ಬೆಂಗಳೂರು:ಶಿಕ್ಷಣ, ಉದ್ಯೋಗದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮೀಸಲು ಪ್ರಮಾಣ ಹೆಚ್ಚಳ ತುರ್ತಾಗಿ ಜಾರಿಗೆ ಬಯಸಿರುವ ರಾಜ್ಯ ಸರ್ಕಾರ ಸುಗ್ರೀವಾಜ್ಞೆಗೆ ಮೊರೆ ಹೋಗಿದೆ. ಎಸ್​ಸಿಗೆ ಶೇ.15 ರಿಂದ 17 ಹಾಗೂ ಎಸ್​ಟಿಗೆ ಶೇ.3 ರಿಂದ 7ಕ್ಕೆ ಏರಿಸಿ, ಕಾಯ್ದೆ ತಿದ್ದುಪಡಿಗೆ ಸುಗ್ರೀವಾಜ್ಞೆ ಹೊರಡಿಸಲು ರಾಜ್ಯ ಸಚಿವ ಸಂಪುಟ ಸಭೆ ಗುರುವಾರ ಅಸ್ತು ಎಂದಿದೆ. ಈ ಶಿಫಾರಸಿಗೆ ರಾಜ್ಯಪಾಲರು ಅಂಕಿತ ಹಾಕಿದ ತಕ್ಷಣ ಗೆಜೆಟ್​ನಲ್ಲಿ ಪ್ರಕಟವಾಗಲಿದ್ದು, 2-3 ದಿನಗಳಲ್ಲಿ ಅನುಷ್ಠಾನಕ್ಕೆ ಬರಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎಸ್​ಸಿ ಪಟ್ಟಿಯಲ್ಲಿದ್ದ ಸಮುದಾಯಗಳ ಸಂಖ್ಯೆ 6 ರಿಂದ 103, ಎಸ್​ಟಿಯಲ್ಲಿದ್ದ 3-4 ಸಮುದಾಯಗಳ ಸಂಖ್ಯೆ 56ಕ್ಕೇರಿದೆ. ಜನಸಂಖ್ಯೆಗೆ ಅನುಗುಣವಾಗಿ ಸಮರ್ಪಕ ಮೀಸಲು ಸೌಲಭ್ಯ ಕಲ್ಪಿಸುವಂತೆ ಸಂವಿಧಾನವೇ ಹೇಳುತ್ತದೆ. ಈ ಮೊದಲು ಕಾರ್ಯಕಾರಿ ಆದೇಶ ಹೊರಡಿಸುವ ಚಿಂತನೆಯಿತ್ತು. ಆದರೆ, ನ್ಯಾಯಾಲಯದಲ್ಲಿ ಯಾರಾದರೂ ಪ್ರಶ್ನಿಸಿದರೆ ಬಿದ್ದು ಹೋಗುವ ಸಾಧ್ಯತೆಗಳಿವೆ. ಹೀಗಾಗಿ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ನಿರ್ಧರಿಸಲಾಯಿತು ಎಂದು ಸಮಜಾಯಿಷಿ ನೀಡಿದರು.
ಕೇಂದ್ರಕ್ಕೆ ಶಿಫಾರಸಿಲ್ಲ:ಎಸ್​ಸಿ, ಎಸ್​ಟಿ ಮೀಸಲು ಪ್ರಮಾಣ ಹೆಚ್ಚಳವನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸುವುದನ್ನು ತಡೆಯಲು ಸಂವಿಧಾನದ ಒಂಬತ್ತನೇ ಷೆಡ್ಯೂಲ್​ಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಸದ್ಯ ಶಿಫಾರಸು ಮಾಡದೇ ಇರಲು ಸರ್ಕಾರ ನಿರ್ಧರಿಸಿದೆ. ವಿವಿಧ ಸಮುದಾಯಗಳ ಮೀಸಲು ಹೆಚ್ಚಳಕ್ಕೆ ಬೇಡಿಕೆಗಳಿವೆ. ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿ ಪ್ರಕಾರ ಎಸ್​ಸಿ ಮೀಸಲು ವರ್ಗೀಕರಣ, ನ್ಯಾ.ಸುಭಾಷ ಆಡಿ ನೇತೃತ್ವದ ಸಮಿತಿ ವರದಿ ಬರಬೇಕಿದೆ. ನ್ಯಾ.ಎಚ್.ಎನ್. ನಾಗಮೋಹನ್​ದಾಸ್ ವರದಿಯು ಎಸ್​ಸಿ, ಎಸ್​ಟಿ ಮೀಸಲು ಪ್ರಮಾಣ ಹೆಚ್ಚಳ ಮಾತ್ರವೇ ಹೇಳಿಲ್ಲ. ಕೆನೆಪದರವು (ಕ್ರೀಮಿ ಲೇಯರ್) ಮೀಸಲು ವ್ಯಾಪ್ತಿಯಿಂದ ಹೊರಬಂದು ಅದೇ ಸಮುದಾಯದ ಉಳಿದವರಿಗೆ ಅವಕಾಶ ಮಾಡಿಕೊಡಬೇಕು ಎಂದೂ ತಿಳಿಸಿದೆ. ಜತೆಗೆ, ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ವರದಿ ನಿರೀಕ್ಷೆಯಿದೆ.
ವಿವಿಧ ಸಮುದಾಯಗಳ ಬೇಡಿಕೆ, ವಿವಿಧ ಆಯೋಗ, ಸಮಿತಿಗಳ ವರದಿ ಅಧ್ಯಯನಕ್ಕೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಿದೆ. ಬೇಡಿಕೆ ಈಡೇರಿಸಲು ಕಾನೂನು ರೀತ್ಯ ಕೈಗೊಳ್ಳಬೇಕಾದ ಕ್ರಮಗಳು, ನಾಲ್ಕು ವರದಿಗಳನ್ನು ಸಮಿತಿ ಕೂಲಂಕಷವಾಗಿ ಅಧ್ಯಯನ ನಡೆಸಿ ವರದಿ ಸಲ್ಲಿಸಲಿದೆ. ನಂತರವಷ್ಟೇ ಎಲ್ಲವನ್ನೂ ಒಟ್ಟುಗೂಡಿಸಿ ಸಂವಿಧಾನದ 9ನೇ ಷೆಡ್ಯೂಲ್​ಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಸರ್ಕಾರ ಯೋಚಿಸಿದೆ ಎಂದು ಮಾಧುಸ್ವಾಮಿ ವಿವರಿಸಿದರು.
ತಮಿಳುನಾಡು ಶೇ.50ರ ಮಿತಿ ದಾಟಿ ಶೇ.69ರವರೆಗೆ ಮೀಸಲು ಸೌಲಭ್ಯ ಕಲ್ಪಿಸಿರುವುದನ್ನೂ ಪ್ರಶ್ನಿಸಲಾಗಿದ್ದು, ಈ ವ್ಯಾಜ್ಯ ಸುಪ್ರೀಂ ಕೋರ್ಟ್ ಮುಂದಿರುವುದನ್ನು ಮರೆಯುವಂತಿಲ್ಲ. ಶಿಕ್ಷಣ ಹಾಗೂ ಉದ್ಯೋಗದಲ್ಲಿ ಎಸ್​ಸಿ, ಎಸ್​ಟಿ ಮೀಸಲು ಏರಿಕೆಗೆ ಸೂಕ್ತ ವಿವರಣೆ ನೀಡಿಯೇ ಸುಗ್ರೀವಾಜ್ಞೆ ಹೊರಡಿಸಲು ರಾಜ್ಯಪಾಲರಿಗೆ ಶಿಫಾರಸು ಮಾಡಲಾಗುತ್ತಿದೆ ಎಂದರು. ಎಸ್​ಸಿ, ಎಸ್​ಟಿಗೆ ಸೇರಿದ ಸಮುದಾಯಗಳು ಮತ್ತು ಜನಸಂಖ್ಯೆ ಏರಿಕೆ ಹಿನ್ನೆಲೆಯಲ್ಲಿ ಸಂವಿಧಾನದ ವಿಧಿ 14 (ಸಮಾನತೆ ಹಕ್ಕು), 15 (ಸಾರ್ವಜನಿಕ ಸ್ಥಳಗಳಲ್ಲಿ ತಾರತಮ್ಯ ನಿಷೇಧ), 38 (ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ಒದಗಿಸಿ ರಕ್ಷಣೆಗೆ ಆದ್ಯತೆ), 39 (ದುರ್ಬಲರು ಮತ್ತು ಬಡವರಿಗೆ ಕಾನೂನು ಆಶ್ರಯ) ಮತ್ತು ಸಂವಿಧಾನದ ವಿಧಿ 46 (ಎಸ್​ಸಿ, ಎಸ್​ಟಿ, ದುರ್ಬಲ ವರ್ಗಗಳ ಶೈಕ್ಷಣಿಕ, ಆರ್ಥಿಕ ಹಿತಾಸಕ್ತಿ ಕಾಪಾಡಿ ಶೋಷಣೆಯಿಂದ ಮುಕ್ತಿ) ಅನ್ವಯ ಸಂವಿಧಾನದ ರಕ್ಷಣೆ ಒದಗಿಸಲಾಗಿದೆ ಎಂದು ತಿಳಿಸಿದರು.
ಶಿಕ್ಷಕರ ನೇಮಕಾತಿಗೆ ಕನಿಷ್ಠ ಅಂಕ ಇಳಿಕೆ
ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಸಾರ್ವಜನಿಕ ಶಿಕ್ಷಣ ಇಲಾಖೆ)(ನೇಮಕಾತಿ)ವಿಶೇಷ ನಿಯಮಗಳು 2022ಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಕೆಪಿಎಸ್​ಸಿಯಿಂದ ನಡೆಯುವ ನೇಮಕಾತಿಗೆ ಕನಿಷ್ಠ ಅಂಕ ನಿಗದಿಪಡಿಸಲಾಗುತ್ತಿತ್ತು. ಸಹಜವಾಗಿಯೇ ಈ ಅಂಕಗಳಿಗಿಂತ ಕಡಿಮೆ ಇದ್ದವರು ಶಿಕ್ಷಕರಾಗಿ ನೇಮಕಗೊಳ್ಳದೆ ಹುದ್ದೆಗಳು ಖಾಲಿ ಉಳಿಯುತ್ತಿದ್ದವು. ಈಗ ಕಟ್ ಆಫ್ ಮಾರ್ಕ್ಸ್​ನ್ನು 60 ರಿಂದ 50ಕ್ಕೆ ಇಳಿಸಿದ್ದೇವೆ. ಅಷ್ಟೇ ಅಲ್ಲ, ಈ ಅಂಕಗಳಿಗೂ ಖಾಲಿ ಹುದ್ದೆ ಭರ್ತಿಯಾಗದೇ ಇದ್ದರೆ ಇನ್ನೊಂದು ಕಟ್ ಆಫ್ ಅಂಕ ನಿಗದಿ ಮಾಡಿ ಶಿಕ್ಷಕರ ಹುದ್ದೆ ಭರ್ತಿ ಮಾಡುವಂತೆ ಕೆಪಿಎಸ್​ಸಿಗೆ ಸೂಚನೆ ಕೊಟ್ಟಿದ್ದೇವೆ. ಈ ಹಿಂದೆಯೇ ತೀರ್ಮಾನ ಕೈಗೊಳ್ಳಲಾಗಿತ್ತು. ಅದರೆ, ನೇಮಕ ಅಧಿಸೂಚನೆ ಹೊರಡಿಸಿರುವ ಕಾರಣ ಚಾಲ್ತಿಗೆ ಬಂದಿರಲಿಲ್ಲ. ಈಗ ಮತ್ತೊಮ್ಮೆ ಸಂಪುಟ ಅನುಮೋದನೆ ಪಡೆಯಲಾಗಿದೆ ಎಂದು ಮಾಧುಸ್ವಾಮಿ ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − thirteen =
Remember me
