ನಡೆದಾಡುವ ದೇವರಾಗಿ ದರುಶನ ಕರುಣಿಸಿ ಸಮಾಜಕ್ಕೆ ಬೆಳಕಿನ ದಾರಿ ತೋರಿದವರು ಸಿದ್ದಗಂಗೆಯ ಪರಮಪೂಜ್ಯ ಶ್ರೀ ಶಿವಕುಮಾರ ಮಹಾ ಶಿವಯೋಗಿಗಳು. ಸತ್ಪ್ರಜೆಗಳನ್ನು ರೂಪಿಸಲು ಶಿಕ್ಷಣದ ಗಂಗೆಯನ್ನು ಸಿದ್ದಗಂಗೆಯಲ್ಲಿ ಹರಿಸಿದರು. ತ್ರಿವಿಧ ದಾಸೋಹದ ಕ್ರಾಂತಿಯನ್ನು ಜಗತ್ತೇ ನಿಬ್ಬೆರಗಾಗಿ ಸಿದ್ದಗಂಗೆಯತ್ತ ನೋಡುವಂತೆ ಸಾಕ್ಷೀಕರಿಸಿದರು.
ಸನ್ಯಾಸತ್ವ ಎಂದರೆ ಸುಲಭದ ಮಾತಲ್ಲ, ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮಾತ್ಸರ್ಯ ಎಂಬ ಅರಿಷಡ್ವರ್ಗಗಳನ್ನು ಮೆಟ್ಟಿನಿಂತು ಲೌಕಿಕ ಜಗತ್ತಿನ ನಡುವೆ ಬದುಕುವುದು ಸಾಧನೆಯ ತಪಸ್ಸು ಎನ್ನಬಹುದಾಗಿದೆ.
ಈ ನಿಟ್ಟಿನಲ್ಲಿ ಶತಮಾನದ ಹಿಂದೆ ಸನ್ಯಾಸತ್ವದ ಹಾದಿಯಲ್ಲಿ ನಡೆದು ಬಂದು ನಮಗೆ ನಡೆದಾಡುವ ದೇವರಾಗಿ ದರುಶನ ಕರುಣಿಸಿ ಸಮಾಜಕ್ಕೆ ಬೆಳಕಿನ ದಾರಿ ತೋರಿದವರು ಸಿದ್ದಗಂಗೆಯ ಪರಮಪೂಜ್ಯ ಶ್ರೀ ಶಿವಕುಮಾರ ಮಹಾ ಶಿವಯೋಗಿಗಳು. ನನಗೆ ಬಾಲ್ಯದ ಆರಂಭದಲ್ಲಿಯೇ ಶ್ರೀಗಳನ್ನು ಸನಿಹದಲ್ಲಿ ಕಾಣುವ ಅವಕಾಶ ದೊರಕಿದ್ದು ಪೂರ್ವಜನ್ಮದ ಸುಕೃತವಲ್ಲದೆ ಬೇರೇನೂ ಅಲ್ಲ.
ಒಬ್ಬ ಮನುಷ್ಯ, ಮನುಷ್ಯನಾಗಿ ಬದುಕಲು ಬೇಕಿರುವುದು ಹಣ, ಅಂತಸ್ತು, ಅಧಿಕಾರವಲ್ಲ. ಬೇಕಿರುವುದು ಶಿಕ್ಷಣ. ಶಿಕ್ಷಣವೆಂದರೆ ಕೇವಲ ಅಕ್ಷರ ಪರಿಚಯವಲ್ಲ ಅಥವಾ ಪಠ್ಯಗಳನ್ನು ಪಠಿಸುವುದಲ್ಲ, ಸಂಸ್ಕಾರವಂತ ನಡವಳಿಕೆ, ಔದಾರ್ಯಗಳನ್ನು ಮೈಗೂಡಿಸಿಕೊಂಡು ಕಲಿಯುವ ಶಿಕ್ಷಣ ಮಾತ್ರ ಸತ್ಪ್ರಜೆಯನ್ನು ರೂಪಿಸಬಲ್ಲದು. ಇಂಥ ಸತ್ಪ್ರಜೆಗಳನ್ನು ರೂಪಿಸಲು ಶಿಕ್ಷಣದ ಗಂಗೆಯನ್ನು ಸಿದ್ದಗಂಗೆಯಲ್ಲಿ ಹರಿಸಿದವರು ನಮ್ಮ ಶ್ರೀಗಳು.
ಕರ್ನಾಟಕದ ಮಠ ಪರಂಪರೆಯಲ್ಲಿ ತ್ರಿವಿಧ ದಾಸೋಹಗಳಿಗೆ ಬಹುಮಹತ್ವವಿದೆ. ಅನ್ನ, ಅಕ್ಷರ, ಅರಿವು ಮಾನವನನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುವ ಅವಶ್ಯಕಗಳು. ಈ ತ್ರಿವಿಧ ದಾಸೋಹದಿಂದ ಉತ್ತಮ ಮಾನವ ಸಮಾಜ ನಿರ್ವಿುಸಬಹುದು ಎಂಬ ನಂಬಿಕೆಯ ಆಧಾರದ ಮೇಲೆ ಸಾವಿರಾರು ವರ್ಷಗಳಿಂದ ಮಠಮಾನ್ಯಗಳು ಕರ್ನಾಟಕದಲ್ಲಿ ತ್ರಿವಿಧ ದಾಸೋಹವನ್ನು ‘ನಿಜ ದೇವರ ಸೇವೆ’ ಎಂದು ಪರಿಗಣಿಸಿ ಮುನ್ನಡೆದಿವೆ. ಈ ನಿಟ್ಟಿನಲ್ಲಿ ತ್ರಿವಿಧ ದಾಸೋಹದ ಕ್ರಾಂತಿಯನ್ನು ಜಗತ್ತೇ ನಿಬ್ಬೆರಗಾಗಿ ಸಿದ್ದಗಂಗೆಯತ್ತ ನೋಡುವಂತೆ ಶ್ರೀಮಠದಲ್ಲಿ ನಿರೂಪಿಸಿ ಸಾಕ್ಷೀಕರಿಸಿದವರು ಶ್ರೀ ಶಿವಕುಮಾರ ಶ್ರೀಗಳು. ನಿಜ ಕಾಯಕದಲ್ಲಿ ಕೈಲಾಸ ಕಾಣಿರೆಂಬ ಅಣ್ಣ ಬಸವಣ್ಣನವರ ಸಂದೇಶವನ್ನು ಈ ಶತಮಾನದಲ್ಲಿ ಸಾರ್ಥಕಗೊಳಿಸಿ ಸಿದ್ದಗಂಗೆಯನ್ನು ಭೂಲೋಕದ ಕೈಲಾಸದಂತೆ ಪರಿವರ್ತಿಸಿ ಕಾಯಕ ಶ್ರೇಷ್ಠರೆನಿಸಿದರು.
ನಮ್ಮ ಸಮಾಜದಲ್ಲಿ ಈ ಹಿಂದಿನಿಂದಲೂ ಬಡತನದ ಕಾರಣಕ್ಕಾಗಿ ಅದೆಷ್ಟೋ ಕೋಟಿ ಪ್ರತಿಭಾವಂತರು ಅಕ್ಷರ ವಂಚಿತರಾದ ಬಗ್ಗೆ ದಾಖಲೆಗಳಿವೆ. ಈ ಹಿನ್ನೆಲೆಯಲ್ಲಿ ಜಾತಿ-ಮತಗಳ ಅಂತರದ ಬೇಲಿಯನ್ನು ಕಿತ್ತೊಗೆದು, ಮಾನವ ಧರ್ಮದ ಬಹುದೊಡ್ಡ ಪುಣ್ಯದ ತೋಟವನ್ನು ಸಿದ್ದಗಂಗೆಯಲ್ಲಿ ಬೆಳೆಸಿ ಹಸಿದು ಬಂದವರ ಹೊಟ್ಟೆ ತುಂಬಿಸಿ, ಅಕ್ಷರದ ಅರಿವು ಮೂಡಿಸಿ, ಜ್ಞಾನದ ಅಮೃತವನ್ನು ಉಣಬಡಿಸಿದವರು ನಮ್ಮ ಶ್ರೀಗಳು. ಇವತ್ತು ವಿಶ್ವದ ಮೂಲೆ, ಮೂಲೆಯಲ್ಲೂ ಶ್ರೀಗಳ ತ್ರಿವಿಧ ದಾಸೋಹದ ಅನುಕೂಲ ಪಡೆದ ಲಕ್ಷಾಂತರ ಮಕ್ಕಳು ಸುಂದರ ಬದುಕು ರೂಪಿಸಿಕೊಂಡು ಸಿದ್ದಗಂಗೆಯ ಪ್ರತಿಭೆಯ ಹೂಗಳಾಗಿ ಅರಳಿ ಬೆಳೆಯುತ್ತಿದ್ದಾರೆ.
ಬಸವಣ್ಣನವರ ‘ಇವನಾರವ, ಇವನಾರವ ನೆಂದೆನಿಸದಿರಯ್ಯ/ಇವ ನಮ್ಮವ, ಇವ ನಮ್ಮವ ಇವ ನಮ್ಮವನೆಂದೆನಿಸಯ್ಯಾ’ ಎಂಬ ವಚನವನ್ನು ಎಷ್ಟೋ ಜನ ಹೇಳಬಹುದು, ಅನುಸರಿಸಿ ನಡೆದವರು ಬಹು ವಿರಳ, ಆದರೆ ಇದನ್ನು ಪರಿಪೂರ್ಣವಾಗಿ ಅನುಸರಿಸಿ ಮಠದ ಆಶ್ರಯ ಬಯಸಿ ಬಂದವರನ್ನೆಲ್ಲಾ ಕೈಬೀಸಿ ಕರೆದು ಆಶ್ರಯ ನೀಡಿ ಮಾತೃವಾತ್ಸಲ್ಯ ತೋರಿ ನಿಜಸಂತನಾಗಿ, ಯುಗ ತಪಸ್ವಿ ಎನಿಸಿಕೊಂಡದವರು ನಮ್ಮ ಶ್ರೀಗಳು.
‘ಮದುವೆ ಮಾಡಿ ನೋಡು, ಮನೆಕಟ್ಟಿ ನೋಡು’ ಎಂಬ ಮಾತನ್ನು ಎಷ್ಟೊಂದು ತ್ರಾಸದಾಯಕವೆಂಬುದಕ್ಕೆ ಬಳಸುತ್ತಾರೆ. ಆದರೆ ಮಠವೊಂದನ್ನು ನಿರ್ವಿುಸಿ ನಿರ್ವಹಿಸುವುದು ಎಷ್ಟೊಂದು ಕಷ್ಟದ ಕೆಲಸ ಎಂಬುದನ್ನು ಶ್ರೀಗಳು ಸಿದ್ದಗಂಗೆಯ ಮಠದಲ್ಲಿ ಆರಂಭದ ದಿನಗಳಲ್ಲಿ ಎದುರಿಸಿದ ಕಷ್ಟದ ಸವಾಲುಗಳು, ಪರಿಶ್ರಮಗಳನ್ನು ಅವಲೋಕಿಸಿದರೆ, ಅವರ ಅಧ್ಯಾತ್ಮ ಸಾಧನೆಗೆ ಆಧಾರ ಸಿಗುತ್ತದೆ.
ಸಿದ್ದಗಂಗಾ ಮಠದ ಇತಿಹಾಸವೇ ಭಕ್ತಿರೋಮಾಂಚನದ ಹಿನ್ನೆಲೆಯಿಂದ ಕೂಡಿದೆ. ಶ್ರೀ ಗೋಸಲ ಸಿದ್ದೇಶ್ವರರ ತಪಶ್ಶಕ್ತಿಯಿಂದ ಗಂಗೆ ಉದ್ಭವಿಸಿ ಸಿದ್ದಗಂಗಾ ಕ್ಷೇತ್ರವಾಗಿ ಶರಣರ ನಾಡಾದ ನಮ್ಮ ನೆಲದಲ್ಲಿ ಪಾವಿತ್ರ್ಯತೆ ಪಡೆಯಿತು. ಮಠದ ಪಾವಿತ್ರ್ಯತೆಯನ್ನೂ ಉಳಿಸಿ, ಅರಸಿ ಬರುವ ಭಕ್ತರ ಅಧ್ಯಾತ್ಮದ ಹಸಿವನ್ನೂ ನೀಗಿಸಿ, ತ್ರಿವಿಧ ದಾಸೋಹಗಳ ಮೂಲಕ ಲಕ್ಷಾಂತರ ಮಕ್ಕಳ ಭವಿಷ್ಯವನ್ನು ಬೆಳಗಿದ ಕಾರಣದಿಂದಲೇ ಶ್ರೀಗಳನ್ನು ಭಕ್ತಕೋಟಿ ‘ನಡೆದಾಡುವ ದೇವರು’ಎಂದು ಆರಾಧಿಸಿತು. ಶ್ರೀಗಳು ಈ ಭೂಮಿಗೆ ಅವತರಿಸಿ ಬಂದದ್ದು ಶತಮಾನದ ದಾರ್ಶನಿಕನಾಗಿ ಅಜ್ಞಾನದ ಕಗ್ಗತ್ತಲನ್ನು ಓಡಿಸಿ, ಅಕ್ಷರದ ದೀವಿಗೆಯನ್ನು ಮನೆ-ಮನಗಳಲ್ಲಿ ಬೆಳಗುವ ಪವಿತ್ರ ಕಾರ್ಯಕ್ಕಾಗಿ.
‘ಸ್ವಾರ್ಥವಿಲ್ಲದ ಸೇವೆ ಮಾತ್ರ ಭಗವಂತನನ್ನು ತಲುಪಲು ಸಾಧ್ಯ’ಎಂದು ನುಡಿದು ನಡೆದವರು ಶ್ರೀಗಳು.
ಅನ್ನದೇವರ ಮುಂದೆ
ಇನ್ನು ದೇವರು ಉಂಟೆ
ಅನ್ನವಿರುವನಕ ಪ್ರಾಣವೀ
ಜಗದೊಳಗೆ ಅನ್ನದೈವ
ಎಂಬ ಸರ್ವಜ್ಞನ ನುಡಿಯಂತೆ ಅನ್ನದ ಮಹತ್ವವನ್ನು ಶ್ರೀಗಳು ತಮ್ಮ ಜೀವನದುದ್ದಕ್ಕೂ ದಾಸೋಹದ ಮೂಲಕ ತಿಳಿಸಿಕೊಟ್ಟರು. ನಾಡಿನ ಆಧ್ಯಾತ್ಮಿಕ ಇತಿಹಾಸದಲ್ಲಿ ಡಾ. ಶಿವಕುಮಾರ ಮಹಾಸ್ವಾಮಿಗಳು ಬದುಕಿದ ರೀತಿ ಬಹುದೊಡ್ಡ ವಿಸ್ಮಯ, ಅವರು ಭೂಮಿಗೆ ಅವತರಿಸಿ ಬಂದಿದ್ದೇ ಒಂದು ಉದಾತ್ತ ಉದ್ದೇಶಕ್ಕಾಗಿ, ಭಕ್ತಿಯ ವಾಸ್ತವತೆಯ ಅರಿವು ಮೂಡಿಸುವುದಕ್ಕಾಗಿ. ಆ ನಿಟ್ಟಿನಲ್ಲಿ ಅವರು ದಾಖಲೆ ಎನ್ನಬಹುದಾದ ಸುದೀರ್ಘ ಬದುಕಲ್ಲಿ ಉದ್ದೇಶಿತ ಗುರಿ ಸಾಧಿಸಿ ಶಿವನೆಡೆಗೆ ನಡೆದು ಹೋಗಿದ್ದಾರೆ. ಆದರೆ ಅವರ ಆತ್ಮಜ್ಯೋತಿ ಸಿದ್ದಗಂಗೆಯಲ್ಲಿ ಪ್ರಜ್ವಲಿಸುತ್ತಲೇ ಇದೆ. ಅವರ ಸಂದೇಶಗಳು ನಾಡಿನ ತುಂಬೆಲ್ಲಾ ಪರಿಮಳದ ಪುಷ್ಪವಾಗಿ ನಿರಂತರ ಪಸರಿಸುತ್ತಲೇ ಇದೆ. ಜಗತ್ತಿನಾದ್ಯಂತ ಇರುವ ಕೋಟ್ಯಂತರ ಭಕ್ತರ ಹೃದಯದಲ್ಲಿ ಶ್ರೀಗಳ ‘ಜ್ಞಾನದ ಕಮಲ’ ನೆಲೆಯೂರಿ ನಿಂತಿದೆ. ನಿಜಭಕ್ತರ ಮನದ ಮಂದಿರದಲ್ಲಿ ಶ್ರೀಗಳ ಆತ್ಮ ಪ್ರತಿ ಕ್ಷಣವೂ ಮಿಡಿದು ನುಡಿಯುತ್ತಿದೆ ‘ಭಕ್ತರೇ ನಾ ಅಲ್ಲಿ ಹೋಗಿರುವುದು ಸುಮ್ಮನೆ/ ಸಿದ್ದಗಂಗೆಯಲ್ಲಿಹುದು ನನ್ನ ಮನೆ/ ಕಾಮೋಡ ಕವಿದಾಗ ಮತ್ತೆ ಅವತರಿಸಿ ಬರುವೆ ಇಲ್ಲಿಗೆ’
(ಲೇಖಕರು ಬಿಜೆಪಿ ರಾಜ್ಯ ಉಪಾಧ್ಯಕ್ಷರು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − one =
Remember me
