ಬೆಂಗಳೂರು:ವರ್ಗಾವಣೆ ದಂಧೆಯ ಬಗ್ಗೆ ಪದೇಪದೆ ಟೀಕೆ-ಟಿಪ್ಪಣಿ ಬರುತ್ತಿರುವ ನಡುವೆಯೇ ಮಂಗಳವಾರ ವಿಧಾನಸಭೆಯಲ್ಲಿ ಅಧಿಕಾರಿಗಳ ‘ವರ್ಗಾವಣೆಯ ವ್ಯವಹಾರ’ದ ಆರೋಪವು ಆಡಳಿತ ಹಾಗೂ ಪ್ರತಿಪಕ್ಷದ ನಡುವೆ ತೀವ್ರ ಜಟಾಪಟಿಗೆ ಕಾರಣವಾಗಿದ್ದಲ್ಲದೆ, ಕಲಾಪಕ್ಕೂ ಅಡಚಣೆಯಾಗಿ ಕಾವೇರಿದ ವಾತಾವರಣ ಸೃಷ್ಟಿಯಾಗಿತ್ತು.
ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ಹುದ್ದೆಗೆ ಅರ್ಹತೆ ಇಲ್ಲದವರನ್ನು ನೇಮಿಸಲಾಗಿದೆ. ವರ್ಗಾವಣೆಯಲ್ಲಿ ವ್ಯಾಪಾರ ನಡೆದಿದೆ ಎಂದು ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದು ಭಾರಿ ಗದ್ದಲಕ್ಕೆ ಕಾರಣವಾಯಿತು.
ಅಷ್ಟೇ ಅಲ್ಲದೇ, ಬಸನಗೌಡ ಯತ್ನಾಳ್- ಸಚಿವ ಬೈರತಿ ಸುರೇಶ್, ಬಸವರಾಜ ಬೊಮ್ಮಾಯಿ- ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್- ಯತ್ನಾಳ್ ನಡುವೆ ನೇರಾನೇರ ವಾಗ್ಯುದ್ಧಕ್ಕೂ ವಿಧಾನಸಭೆ ಸಾಕ್ಷಿಯಾಯಿತು. ಮಾತಿನ ಸಮರ ತಾರಕಕ್ಕೆ ಹೋಗಿ ಬಿಜೆಪಿ ಶಾಸಕರು ಧರಣಿ ನಡೆಸಿದರು. ಕಲಾಪವೂ ಕೆಲಕಾಲ ಮುಂದೂಡಲ್ಪಟ್ಟಿತು.
ಆಗಿದ್ದೇನು?:ವಿಜಯಪುರ ಪಾಲಿಕೆಯ ಆಯುಕ್ತರ ಸ್ಥಾನಕ್ಕೆ ಅರ್ಹರಲ್ಲದವರನ್ನು ನಿಯೋಜಿಸಲಾಗಿದೆ ಎಂದು ಶೂನ್ಯವೇಳೆಯಲ್ಲಿ ಯತ್ನಾಳ್ ಆರೋಪಿಸಿದರು. ಹೊಸ ಸರ್ಕಾರ ಬಂದಾಗ ವರ್ಗಾವಣೆಗಳು ಸಹಜ. ಪಾಲಿಕೆಗೆ ಐಎಎಸ್, ಕೆಎಎಸ್ ಕೇಡರ್ ಬಿಟ್ಟು ಕೆಳಗಿನ ಹಂತದ ಅಧಿಕಾರಿಯೊಬ್ಬರನ್ನು ನೇಮಿಸಲಾಗಿದೆ. ಇದು ನಿಯಮಕ್ಕೆ ವಿರುದ್ಧ. ನೀವು ಯಾರನ್ನಾದರೂ ಬೇಕಾದರೂ ಹಾಕಿ. ಆದರೆ, ಅರ್ಹರನ್ನು ಹಾಕಿ. ಅರ್ಹತೆ ಇಲ್ಲದ ಕಾರಕೂನನನ್ನು ಹಾಕಿದ್ದೀರಿ. ನಿಮ್ಮ ಜಾತಿಯವರನ್ನೇ ವರ್ಗ ಮಾಡಿದ್ದೀರಿ ಅವನೇನು ನಮ್ಮ ಲಿಂಗಾಯತನಲ್ಲ ಎಂದು ಯತ್ನಾಳ ಕುಟುಕಿದರು. ಉತ್ತರ ನೀಡಿದ ಸಚಿವ ಬೈರತಿ ಸುರೇಶ್, ನಾವು ಪೌರಸೇವೆ ಇಲಾಖೆಯ ಅಧಿಕಾರಿಯನ್ನೇ ಹಾಕಿದ್ದೇವೆ. ಅಧಿಕಾರಿಗಳನ್ನು ಜಾತಿ ನೋಡಿಕೊಂಡು ನೇಮಿಸುವುದಿಲ್ಲ ಎಂದು ತಿರುಗೇಟು ನೀಡಿದರು. ಈ ಉತ್ತರಕ್ಕೆ ಯತ್ನಾಳ್ ತೃಪ್ತರಾಗದೆ ಕೋರ್ಟ್ ಆದೇಶವನ್ನು ಉಲ್ಲೇಖಿಸಿ, ‘ಎಲ್ಲ ವ್ಯಾಪಾರ ಮಾಡಿಕೊಂಡಿದ್ದೀರಿ’ ಎಂದರು.
ಈ ಮಾತಿನಿಂದ ಕೆರಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಯತ್ನಾಳ್ ವಿರುದ್ಧ ಮುಗಿಬಿದ್ದರು. ಅಲ್ಲಿಂದ ನಾಯಕರ ನಡುವೆ ವಾಗ್ಯುದ್ಧವೇ ನಡೆದು ಹೋಯಿತು. ವ್ಯಾಪಾರ ಎಂದರೆ ಏನರ್ಥ? ಎಂದು ಕಿಡಿಕಾರಿದರು.
ಈ ಹಂತದಲ್ಲಿ ಸಚಿವ ಬೈರತಿ ಸುರೇಶ್, ‘ನಾನು ಯಾವುದೇ ಕಾರಣಕ್ಕೂ ತೀರ್ಮಾನ ಹಿಂಪಡೆಯಲ್ಲ ಏನ್ ಮಾಡ್ತಿರೋ ಮಾಡಿಕೊಳ್ಳಿ’ ತಮ್ಮನ್ನು ಸೌಜನ್ಯಕ್ಕೂ ಅಧಿಕಾರಿ ಭೇಟಿ ಮಾಡಿಲ್ಲ ಎಂದಿದ್ದೀರಿ, ನಿಮ್ಮೊಂದಿಗೆ ಅಧಿಕಾರಿಯನ್ನು ವ್ಯಾಪಾರ ಮಾಡಲು ಬಿಡಬೇಕಿತ್ತಾ ಎಂದು ಪ್ರಶ್ನಿಸಿದರಲ್ಲದೇ ಏಕವಚನ ಪದಪ್ರಯೋಗ ಬಿಜೆಪಿಯವರನ್ನು ಕೆರಳಿಸಿತು.
ಇದು ಸಚಿವರು ಉತ್ತರ ಕೊಡುವ ರೀತಿಯೇ? ಸದಸ್ಯರನ್ನು ಅವಮಾನಿಸುವುದು ಸರಿಯೇ? ಎಂದು ಸ್ಪೀಕರ್ ಪೀಠದ ಮುಂದೆ ಬಿಜೆಪಿ ಸದಸ್ಯರು ಧರಣಿ ನಡೆಸಿದರು. ಹೀಗಾಗಿ ಕಲಾಪ ನಿಯಂತ್ರಣಕ್ಕೆ ಬಾರದೆ ಸ್ಪೀಕರ್ ಸದನವನ್ನು ಕೆಲ ಕಾಲ ಮುಂದೂಡಬೇಕಾಯಿತು.
ಇಷ್ಟರ ನಡುವೆ ಹಲವು ಶಾಸಕರು ಯತ್ನಾಳ್ ವಿರುದ್ಧ ಹಕ್ಕುಚ್ಯುತಿ ಮಂಡಿಸುವಂತೆ ಬೈರತಿ ಸುರೇಶ್​ಗೆ ಸಲಹೆ ನೀಡಿದರು. ಮತ್ತೆ ಕೆಲವರು ಶಾಂತವಾಗಿ ಉತ್ತರಿಸುವಂತೆ ತಿಳಿಸಿದರು. ಈ ವೇಳೆ ಯತ್ನಾಳ್ ಕೊಟ್ಟ ಶೂನ್ಯವೇಳೆ ಪ್ರಸ್ತಾಪದಲ್ಲಿ ಅನೇಕ ಅಂಶಗಳು ಆಕ್ಷೇಪಾರ್ಹವಾಗಿವೆ ಎಂದು ಅಸಮಾಧಾನವನ್ನೂ ವ್ಯಕ್ತಪಡಿಸಿದರು.
ಸಿಎಂ ಹುದ್ದೆಗೆ 2,500 ಕೋಟಿ ಡೀಲ್ ಎಂದವನು ನೀನು. ನಿನಗೆ ನಾಲಿಗೆ ಮೇಲೆ ಹಿಡಿತ ಇರಬೇಕು. ನನ್ನಂತಹವನು ಆಗಿದ್ದರೆ ನಿನ್ನ ಪಕ್ಷದಿಂದ 24 ಗಂಟೆಯಲ್ಲಿ ಉಚ್ಚಾಟನೆ ಮಾಡ್ತಿ್ತ್ದ ಎಂದು ಯತ್ನಾಳ್ ವಿರುದ್ಧ ಡಿ.ಕೆ. ಶಿವಕುಮಾರ್ ವಾಕ್​ಪ್ರಹಾರ ನಡೆಸಿದರು. ಈ ವೇಳೆ ಸಮರ್ಥನೆಗೆ ನಿಂತ ಯತ್ನಾಳ್, ನನ್ನ ಮಾತಿನ ಬಗ್ಗೆ ಯಾವುದೇ ತನಿಖೆ ನಡೆಸಿ ಸಿಬಿಐಗಾದರೂ ಕೊಡಿ ಎಂದಾಗ, ಏಯ್ ಕುತ್ಕೊಳಯ್ಯ… ಎಂದು ಏಕವಚನದಲ್ಲಿ ಡಿ.ಕೆ. ಶಿವಕುಮಾರ್ ಗದರಿದರು.
ನೀವು ಹೇಳಿದಿರಿ ಅಂತ ಆಫೀಸರ್ ಬದಲಾವಣೆ ಮಾಡಲ್ಲ, ಏನ್ ಮಾಡ್ತೀರೋ ಮಾಡ್ಕೊಳ್ರಿ … ಹೀಗೆಂದು ಯತ್ನಾಳ್ ವಿರುದ್ಧ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ತಿರುಗಿಬಿದ್ದರು. ವ್ಯಾಪಾರ- ವಹಿವಾಟು ಎಲ್ಲ ನಿಮ್ಮ ಕಾಲದಲ್ಲಿ ನಡೆಯುತ್ತಿತ್ತು. ವ್ಯಾಪಾರ ಮಾಡುವ ದರ್ದು ನಮಗೆ ಇಲ್ಲ, ಯತ್ನಾಳ್ ಚೀಪ್ ಆಗಿ ಮಾತಾಡ್ಬೇಡ, ಏಯ್ ಕೂತ್ಕೋ ಸುಮ್ನೆ… ಅಧಿಕಾರಿ ನಿಮ್ಮ ಹತ್ರ ಕರೆದಾಗ ಬಂದಿಲ್ಲ ಅಂದರೆ, ಅವನನ್ನು ತೆಗೆದು ಹಾಕಬೇಕಾ? ಎಂದು ಬೈರತಿ ಸುರೇಶ್ ಗದರಿದರು.
ಆಪ್ತ ಬೈರತಿ ಸುರೇಶ್ ಪರವಾಗಿ ಸಿದ್ದರಾಮಯ್ಯ ಬ್ಯಾಟಿಂಗ್ ಆರಂಭಿಸಿ ಯತ್ನಾಳ್ ವಿರುದ್ಧ ಮುಗಿಬೀಳುತ್ತಿದ್ದಂತೆ ಬಸವರಾಜ ಬೊಮ್ಮಾಯಿ ಆಕ್ರೋಶ ವಿಪರೀತ ಹಂತಕ್ಕೆ ಹೋಯಿತು. ಇದು ಅತಿ ಆಯಿತು. ಯತ್ನಾಳ್ ಎತ್ತಿರುವ ಪ್ರಶ್ನೆಗೆ ಉತ್ತರ ಕೊಡಿ. ಅದನ್ನು ಬಿಟ್ಟು ಎಲ್ಲರನ್ನು ಹೆದರಿಸುವ ಅಗತ್ಯವಿಲ್ಲ ಎಂದರು. ನೋಡೇ ಬಿಡೋಣ ಅದೇನು ಮಾಡುತ್ತೀರಿ ಎಂದು, ದೌರ್ಜನ್ಯ ಮಾಡುತ್ತೀರಾ, ನಾನು ಈವರೆಗೂ ಈ ರೀತಿ ಮಾತನಾಡಿದ ಮಂತ್ರಿಯನ್ನು ನೋಡಿಲ್ಲ. ಅಧಿಕಾರ ಶಾಶ್ವತವೇ? ಎಷ್ಟು ದಿನ ವ್ಯಾಪಾರ ಮಾಡ್ತೀರಿ.. ನೋಡೇ ಬಿಡೋಣ್ರೀ… ಬೇಕಾದ ಅಧಿಕಾರಿ ಹಾಕಿ… ನೋಡೇ ಬಿಡೋಣ…. ಎಂದು ಗಟ್ಟಿ ದನಿಯಲ್ಲಿ ಹೇಳಿದಾಗ ಕಲಾಪದ ಕಾವು ತೀವ್ರಗತಿಯಲ್ಲಿ ಏರಿತ್ತು.
ಯತ್ನಾಳ್ ಜವಾಬ್ದಾರಿಯಿಂದ ಮಾತಾಡಿ ಎಂದು ಸಿಎಂ ಸಿದ್ದರಾಮಯ್ಯ ಏರುದನಿಯಲ್ಲಿ ಹರಿಹಾಯ್ದರು. ನೀವು ಮಾತ್ರ ಸತ್ಯ ಹರಿಶ್ಚಂದ್ರರಾ, ಅವರು ಹರಿಶ್ಚಂದ್ರರಲ್ವಾ, ಸುಮ್ಮನೇ ಏನೇನೋ ಮಾತಾಡಬೇಡಿ. ಹೇಳುವುದಕ್ಕೂ ಇತಿಮಿತಿ ಇರುತ್ತದೆ. ಏನೇನೋ ಹೇಳುವುದಲ್ಲ ಎಂದು ಸಿಎಂ ಹೇಳಿದಾಗ ಕಾಂಗ್ರೆಸ್ ಸದಸ್ಯರು ಎದ್ದು ನಿಂತು ಯತ್ನಾಳ್ ವಿರುದ್ಧ ಟೀಕಾಪ್ರಹಾರ ನಡೆಸಿದರು.
ಸ್ಪೀಕರ್ ಸಂಧಾನ ಸಭೆ ಕರೆದು ಬಿಜೆಪಿಯವರನ್ನು ಆಹ್ವಾನಿಸಿದಾಗ ಅವರು ಬರಲೊಪ್ಪಲಿಲ್ಲ. ಅರ್ಧ ತಾಸಿನ ಬಳಿಕ ಬಿಜೆಪಿಯವರನ್ನು ಮನವೊಲಿಸಿ ಸಂಧಾನ ಸಭೆಗೆ ಕರೆಸಲಾಯಿತು. ಅಲ್ಲಿ ಇಬ್ಬರೂ ತಮ್ಮ ಮಾತಿಗೆ ವಿಷಾದ ವ್ಯಕ್ತಪಡಿಸುವುದೆಂದು ತೀರ್ವನವಾಯಿತು. ಮತ್ತೆ ಕಲಾಪ ಆರಂಭವಾದಾಗ ಹಳೆಯ ಚರ್ಚೆಯನ್ನೇ ಕೆದಕಿದ್ದರಿಂದ ಕಲಾಪದ ಸಮಯ ವ್ಯರ್ಥವಾಗುತ್ತಾ ಸಾಗಿತು. ಹಾಗೂ ಹೀಗೂ ಸ್ಪೀಕರ್ ವಿಷಯವನ್ನು ಅಲ್ಲಿಗೇ ಮುಗಿಸಿದರು.
ಕಂಪನಿ ಎಂಡಿ, ಸಿಇಒ ಇಬ್ಬರನ್ನೂ ಹಾಡಹಗಲೇ ಬರ್ಬರವಾಗಿ ಕೊಂದ ಮಾಜಿ ಉದ್ಯೋಗಿ!

ವೃದ್ಧ ಚಿಲ್ಲರೆ ಕೊಟ್ಟಿದ್ದಕ್ಕೆ ಸಾಲಲ್ಲ ಎಂದು 6 ಸಾವಿರ ರೂ. ಕಸಿದುಕೊಂಡು ಹೋದ ಮಂಗಳಮುಖಿಯರ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 14 =
Remember me
