ರಾಮನಗರ: ಎರಡು ವರ್ಷಗಳ ರಾಜ್ಯ ರಾಜಕೀಯ ಅಸ್ಥಿರತೆಯ ಮುಸುಕು ಸರಿದು ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತಿದೆ ಎನ್ನುವಾಗಲೇ ಸ್ಥಿರ ಸರ್ಕಾರ ಉರುಳಿಸಲು ಅವಕಾಶವಾದಿ ಸೇಡಿನ ರಾಜಕಾರಣ ಗೆಜ್ಜೆಕಟ್ಟಿ ಹೆಣಗಾಟ ಆರಂಭಿಸಿದೆ. ಈ ಬೆಳವಣಿಗೆ ಹಿಂದೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ‘ಕೈ’ವಾಡದ ಶಂಕೆ ಇದ್ದು, ರಾಜಕೀಯ ವಲಯದಲ್ಲಿ ಗುಸುಗುಸು ಚರ್ಚೆ ನಡೆದಿದೆ.
ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಬಿಜೆಪಿ ಸರ್ಕಾರದಲ್ಲಿ ಮಂತ್ರಿಸ್ಥಾನ ಪಡೆಯುವ ಆಸೆ ಹೊಂದಿದ್ದ ಸಿ.ಪಿ.ಯೋಗೇಶ್ವರ್, ಸರ್ಕಾರ ಕೆಡವಲು ತೆರೆಮರೆಯಲ್ಲಿ ಅಡ್ಡದಾರಿ ಹಿಡಿದು ಬೆವರು ಹರಿಸುತ್ತಿದ್ದಾರೆಂಬ ಬಗ್ಗೆ ಬಿಜೆಪಿಗೂ ಸ್ಪಷ್ಟ ಅರಿವಿದೆ. ನನಗೆ ಸಿಗದ ಮಂತ್ರಿ ಸ್ಥಾನ ಬೇರೆಯವರಿಗೇಕೆ? ಸರ್ಕಾರ ರಚಿಸಲು ನಾನು ಬೇಕು, ನನಗೆ ಮಂತ್ರಿ ಸ್ಥಾನ ಏಕಿಲ್ಲ ಎಂಬ ಹಠ ಧೋರಣೆಯೊಂದಿಗೆ ಸಿಪಿವೈ ಸರ್ಕಾರ ಕೆಡವಲು ಯೋಧನಂತೆ ಕಾರ್ಯಮಗ್ನರಾಗಿದ್ದಾರೆ. ಅವರೊಂದಿಗೆ ಕಾಂಗ್ರೆಸ್​ನ ಕೆಲವರು ಕೈ ಜೋಡಿಸಿದ್ದಾರೆನ್ನಲಾಗಿದೆ.
ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನಗೊಂಡು ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವರಲ್ಲಿ ಸಿ.ಪಿ.ಯೋಗೇಶ್ವರ್ ಕೂಡ ಒಬ್ಬರು ಎಂಬುದರಲ್ಲಿ ಎರಡು ಮಾತಿಲ್ಲ. ಇದೀಗ ಅವರೇ ಸರ್ಕಾರ ಪತನಗೊಳಿಸುವ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆಂದು ಹೇಳಲಾಗುತ್ತಿದೆ. ಇತ್ತೀಚೆಗೆ ನಡೆದ ಸಂಪುಟ ವಿಸ್ತರಣೆ ಸಂದರ್ಭ ಮಂತ್ರಿಗಿರಿ ಸಿಕ್ಕೇ ಬಿಡುತ್ತದೆಂದು ಆಸೆ ಹೊತ್ತಿದ್ದ ಅವರಿಗೆ ನಿರಾಸೆ ಕಾಡಿದೆ. ಹೀಗಾಗಿ ಅವಕಾಶ ಕೈತಪ್ಪಿದ ಸಿಟ್ಟಿಗೆ ಸಿಎಂ ಯಡಿಯೂರಪ್ಪ ವಿರುದ್ಧ ಬೇಸರಗೊಂಡು, ತಿರುಗಿಬಿದ್ದಿದ್ದಾರೆ ಎನ್ನಲಾಗಿದೆ.
ಬಿಎಸ್​ವೈಯಿಂದ ದೂರ: ಉಪಚುನಾವಣೆ ಫಲಿತಾಂಶ ಪ್ರಕಟಗೊಂಡ ಬಹುದಿನಗಳ ನಂತರ ನಡೆದ ಸಚಿವ ಸಂಪುಟ ವಿಸ್ತರಣೆ ವೇಳೆ ತಾವೂ ಮಂತ್ರಿಯಾಗುತ್ತೇವೆಂದು ಆತ್ಮೀಯರ ಬಳಿ ಸಿಪಿವೈ ಹೇಳಿಕೊಂಡಿದ್ದರು. ದೆಹಲಿಗೂ ತೆರಳಿ ಬಿಜೆಪಿ ನಾಯಕರನ್ನು ಭೇಟಿ ಮಾಡಿ ಒತ್ತಡ ತರಲು ಯತ್ನಿಸಿದ್ದರು. ಸಂಪುಟ ವಿಸ್ತರಣೆ ನಡೆದ ಹಿಂದಿನ ದಿನವೇ ಚನ್ನಪಟ್ಟಣ ಕ್ಷೇತ್ರದಾದ್ಯಂತ ಯೋಗೇಶ್ವರ್​ಗೆ ಶುಭ ಕೋರುವ ಬ್ಯಾನರ್​ಗಳನ್ನು ಹಾಕಿಸಿ, ಸಂತಸ ಹಂಚಿಕೊಳ್ಳಲು ಸಿದ್ಧತೆ ನಡೆದಿತ್ತು. ದಿಢೀರ್ ಬೆಳವಣಿಗೆಯಲ್ಲಿ ಪ್ರಮಾಣ ವಚನ ಸ್ವೀಕಾರ ಪಟ್ಟಿಯಿಂದ ಯೋಗೇಶ್ವರ್ ಹೆಸರು ಕೈ ಬಿಡಲಾಗಿತ್ತು ಎಂಬ ಮಾತಿದೆ. ಇದರಿಂದ ಕೆರಳಿದ್ದ ಯೋಗೇಶ್ವರ್ ಪ್ರಮಾಣ ವಚನ ಸಮಾರಂಭಕ್ಕೆ ಗೈರಾಗಿದ್ದರು. ಇದಕ್ಕೂ ಮುನ್ನ ಸರ್ಕಾರ ರಚನೆ ವೇಳೆ ವಿರೋಧ ಪಕ್ಷದ ಶಾಸಕರನ್ನು ಸೆಳೆಯುವ ಯತ್ನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯೊಗೇಶ್ವರ್, ಪ್ರತಿದಿನ ಬಿಎಸ್​ವೈ ನಿವಾಸ ಧವಳಗಿರಿಯಲ್ಲಿ ಕಾಣಿಸಿಕೊಳ್ಳುತ್ತಲೇ ಇದ್ದರು. ಬಿಎಸ್​ವೈಗೆ ಅತ್ಯಾಪ್ತ ಎನ್ನುವಂತೆಯೂ ಬಿಂಬಿಸಿಕೊಂಡಿದ್ದರು. ಮಂತ್ರಿಗಿರಿ ಕೈತಪ್ಪಿದ ನಂತರ ಬಿಎಸ್​ವೈ ಅವರಿಂದ ಅಂತರ ಕಾಯ್ದುಕೊಂಡಿರುವ ಯೋಗೇಶ್ವರ್, ಆರ್​ಎಸ್​ಎಸ್ ಕಾರ್ಯಕ್ರಮದಲ್ಲಿ ಕಾಣಿಸಿ ಕೊಂಡಿದ್ದು ಬಿಟ್ಟರೆ ಹೆಚ್ಚಿಗೆ ಎಲ್ಲಿಯೂ ಕಾಣುತ್ತಿಲ್ಲ.
ಆಗಿದ್ದೇನು?
ಕಳೆದ ಕೆಲ ದಿನಗಳ ಹಿಂದೆ ಚನ್ನಪಟ್ಟಣ ಕ್ಷೇತ್ರದ ಪ್ರಮುಖ ಬಿಜೆಪಿ ಕಾರ್ಯಕರ್ತರು ಯೋಗೇಶ್ವರ್ ಭೇಟಿ ಮಾಡಲು ಬೆಂಗಳೂರಿನ ನಿವಾಸಕ್ಕೆ ತೆರಳಿದ್ದರು. ಈ ವೇಳೆ ಕ್ಷೇತ್ರದ ಕಾರ್ಯಕರ್ತರು ನಿಗಮ-ಮಂಡಳಿಗಳಲ್ಲಿ ಅಧಿಕಾರ ಕೊಡಿಸುವಂತೆ ಕೇಳಿಕೊಂಡಿದ್ದಾರೆ ಎನ್ನಲಾಗಿದೆ. ಈ ವೇಳೆ ‘ಯಡಿಯೂರಪ್ಪ ಅವರೇ ಇನ್ನು ಹೆಚ್ಚು ದಿನ ಅಧಿಕಾರದಲ್ಲಿ ಉಳಿಯಲ್ಲ, ಈಗ ಅಧಿಕಾರ ತೆಗೆದುಕೊಂಡು ಏನು ಮಾಡುತ್ತೀರಿ, ಸ್ವಲ್ಪ ದಿನ ಕಾಯಿರಿ’ ಎನ್ನುವ ಉತ್ತರವನ್ನು ಯೋಗೇಶ್ವರ್ ನೀಡಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ಈ ಮಾತು ಇದೀಗ ಕ್ಷೇತ್ರದಾದ್ಯಂತ ಹರಿದಾಡುತ್ತಿದೆ. ಮುಖ್ಯಮಂತ್ರಿ ಸ್ಥಾನದ ಬಗ್ಗೆ ಒಂದಷ್ಟು ಸುದ್ದಿ ಹರಿದಾಡಿದ ಬೆನ್ನಲ್ಲೇ ಯೋಗೇಶ್ವರ್ ನೀಡಿದ್ದಾರೆ ಎನ್ನಲಾದ ಹೇಳಿಕೆ ಇದಕ್ಕೆ ಪುಷ್ಟಿ ನೀಡುವಂತಿದೆ.
ಸಿಪಿವೈ ವಾದವೇನು?
ವಿಧಾನಸಭೆ ಚುನಾವಣೆಯಲ್ಲಿ ಸೋತ ಲಕ್ಷ್ಮಣ ಸವದಿಯನ್ನು ಉಪಮುಖ್ಯಮಂತ್ರಿ ಮಾಡಲಾಯಿತು, ವಿಧಾನಪರಿಷತ್​ನಲ್ಲೂ ಅವಕಾಶ ಮಾಡಿಕೊಡಲಾಯಿತು. ಬಿಜೆಪಿ ಸರ್ಕಾರ ರಚನೆ ಕಷ್ಟ ಸಾಧ್ಯ ಎಂದೆನಿಸಿದ ವಾತಾವರಣದಲ್ಲಿ ಎಚ್.ಡಿ. ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ವಿರುದ್ಧ ಸೆಡ್ಡು ಹೊಡೆದು ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಒಟ್ಟು ಮಾಡಿ ಮೈತ್ರಿ ಸರ್ಕಾರ ಬೀಳಲು ಕಾರಣವಾಗಿದ್ದೆ. ಇಷ್ಟು ಶ್ರಮ ವಹಿಸಿದರೂ ಕಡೆಗಣಿಸಲಾಗಿದೆ. ಸೋತ ಸವದಿಗೆ ಅವಕಾಶ, ಸರ್ಕಾರ ರಚನೆಗೆ ಕಾರಣವಾದ ನನಗೆ ಕಡಗಣನೆಯೇ ಎಂಬುದು ಸಿಪಿವೈ ವಾದ ಎನ್ನಲಾಗಿದೆ.
ಪತನದ ಲೆಕ್ಕಾಚಾರವೇನು?
ಬಿಜೆಪಿಯಲ್ಲಿ ಸಚಿವ ಸ್ಥಾನ ಸಿಗದ ಅಸಮಾಧಾನಿತರೊಂದಿಗೆ ಸಿಪಿವೈ ಸಂಪರ್ಕ ಸಾಧಿಸಿದ್ದಾರೆ ಎಂಬ ಗುಸುಗುಸು ಇದೆ ಎಂಬ ಮಾತನ್ನು ಬಿಜೆಪಿ ನಾಯಕರೂ ಒಪ್ಪಿಕೊಳ್ಳುತ್ತಾರೆ. ಅವರ ನಡೆ ಬಗ್ಗೆ ಎಲ್ಲವೂ ಗೊತ್ತಿದೆ. ಕಾಂಗ್ರೆಸ್​ನ ಕೆಲವರೊಂದಿಗೆ ಸಂಪರ್ಕದಲ್ಲಿದ್ದಾರೆಂಬ ಅನುಮಾನವಿದೆ ಎಂದು ಬಿಜೆಪಿ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗಂಗಾಧರ್ ಬೈರಾಪಟ್ಟಣ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + thirteen =
Remember me
