ಬೆಂಗಳೂರು:ರಾಜ್ಯದ ಕಾನೂನು ಸುವ್ಯವಸ್ಥೆ ವಿಷಯ ವಿಧಾನಸಭೆಯಲ್ಲಿ ಗದ್ದಲ, ಕೋಲಾಹಲ ಸೃಷ್ಟಿಗೆ ಕಾರಣವಾಯಿತು. ನಿಯಮ 69ರಡಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಇತ್ತೀಚಿನ ದಿನಗಳಲ್ಲಿ ನಡೆದಿರುವ ಕೊಲೆ, ಹತ್ಯೆಯಾದವರ ಕುಟುಂಬಕ್ಕೆ ಕೊಟ್ಟಿರುವ ಪರಿಹಾರದ ಕುರಿತು ಮಾತನಾಡುತ್ತಾ ಗೃಹ ಸಚಿವರನ್ನು ಛೇಡಿಸಿದರು.
ಕ್ರಿಯೆಗೆ ಪ್ರತಿಕ್ರಿಯೆ ಎಂದರೆ ಏನು? ಮುಖ್ಯಮಂತ್ರಿಗಳೇ ಹೀಗೆ ಹೇಳಿದರೆ ಹೇಗೆ? ಕೇಂದ್ರ ಸಚಿವ ಭಗವಂತ್ ಖೂಬಾ 144 ನಿಷೇದಾಜ್ಞೆ ಜಾರಿಯಲ್ಲಿರುವಾಗ ಮೆರವಣಿಗೆ ಮಾಡಲಿಲ್ಲವೆ? ಹರ್ಷ ಶವ ಸಂಸ್ಕಾರದಲ್ಲಿ ಮಂತ್ರಿ ಈಶ್ವರಪ್ಪ ಪಾಲ್ಗೊಂಡಿರಲಿಲ್ಲವೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಮಧ್ಯ ಪ್ರವೇಶಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ದರ್ಗಾ ಪಕ್ಕದಲ್ಲೇ ಶಿವಲಿಂಗವಿದೆ. ಶಿವರಾತ್ರಿ ದಿನ ಪೂಜೆಗೆ ಹೋಗಿದ್ದರು. ಆಗ ಎರಡು ಮೂರು ಸಾವಿರ ಜನ ಸೇರಿ ತಲ್ವಾರ್, ಕಾರದಪುಡಿ, ಕಲ್ಲು ಹಿಡಿದಿದ್ದರು. ಆಗ ಕೇಂದ್ರ ಮಂತ್ರಿ ಬದುಕಿ ಬಂದಿರುವುದೇ ದೊಡ್ಡದು ಎಂದು ಸಮರ್ಥಿಸಿದರು. ಅದಕ್ಕೆ ಸಿದ್ದರಾಮಯ್ಯ, ಅಲ್ಲಿ ಗಲಾಟೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳಿ. ಆದರೆ, 144 ಉಲ್ಲಂಘನೆ ಮಾಡಿದ ಕೇಂದ್ರ ಮಂತ್ರಿ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ? ಸಚಿವ ಭಗವಂತ ಖೂಬಾಗೊಂದು ಕಾನೂನು ಸಾಮಾನ್ಯ ಜನರಿಗೊಂದು ಕಾನೂನು ಇದೆಯೆ ಎಂದು ತರಾಟೆಗೆ ತೆಗೆದುಕೊಂಡರು. ಶಿವಮೊಗ್ಗದಲ್ಲಿ ಹತ್ಯೆಯಾದ ಹರ್ಷ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಕೊಟ್ಟಿದ್ದೀರಿ. ನಾವು ಬೇಡ ಎನ್ನುವುದಿಲ್ಲ. ಆದರೆ ನರಗುಂದದ ಶಂಶಿರ್ ಸುಬಾನ್ ಸಾಬ್, ಕೊಡಗಿನ ಹುತಾತ್ಮ ಯೋಧ ಅಲ್ತಾಫ್ ಅಹಮ್ಮದ್, ಬೆಳ್ತಂಗಡಿಯ ದಿನೇಶ್ ಅವರಿಗೆ 25 ಲಕ್ಷ ಪರಿಹಾರ ಕೊಟ್ಟಿದ್ದೀರಾ? ತಾರಮತ್ಯ ಮಾಡಬೇಡಿ. ಅವರಿಗೂ ಕೊಡಿ. ಅವರಿಗೊಂದು ನ್ಯಾಯ ಇನ್ನೊಬ್ಬರಿಗೊಂದು ನ್ಯಾಯವೇ ಎಂದು ಕೇಳಿದರು.
ರೂಪಾಲಿ ನಾಯ್ಕ್ ಆಕ್ರೋಶ:ಬಿಜೆಪಿ ಸರ್ಕಾರ ಕೊಲೆಗೀಡಾದವರ ಕುಟುಂಬಕ್ಕೆ ಪರಿಹಾರ ಕೊಡುವಲ್ಲಿ ತಾರತಮ್ಯ ಮಾಡಿದೆ ಎಂದು ಸಿದ್ದರಾಮಯ್ಯ ಹೇಳಿದಾಗ, ಬಿಜೆಪಿಯ ರೂಪಾಲಿ ನಾಯಕ್ ಮಧ್ಯ ಪ್ರವೇಶಿಸಿ, ಪರೇಶ್ ಮೇಸ್ತಾ ಸಾವಿನ ವಿಚಾರ ಪ್ರಸ್ತಾಪಿಸಿ ನಮಗೂ ಮಾತನಾಡಲು ಅವಕಾಶ ಕೊಡಿ ಎಂದು ಕೂಗಾಡಿದರು. ರೂಪಾಲಿ ಮಾತಿಗೆ ಸಿದ್ದರಾಮಯ್ಯ ಸೊಪ್ಪುಹಾಕಲಿಲ್ಲ. ಆಗ ಆಡಳಿತ ಪಕ್ಷದ ಸದಸ್ಯರೆಲ್ಲ ಕೂಗಾಡಿದರಲ್ಲದೆ, ಧರಣಿಗೂ ಮುಂದಾದರು. ಆಗ ಸರ್ಕಾರದ ಮುಖ್ಯ ಸಚೇತಕ ಸತೀಶ್ ರೆಡ್ಡಿ ಸಮಾಧಾನ ಪಡಿಸಿದರು. ಬಳಿಕ ಮಾತನಾಡಿದ ರೂಪಾಲಿ ನಾಯ್್ಕ ಪರೇಶ್ ಮೇಸ್ತ ಪ್ರಕರಣದ ಸಂದರ್ಭದಲ್ಲಿ ಮೂರು ದಿನ ಸಿದ್ದರಾಮಯ್ಯ ಅಲ್ಲಿಯೇ ಇದ್ದರು. ಏನು ಕ್ರಮ ಕೈಗೊಳ್ಳಲಿಲ್ಲ. ಅವನ ಶವ ತೇಲಿ ಬಂತು. ಇವತ್ತಿನವರೆಗೂ ಅವರ ತಂದೆ-ತಾಯಿಗೆ ಪರಿಹಾರ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೆದ್ದು ಪೆದ್ದಾಗಿ ಮಾತನಾಡುತ್ತಾರೆ…:ಗೃಹ ಸಚಿವ ಆರಗ ಜ್ಞಾನೇಂದ್ರ ಕೆಲವು ಬಾರಿ ಅಥೆಂಟಿಕ್ ಆಗಿ ಉತ್ತರ ಕೊಡುತ್ತಾರೆ. ಆದರೆ, ಕೆಲವು ಕಡೆ ಪೆದ್ದ ಪೆದ್ದರಂತೆ ಮಾತನಾಡುತ್ತಾರೆ ಎಂದು ಸಿದ್ದರಾಮಯ್ಯ ಕಾಲೆಳೆದರು. ಪೊಲೀಸರು ಲಂಚ ತಿಂದ್ಕೊಂಡು ನಾಯಿ ತರಹ ಬಿದ್ದಿರುತ್ತಾರೆ ಎಂದು ನೀವು ಹೇಳಿರಲಿಲ್ಲವೆ? ಚಾಮುಂಡಿ ಬೆಟ್ಟದಲ್ಲಿ ಮಹಿಳೆ ಮೇಲೆ ಅತ್ಯಾಚಾರವಾದಾಗ ನಡು ರಾತ್ರಿಯಲ್ಲಿ ಆ ಮಹಿಳೆಗೆ ಅಲ್ಲಿ ಹೋಗುವ ಅವಶ್ಯಕತೆ ಏನಿತ್ತು ಎಂದು ಕೇಳಿರಲಿಲ್ಲವೆ? ಎಂದು ಪ್ರಶ್ನಿಸಿದರು. ಅದಕ್ಕೆ ಕೌಂಟರ್ ಕೊಟ್ಟ ಆರಗ ಜ್ಞಾನೇಂದ್ರ, ನಿಮ್ಮ ಕಾಲದಲ್ಲಿ ಒಬ್ಬ ಸಚಿವ ವಿಧಾನಸೌಧದ ಮೂರನೇ ಮಹಡಿಯಲ್ಲೇ ಪೊಲೀಸರು ಬಾಗಿಲಲ್ಲೇ ಇದ್ದರೂ ಶುರು ಮಾಡಿಕೊಂಡಿದ್ದರು. ಅದು ನಿಮ್ಮ ವಿಫಲತೆ ಎಂದು ನಾನು ಹೇಳಲು ಆಗುತ್ತದೆಯೆ? ಎಂದು ತಿರುಗೇಟು ನೀಡಿದರು.
ದುಪಟ್ಟಕ್ಕೆ ಅವಕಾಶ ನೀಡಿ:ದುಪಟ್ಟ ಹಾಕಿಕೊಂಡು ಪರೀಕ್ಷೆ ಬರೆಯಲು ಅವಕಾಶ ಕೊಡಿ ಎಂದು ಮುಸ್ಲಿಂ ವಿದ್ಯಾರ್ಥಿನಿ ಯರ ಪರ ಸಿದ್ದರಾಮಯ್ಯ ಸರ್ಕಾರಕ್ಕೆ ಮನವಿ ಮಾಡಿದರು. ಮುಸ್ಲಿಂ ಧರ್ಮ ಗುರುಗಳು ಸಮವಸ್ತ್ರದ ಬಣ್ಣವನ್ನೇ ಹೋಲುವ ದುಪ್ಪಟ ಹಾಕಿಕೊಳ್ಳಲು ಅವಕಾಶ ನೀಡಬೇಕು ಎಂದು ಕೇಳಿದ್ದಾರೆ ಎಂದು ವಿದ್ಯಾರ್ಥಿನಿಯೊಬ್ಬಳು ದುಪಟ್ಟ ಹಾಕಿರುವ ಫೋಟೋ ಜತೆಗೆ ತಮ್ಮ ಶಲ್ಯ ತೋರಿಸಿ, ನಾನು ಕುತ್ತಿಗೆ ಕಡೆಯಿಂದ ಕೆಳಕ್ಕೆ ಹಾಕಿಕೊಂಡಿದ್ದೇನೆ. ವಿದ್ಯಾರ್ಥಿನಿಯರು ಅದನ್ನು ಉಲ್ಟಾ ಹಾಕಿಕೊಳ್ಳುತ್ತಾರೆ. ಅವರಿಗೆ ಈ ರೀತಿ ಹಾಕಲು ಅವಕಾಶ ಮಾಡಿಕೊಡಿ ಎಂದರು.
ಈಶ್ವರಪ್ಪ, ಜಮೀರ್ ಜಟಾಪಟಿ:ಕಾನೂನು ಸುವ್ಯವಸ್ಥೆ ಮಾತನಾಡುವಾಗ ಸಿದ್ದರಾಮಯ್ಯ, ಶಿವಮೊಗ್ಗದ ಹರ್ಷ ಕೊಲೆ ಉಲ್ಲೇಖ ಮಾಡಿದರು. ಆಗ ಈಶ್ವರಪ್ಪ ಪ್ರತಿಕ್ರಿಯೆ ನೀಡಲು ಮುಂದಾದಾಗ ಜಮೀರ್ ಅಹಮದ್, ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡಲು ನಿಮಗೆ ನೈತಿಕತೆಯಿಲ್ಲ ಎಂದು ಹರಿಹಾಯ್ದರು. ಅದಕ್ಕೆ ಈಶ್ವರಪ್ಪ, ಏ ಕೂತ್ಕೋಳಲೋ ರಾಜ್ಯಕ್ಕೆಲ್ಲ ಬೆಂಕಿ ಇಟ್ಟವನು ನೀನು ಎಂದು ತಿರುಗೇಟು ನೀಡಿದರು.
ನಮ್ಮ ಆರ್​ಎಸ್​ಎಸ್!:ನನಗೆ ಈಶ್ವರಪ್ಪ ಮೇಲೂ ಪ್ರೀತಿ. ಅಶೋಕ್ ಬಗ್ಗೆ ಡಬಲ್ ಪ್ರೀತಿ. ನಮಗೂ-ನಿಮಗೂ ಉತ್ತಮ ಮಾನವೀಯತೆ ಇದೆ. ಆದರೆ, ಅದನ್ನು ಬಿಟ್ಟು ಬಿಜೆಪಿ, ಆರ್​ಎಸ್​ಎಸ್ ಬಗ್ಗೆ ನಾನು ಮಾತನಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದಾಗ, ಮಧ್ಯಪ್ರವೇಶಿಸಿದ ಸ್ಪೀಕರ್, ನಮ್ಮ ಆರ್​ಎಸ್​ಎಸ್ ಬಗ್ಗೆ ಯಾಕೆ ವಿರೋಧ ಎಂದು ಕೇಳಿದರು. ಆಗ ಜಮೀರ್, ಆ ಪೀಠದಲ್ಲಿ ಕುಳಿತು ನೀವು ನಮ್ಮ ಆರ್​ಎಸ್​ಎಸ್ ಎಂದರೆ ಹೇಗೆ ಎಂದು ಕೆಣಕಿದರು. ತಕ್ಷಣ ತಮ್ಮ ಮಾತಿನ ಅರ್ಥ ಅರಿತುಕೊಂಡ ಸ್ಪೀಕರ್, ಮುಂದೊಂದು ದಿನ ನೀವು ಆರ್​ಎಸ್​ಎಸ್ ಒಪು್ಪತ್ತೀರಿ ಎಂದು ಜಾರಿಕೊಂಡರು. ಮಧ್ಯ ಪ್ರವೇಶಿಸಿದ ಕಾಂಗ್ರೆಸ್​ನ ಪ್ರಿಯಾಂಕ್ ಖರ್ಗೆ, ಈಗ ನೀವು ಆರ್​ಎಸ್​ಎಸ್ ಬಗ್ಗೆ ಹೇಳುತ್ತೀರಿ. ಅದೇ ಆರ್​ಎಸ್​ಎಸ್ ಸಂವಿಧಾನ ಪ್ರತಿ ಸುಟ್ಟಿದೆ ಎಂದು ಕೆಣಕಿದರು. ಆಗ ಸದನದಲ್ಲಿ ಕೆಲ ಕಾಲ ಗದ್ದಲ ಉಂಟಾಯಿತು.
25 ಲಕ್ಷ ರೂ. ಪರಿಹಾರ ಕೊಡಲು ಪ್ರಯತ್ನ:ಕಾನೂನು ಸುವ್ಯವಸ್ಥೆ ನಮ್ಮ ಕಾಲದಲ್ಲಿ ಅಷ್ಟೇ ಅಲ್ಲ, ನಿಮ್ಮ ಕಾಲದಲ್ಲೂ ಹದಗೆಟ್ಟ ಹಲವಾರು ಪ್ರಕರಣಗಳು ನನ್ನ ಬಳಿ ಇವೆ. ಕುಟ್ಪಪ್ಪ, ಪ್ರಶಾಂತ್ ಪೂಜಾರಿ, ವಿಶ್ವನಾಥ್ ಶೆಟ್ಟಿ ಹತ್ಯೆ ಯಾವಾಗ ನಡೆದಿದ್ದವು? ರುದ್ರೇಶ್, ಶರತ್ ಮಡಿವಾಳ, ಪರೇಶ್ ಮೇಸ್ತ, ದೀಪಕ್ ರಾವ್, ಅಶ್ರಫ್, ಬಷೀರ್ ಕೊಲೆ ಇವೆಲ್ಲ ಯಾರ ಕಾಲದಲ್ಲಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕೇಳಿದರು. ನವಲಗುಂದ ರೈತರ ಮೇಲೆ ದೌರ್ಜನ್ಯ ಗೊತ್ತಿಲ್ಲವೆ? ಡಿವೈಎಸ್​ಪಿ ಗಣಪತಿ ಆತ್ಮಹತ್ಯೆ, ಡಿವೈಎಸ್​ಪಿ ಅನುಪಮಾ ಶಣೈ ರಾಜೀನಾಮೆ, ಕೆಂಪಯ್ಯ ಸೂಪರ್ ಹೋಮ್ ಮಿನಿಸ್ಟರ್ ಎಂದು ಪತ್ರಿಕೆಗಳು ಬರೆದಿರಲಿಲ್ಲವೆ? ಕೆಜಿಹಳ್ಳಿ, ಡಿಜೆಹಳ್ಳಿಯಲ್ಲಿ ನಿಮ್ಮ ಶಾಸಕರ ಮನೆಗೆ ಬೆಂಕಿ ಹಾಕಲಿಲ್ಲವೆ? ಪೊಲೀಸ್ ವರ್ಗಾವಣೆ ವಿಚಾರದಲ್ಲಿ ಯಾರ ಯಾರ ಕಾಲದಲ್ಲಿ ಏಜೆಂಟರಿದ್ದರು ಗೊತ್ತಿಲ್ಲವೆ. ಯಾರ ರೇಟು ಎಷ್ಟು ಎಂದೂ ಪಕ್ಕಾ ಗೊತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿರುಗೇಟು ನೀಡಿದರು. ಕೊಲೆಯಾಗಿರುವ ವ್ಯಕ್ತಿಗಳ ಕುಟುಂಬಕ್ಕೆ ಪರಿಹಾರ ನೀಡಿಕೆಯಲ್ಲಿ ಆಗಿರುವ ತಾರತಮ್ಯ ಸರಿಪಡಿಸಲು ಸಿಎಂ ಸಕಾರಾತ್ಮಕ ವಾಗಿದ್ದಾರೆ. ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಶಾದಿ ಮಹಲ್ ಯೋಜನೆ ರದ್ದು:ಅಲ್ಪಸಂಖ್ಯಾತರ ಇಲಾಖೆಯಲ್ಲಿ ಶಾದಿ ಮಹಲ್ ಯೋಜನೆ ಹೊರತುಪಡಿಸಿ, ಇನ್ನುಳಿದ ಎಲ್ಲ ಯೋಜನೆಗಳನ್ನು ಮುಂದು ವರಿಸಲಾಗಿದೆ ಎಂದು ಬೊಮ್ಮಾಯಿ ತಿಳಿಸಿದರು. ಕಾಂಗ್ರೆಸ್​ನ ಸಿ.ಎಂ. ಇಬ್ರಾಹಿಂ ಪ್ರಶ್ನೆಗೆ ಉತ್ತರಿಸಿ, ಅರಿವು ಯೋಜನೆಗೆ ಅನುದಾನ ಬಿಡುಗಡೆ ಮಾಡಲಾಗುವುದು. ಜಿಲ್ಲೆಗೊಂದು ಅಬ್ದುಲ್ ಕಲಾಂ ಶಾಲೆ, ಬೀದಿ ಬದಿ ವ್ಯಾಪಾರಿಗಳಿಗೆ ವಿಶೇಷ ಯೋಜನೆ ಮುಂದುವರಿಸಲಾಗಿದೆ ಎಂದರು. ಅಲ್ಪಸಂಖ್ಯಾತರ ಯೋಜನೆಗಳನ್ನು ನಿಲ್ಲಿಸಿದ್ದಕ್ಕೆ ಬೇಸರವಾಗಿತ್ತು. ಈಗ ಎಲ್ಲ ಮುಂದುವರಿಸುವ ತೀರ್ಮಾನ ಮಾಡಿರುವುದು ಸಂತೋಷ. ಬೊಮ್ಮಾಯಿ ಪುತ್ರನಾಗಿದ್ದಕ್ಕೆ ಸಾರ್ಥಕ ಎಂದು ಸಿಎಂರನ್ನು ಹಾಡಿ ಹೊಗಳಿದ ಇಬ್ರಾಹಿಂ, ವಚನಗಳನ್ನು ಉದಾಹರಿಸಿ ಸದನದ ಗಮನ ಸೆಳೆದರು.
ದೇವಸ್ಥಾನಗಳ ವ್ಯಾಪ್ತಿಯಲ್ಲಿ ನಿರ್ಬಂಧದ ವಿರುದ್ಧ ಕ್ರಮ ಅಸಾಧ್ಯ:ದೇವಸ್ಥಾನಗಳ ವ್ಯಾಪ್ತಿಯಲ್ಲಿ ಹಿಂದುಯೇತರ ವ್ಯಾಪಾರಿಗಳಿಗೆ ನಿರ್ಬಂಧ ವಿಧಿಸಿದವರ ವಿರುದ್ಧ ಕ್ರಮ ಅಸಾಧ್ಯವೆಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟಪಡಿಸಿದರು. ಕಾಂಗ್ರೆಸ್​ನ ಸಿ.ಎಂ. ಇಬ್ರಾಹಿಂ ಈ ವಿಷಯ ಪ್ರಸ್ತಾಪಿಸಿ, ಕರಾವಳಿ ಭಾಗದ ಕೆಲವು ಜಾತ್ರೆಗಳಲ್ಲಿ ಹಿಂದುಯೇತರ ವ್ಯಾಪಾರಿಗಳಿಗೆ ನಿರ್ಬಂಧ ಹಾಕುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಮಾಧುಸ್ವಾಮಿ ಉತ್ತರಿಸಿ, ಕಾಯ್ದೆಯನ್ನು ಸರ್ಕಾರ ಪಾಲಿಸಬೇಕಾಗುತ್ತದೆ. ದೇವಾಲಯಗಳ ವ್ಯಾಪ್ತಿ ಹಿಂದುಯೇತರರಿಗೆ ವ್ಯಾಪಾರಕ್ಕೆ ಅವಕಾಶವಿಲ್ಲ ಎಂದು 2002ರಲ್ಲಿ ಕಾಯ್ದೆಯಾಗಿದೆ.
ದೇವಸ್ಥಾನ ಆಡಳಿತ ಮಂಡಳಿಯವರು ಇದನ್ನೇ ಉಲ್ಲೇಖಿಸಿ, ಹಿಂದುಯೇತರರಿಗೆ ಮಳಿಗೆ ತೆರೆಯುವ ಗುತ್ತಿಗೆ ತಡೆದಿದ್ದು, ಇದರಲ್ಲಿ ಸರ್ಕಾರ ಪಾತ್ರವೇನೂ ಇಲ್ಲವೆಂದರು. ಈ ಉತ್ತರಕ್ಕೆ ತೃಪ್ತರಾಗದ ಸಿ.ಎಂ.ಇಬ್ರಾಹಿಂ ಎಲ್ಲರನ್ನು ಸಮನಾಗಿ ಕಾಣಬೇಕೆಂದು ಹೇಳಿದ ಬಸವಣ್ಣನವರ ನಾಡಿದು. ಹೀಗೆ ಒಂದು ಧರ್ಮದವರಿಗೆ ನಿರ್ಬಂಧ ವಿಧಿಸುವುದು ತರವಲ್ಲ ಎಂದಾಗ ಸಲೀಂ ಅಹಮದ್, ನಜೀರ್ ಅಹ್ಮದ್ ದನಿಗೂಡಿಸಿದರು. ಆವರಣದ ವ್ಯಾಪ್ತಿಯಲ್ಲಿ ಇಂತಹ ನಿರ್ಬಂಧ ವಿಧಿಸಿದ್ದರೆ ಕ್ರಮವಹಿಸುವುದು ಸಾಧ್ಯವಿಲ್ಲ ಎಂದು ಮಾಧುಸ್ವಾಮಿ ಪುನರುಚ್ಚರಿಸಿದರು.
ಪಠ್ಯದಲ್ಲಿ ‌ಭಗವದ್ಗೀತೆ; ನಾವ್ಯಾಕೆ ವಿರೋಧ ಮಾಡ್ಲಿ, ಅದು ನಮ್ಮ ಧರ್ಮ: ಡಿಕೆಶಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 4 =
Remember me
