ಬೆಂಗಳೂರು:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎರಡು ದಿನಗಳ ದೆಹಲಿ ಪ್ರವಾಸಕ್ಕೆ ಸೋಮವಾರ ಬೆಳಗ್ಗೆ ಪ್ರಯಾಣ ಬೆಳೆಸಲಿದ್ದಾರೆ. ಅದಕ್ಕೂ ಮುನ್ನವೇ ಸಚಿವ ಸ್ಥಾನಕ್ಕಾಗಿ ಪ್ರಭಾವ ಬೀರುವ ಚಟುವಟಿಕೆಗಳು ಗರಿಗೆದರಿವೆ. ಆದರೆ ಎಷ್ಟೇ ಒತ್ತಡ ಬಂದರೂ ಬಜೆಟ್ ಅಧಿವೇಶನ ಮುಗಿಯುವ ತನಕ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಸಾಧ್ಯತೆಗಳಿಲ್ಲ. ಇಂತಹದೊಂದು ಪರೋಕ್ಷ ಸಂದೇಶವನ್ನು ಪಕ್ಷದ ವರಿಷ್ಠರು ರಾಜ್ಯ ನಾಯಕರಿಗೆ ರವಾನಿಸಿದ್ದಾರೆ. ಹೀಗಾಗಿ ಹೇಳಿಕೆಗಳು ಆಸೆ-ಆಕಾಂಕ್ಷೆ ನಿವೇದಿಸಿಕೊಳ್ಳುವುದಕ್ಕೆ ಸೀಮಿತವಾಗಲಿದೆ. ಕಾರ್ಯರೂಪಕ್ಕೆ ಬರುವ ಸಂಭವವಿಲ್ಲ.
ಈಗಲೇ ಸಚಿವ ಸಂಪುಟ ಪುನರ್ ರಚನೆ ಅಥವಾ ವಿಸ್ತರಣೆಗೆ ಕೈ ಹಾಕಿದರೆ ಬಜೆಟ್ ಅಧಿವೇಶನದ ವೇಳೆ ಅನಗತ್ಯ ಗೊಂದಲ ಸೃಷ್ಟಿಯಾಗಲಿದೆ. ಅಷ್ಟೇ ಅಲ್ಲ, ಆಕಾಂಕ್ಷಿಗಳ ಲಾಬಿ ಮತ್ತು ಒತ್ತಡಕ್ಕೆ ಮಣೆ ಹಾಕಿದಂತಾಗಲಿದೆ. ಸರ್ಕಾರ ಮತ್ತು ಪಕ್ಷದ ವರ್ಚಸ್ಸು ವೃದ್ಧಿಗೆ ಬೇಕಾದ ಕಾರ್ಯಯೋಜನೆಯನ್ನು ವರಿಷ್ಠರು ತಯಾರಿಸಿದ್ದಾರೆ. ‘ಪಕ್ವ ಕಾಲ’ದಲ್ಲಿ ಕಾರ್ಯಗತಗೊಳಿಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿ ಹಲವರ ಭೇಟಿಗೆ ಬೊಮ್ಮಾಯಿ ಕಾಲಾವಕಾಶ ಕೋರಿದ್ದು, ಸದ್ಯಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ಖಚಿತವಾಗಿದೆ. ದೆಹಲಿಯಲ್ಲಿ ಎರಡು ಬಿಡಾರ ಹೂಡಲಿರುವ ಸಿಎಂ ಪ್ರವಾಸದ ಅಧಿಕೃತ ಮಾಹಿತಿ ಪ್ರಕಾರ ಸೋಮವಾರ ಬೆಳಗ್ಗೆ ಕೇಂದ್ರ ಸಚಿವರ ಭೇಟಿ, ರಾಜ್ಯ ಬಜೆಟ್ ಕುರಿತು ಮಧ್ಯಾಹ್ನ 1ಕ್ಕೆ ರಾಜ್ಯದ ಕೇಂದ್ರ ಸಚಿವರು ಮತ್ತು ಸಂಸದರ ಸಭೆ ನಡೆಸಲಿದ್ದಾರೆ. ಮಂಗಳವಾರ ಬೆಳಗ್ಗೆ 8ಕ್ಕೆ ಜಲ ವಿವಾದಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್​ನಲ್ಲಿ ರಾಜ್ಯ ಪ್ರತಿನಿಧಿಸುತ್ತಿರುವ ಕಾನೂನು ತಂಡದ ಜತೆ ಸಮಾಲೋಚಿಸಿದ್ದಾರೆ. ಕಾನೂನು ಹೋರಾಟದಲ್ಲಿ ಮುಂದಿನ ನಡೆಯ ಬಗ್ಗೆ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದಾರೆ. ಈ ಚರ್ಚೆಯ ಬಳಿಕ ರಾಜ್ಯಕ್ಕೆ ಮರಳುವುದನ್ನು ಮುಕ್ತವಾಗಿರಿಸಿಕೊಂಡಿದ್ದಾರೆ. ಅಂದರೆ, ಬಯಸಿದ ವರಿಷ್ಠರ ಭೇಟಿಗೆ ಕಾಲಾವಕಾಶದ ನಿರೀಕ್ಷೆಯಲ್ಲಿ ಕಾದು ಕುಳಿತುಕೊಳ್ಳಲು ನಿರ್ಧರಿಸಿದಂತಿದೆ. ವರಿಷ್ಠರ ಭೇಟಿಗೆ ಕಾಲಾವಕಾಶ ಸಿಕ್ಕರೆ ರಾಜ್ಯದ ವಿದ್ಯಮಾನಗಳು, ಇತ್ತೀಚಿನ ಚುನಾವಣೆಗಳಲ್ಲಿ ಹಿನ್ನಡೆ, ಬಿಬಿಎಂಪಿ, ಜಿಲ್ಲಾ-ತಾಲೂಕು ಪಂಚಾಯಿತಿ ಚುನಾವಣೆಗೆ ಮಾಡಿಕೊಂಡ ಸಿದ್ಧತೆ ಮಾಹಿತಿ ಒದಗಿಸಲು ಬೊಮ್ಮಾಯಿ ಅಪೇಕ್ಷಿಸಿದ್ದಾರೆ. ಅಲ್ಲದೆ, ಕೆಲವು ಜಿಲ್ಲೆಗಳ ಗುಂಪುಗಾರಿಕೆ, ಸಚಿವ-ಶಾಸಕರ ಮನಸ್ತಾಪ, ಸಮನ್ವಯದ ಕೊರತೆ ಮತ್ತಿತರ ರಾಜಕೀಯ ವಿಚಾರಗಳು ಪ್ರಸ್ತಾಪವಾಗಲಿವೆ ಎಂದು ಮೂಲಗಳು ತಿಳಿಸಿವೆ.
ದೆಹಲಿಯ ಎರಡು ದಿನಗಳ ಪ್ರವಾಸದಲ್ಲಿ ಬಜೆಟ್ ರಾಜ್ಯ ಸಂಸದರ ಸಭೆ, ಕಾನೂನು ತಂಡದ ಜತೆಗೆ ರ್ಚಚಿಸಿ ಮುಂದಿನ ನಡೆ ಬಗ್ಗೆ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗುವುದು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಪಕ್ಷದ ವರಿಷ್ಠರ ಭೇಟಿಗೆ ಸಮಯಾವಕಾಶ ಕೋರಿರುವೆ.
|ಬಸವರಾಜ ಬೊಮ್ಮಾಯಿಮುಖ್ಯಮಂತ್ರಿ
ಪಟ್ಟಿ ಫೈನಲ್​ಪಟ್ಟಿ ಫೈನಲ್:ನಿಗಮ-ಮಂಡಳಿಗಳ ನೇಮಕ ಪಟ್ಟಿಯೂ ಅಂತಿಮವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ದೆಹಲಿಗೆ ತೆರಳುವ ಮುನ್ನ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು ಎಂದು ರ್ತಸಲಾಗುತ್ತಿದೆ. ಕೆಲವು ಸಚಿವರೊಂದಿಗೆ ಗೌಪ್ಯ ಸಮಾಲೋಚನೆ ನಡೆಸಿದ್ದು, ಮುಂಬರುವ ಚುನಾವಣೆಗಳ ತಯಾರಿ ಬಗ್ಗೆಯೂ ವರಿಷ್ಠರಿಗೆ ವಿವರಿಸಲು ಸನ್ನದ್ಧರಾಗಿಯೇ ಸಿಎಂ ದೆಹಲಿಗೆ ಹೊರ ಟಿದ್ದು, ಹೊತ್ತು ತರಲಿರುವ ಸಂದೇಶದ ಬಗ್ಗೆ ಸರ್ಕಾರ, ಪಕ್ಷ ದೊಳಗೆ ಕುತೂಹಲ ಹುಟ್ಟಿಸಿದೆ.
ಬೆಂಗಳೂರು:ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ನಡೆಸುತ್ತಿರುವ ಬಿಜೆಪಿ, ತನ್ನ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿಕೊಳ್ಳಲು ತೆರೆ ಮರೆಯ ಕಸರತ್ತು ನಡೆಸಿದೆ. ಮಾರ್ಚ್ ಅಥವಾ ಏಪ್ರಿಲ್​ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂಬ ಮಾಹಿತಿ ಹೊರಬಿದ್ದಿರುವ ಹಿನ್ನೆಲೆಯಲ್ಲಿ ಚುನಾವಣೆಗೆ ತಯಾರಿ ನಡೆಸಲಾಗುತ್ತಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಉಂಟಾದ ಹಿನ್ನೆಡೆಯಿಂದಾಗಿ ತಾಪಂ, ಜಿಪಂ ಚುನಾವಣೆಯನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ. ಆಯಾ ಜಿಲ್ಲೆಯ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸರಿಯಾದ ತಂಡವನ್ನು ಈಗಲೇ ರಚನೆ ಮಾಡಿಕೊಳ್ಳಬೇಕು. ಪ್ರತಿ ಮಂಡಳ ಅಧ್ಯಕ್ಷರುಗಳು ಬೂತ್ ಮಟ್ಟದ ಸಮಿತಿಗಳನ್ನು ಉಸ್ತುವಾರಿ ಮಾಡಬೇಕು. ಜನಾಭಿಪ್ರಾಯ ಇರುವ ಮತ್ತು ಗೆಲ್ಲಬಹುದಾದ ಅಭ್ಯರ್ಥಿಗಳ ಬಗ್ಗೆ ಈಗಿಂದಲೇ ಪಟ್ಟಿ ಸಿದ್ಧಪಡಿಸಿ ಜಿಲ್ಲೆ, ರಾಜ್ಯ ಮಟ್ಟಕ್ಕೆ ನೀಡಬೇಕು ಎನ್ನುವ ನಿರ್ದೇಶನಗಳನ್ನು ನೀಡಲಾಗಿದೆ. ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋತಿರುವ ಅಭ್ಯರ್ಥಿಗಳನ್ನು ಪರಿಗಣನೆಗೆ ತೆಗೆದು ಕೊಂಡು ಅವರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಆದಷ್ಟು ಪ್ರತಿ ಕ್ಷೇತ್ರದಲ್ಲಿ ಪಕ್ಷದ ಪರವಾಗಿ ಉತ್ತಮ ವಾತಾವರಣ ನಿರ್ವಣಕ್ಕೆ ಮುಂದಾಗಬೇಕು ಎಂದು ತಿಳಿಸಲಾಗಿದೆ.
ಜಿಲ್ಲಾ ಮಟ್ಟದ ನಾಯಕರ ಗುಂಪುಗಾರಿಕೆ ಹಾಗೂ ಮುಸುಕಿನ ಗುದ್ದಾಟಕ್ಕೆ ತಕ್ಷಣ ಬ್ರೇಕ್ ಹಾಕಲು ಅಗತ್ಯ ಕ್ರಮ ಕೈಗೊಳ್ಳಲು ವರಿಷ್ಠರು ರಾಜ್ಯ ಮುಖಂಡರಿಗೆ ಕಟ್ಟಪ್ಪಣೆ ವಿಧಿಸಿದ್ದಾರೆ. ಇತ್ತೀಚೆಗೆ ಮೈಸೂರು ಜಿಲ್ಲೆಯಲ್ಲಿ ಸ್ಥಳೀಯ ನಾಯಕರ ನಡುವಿನ ಜಗಳ ಬೀದಿಗೆ ಬಂದಿದ್ದರೆ, ತುಮಕೂರಿನಲ್ಲಿ ಸಚಿವ ಹಾಗೂ ಸಂಸದರ ನಡುವಿನ ಮುಸುಕಿನ ಗುದ್ದಾಟ ಪಿಸುಮಾತಿನಲ್ಲಿ ಸ್ಪೋಟಿಸಿತ್ತು. ಬೆಳಗಾವಿ ಜಿಲ್ಲೆಯಲ್ಲಿ ರಹಸ್ಯ ಸಭೆಗಳೇ ನಡೆದಿದ್ದವು. ಇತರೆ ಜಿಲ್ಲೆಗಳಲ್ಲಿಯೂ ಸ್ಥಳೀಯ ನಾಯಕರ ನಡುವೆ ನಾಯಕತ್ವಕ್ಕೆ ಪೈಪೋಟಿ ನಡೆಯುತ್ತಿದೆ. ಸ್ಥಳೀಯವಾಗಿ ಕಾರ್ಯಕರ್ತರು ಮುಜುಗರ ಎದುರಿಸುವ ಸ್ಥಿತಿ ಇರುವುದು ವರಿಷ್ಠರಿಗೆ ತಲೆ ನೋವಾಗಿದೆ. ರಾಜ್ಯ ಮುಖಂಡರು ಅದರಲ್ಲೂ ರಾಜ್ಯಾಧ್ಯಕ್ಷರು ಜಿಲ್ಲಾ ಮುಖಂಡರನ್ನು ಕರೆದು ಸಮಸ್ಯೆ ಬಗೆ ಹರಿಸುವ ಮೂಲಕ ಒಗ್ಗಟ್ಟು ಮೂಡಿಸುವ ಕಡೆ ಗಮನ ಹರಿಸುತ್ತಿಲ್ಲವೆಂಬುದು ವರಿಷ್ಠರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಕೇವಲ ಹದಿನಾಲ್ಕು ತಿಂಗಳು ಮಾತ್ರ ಉಳಿದಿದೆ. ಇಂತಹ ಸಂದರ್ಭದಲ್ಲಿ ಸ್ಥಳೀಯ ಸಂಘಟನೆಯಲ್ಲಿ ಒಡಕು ದನಿ ಕೇಳಿ ಬರಬಾರದು ಎಂಬುದು ವರಿಷ್ಠರ ಸೂಚನೆಯಾಗಿದೆ. ಪಕ್ಷದ ಹೈಕಮಾಂಡ್ ಹಿಂದೆಂದಿಗಿಂತಲೂ ಬಲಿಷ್ಠವಾಗಿದೆ. ಆದ್ದರಿಂದಲೇ ಯಾರೊಬ್ಬರು ಬಂಡಾಯ ಅಥವಾ ಪಕ್ಷ ವಿರೋಧಿ ಚಟುವಟಿಕೆ ಮಾಡಲು ಸಾಧ್ಯವಿಲ್ಲ. ಆದರೆ ಒಬ್ಬರ ವಿರುದ್ಧ ಮತ್ತೊಬ್ಬರು ಕತ್ತಿ ಮಸೆಯುತ್ತ ಕುಳಿತರೆ, ಒಬ್ಬರ ಕಾಲು ಇನ್ನೊಬ್ಬರು ಎಳೆದರೆ ಅದರ ಪರಿಣಾಮ ರಾಜಕೀಯದಲ್ಲಿ ಎಲ್ಲೆಲ್ಲಿಯೋ ಆಗಿ ಬಿಡುತ್ತದೆ ಎಂಬುದು ವರಿಷ್ಠರಿಗಿದೆ. ಆದ್ದರಿಂದಲೇ ತಕ್ಷಣ ಕಡಿವಾಣ ಹಾಕುವಂತೆ ಸೂಚನೆ ನೀಡಿರುವುದು ಎಂದು ಪಕ್ಷದ ಮೂಲಗಳು ಹೇಳುತ್ತವೆ. ಇತ್ತೀಚಿನ ಚುನಾವಣೆಯಲ್ಲಿ ಹಾನಗಲ್​ನಲ್ಲಿ ಸೋಲಲಾಗಿದೆ. ಮೇಲ್ಮನೆಯ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಬಂದಿಲ್ಲ. ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟಾರೆ ಕಾಂಗ್ರೆಸ್ ಮುಂದಾಗಿದೆ. ಇದೆಲ್ಲವೂ ಸಂಘಟನೆಯಲ್ಲಿನ ಲೋಪವೆಂದೇ ವರಿಷ್ಠರು ಪರಿಗಣಿಸಿದ್ದಾರೆ. ಮುಂದಿನ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಮತ್ತು ಬಿಬಿಎಂಪಿ ಚುನಾವಣೆಗಳಲ್ಲಿ ಇದೇ ಪರಿಸ್ಥಿತಿ ಮುಂದುವರೆದರೆ ವಿಧಾನಸಭಾ ಚುನಾವಣೆಯ ಮೇಲೆ ಪರಿಣಾಮ ಬೀರುತ್ತದೆ ಎಂಬ ಆತಂಕ ವರಿಷ್ಠರನ್ನು ಕಾಡುತ್ತಿದೆ. ಪ್ರತಿ ನಿತ್ಯ ತಮ್ಮದೇ ಮೂಲಗಳಿಂದ ಮಾಹಿತಿ ಪಡೆಯುತ್ತಿರುವ ವರಿಷ್ಠರು ಪ್ರತಿಯೊಂದು ಸೂಕ್ಷ್ಮ ವಿಚಾರಗಳನ್ನು ಗಮನಿಸುತ್ತಿದ್ದಾರೆ. ಆದ್ದರಿಂದಲೇ ಇಂತಹ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆಂದು ಹೇಳಲಾಗಿದೆ.
ಏನೇನು ಸೂಚನೆ:ಯಾವ ಯಾವ ಜಿಲ್ಲೆಯಲ್ಲಿ ಸಮಸ್ಯೆ ಇದೆಯೋ ಅಂತಹ ಜಿಲ್ಲೆಯ ಮುಖಂಡರನ್ನು ಕರೆದು ಚರ್ಚೆ ನಡೆಸಬೇಕು. ರಾಜ್ಯಾಧ್ಯಕ್ಷರು ಜಿಲ್ಲಾ ಕೇಂದ್ರಗಳಿಗೆ ಹೋಗಿ ಎಲ್ಲರೊಂದಿಗೆ ಮಾತುಕತೆ ನಡೆಸಬೇಕು. ಒಂದು ತಿಂಗಳಿನಲ್ಲಿ ಈ ಕಾರ್ಯ ನಡೆಯಬೇಕು. ಹೆಚ್ಚಿನ ಸಮಸ್ಯೆ ಇದ್ದರೆ ವರದಿ ನೀಡಬೇಕು ಎಂಬ ಸೂಚನೆ ನೀಡಿದ್ದಾರೆಂದು ಹೇಳಲಾಗುತ್ತಿದೆ. ವರಿಷ್ಠರಿಂದ ಸೂಚನೆ ಬಂದ ಕೂಡಲೆ ರಾಜ್ಯಾಧ್ಯಕ್ಷರು ಮೈಸೂರು ಹಾಗೂ ಬೆಳಗಾವಿ ಜಿಲ್ಲೆಯ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದಾರೆ.
ಎಲ್ಲೆಲ್ಲಿ ಇದೆ ಸಮಸ್ಯೆ:ಮೈಸೂರಿನಲ್ಲಿ ಸಂಸದರ ವಿರುದ್ಧ ಶಾಸಕರು ತಿರುಗಿಬಿದ್ದಿದ್ದಾರೆ. ತುಮಕೂರಿನಲ್ಲಿ ಸಂಸದ ಹಾಗೂ ಸಚಿವರ ನಡುವೆ ಒಗ್ಗಟ್ಟು ಇಲ್ಲ. ವಿಜಯಪುರದಲ್ಲಿ ಇಬ್ಬರು ಸಚಿವರ ನಡುವೆ ಹೊಂದಾಣಿಕೆ ಇಲ್ಲ. ಬೆಂಗಳೂರಿನಲ್ಲಿ ಸಚಿವರ ನಡುವೆ ಸಮನ್ವಯವೇ ಇಲ್ಲ. ಬೆಳಗಾವಿಯಲ್ಲಿ ಜಾರಕಿಹೊಳಿ ಸಹೋದರರು ಹಾಗೂ ಇತರರ ನಡುವೆ ಭಿನ್ನಮತ ಜೋರಾಗಿದೆ. ಕೊಡಗಿನಲ್ಲಿ ಮುಖಂಡರ ನಡುವೆ ಹೊಂದಾಣಿಕೆಯ ಕೊರತೆ ಇದೆ. ದಕ್ಷಿಣ ಕನ್ನಡದ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಅನೇಕ ಜಿಲ್ಲೆಗಳಲ್ಲಿ ನಾಯಕತ್ವಕ್ಕಾಗಿ ಪರಸ್ಪರ ಮುಸುಕಿನ ಗುದ್ದಾಟ ನಡೆಯುತ್ತಿದೆ. ಈ ಸಮಸ್ಯೆಗಳನ್ನೆಲ್ಲ ಬಗೆ ಹರಿಸಲು ಈಗ ರಾಜ್ಯ ಮುಖಂಡರು ಮುಂದಾಗಿದ್ದಾರೆ. ಬಹುತೇಕ ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲಿ ಚರ್ಚೆ ಮೂಲಕ ಕಡಿವಾಣ ಹಾಕಲಾಗುತ್ತದೆ ಎನ್ನಲಾಗಿದೆ.
ಟಿಕೆಟ್ ಕೈ ತಪ್ಪುವ ಎಚ್ಚರಿಕೆ:ಯಾವುದೇ ಚಟುವಟಿಕೆಗಳ ಮೂಲಕ ಸಂಘ ಟನೆಯ ಮೇಲೆ ಪರಿಣಾಮ ಬೀರುವಂತಿದ್ದರೆ ಅಂತಹವರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್​ಗೆ ಪರಿಗಣಿಸುವುದಿಲ್ಲವೆಂಬ ಎಚ್ಚರಿಕೆಯನ್ನು ನೀಡಲು ವರಿಷ್ಠರು ಸೂಚನೆ ನೀಡಿದ್ದಾರೆ. ಅಂತಹವರ ಪಟ್ಟಿ ಮಾಡುವಂತೆಯೂ ರಾಜ್ಯ ಘಟಕಕ್ಕೆ ತಿಳಿಸಲಾಗಿದೆ ಎಂದು ಮೂಲಗಳು ಹೇಳುತ್ತವೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 7 =
Remember me
