020ರ ಫೆ.ವರೆಗೆ ಡೀಸೆಲ್ ದರ 11.27 ರೂ. ಹೆಚ್ಚಳವಾಗಿದೆ. ಅದರಿಂದ ಕೆಎಸ್​ಆರ್​ಟಿಸಿಗೊಂದಕ್ಕೇ ವಾರ್ಷಿಕ 260 ಕೋಟಿ ರೂ. ನಷ್ಟವಾಗುವಂತಾಗಿದೆ. ಅಲ್ಲದೆ, ನೌಕರರಿಗೆ ತುಟ್ಟಿಭತ್ಯೆ ಪರಿಷ್ಕರಣೆ, ಕಾರ್ಯಾಚರಣೆ ವೆಚ್ಚಕ್ಕಾಗಿ 340 ಕೋಟಿ ರೂ.ಗೂ ಹೆಚ್ಚು ವ್ಯಯವಾಗುತ್ತಿದ್ದು, ಒಟ್ಟಾರೆ 601.21 ಕೋಟಿ ರೂ. ವಾರ್ಷಿಕ ವೆಚ್ಚದ ಲೆಕ್ಕ ಹಾಕಲಾಗಿದೆ.
ಬಸ್ ಪಾಸ್ ದರ ಹೆಚ್ಚಳವಿಲ್ಲ
ಪ್ರಯಾಣ ದರ ಹೆಚ್ಚಳದ ಪರಿಣಾಮ ವಿದ್ಯಾರ್ಥಿಗಳ ರಿಯಾಯಿತಿ ಬಸ್ ಪಾಸ್ ಮತ್ತು ಅಂಗವಿಕಲ ಬಸ್ ಪಾಸ್ ದರದ ಮೇಲೆ ಉಂಟಾಗುವುದಿಲ್ಲ. ಈ ಬಸ್ ಪಾಸ್​ಗಳ ದರವನ್ನು ಹಿಂದಿನಂತೆಯೇ ನಿಗದಿ ಮಾಡಲಾಗಿದೆ. ಇನ್ನು, ಗ್ರಾಮೀಣ ಪ್ರದೇಶಗಳಲ್ಲಿನ ಸಾಮಾನ್ಯ ಸಾರಿಗೆಗಳಲ್ಲಿನ ಮೊದಲ 3 ಕಿ.ಮೀ.ಗಳ ಪ್ರಯಾಣಕ್ಕೆ 7 ರೂ. ಇದ್ದ ಪ್ರಯಾಣ ದರದಲ್ಲಿ 2 ರೂ. ಕಡಿತಗೊಳಿಸಿ 5 ರೂ.ಗೆ ನಿಗದಿ ಮಾಡಲಾಗಿದೆ. ಸಾಮಾನ್ಯ ಸಾರಿಗೆಯಲ್ಲಿ 12 ಮತ್ತು 15 ಕಿ.ಮೀ. ಪ್ರಯಾಣದ ದರದಲ್ಲಿ ಏರಿಕೆ ಮಾಡಿಲ್ಲ. ವೇಗದೂತ ಸಾರಿಗೆಯಲ್ಲಿ ಮೊದಲ 6 ಕಿ.ಮೀ. ಪ್ರಯಾಣ ದರದಲ್ಲಿ ಹೆಚ್ಚಳ ಮಾಡದೆ, ಹಾಲಿ ದರ ಮುಂದುವರಿಸಲಾಗಿದೆ.
ಈಗಾಗಲೇ ಬೆಲೆ ಏರಿಕೆಯಿಂದ ಜನರ ದೈನಂದಿನ ಜೀವನ ನಿರ್ವಹಣೆ ಕಷ್ಟದಲ್ಲಿರುವ ಸಂದರ್ಭದಲ್ಲಿ ಬಸ್ ದರ ಹೆಚ್ಚಳದ ಅಗತ್ಯವಿರಲಿಲ್ಲ.
|ಎಚ್.ಡಿ.ಕುಮಾರಸ್ವಾಮಿ ಮಾಜಿ ಸಿಎಂ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
