ಬೆಂಗಳೂರು:ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದ ಹಿರಿಯ ನಾಯಕ, ಕೇಂದ್ರದ ಮಾಜಿ ಮಂತ್ರಿ ಸಿ.ಎಂ.ಇಬ್ರಾಹಿಂ ಭಾನುವಾರ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ರಾಜ್ಯಾಧ್ಯಕ್ಷರಾಗಿದ್ದ ಎಚ್.ಕೆ.ಕುಮಾರಸ್ವಾಮಿ ಪಕ್ಷದ ಬಾವುಟ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ಅಧಿಕಾರ ವಹಿಸಿಕೊಂಡರು. ಇದೇ ಸಂದರ್ಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಎಚ್.ಕೆ.ಕುಮಾರಸ್ವಾಮಿ ರಾಷ್ಟ್ರೀಯ ಸಂಸದೀಯ ಮಂಡಳಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.
ಸಮಾರಂಭ ಉದ್ದೇಶಿಸಿ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡ, ಒಬ್ಬ ಸಮರ್ಥ ನಾಯಕ, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಹಿರಿಯ ವ್ಯಕ್ತಿಗೆ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಇಬ್ರಾಹಿಂ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತಾರೆ. ಇದು ಒಕ್ಕಲಿಗರ ಪಾರ್ಟಿ ಎಂದು ಅಪಪ್ರಚಾರ ಮಾಡಿದರು. ನಾನು ಮಂತ್ರಿ ಮಂಡಲ ರಚನೆ ಮಾಡಿದಾಗ ಒಕ್ಕಲಿಗರು ಇದ್ದದ್ದು 4 ಜನ ಮಾತ್ರ. ಒಬಿಸಿ, ಎಸ್ಸಿ, ಎಸ್ಟಿಗೆ ಹೆಚ್ಚು ಸ್ಥಾನ ಕೊಟ್ಟಿದ್ದೆ. ಎಲ್ಲ ವರ್ಗದವರನ್ನು ಗುರುತಿಸಿ ನಾನು ಮಂತ್ರಿಮಂಡಲ ಮಾಡಿದೆ. ಮುಸ್ಲಿಮರಿಗೆ ಮೀಸಲಾತಿ ತಂದಿದ್ದು ನಾನು ಎಂದು ತಿಳಿಸಿದರು.
ಮುಂದಿನ ತಿಂಗಳು ಬೆಂಗಳೂರಿನಲ್ಲಿ 2.5 ಲಕ್ಷ ಜನ ಸೇರಿಸಿ ಸಮಾವೇಶ ಮಾಡುತ್ತೇವೆ. ಎಲ್ಲರೂ ಒಟ್ಟಾಗಿ ಜಿಲ್ಲಾ ಪ್ರವಾಸ ಮಾಡಬೇಕು. ಜಲಧಾರೆ ಕಾರ್ಯಕ್ರಮ ಮುಗಿಸಿ ಜಿಲ್ಲಾ ಪ್ರವಾಸ ಮಾಡಿ ನಾವು ಮಾಡಿರುವ ಕೆಲಸ ಪ್ರತಿ ಜಿಲ್ಲೆಗೆ ಹೋಗಿ ತಿಳಿಸಬೇಕು ಎಂದು ಕುಮಾರಸ್ವಾಮಿಗೆ ಸೂಚಿಸಿದರು. ಮಿಷನ್ 123 ಸಾಕಾರ ಆಗುತ್ತದೆ. ಈ ಪಕ್ಷವನ್ನು ಯಾರಿಂದಲೂ ತುಳಿಯಲು ಸಾಧ್ಯವಿಲ್ಲ. ಅಂದು ನಾವು ಮಾಡಿದ ಒಳ್ಳೆಯ ಕೆಲಸಕ್ಕೆ ಅವತ್ತು 16 ಎಂಪಿ ಸ್ಥಾನ ಗೆದ್ದೆವು ಎಂದು ನೆನಪಿಸಿದರು.
123 ಮಿಷನ್ ನಮ್ಮ ಗುರಿ:ನಾವು ಅಧಿಕಾರಕ್ಕೆ ಹಪಹಪಿಸುತಿಲ್ಲ. 30-40 ಸ್ಥಾನ ಗೆಲ್ಲುವುದು ದೊಡ್ಡದೇನೂ ಅಲ್ಲ. ನಾವು ಸುಮ್ಮನೇ ಇದ್ದರೂ ಜನರು ನಮಗೆ ಮತ ಹಾಕಿ ಗೆಲ್ಲಿಸುತ್ತಾರೆ. ನಮ್ಮ ಗುರಿ ಏನಿದ್ದರೂ 123 ಮಿಷನ್. ಪಕ್ಷದ ನಾಯಕರು ಚಳಿ ಬಿಟ್ಟು ಜನರ ಬಳಿಗೆ ಹೋಗಿ ಕೆಲಸ ಮಾಡಬೇಕು. ಆಗ ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲಿದೆ. ಶಾಸಕರಾದ ಕೆ.ಎಂ.ಕೃಷ್ಣಾರೆಡ್ಡಿ, ದಾಸರಹಳ್ಳಿ ಮಂಜುನಾಥ್, ಮುಖಂಡರಾದ ನಬಿ, ಟಿ.ಎ.ಶರವಣ, ಜಪ್ರುಲ್ಲಾ ಖಾನ್, ಪಕ್ಷದ ನಗರ ಅಧ್ಯಕ್ಷ ಪ್ರಕಾಶ್ ಹಾಜರಿದ್ದರು.
ಜೆಡಿಎಸ್ ನನಗೆ ಪಕ್ಷವಲ್ಲ. ಅದು ನನ್ನ ಕುಟುಂಬ. ಕಾಲಭೈರವ ಎದ್ದು ಕುಣಿಯುವ ಸಮಯ ಬಂದಿದೆ. ನಾನು ಹರಹರ ಮಹಾದೇವ ಎಂದು ಜೋಳಿಗೆ ಹಿಡಿದು ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಸುಮ್ಮನೆ ಕೂರುವ ಪ್ರಶ್ನೆಯೇ ಇಲ್ಲ. 123 ಸ್ಥಾನ ಗೆದ್ದು ಸ್ವಂತ ಬಲದ ಮೇಲೆ ಜೆಡಿಎಸ್ ಅಧಿಕಾರಕ್ಕೆ ಬರುವುದು ನಿಶ್ಚಿತ. ನಾನು ಹೇಳಿದ್ದು ಎಂದೂ ಸುಳ್ಳಾಗಿಲ್ಲ.
|ಸಿ.ಎಂ. ಇಬ್ರಾಹಿಂಜೆಡಿಎಸ್ ನೂತನ ರಾಜ್ಯಾಧ್ಯಕ್ಷ
ಪಕ್ಷದಲ್ಲಿ ನಾನು ಏನೂ ಕೇಳಿಲ್ಲ. ಪಕ್ಷ ಎಲ್ಲವನ್ನೂ ನನಗೆ ಕೊಟ್ಟಿದೆ. ಈ ಮಟ್ಟಕ್ಕೆ ಗುರುತಿಸಿ ಬೆಳೆಸಿದೆ. ನಮ್ಮ ಪಕ್ಷದಲ್ಲೂ ಅಹಿಂದ ಇದೆ. ಆದರೆ, ಅಗ್ಗದ ಪ್ರಚಾರಕ್ಕೆ ಬೇಗ ಬಲಿಯಾಗುತ್ತೇವೆ. ಅದೇ ನಮ್ಮ ಪಕ್ಷದ ದೌರ್ಬಲ್ಯ.
|ಎಚ್.ಕೆ.ಕುಮಾರಸ್ವಾಮಿಜೆಡಿಎಸ್ ರಾಷ್ಟ್ರೀಯ ಸಂಸದೀಯ ಮಂಡಳಿ ಅಧ್ಯಕ್ಷ
ಒಂದು ಸಮಾಜದ ಪರ ನಾನಿಲ್ಲ:ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, ಇಬ್ರಾಹಿಂ ಅವರು ಇತ್ತೀಚಿನ ರಾಜಕೀಯ ಬೆಳವಣಿಗೆಯಿಂದ ಮತ್ತೆ ಮರಳಿ ಮನೆಗೆ ಬಂದಿದ್ದಾರೆ. ಇದರಿಂದ ಪಕ್ಷಕ್ಕೆ ಹೊಸ ಚೈತನ್ಯ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇಬ್ರಾಹಿಂ ಸೇರ್ಪಡೆ ಒಂದು ಸಮಾಜ ಓಲೈಕೆ ಮಾಡಲು ಅಲ್ಲ. ಒಂದು ಸಮಾಜದ ಪರವಾಗಿ ನಾನು ಇಲ್ಲ. ಸರ್ವ ಜನಾಂಗದ ಶಾಂತಿಯ ತೋಟ ಎಂದು ಕುವೆಂಪು ಹೇಳಿದ್ದಾರೆ. ಆದರೆ, ತೋಟಕ್ಕೆ ಬೆಂಕಿ ಹಚ್ಚುವ ಕೆಲಸ ನಡೆದಿದೆ. ಇದನ್ನು ಆರಿಸುವ ಕೆಲಸ ಜೆಡಿಎಸ್​ನಿಂದ ಮಾತ್ರ ಸಾಧ್ಯ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
