ಬೆಂಗಳೂರು:ಸಂಪುಟ ಭರ್ತಿಗೆ ದಿನಗಣನೆ ಆರಂಭವಾಗಿದ್ದು, ಪಕ್ಷದ ವರಿಷ್ಠರ ಕಡೆಗಣನೆಗೆ ಬೇಸತ್ತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತುರ್ತು ಪ್ರತಿಕ್ರಿಯೆಗೆ ಮುಂದಾಗಿರುವುದು ಬಿರುಸಿನ ಚಟುವಟಿಕೆಗೆ ಎಡೆಮಾಡಿಕೊಟ್ಟಿದೆ.
ಇನ್ನು 2-3 ದಿನಗಳಲ್ಲೇ ಸಂಪುಟ ವಿಸ್ತರಿಸುವುದಾಗಿ ಬಿಎಸ್​ವೈ ನೀಡಿದ ಹೇಳಿಕೆ ಸಂಚಲನ ಸೃಷ್ಟಿಸಿದ್ದು, ಪಕ್ಷದಲ್ಲಿ ಒತ್ತಡ ಸೃಷ್ಟಿಯಾಗಿದೆ. ಇದೇ ವೇಳೆ ಅವರ ಪ್ರತಿ ನಿರ್ಧಾರದ ಬಗ್ಗೆ ವಿಶ್ಲೇಷಣೆಗಳು ನಡೆದಿದ್ದು, ಅಚ್ಚರಿಯ ತೀರ್ವನಗಳು ಪ್ರಕಟವಾಗುವ ಲಕ್ಷಣಗಳಿವೆ. ಗುರುವಾರ ಪ್ರಮುಖ ಸಚಿವರ ಜತೆ ಸಭೆ ನಡೆಸಿದ ಯಡಿಯೂರಪ್ಪ, ಶುಕ್ರವಾರ ತುರ್ತು ಸಂಪುಟ ಸಭೆ ಕೂಡ ಕರೆದಿದ್ದಾರೆ. ಬಳಿಕ ಪತ್ರಿಕಾಗೋಷ್ಠಿ ಆಯೋಜಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಬಿಜೆಪಿ ವರಿಷ್ಠರ ಉದಾಸೀನತೆ ತಂತ್ರಕ್ಕೆ ಪ್ರತಿಯಾಗಿ ಒತ್ತಡ ಹೇರುವ ಚಟುವಟಿಕೆಗಳು ಚುರುಕಾಗಿದ್ದು, ಈ ಬೆಳವಣಿಗೆಯಿಂದಾಗಿ ಇಷ್ಟರಲ್ಲೇ ವಿಸ್ತರಣೆಗೆ ಮುಹೂರ್ತ ನಿಗದಿಯಾದರೂ ಅಚ್ಚರಿಯಿಲ್ಲ. ಈ ಮಧ್ಯೆ ಕೆಲವು ಹಿರಿಯ ಅಧಿಕಾರಿಗಳು ರಾಜಭವನ ಸಂರ್ಪಸಿ, ರಾಜ್ಯಪಾಲರ ನಿಗದಿತ ಕಾರ್ಯಕ್ರಮಗಳ ವಿವರಗಳನ್ನು ಪಡೆದುಕೊಂಡಿರುವುದು ಗಮನಾರ್ಹ. ಸಿಎಂ ಒಂದಾದ ಮೇಲೆ ಒಂದರಂತೆ ತೆಗೆದುಕೊಳ್ಳುತ್ತಿರುವ ನಿರ್ಣಯ, ಪರ-ವಿರೋಧಿಗಳ ಸಭೆಗಳು, ಲಾಬಿ ಪ್ರಯತ್ನ, ಸಿಎಂ ಜತೆಗೆ ಕೆಲವು ಸಚಿವರ ಚರ್ಚೆ ಇವೆಲ್ಲ ವರಿಷ್ಠರ ಗಮನ ಸೆಳೆದಿವೆ. ಈ ಮೂಲಕ ವರಿಷ್ಠರನ್ನು ಒಲಿಸಿಕೊಳ್ಳುವ ತಂತ್ರವಿದು. ವಿಳಂಬದ ಮನವರಿಕೆ ಇಲ್ಲವೇ ಪರಿಸ್ಥಿತಿ ಒತ್ತಡಕ್ಕೆ ಸಿಲುಕಿಯಾದರೂ ಒಪ್ಪಿಗೆ ಕೊಡಬಹುದು ಎಂಬ ಲೆಕ್ಕಾಚಾರ ಈ ಪ್ರಯತ್ನಗಳ ಹಿಂದಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಬಿಎಸ್​ವೈ ಒತ್ತಾಸೆ:ಕೊಟ್ಟ ಭರವಸೆ ಈಡೇರಿಸಲು ವಿಳಂಬದಿಂದಾಗಿ ಆಕಾಂಕ್ಷಿಗಳು ಚಡಪಡಿಸುತ್ತಿದ್ದಾರೆ. ಹಾಗೆಯೇ 2 ಬಾರಿ ವರಿಷ್ಠರನ್ನು ಭೇಟಿಯಾಗಿ ರ್ಚಚಿಸಿದರೂ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಈ ಕಾರಣಕ್ಕೆ ಸ್ವತಃ ಇಕ್ಕಟ್ಟಿಗೆ ಸಿಲುಕಿರುವ ಬಿಎಸ್​ವೈ, ಇದರಿಂದ ಪಾರಾಗುವ ಮಾಗೋಪಾಯ ಹುಡುಕಿಕೊಂಡಿದ್ದಾರೆ. ವರಿಷ್ಠರ ಭೇಟಿ, ಸಭೆ ಯಾವ ರೂಪದಲ್ಲಾದರೂ ನಡೆಯಲಿ, ಉದ್ದೇಶ ಈಡೇರಲೆಂದು ಒತ್ತಡ ತಂತ್ರಗಳಿಗೆ ಒತ್ತಾಸೆಯಾಗಿ ನಿಂತಿದ್ದಾರೆ ಎಂದು ಮೂಲಗಳು ಹೇಳಿವೆ. ಹೊಸದಾಗಿ ಮರಾಠ, ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ರಚಿಸಿದರು. ಬಾಕಿ ಉಳಿದಿರುವ ನಿಗಮ-ಮಂಡಳಿಗಳಿಗೆ ದಿಢೀರ್ ನೇಮಕಗಳಾಗಿವೆ. ಹೀಗಾಗಿ ಬಿಎಸ್​ವೈ ಮುಂದಿನ ನಡೆಯು ಆಕಾಂಕ್ಷಿಗಳ ಕುತೂಹಲ ಕೆರಳಿಸಿದ್ದರೆ, ಹೈಕಮಾಂಡ್ ಸಹ ಈ ಚಟುವಟಿಕೆಗಳನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಿದೆ ಎನ್ನಲಾಗುತ್ತಿದೆ.
ಇಂದು ಮಹತ್ವದ ಘೋಷಣೆ
ವೀರಶೈವ ಲಿಂಗಾಯತ, ಒಕ್ಕಲಿಗ ಸಮುದಾಯಕ್ಕೆ ಸಂಬಂಧಿಸಿದಂತೆ ಬಿಎಸ್​ವೈ ಇನ್ನೊಂದು ಮಹತ್ವದ ಘೋಷಣೆ ಮಾಡಿ, ಬಹುದಿನಗಳ ಬೇಡಿಕೆಗೆ ಸ್ಪಂದಿಸುವ ನಿರೀಕ್ಷೆ ಇದೆ. ಅಲ್ಲದೆ, ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಸಂಜೆ ಕರೆದಿರುವ ಪಕ್ಷದ ಸಂಸದರ ಸಭೆಯಲ್ಲಿ ಪಾಲ್ಗೊಂಡ ಬಳಿಕ ರಾತ್ರಿ ದೆಹಲಿಗೆ ಪ್ರಯಾಣ ಬೆಳೆಸುವ ಸಾಧ್ಯತೆಗಳಿವೆ.
ಸಚಿವರ ಜತೆ ಚರ್ಚೆ
ಗುರುವಾರ ಮೈಸೂರಿನಿಂದ ವಾಪಸ್ಸಾದ ಬಳಿಕ ಕಾವೇರಿ ನಿವಾಸಕ್ಕೆ ಕೆಲವು ಸಚಿವರನ್ನು ಕರೆಯಿಸಿಕೊಂಡಿದ್ದ ಬಿಎಸ್​ವೈ, ಸಚಿವ ಸಂಪುಟ ರಚನೆ, ಇತ್ತೀಚಿನ ಬೆಳವಣಿಗೆ, ಸರ್ಕಾರದ ಆಗು-ಹೋಗುಗಳ ಕುರಿತು ರ್ಚಚಿಸಿದ್ದಾರೆ. ಸಚಿವರಾದ ವಿ.ಸೋಮಣ್ಣ, ಬಸವರಾಜ ಬೊಮ್ಮಾಯಿ, ಜೆ.ಸಿ.ಮಾಧುಸ್ವಾಮಿ, ಸಿ.ಸಿ.ಪಾಟೀಲ್, ಬಿ.ಸಿ.ಪಾಟೀಲ್, ಪ್ರಭು ಚವ್ಹಾಣ್, ಜಗದೀಶ ಶೆಟ್ಟರ್, ಶಶಿಕಲಾ ಜೊಲ್ಲೆ ಹಾಗೂ ಸಿಎಂ ಪುತ್ರ ಬಿ.ವೈ.ವಿಜಯೇಂದ್ರ ಹಾಜರಿದ್ದರು ಎಂದು ಮೂಲಗಳು ತಿಳಿಸಿವೆ.
ಕೇಂದ್ರಕ್ಕೆ ನಿಯೋಗ?
ವೀರಶೈವ ಲಿಂಗಾಯತರನ್ನು ಕೇಂದ್ರದ ಹಿಂದುಳಿದ ವರ್ಗ(ಒಬಿಸಿ) ಪಟ್ಟಿಯಲ್ಲಿ ಸೇರಿಸಬೇಕೆಂದು ನಿರ್ಣಯ ಮಾಡಿ, ಕೇಂದ್ರಕ್ಕೆ ನಿಯೋಗ ಕೊಂಡೊಯ್ಯುವ ಕುರಿತು ಸಂಪುಟದಲ್ಲಿ ನಿರ್ಧಾರವಾಗುವ ಸಾಧ್ಯತೆ ಇದೆ. ಸಂಜೆ ನಡೆಯುವ ಸಂಸದರ ಸಭೆಯಲ್ಲೂ ಈ ವಿಷಯ ಚರ್ಚೆಯಾಗಿ, ಸಿಎಂ ನೇತೃತ್ವದಲ್ಲೇ ನಿಯೋಗ ಹೋಗುವ ಬಗ್ಗೆ ತೀರ್ವನವಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಪಕ್ಷದ ಪಟ್ಟಿಗೆ ಸಿಗದ ಮೋಕ್ಷ ಕಟೀಲ್​ಗೆ ಅತೃಪ್ತರ ದೂರು
ಬೆಂಗಳೂರು: ನಿಗಮ-ಮಂಡಳಿಗಳ ನೇಮಕ ಹಾಗೂ ಪಕ್ಷ ಸಲ್ಲಿಸಿದ ಪಟ್ಟಿಗೂ ಅಜಗಜಾಂತರವಿದೆ. ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ಆಪ್ತರ ಅಪೇಕ್ಷೆಗೆ ಹೆಚ್ಚಿನ ಮನ್ನಣೆ ಸಿಕ್ಕಿದೆ ಎಂದು ದೂರಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ಕುಮಾರ್ ಕಟೀಲ್ ಮುಂದೆ ಅವಕಾಶ ವಂಚಿತರ ಗುಂಪು ಅಳಲು ತೋಡಿಕೊಂಡಿದ್ದು, ದೆಹಲಿ ನಾಯಕ ರೊಬ್ಬರ ಮೂಲಕ ವರಿಷ್ಠರಿಗೂ ವಿಷಯ ಮುಟ್ಟಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಎಸ್​ವೈಗೆ ಪಕ್ಷದಿಂದ 20 ನಿಗಮ-ಮಂಡಳಿಗಳ ನೇಮಕ ಪಟ್ಟಿ ಸಲ್ಲಿಕೆಯಾಗಿದೆ. ಈ ಪೈಕಿ 4-5 ಹೆಸರುಗಳನ್ನು ಮಾತ್ರ ಪರಿಗಣಿಸಿ, ಉಳಿದೆಲ್ಲ ನೇಮಕಗಳು ಪ್ರಭಾವಿಗಳ ಆಣತಿಯಂತೆ ನಡೆದಿವೆ ಎಂಬ ಅಸಮಾಧಾನದ ಬೇಗುದಿಯಿಂದ ಆಕಾಂಕ್ಷಿಗಳು ಚಡಪಡಿಸುತ್ತಿದ್ದಾರೆ. ಪಕ್ಷದ ಸಂಘಟನೆಗೆ ದುಡಿದವರು, ನಿಸ್ವಾರ್ಥ ಸೇವೆ ಹಾಗೂ ಹಿರಿತನ ಕಡೆಗಣಿಸಿ, ಹಿಂದಿನ ಉಪಚುನಾವಣೆಯ ಅನುಕೂಲತೆ, ಕೆಲವು ನಾಯಕರ ಬೆಂಬಲಿಗರಿಗೆ ಮಣೆ ಹಾಕಿದ್ದಾರೆ ಎಂಬುದು ದೂರಿನ ತಿರುಳಾಗಿದೆ.
ಬಿಎಸ್​ವೈ ನಡೆಗೆ ಆಕ್ರೋಶ:ನಿಗಮ- ಮಂಡಳಿಗಳು, ಪ್ರಾಧಿಕಾರಗಳು ಸೇರಿ ವಿವಿಧ ಸಂಸ್ಥೆಗಳ ಅಧ್ಯಕ್ಷರು, ನಿರ್ದೇಶಕರನ್ನು ನೇಮಿಸುವ ವಿಚಾರದಲ್ಲಿ ಬಿಎಸ್​ವೈ ನಡೆ ಬಗ್ಗೆಯೂ ಆಕ್ರೋಶ ವ್ಯಕ್ತವಾಗಿದೆ. ಸರ್ಕಾರ ಮತ್ತು ಪಕ್ಷದ ಮಧ್ಯೆ ಸಮತೋಲನ ಹಾಗೂ ಸಂಘಟನೆಗೆ ಲಾಭವಾಗುವ ರೀತಿಯಲ್ಲಿ ನೇಮಕಗಳಾಗಬೇಕಿತ್ತು. ಕೆಲವು ನಾಯಕರ ವೈಯಕ್ತಿಕ ಹಿತಾಸಕ್ತಿಗೆ ಮಣೆ ಹಾಕಿರುವುದು ಸರಿಯಲ್ಲ ಎನ್ನುವ ಆಕ್ಷೇಪ ಎತ್ತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಸಮೀಪಿಸುತ್ತಿದೆ. ತಡವಾಗಿಯಾದರೂ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಿರುವುದು ಮುಖಂಡರು, ಕಾರ್ಯಕರ್ತರಿಗೆ ಸಂತಸ ಉಂಟು ಮಾಡಿತ್ತು. ಆದರೆ 2 ದಿನಗಳ ಅವಧಿಯಲ್ಲಿ 50ಕ್ಕೂ ಹೆಚ್ಚು ನಿಗಮ-ಮಂಡಳಿ, ಪ್ರಾಧಿಕಾರ, ಸಂಸ್ಥೆಗಳು ನೇಮಕ ಭಾಗ್ಯ ಕಂಡಿದ್ದು, ಬಹುಪಾಲು ಒಂದೆಡೆ ವಾಲಿವೆ. ಬಹಳಷ್ಟು ಅರ್ಹರು ಮೂಲೆಗುಂಪಾಗಿದ್ದಾರೆ.
ಯಾರನ್ನೋ ತೃಪ್ತಿಪಡಿಸಲು, ವೈಯಕ್ತಿಕ ವರ್ಚಸ್ಸು ವೃದ್ಧಿಸಿಕೊಳ್ಳಲು ಇವೆಲ್ಲ ಆದಂತಿವೆ ಎಂದು ಪಕ್ಷದ ಕೆಲವು ಮುಖಂಡರು ಅನುಮಾನ ವ್ಯಕ್ತಪಡಿಸಿದ್ದಾರೆ. ಬಾಕಿ ಉಳಿದ ನೇಮಕಗಳಲ್ಲಿ ಬಿಎಸ್​ವೈ, ಕಟೀಲ್ ಮತ್ತು ಪಕ್ಷದ ರಾಜ್ಯ ನಾಯಕರು ಸಮತೋಲನ ಕಾಪಾಡಿಕೊಳ್ಳುವ ವಿಶ್ವಾಸವನ್ನು ಆಕಾಂಕ್ಷಿಗಳು ಹೊಂದಿದ್ದಾರೆ. ಈ ವಿಚಾರವಾಗಿ ನಳಿನ್​ಕುಮಾರ್ ಕಟೀಲ್ ಪ್ರತಿಕ್ರಿಯೆ ಪಡೆಯುವ ಪ್ರಯತ್ನ ಫಲಿಸಲಿಲ್ಲ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 × 3 =
Remember me
