ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಮುಡಾ ನಿವೇಶನ ಹಂಚಿಕೆ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರುವ ವಿಚಾರವಾಗಿ ಹೈವೋಲ್ಟೇಜ್ ವಾದ-ಪ್ರತಿವಾದಕ್ಕೆ ಶನಿವಾರ ಹೈಕೋರ್ಟ್ ಸಾಕ್ಷಿಯಾಯಿತು. ಸಿಎಂ ಅನುಪಸ್ಥಿತಿಯಲ್ಲಿ ಸಂಪುಟ ಸಭೆ ನಡೆದಿದೆ ಎಂದ ಮಾತ್ರಕ್ಕೆ ಮುಖ್ಯಮಂತ್ರಿ ಕುರಿತ ಪ್ರಕರಣದಲ್ಲಿ ಸಂಪುಟ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ರಾಜ್ಯಪಾಲರ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದಿಸಿದರು. ಇದಕ್ಕೆ ಪೂರಕವಾಗಿ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ, ಸಿಎಂ ವಿಚಾರದಲ್ಲಿ ಸಂಪುಟ ಸದಸ್ಯರ ಸಲಹೆ ಪಡೆಯಬಾರದೆಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ ಎಂಬುದನ್ನು ಪ್ರಸ್ತಾಪಿಸುವುದರೊಂದಿಗೆ ಮುಡಾ ಪ್ರಕರಣದ ಕುತೂಹಲ ಇನ್ನಷ್ಟು ಹೆಚ್ಚಾಗಿದೆ.
ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಶನಿವಾರ ಮುಂದುವರಿಸಿತು. ಸುದೀರ್ಘ ವಾದ-ಪ್ರತಿವಾದ ಆಲಿಸಿದ ತರುವಾಯ ಮುಂದಿನ ವಿಚಾರಣೆಯನ್ನು ಸೋಮವಾರಕ್ಕೆ (ಸೆ.2) ಮುಂದೂಡಿದೆ. ಅಲ್ಲಿಯವರೆಗೆ ಜನಪ್ರತಿನಿಧಿಗಳ ನ್ಯಾಯಾಲಯ ಆತುರದ ನಿರ್ಧಾರ ತೆಗೆದುಕೊಳ್ಳಬಾರದು ಎಂಬ ಮಧ್ಯಂತರ ಆದೇಶವೂ ವಿಸ್ತರಣೆಯಾಗಿದೆ. ಸಿದ್ದರಾಮಯ್ಯ ವಿರುದ್ಧದ ಆರೋಪವು ಮೇಲ್ನೋಟಕ್ಕೆ ಸತ್ಯ ಎನ್ನುವುದು ತಿಳಿದು ಬಂದ ನಂತರವೇ ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ್ದಾರೆ. ಈ ನಿರ್ಧಾರ ವಿವೇಚನೆಯಿಂದ ಕೂಡಿದ್ದು, ಸಕಾರಣದಿಂದ ಅವರು ಸಂಪುಟ ಸಭೆಯ ಶಿಫಾರಸು ಪರಿಗಣಿಸಿಲ್ಲ. ಮೇಲ್ನೋಟಕ್ಕೆ ತನಿಖಾ ಸಂಸ್ಥೆಯು ಕಾನೂನಿನ ಪ್ರಕಾರ ಸತ್ಯಾಂಶ ಹೊರ ತರಲಿ ಎನ್ನುವ ಉದ್ದೇಶದಿಂದಲೇ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶ ಇಲ್ಲ ಎಂದು ತುಷಾರ್ ಮೆಹ್ತಾ ಬಲವಾಗಿ ಪ್ರತಿಪಾದಿಸಿದರು.
ಸಿಎಂ ವಿರುದ್ದ ತನಿಖೆಗೆ ನಿರ್ಧರಿಸುವಾಗ ಸಂಪುಟದ ಸಲಹೆ ಪರಿಗಣಿಸುವಂತಿಲ್ಲ. ಮುಖ್ಯಮಂತ್ರಿ ಆಯ್ಕೆ ಮಾಡುವ ಸಚಿವ ಸಿಎಂಗೆ ಬದ್ಧನಾಗಿರುತ್ತಾನೆ. ಸಿಎಂ ವಿರುದ್ಧವೇ ಆರೋಪವಿದ್ದಾಗ ಅವರ ಸಲಹೆ ಪರಿಗಣಿಸಬಾರದು. ಹೀಗಾಗಿ ಸಂಪುಟ ಸಭೆಯ ಸೂಚನೆಯನ್ನು ಕಣ್ಣೆತ್ತಿಯೂ ನೋಡುವ ಅಗತ್ಯವಿಲ್ಲ. ಸಂಪುಟ ಸಭೆಯಲ್ಲಿ ಸಿಎಂ ಭಾಗವಹಿಸದೆ ಇರಬಹುದು. ಆದರೆ, ಅವರು ನೇಮಿಸಿದ ವ್ಯಕ್ತಿಯೇ ಸಂಪುಟದ ನೇತೃತ್ವ ವಹಿಸಿರುತ್ತಾರೆ. ಹೀಗಾಗಿ ಅಂತಹ ಸಭೆಯ ನಿರ್ಣಯಕ್ಕೆ ರಾಜ್ಯಪಾಲರು ಮಹತ್ವ ನೀಡಿಲ್ಲ ಎಂದರು.
ತೀರ್ಪು ಉಲ್ಲೇಖ:ರಾಜ್ಯಪಾಲರ ತಿರ್ವನ ವಿವೇಚನಾಯುತವಾಗಿದೆ. ಭ್ರಷ್ಟಾಚಾರ ನಿರೋಧಕ ಕಾಯ್ದೆಯ ಸೆಕ್ಷನ್ 17ಎ ಎಲ್ಲ ಕಡೆ ಅನ್ವಯವಾಗುತ್ತದೆ. ಇದಕ್ಕೆ ಲಲಿತಾ ಕುಮಾರಿ ತೀರ್ಪನ್ನು ಇಲ್ಲಿ ಗಮನಿಸಬಹದು. ಸಂಜ್ಞೆಯ ಅಪರಾಧ (ಕಾಗ್ನಿಜೆಬಲ್ ಅಫೆನ್ಸ್) ಎಂಬುದು ತಿಳಿದಾಗ ರಾಜ್ಯಪಾಲರು ಅಥವಾ ತಹಶೀಲ್ದಾರ್ ವಿವೇಚನೆ ಬಳಸಿ ಅನುಮತಿ ನೀಡಬೇಕು. ಭ್ರಷ್ಟಾಚಾರ ನಿರೋಧಕ ಕಾಯ್ದೆಯಡಿ ಇದು ಎಲ್ಲ ಸರ್ಕಾರಿ ಸೇವಕರಿಗೆ ಅನ್ವಯಿಸುತ್ತದೆ. ಟಿ.ಜೆ ಅಬ್ರಹಾಂ ದೂರನ್ನು ಓದಿದ ಬಳಿಕ ರಾಜ್ಯಪಾಲರಿಗೆ ಮೇಲ್ನೋಟಕ್ಕೆ ಅಧಿಕಾರ ದುರ್ಬಳಕೆಯಾಗಿರುವ ಸಂಗತಿ ತಿಳಿದು ಬಂದಿದೆ. ಆದ್ದರಿಂದಲೇ ಮುಖ್ಯಮಂತ್ರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ ಎಂದು ತುಷಾರ್ ಮೆಹ್ತಾ ನ್ಯಾಯಪೀಠದ ಗಮನಕ್ಕೆ ತಂದರು.
ಅವರೇ ಕೊಟ್ಟಿರುವ ತೀರ್ಪು ಉಲ್ಲೇಖ:ಸಂಪುಟದ ಸಲಹೆ ಪಕ್ಷಪಾತದಿಂದ ಕೂಡಿದೆ ಎಂದೆನಿಸಿದಲ್ಲಿ ರಾಜ್ಯಪಾಲರು ಸ್ವತಂತ್ರವಾಗಿ ವಿವೇಚನೆ ಬಳಸಿ ತನಿಖೆಗೆ ಅನುಮತಿ ನೀಡಬಹುದಾಗಿದೆ. ಈ ಬಗ್ಗೆ ಸ್ವತಃ ತಾವೇ (ನ್ಯಾ.ನಾಗಪ್ರಸನ್ನ) ನೀಡಿರುವ ತೀರ್ಪೆಂದರ ಪ್ರಕಾರ ಸರ್ಕಾರಿ ಸೇವಕನ ವಿರುದ್ಧ ಪೂರ್ವಾನುಮತಿ ಪಡೆದು ಯಾರು ಬೇಕಾದರೂ ಕ್ರಿಮಿನಲ್ ಕಾನೂನಿಗೆ ಚಾಲನೆ ನೀಡಬಹುದು ಎಂದಿದ್ದೀರಿ ಎಂಬುದನ್ನು ತುಷಾರ್ ಮೆಹ್ತಾ ಗಮನಕ್ಕೆ ತಂದರು.
ಇಡೀ ಪ್ರಕ್ರಿಯೆ ದುರ್ಬಲವಾಗುತ್ತಾ?:ಆತುರದಿಂದ ಸಕ್ಷಮ ಪ್ರಾಧಿಕಾರ ತೀರ್ಮಾನ ಕೈಗೊಂಡರೆ ಇಡೀ ಪ್ರಕ್ರಿಯೆ ದುರ್ಬಲವಾಗಲಿದೆಯೇ ಎಂದು ನ್ಯಾಯಮೂರ್ತಿ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತುಷಾರ್ ಮೆಹ್ತಾ, ಪ್ರಕ್ರಿಯೆ ದುರ್ಬಲವಾಗದು, ಕೆಲವು ಸಂದರ್ಭದಲ್ಲಿ ಸಾಂವಿಧಾನಿಕ ಪ್ರತಿನಿಧಿಗೆ ಸಾಂವಿಧಾನಿಕ ಅಧಿಕಾರ ಇರುತ್ತದೆ. ಅದು ಅವರ ಅರಿವಿಗೆ ಬಂದ ತಕ್ಷಣ ತನಿಖೆಗೆ ಅನುಮತಿಸಬೇಕಾಗುತ್ತದೆ. ಕೆಲವೊಮ್ಮೆ ವಿಳಂಬವಾದರೆ ರಾಜ್ಯಪಾಲರ ವಿರುದ್ಧವೇ ಕರ್ತವ್ಯ ಲೋಪ ಆರೋಪ ಬರುತ್ತದೆ. ಹೀಗಾಗಿ ಮುಡಾ ಪ್ರಕರಣದಲ್ಲಿ ತನಿಖೆ ಅಗತ್ಯ ಎಂದು ರಾಜ್ಯಪಾಲರು ಆದೇಶಿಸಿದ್ದಾರೆ ಎಂದು ಮೆಹ್ತಾ ವಿವರಿಸಿದರು. ಆಗ ನಾಗಪ್ರಸನ್ನ, ವೈ.ಕೆ.ಸಬರ್​ವಾಲ್ ತೀರ್ಪಿನಲ್ಲಿ ಆತುರದ ನಿರ್ಧಾರವು ತನಿಖೆಗೆ ಹಾನಿ ಉಂಟು ಮಾಡುವುದಿಲ್ಲ ಎಂದು ಹೇಳಲಾಗಿದೆ ಎಂಬುದನ್ನು ಉಲ್ಲೇಖಿಸಿದರು.
ಮೆಹ್ತಾ ವಾದಕ್ಕೆ ನ್ಯಾ.ಮೂರ್ತಿ ಸಹಮತ:ಸಿಎಂ ಅನುಪಸ್ಥಿತಿಯಲ್ಲಿ ಸಂಪುಟ ಸಭೆ ನಡೆದಿದೆ ಎಂದ ಮಾತ್ರಕ್ಕೆ ಅವರ ಪ್ರಕರಣ ನಿರ್ಧರಿಸಲಾಗದು ಎಂದು ಮೆಹ್ತಾ ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ನಾಗಪ್ರಸನ್ನ, ಸಿಎಂ ವಿಚಾರದಲ್ಲಿ ಸಂಪುಟ ಸದಸ್ಯರ ಸಲಹೆ ಪಡೆಯಬಾರದೆಂದು ಸುಪ್ರೀಂ ಹೇಳಿದೆ ಎಂದರು. ಅದಕ್ಕೆ ಮೆಹ್ತಾ ಹೌದು. ಗೌರ್ನರ್ ಬಯಸಿದರೂ ಸಂಪುಟ ಸದಸ್ಯರ ಸಲಹೆ ಪಡೆಯುವಂತಿಲ್ಲ ಎಂದು ಪುನರುಚ್ಚರಿಸಿದರು.
ಕಾಮಾ, ಫುಲ್​ಸ್ಟಾಪ್ ಕೂಡ ಬಿಟ್ಟಿಲ್ಲ!:91 ಪುಟಗಳ ಕ್ಯಾಬಿನೆಟ್ ನಿರ್ಧಾರವನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದಾರೆ. ಇತಿಹಾಸದಲ್ಲಿಯೇ ಯಾರೂ ಇಷ್ಟು ಪುಟಗಳ ಕ್ಯಾಬಿನೆಟ್ ನಿರ್ಧಾರ ತೆಗೆದುಕೊಂಡಿಲ್ಲ. ಎಜಿ ಅಭಿಪ್ರಾಯದಲ್ಲಿದ್ದ ಕಾಮಾ, ಫುಲ್ ಸ್ಟಾಪ್ ಅನ್ನೂ ಬಿಟ್ಟಿಲ್ಲ. ಮುಖ್ಯಮಂತ್ರಿ ಪ್ರತಿಕ್ರಿಯೆಯಲ್ಲಿಯೂ ವಿವೇಚನೆ ಬಳಸಿಲ್ಲ. ಸಿಎಂ ಸಹ ಎಜಿ ಅಭಿಪ್ರಾಯ, ಕ್ಯಾಬಿನೆಟ್ ನಿರ್ಣಯದ ಭಾಗಗಳನ್ನೇ ತಮ್ಮ ಪ್ರತಿಕ್ರಿಯೆ ಎಂದು ನೀಡಿದ್ದಾರೆ. ಬೆಂಗಳೂರು ಐಟಿ ಹೃದಯ. ಆದರೆ, ಇವರು ಕಾಪಿ, ಪೇಸ್ಟ್ ಅನ್ನೂ ಸರಿಯಾಗಿ ಮಾಡಿಲ್ಲ. ಇದು ‘ಕಲೆಕ್ಟೀವ್ ಸ್ಟುಪಿಡಿಟಿ’ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಭ್ರಷ್ಟಾಚಾರ ನಿರೋಧಕ ಕಾಯ್ದೆಯ 17ಎ ಅನ್ವಯ ಅನುಮತಿ ತೀರ್ಪಿನಂತಿರಬೇಕಿಲ್ಲ. ಕ್ಯಾಬಿನೆಟ್ ಮತ್ತು ಸಿಎಂ ಅವರ ಪ್ರತಿ ಸ್ಪಷ್ಟನೆಗೂ ಉತ್ತರ ನೀಡಬೇಕಿಲ್ಲ. ಈಗ ಕೃತಕ ಬುದ್ಧಿಮತ್ತೆ ಲಭ್ಯವಿದೆ. ಅದನ್ನಾದರೂ ಬಳಕೆ ಮಾಡಬಹುದಿತ್ತು ಎಂದು ತುಷಾರ್ ಮೆಹ್ತಾ ವ್ಯಂಗವಾಡಿದರು. ಇದು ಸಾಮೂಹಿಕ ವಿವೇಚನಾರಾಹಿತ್ಯವನ್ನು ಪ್ರತಿನಿಧಿಸುತ್ತದೆ. ಕೃತಕ ಬುದ್ಧಿಮತ್ತೆ ಮನುಷ್ಯನ ಮೂರ್ಖತನಕ್ಕೆ ಎಂದೂ ಸರಿಸಮನಾಗಲಾರದು ಎಂದು ಹೇಳಿದರು.
ಕಡತ ಗಮನಿಸಿದರೆ ತಿಳಿಯುತ್ತದೆ:ರಾಜ್ಯಪಾಲರ ಕಡತ ಗಮನಿಸಿದರೆ ಅವರು ಅನುಮತಿ ನೀಡುವಾಗ ವಿವೇಚನೆ ಬಳಸಿರುವುದು ತಿಳಿಯುತ್ತದೆ. ಆ.14ರಂದೇ ಎಲ್ಲ ಕಡತಗಳನ್ನು ಓದಿ ನೋಟ್ಸ್ ಮಾಡಿದ್ದಾರೆ. ಕ್ಯಾಬಿನೆಟ್ ಸಲಹೆ ಪರಿಗಣಿಸಿ ವಿವರವಾದ ಪಟ್ಟಿ ತಯಾರಿಸಿದ್ದಾರೆ. ದೂರಿನ ವಿವರ, ಕ್ಯಾಬಿನೆಟ್ ಸಲಹೆ, ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ. ರಾಜ್ಯಪಾಲರು ಎಲ್ಲವನ್ನೂ ಪರಿಶೀಲಿಸಿಯೇ ಆದೇಶಿಸಿದ್ದಾರೆ. ಇದು ತನಿಖೆಗೆ ನೀಡಿರುವ ಅನುಮತಿ ಎಂದಷ್ಟೇ ಪರಿಗಣಿಸಬೇಕು. 17ಎ ಅನ್ವಯ ಅನುಮತಿ ನೀಡುವ ಮುನ್ನ ಇದನ್ನಷ್ಟೇ ನೋಡಬೇಕು ಎಂದು ತುಷಾರ್ ಮೆಹ್ತಾ ಹೇಳಿದ್ದಾರೆ.
ಹರಿಯಾಣ ವಿಧಾನಸಭೆ ಚುನಾವಣೆ ದಿನಾಂಕ ಬದಲಾವಣೆ; ಅ.5ಕ್ಕೆ ಮತದಾನ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:four × two =
Remember me
