ಬೆಂಗಳೂರು :ಉಪ ಚುನಾವಣೆ ಕಾವು ಹೆಚ್ಚಾದಂತೆ ರಾಜಕೀಯ ನಾಯಕರ ನಡುವಿನ ಟೀಕೆಗಳ ಅಬ್ಬರವೂ ಎಲ್ಲೆ ಮೀರುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳೀನ್ ಕುಮಾರ್ ಕಟೀಲ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಡುವೆ ಮಾತಿನ ಘರ್ಷಣೆ ನಡೆದಿದ್ದು, ಅಸಂಸದೀಯ ಎನ್ನಬಹುದಾದಂತಹ ಪದಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ಉಪ ಚುನಾವಣೆ ಪ್ರಚಾರದ ವೇಳೆ ‘ಕಾಡಿಗೆ ಹುಲಿ ಓಡಿಸುತ್ತೇನೆ, ಬಂಡೆ ಒಡೆಯುತ್ತೇನೆ’ ಎಂಬ ಕಟೀಲ್ ಹೇಳಿಕೆ ಸಿದ್ದರಾಮಯ್ಯಗೆ ಕಸಿವಿಸಿ ಉಂಟುಮಾಡಿದ್ದು, ಹೀಗಾಗಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯರ ಟೀಕೆಗೆ ರಾಜ್ಯ ಬಿಜೆಪಿಯೂ ಸಹ ಹರಿತ ಪದಗಳಲ್ಲಿ ಎದಿರೇಟು ನೀಡಿದೆ.
ಸಿದ್ದರಾಮಯ್ಯ ಹೇಳಿದ್ದೇನು?
1ಕಾಡಿಗೆ ಹುಲಿ ಓಡಿಸುತ್ತೇನೆ, ಬಂಡೆ ಒಡೆಯುತ್ತೇನೆ ಎಂದು ಹೇಳಿಕೊಂಡು ತಿರುಗಾಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಒಬ್ಬ ಕಾಡು ಮನುಷ್ಯ. ನಾಗರಿಕ ಜಗತ್ತಲ್ಲಿ ಇರಲು ನಾಲಾಯಕ್ ಆಗಿರುವ ಈ ವ್ಯಕ್ತಿಯನ್ನು ನಾಡಿನ ಜನರ ಹಿತದೃಷ್ಟಿಯಿಂದ ಬಿಜೆಪಿಯವರು ತಕ್ಷಣ ಕಾಡಿಗೆ ಕೊಂಡುಹೋಗಿ ಬಿಟ್ಟುಬರಲಿ.
2ಈ ನಳಿನ್ ಕುಮಾರ್ ಕಟೀಲನ್ನು ಇನ್ನೂ ಒಂದು ಹತ್ತು ವರ್ಷ ಕಚೇರಿಯ ಕಸಗುಡಿಸಲು ಹಚ್ಚಿದರೆ ಏನಾದರೂ ಸ್ವಲ್ಪ ಬುದ್ಧಿ ಬರಬಹುದೇನೋ.
3ಕಟೀಲ್‌ಗೆ ನಾಲಗೆಯಲ್ಲಿ ಮಾತ್ರ ಅಲ್ಲ, ಬೆನ್ನಿನಲ್ಲಿಯೂ ಎಲುಬಿಲ್ಲ. ಈ ಬೆನ್ನೆಲುಬಿಲ್ಲದ ಅಧ್ಯಕ್ಷನಿಗೆ ತಮ್ಮದೇ ಪಕ್ಷದ ಶಾಸಕರು ಪ್ರತಿದಿನ ತಮ್ಮದೇ ಮುಖ್ಯಮಂತ್ರಿ ವಿರುದ್ಧ ಟೀಕಾಪ್ರಹಾರ ಮಾಡುತ್ತಿದ್ದರೂ ಅವರ ವಿರುದ್ಧ ಕ್ರಮಕೈಗೊಳ್ಳುವ ತಾಕತ್ ಇಲ್ಲ. ನಮ್ಮ ಪಕ್ಷದ ಬಗ್ಗೆ ಕೂಗಾಡುತ್ತಾರೆ.
4ಮಂಗಳೂರಿನಲ್ಲಿ ಎಲ್ಲಿಯೋ ಬೀದಿ ಅಲೆಯುತ್ತಿದ್ದ ಈ ಪೋಕರಿಯನ್ನು ಯಾರೋ ತಮ್ಮ ಸಂತೋಷಕ್ಕಾಗಿ ತಂದು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದ್ದರು. ಇವರಿಗೆ ಕೊಟ್ಟಿರುವ ಕೆಲಸ ಪಕ್ಷ ಕಟ್ಟುವುದಲ್ಲ, ಬಿ.ಎಸ್.ಯಡಿಯೂರಪ್ಪನವರನ್ನು ಕೆಡವುದು, ಅದನ್ನೇ ಮಾಡುತ್ತಾ ಇದ್ದಾರೆ.
5ಈಗ ನಡೆಯುತ್ತಿರುವ ಉಪಚುನಾವಣೆಗಳಲ್ಲಿ ಹೇಗಾದರೂ ಮಾಡಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಿ ಅದರ ಹೊಣೆಯನ್ನು ಯಡಿಯೂರಪ್ಪನವರ ತಲೆಗೆ ಕಟ್ಟಿ, ಅವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಸಬೇಕು. ಇದು ಕಟೀಲ್ ಅವರಿಗೆ ಪಕ್ಷದೊಳಗಿನ ಕೆಲವು ನಾಯಕರೇ ಕೊಟ್ಟಿರುವ ಟಾಸ್ಕ್ ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ.6ಮಾತೆತ್ತಿದರೆ ಸಂಸ್ಕಾರ, ಸಂಸ್ಕೃತಿ ಎಂದು ಬೋಧನೆ ಮಾಡುವ ಸಂಘ ಪರಿವಾರದಲ್ಲಿ ಯಾರಾದರೂ ಹಿರಿಯರು, ಮಾನವಂತರು ಉಳಿದಿದ್ದರೆ ಮೊದಲು ಈ ಕೀಟಲ್ ಅವರಿಗೆ ಸ್ವಲ್ಪ ಬುದ್ಧಿ ಹೇಳಿ ನಾಲಿಗೆ ಬಿಗಿಹಿಡಿದು ಮಾತನಾಡಲು ಕಲಿಸಿ. ಇಲ್ಲದೆ ಇದ್ದರೆ ಇವರೊಬ್ಬರೇ ಸಾಕು ಎಲ್ಲರ ಮಾನ ಕಳೆಯಲು.
ಬಿಜೆಪಿ ಉತ್ತರವೇನು?
1ಜನರ ಭಾವನೆಗೆ ಸ್ಪಂದಿಸದ ನಿಮ್ಮನ್ನು ಸ್ವಕ್ಷೇತ್ರ ಚಾಮುಂಡೇಶ್ವರಿಯ ಮತದಾರರು ಬೀದಿಯಲ್ಲಿ ಅಲೆಯುವಂತೆ ಮಾಡಿದ್ದಾರೆ ಎಂಬುದನ್ನು ಮರೆಯಬೇಡಿ. ಕಾಂಗ್ರೆಸ್ ಪಕ್ಷದಲ್ಲಿ ನಿಮ್ಮ ಸ್ಥಿತಿ ಉಗುರು ಮತ್ತು ಹಲ್ಲು ಇಲ್ಲದ ಹುಲಿಯ ಪರಿಸ್ಥಿತಿಯಂತಾಗಿದೆ.
2ನೀವು ಬಳಸುತ್ತಿರುವ ಪದಗಳೇ ಯಾರು ಕಾಡು ಮನುಷ್ಯ ಎಂಬುದನ್ನು ಸಾಬೀತು ಪಡಿಸುತ್ತಿದೆ. ಕಾಡುಮನುಷ್ಯ, ನಾಲಾಯಕ್, ಬೀದಿ ಅಲೆಯುತ್ತಿದ್ದವ, ಎಲುಬಿಲ್ಲದವ ಎಂಬ ನಿಮ್ಮ ಮಾತುಗಳೇ ಕಾಂಗ್ರೆಸ್ ಸಂಸ್ಕೃತಿಯನ್ನು ಬಿಂಬಿಸುತ್ತಿದೆ. ನೀವು ಕರ್ನಾಟಕ ಕಾಂಗ್ರೆಸ್‌ನ ವಿದೂಷಕ ಇದ್ದ ಹಾಗೆ ಹಾಗಿದೆ!
3ಬಾದಾಮಿಯ ಶಾಸಕ ಸಿದ್ದರಾಮಯ್ಯನವರೇ, ಕಟೀಲ್ ಅವರು 2019 ರಲ್ಲಿ 2 ಲಕ್ಷಕ್ಕೂ ಅಧಿಕ ಮತಗಳಿಂದ ಗೆದ್ದರು. ಜನತೆ ನಿಮ್ಮ ಬೆನ್ನುಮೂಳೆ ಮುರಿದ ಇತಿಹಾಸ ನೆನಪಿಸಿಕೊಳ್ಳಿ, ಗೆದ್ದದ್ದು ಕೇವಲ 1,696 ಮತಗಳಿಂದ! ಸ್ವಲ್ಪ ವ್ಯತ್ಯಾಸ ಆಗಿದ್ದರೂ ನೀವು ಕಾಡುಮನುಷ್ಯರಂತೆ ಜೀವನ ಮಾಡಬೇಕಿತ್ತು!
4
ಕಾಂಗ್ರೆಸ್ ಸೇರುವುದಕ್ಕೂ ಮುನ್ನ ಮೊದಲು ಜೆಡಿಎಸ್‌ನಲ್ಲಿ ಸಕಲ ಅಧಿಕಾರ ಭಾಗ್ಯಗಳನ್ನು ಅನುಭವಿಸಿ, ಅವರಿಗೇ ನಾಮ ಹಾಕಿದ ಮಹಾನುಭಾವರು ನೀವೇ ಅಲ್ಲವೇ? ಬಿಜೆಪಿಯಲ್ಲಿ ಕಷ್ಟಪಟ್ಟು ಕೆಲಸ ಮಾಡಿದರೆ ಉನ್ನತ ಸ್ಥಾನ ಸಿಗುವುದೆಂದು ನೀವೇ ಒಪ್ಪಿಕೊಂಡಿದ್ದಕ್ಕೆ ಧನ್ಯವಾದಗಳು.
5ಮಾನ್ಯ ಸಿದ್ದರಾಮಯ್ಯ ಅವರೇ, ಈ ಡಿಜೆಹಳ್ಳಿ ಗಲಭೆ ನಡೆಸಿದವರ ಪರವಾಗಿ ನೀವು ಯಾಕೆ ವಕಾಲತ್ತು ವಹಿಸಿದ್ದೀರಿ? ಆರೋಪಿಗಳನ್ನು ಅಮಾಯಕರು ಎಂದು ಬಿಂಬಿಸಿದ ನೀವು, ಈಗ ಗಲಭೆಯ ರೂವಾರಿ ಸಂಪತ್ ರಾಜ್ ಅವರಿಗೆ ಚುನಾವಣಾ ಜವಾಬ್ದಾರಿ ಹೊರಿಸಿದ್ದೀರಿ. ನಿಮ್ಮದೇ ದಲಿತ ಶಾಸಕರ ಪರ ನಿಲ್ಲುವ ತಾಕತ್ತು ನಿಮಗಿಲ್ಲವೇ?
6ಮಾನ್ಯ ಸಿದ್ದರಾಮಯ್ಯನವರೇ, ಚುನಾವಣೆಯಲ್ಲಿ ಸ್ವಾರ್ಥಕ್ಕಾಗಿ ಪರಮೇಶ್ವರರನ್ನೇ ಸೋಲಿಸಿದ ಕುತಂತ್ರಿ ನೀವಲ್ಲವೇ? ಈ ಹಿಂದಿನ ಉಪಚುನಾವಣೆಯಲ್ಲಿ 15 ಕ್ಷೇತ್ರಗಳಲ್ಲಿ 12 ಸ್ಥಾನ ಗೆದ್ದು ಬಿಎಸ್‌ವೈ ಅವರ ಗದ್ದುಗೆ ಬಲಪಡಿಸಿದ್ದೇವೆ. ಈ ಉಪಚುನಾವಣೆಯಲ್ಲೂ ಬಿಜೆಪಿ ಗೆಲ್ಲಲಿದೆ.
ಬಿಹಾರ ಚುನಾವಣೆ: ಬಿಜೆಪಿ ಪ್ರಣಾಳಿಕೆ-19 ಲಕ್ಷ ಉದ್ಯೋಗ, ಉಚಿತ ಲಸಿಕೆ, ಜೆಡಿಯು ಪ್ರಣಾಳಿಕೆ- ಸಾಥ್ ನಿಶ್ಚಯ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 13 =
Remember me
