ಬೆಂಗಳೂರು:ರಾಜ್ಯದಲ್ಲಿ ಬಿಜೆಪಿ ಎರಡನೇ ಬಾರಿ ಅಧಿಕಾರದ ಗದ್ದುಗೆ ಏರಿದ ಹೊಸತರಲ್ಲಿ ಬಿ.ಎಸ್. ಯಡಿಯೂರಪ್ಪ ಒಬ್ಬಂಟಿಯಾಗಿ ಪ್ರವಾಹ, ಅತಿವೃಷ್ಟಿಪೀಡಿತ ಪ್ರದೇಶಗಳನ್ನು ಸುತ್ತಿದಂತೆ ಇದೀಗ ನೂತನ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಅದೇ ಹಾದಿ ಹಿಡಿದಿದ್ದಾರೆ. ಗುರುವಾರ ಉತ್ತರ ಕನ್ನಡ ಜಿಲ್ಲೆಯ ಮಳೆ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿದ್ದ ಸಿಎಂ ಸಚಿವ ಸಂಪುಟದ ಏಕೈಕ ಸದಸ್ಯರಾಗಿ ಇನ್ನೂ ಕೆಲವು ದಿನಗಳು ಮುಂದುವರಿಯುವ ಸಾಧ್ಯತೆ ದಟ್ಟೆ ೖಸಿದೆ. ಬೊಮ್ಮಾಯಿ ಕೋರಿಕೆಯನ್ನು ಪುರಸ್ಕರಿಸಿ ವರಿಷ್ಠರು ಶುಕ್ರವಾರವೇ ಭೇಟಿಗೆ ಕಾಲಾವಕಾಶ ಕೊಟ್ಟರೂ ಸಂಪುಟ ರಚನೆ ಮುಹೂರ್ತ ಮಾತ್ರ ಮತ್ತಷ್ಟು ದಿನ ಮುಂದೂಡಿಕೆಯಾಗುವುದು ನಿಶ್ಚಿತವಾಗಿದೆ. ಉತ್ತರ ಕನ್ನಡಕ್ಕೆ ತೆರಳುವ ಮುನ್ನ ಸ್ವತಃ ಮುಖ್ಯಮಂತ್ರಿಗಳೇ ಈ ಕುರಿತು ಸ್ಪಷ್ಟ ಸುಳಿವು ನೀಡಿದ್ದಾರೆ. ಹೀಗಾಗಿ ಭವಿಷ್ಯ ತಿಳಿದುಕೊಳ್ಳಲು ತುದಿಗಾಲಲ್ಲಿ ನಿಂತಿರುವ ಹಿರಿಯರು ಹಾಗೂ ಪದವಿ ಮೇಲೆ ಕಣ್ಣಿಟ್ಟವರು ಇನ್ನೂ ಕೆಲವು ದಿನ ಕಾಯಬೇಕಾಗಿದೆ. ಲಭ್ಯ ಮಾಹಿತಿ ಪ್ರಕಾರ ‘ಸಂಘ’ದ ಪ್ರಮುಖರು, ಮಾಜಿ ಸಿಎಂ ಯಡಿಯೂರಪ್ಪ ಸೇರಿ ರಾಜ್ಯದ ನಾಯಕರ ನಡುವೆ ಚರ್ಚೆ ಹಂತದಲ್ಲಿದೆ. ಪ್ರಾಶಸ್ಱ ನೀಡಬೇಕಾದ ಹೆಸರುಗಳ ಪಟ್ಟಿಯು ದೆಹಲಿಗೆ ತಲುಪಿದ ಬಳಿಕವಷ್ಟೇ ಮುಂದಿನ ಬೆಳವಣಿಗೆಗಳಾಗಲಿವೆ.
ಆಕಾಂಕ್ಷಿಗಳ ದುಂಬಾಲು:ಮಂತ್ರಿಗಿರಿ ಆಕಾಂಕ್ಷಿಗಳು ಬಹಿರಂಗ ಹೇಳಿಕೆ, ಜಾತಿ-ವರ್ಗಗಳಿಗೆ ಆದ್ಯತೆ ಹೆಸರಿನಲ್ಲಿ ಒತ್ತಡ ತಂತ್ರ ಆರಂಭಿಸಿದ್ದಾರೆ. ಸಿಎಂ ಬೊಮ್ಮಾಯಿ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ದುಂಬಾಲು ಬಿದ್ದು, ಅವರ ನಿವಾಸಕ್ಕೆ ಲಗ್ಗೆಯಿಟ್ಟು ಅಪೇಕ್ಷೆ ನಿವೇದಿಸಿಕೊಳ್ಳುತ್ತಿದ್ದಾರೆ. ಆರ್​ಟಿ ನಗರದ ಬೊಮ್ಮಾಯಿ ನಿವಾಸ ಹಾಗೂ ಬಿಎಸ್​ವೈ ನೆಲೆಸಿರುವ ಕಾವೇರಿ ನಿವಾಸವು ಮಾಜಿ ಸಚಿವರು, ಶಾಸಕರು, ಬೆಂಬಲಿಗರಿಂದ ಗಿಜಿಗುಡಲಾರಂಭಿಸಿವೆ.
ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಪ್ರಭು ಚವ್ಹಾಣ್, ಎಚ್. ನಾಗೇಶ್, ಎಂ.ಪಿ. ರೇಣುಕಾಚಾರ್ಯ, ಶಾಸಕ ಆರಗ ಜ್ಞಾನೇಂದ್ರ ಅವರು ಗುರುವಾರ ಬೊಮ್ಮಾಯಿ ನಿವಾಸಕ್ಕೆ ಭೇಟಿ ನೀಡಿದ್ದರು. ಸಚಿವರಾಗುವ ಆಸೆಯಿದೆ ಎಂದು ಎಚ್.ನಾಗೇಶ್ ಮತ್ತು ಎಂ.ಪಿ.ರೇಣುಕಾಚಾರ್ಯ ಹೇಳಿಕೆ ನೀಡಿದರೆ, ಬಿಎಸ್​ವೈ ನಿವಾಸಕ್ಕೆ ಭೇಟಿ ನೀಡಿದ್ದ ಶಾಸಕ ಕುಮಾರ್ ಬಂಗಾರಪ್ಪ ಮಾತುಕತೆ ನಡೆಸಿ ಹೊರಟರು. ಮಾಜಿ ಸಚಿವ ಜಗದೀಶ್ ಶೆಟ್ಟರ್ ನಿವಾಸಕ್ಕೂ ಮಾಜಿ ಸಚಿವ ಎಸ್.ಅಂಗಾರ, ಶಾಸಕರಾದ ವಿ.ಸುನಿಲ್ ಕುಮಾರ್, ಅಭಯ್ ಪಾಟೀಲ್, ಎಂ.ಪಿ.ಕುಮಾರಸ್ವಾಮಿ ಸೇರಿದಂತೆ ಕೆಲವು ಶಾಸಕರು ಧಾವಿಸಿ ಅವರೊಂದಿಗೆ ರ್ಚಚಿಸಿದರು. ಸಚಿವರಾಗಲು ತಮಗಿರುವ ಸಾಮರ್ಥ್ಯ, ಅರ್ಹತೆ, ಸರ್ಕಾರ ಮತ್ತು ಪಕ್ಷಕ್ಕೆ ಆಗುವ ಲಾಭಾಂಶಗಳ ವಿವರದೊಂದಿಗೆ ಕೆಲವರು ಪ್ರಭಾವಿಗಳ ಮೂಲಕ ಲಾಬಿ ನಡೆಸುತ್ತಿದ್ದಾರೆ.
ದೆಹಲಿಗೆ ದೌಡು:ದೆಹಲಿಗೆ ಯಾರೂ ಬರುವುದು ಬೇಡವೆಂಬ ವರಿಷ್ಠರ ಸ್ಪಷ್ಟ ಸೂಚನೆ ನಡುವೆಯೂ ಕೆಲವರು ‘ಅನ್ಯ ಕೆಲಸದ ನಿಮಿತ್ತ’ ಮುಂದೆ ಮಾಡಿ ದೆಹಲಿಗೆ ದೌಡಾಯಿಸಿದ್ದಾರೆ. ಮಾಜಿ ಸಚಿವರಾದ ಆರ್.ಅಶೋಕ್, ಉಮೇಶ್ ಕತ್ತಿ, ಸಿ.ಪಿ. ಯೋಗೇಶ್ವರ್ ದೆಹಲಿಗೆ ತೆರಳಿದ್ದು, ಪ್ರಬಲ ಸಚಿವಾಕಾಂಕ್ಷಿಗಳು ಇದೇ ಹಾದಿ ಹಿಡಿಯುವ ಸಾಧ್ಯತೆಗಳಿವೆ. ಬೊಮ್ಮಾಯಿ ಸಂಪುಟಕ್ಕೆ ಸೇರಲು ಸಾಧ್ಯವಿರುವ ಎಲ್ಲ ಪಟ್ಟುಗಳನ್ನು ಪ್ರಯೋಗಿಸುತ್ತಿದ್ದು, ರಾಜ್ಯ ಮೂಲದ ದೆಹಲಿ ನಾಯಕರ ಕೃಪೆ ಗಿಟ್ಟಿಸಿಕೊಳ್ಳುವುದಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಹೊಸಬರ ಚಿತ್ತ:ಸಂಘ ಪರಿವಾರ ಮೂಲದ, ಪಕ್ಷ ನಿಷ್ಠ ಹೊಸಬರ ನಿರೀಕ್ಷೆ ಬೇರೆಯದು. ದೆಹಲಿ ನಾಯಕರ ತೀರ್ವನವೇ ಅಂತಿಮವೆಂದು ಗೊತ್ತು. ಆದರೂ ವರಿಷ್ಠರ ನಡೆಯತ್ತ ಈ ತಂಡ ಚಿತ್ತ ನೆಟ್ಟಿದೆ. ದಿನಗಳೆದಂತೆ ಸಚಿವಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದ್ದು, ಎಲ್ಲರನ್ನು ತೃಪ್ತಿಪಡಿಸಲಾಗದು. ಆದರೆ ಸಂಪುಟ ವಿಸ್ತರಣೆಗೆ ವಿಳಂಬ ಮಾಡಿದಷ್ಟು ಸರ್ಕಾರ ಮತ್ತು ಪಕ್ಷದ ಬಗ್ಗೆ ಜನರಿಗೆ ತಪು್ಪ ಸಂದೇಶ ಹೋಗಲಿದೆ ಎನ್ನುವುದು ಪಕ್ಷದ ಮುಖಂಡರು, ಕಾರ್ಯಕರ್ತರ ಆತಂಕವಾಗಿದೆ.
ಡಿಸಿಎಂ ಹುದ್ದೆ ಜಿಜ್ಞಾಸೆ:ಉಪ ಮುಖ್ಯಮಂತ್ರಿ ಹುದ್ದೆ ಸೃಜನೆ ಔಚಿತ್ಯದ ಕುರಿತು ಸಂಘ-ಪಕ್ಷದ ಚಿಂತಕರ ಚಾವಡಿ ಹಾಗೂ ಹಿರಿಯರ ಹಂತದಲ್ಲಿ ತೀವ್ರ ಜಿಜ್ಞಾಸೆ ನಡೆದಿರುವುದಾಗಿ ತಿಳಿದು ಬಂದಿದೆ. ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಜಾತಿ-ವರ್ಗವಾರು ಲೆಕ್ಕಾಚಾರದಂತೆ ಡಿಸಿಎಂ ಹುದ್ದೆ ಕಲ್ಪಿಸಿದರೆ ಉದ್ದೇಶ ಈಡೇರುವುದಿಲ್ಲ, ಮೂರ್ನಾಲ್ಕು ಡಿಸಿಎಂ ಹುದ್ದೆಗಳು ಅರ್ಥಹೀನವೆಂದು ರ್ತಸಲಾಗುತ್ತಿದೆ. ಡಿಸಿಎಂ ಹುದ್ದೆಗಳಿಂದ ಶಕ್ತಿ ಕೇಂದ್ರಗಳ ಸಂಖ್ಯೆ ಹೆಚ್ಚಾಗುತ್ತದೆ ಎಂಬ ವಾದವೂ ಇದೆ. ಸರ್ಕಾರ ಮತ್ತು ಪಕ್ಷದ ವರ್ಚಸ್ಸು ವೃದ್ಧಿ, ಮುಂಬರುವ ಚುನಾವಣೆಗಳ ದೃಷ್ಟಿಯಿಂದ ಡಿಸಿಎಂ ಹುದ್ದೆ ಸೃಷ್ಟಿ ಅನಿವಾರ್ಯ. ಅಲ್ಲದೆ, ಸೇವಾ ಹಿರಿತನ ಹಾಗೂ ಅನುಭವಕ್ಕೆ ತಕ್ಕ ಸ್ಥಾನಮಾನ ನೀಡಲಾಗಿದೆ ಎನ್ನುವ ಸಂದೇಶ ರವಾನೆಯಾಗುತ್ತದೆ ಎನ್ನುವ ವಾದವೂ ಮಂಡನೆಯಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಹಿರಿತನದ ಮೇಲೆ ಬೊಮ್ಮಾಯಿ ಸಂಪುಟ ಸೇರುವುದಿಲ್ಲವೆಂದು ಜಗದೀಶ ಶೆಟ್ಟರ್ ಬಿಟ್ಟಿರುವ ಬಾಣ ಅನೇಕ ಹಿರಿಯರು ಪತರಗುಟ್ಟುವಂತೆ ಮಾಡಿದೆ. ವರಿಷ್ಠರ ಸೂಚನೆ ಅಲ್ಲವೆಂದು ಶೆಟ್ಟರ್ ಹೇಳಿದ್ದರೂ ನಾಯಕರ ಇಚ್ಛೆ ಅರಿತ ರಾಜ್ಯ ನಾಯಕರಿಗೆ ಸಂದೇಶದ ಅರಿವಾಗಿದೆ. ಡಿಸಿಎಂ, ಸಚಿವ ಪದವಿ ಬಗ್ಗೆ ಈಶ್ವರಪ್ಪ ಹೇಳಿಕೆ, ಧಾವಂತ ಉಳಿದ ಹಿರಿಯರ ಮನಸ್ಥಿತಿಗೆ ಕೈಗನ್ನಡಿಯಾಗಿದೆ. ಸ್ವಯಂ ತ್ಯಾಗದ ಅಸ್ತ್ರ ಪ್ರಯೋಗಕ್ಕೆ ಹೈಕಮಾಂಡ್ ವೇದಿಕೆ ಸಜ್ಜುಗೊಳಿ ಸುತ್ತಿದ್ದು, 2006, 2008 ಹಾಗೂ ಬಿಎಸ್​ವೈ ಸಂಪುಟದಲ್ಲಿ ಸಚಿವರಾದವರಿಗೆ ಕೊಕ್ ನೀಡುವ ಸೂತ್ರ ರೂಪಿಸಿದ್ದಾರೆನ್ನಲಾಗಿದೆ.
ನೂತನ ಸಿಎಂ ಬಸವರಾಜ ಬೊಮ್ಮಾಯಿ ಸಂಪುಟ ರಚನೆ ಕಸರತ್ತಿನ ನಡುವೆಯೇ ವಿವಿಧ ನಿಗಮ- ಮಂಡಳಿಗಳನ್ನು ಪುನಾರಚಿಸುವ ಅಗ್ನಿಪರೀಕ್ಷೆಯನ್ನೂ ಎದುರಿಸಬೇಕಿದೆ. ಹೊಸದಾಗಿ ನೇಮಕ ಪ್ರಕ್ರಿಯೆ ನಡೆಸುವಂತೆ ವರಿಷ್ಠರು ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಿಎಸ್​ವೈ ಆಡಳಿತಾವಧಿಯಲ್ಲಿ ಕೆಲವು ನಿಗಮ- ಮಂಡಳಿಗಳಿಗೆ ನೇಮಕದ ಬಗ್ಗೆ ಅಪಸ್ವರ ಕೇಳಿ ಬಂದಿದ್ದವು. ಪಕ್ಷದ ಕೋರ್ ಕಮೀಟಿ ಸಭೆಗಳಲ್ಲಿ ಈ ವಿಚಾರ ಪದೇ ಪದೆ ಪ್ರಸ್ತಾಪವಾಗಿ ಬಿಸಿ ಚರ್ಚೆಗೂ ಕಾರಣವಾಗಿತ್ತು. ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಎಲ್ಲವನ್ನೂ ಸರಿಪಡಿಸುವ ಭರವಸೆ ನೀಡುವ ಮೂಲಕ ಸಮಾಧಾನಪಡಿಸಿದ್ದರು.
ರದ್ದು ಸವಾಲು:ಬಿಎಸ್​ವೈ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆಯೇ ಸಚಿವ ಸಂಪುಟ ವಿಸರ್ಜನೆಯಾಗಿದೆ. ಅದೇ ರೀತಿ ನಿಗಮ-ಮಂಡಳಿಗಳಿಗೆ ನೇಮಕವಾದವರು ರಾಜೀನಾಮೆ ನೀಡಬೇಕಾಗಿತ್ತು. ನೇಮಕ ಆದೇಶದಲ್ಲೇ ಮೂರು ವರ್ಷ ಅಥವಾ ಮುಂದಿನ ಆದೇಶದವರೆಗೆ ಎಂದಿರುತ್ತದೆ. ಸಿಎಂ ಬದಲಾವಣೆಯಾದರೂ ಯಾವೊಬ್ಬ ನಿಗಮ-ಮಂಡಳಿ ಅಧ್ಯಕ್ಷ, ಸದಸ್ಯರು ತಮ್ಮ ಸ್ಥಾನ ಬಿಟ್ಟು ಕೊಟ್ಟಿಲ್ಲ. ಸಿಎಂ ಬದಲಾಗಿದ್ದಾರೆಯೇ ಹೊರತು ಆಡಳಿತ ನಡೆಸುವ ಪಕ್ಷವಲ್ಲ ಎಂಬ ನಿಲುವು ತಳೆದಿದ್ದು, ಇದರಿಂದಾಗಿ ಎಲ್ಲ ನೇಮಕಗಳನ್ನು ರದ್ದುಪಡಿಸುವ ಸವಾಲು ಬೊಮ್ಮಾಯಿ ನಿಭಾಯಿಸಬೇಕಾಗಿದೆ.
ಸಮಪಾಲು ಸೂತ್ರ:ನಿಗಮ-ಮಂಡಳಿಗಳಲ್ಲಿ ಶಾಸಕರು ಹಾಗೂ ಪಕ್ಷದ ಕಾರ್ಯಕರ್ತರಿಗೆ ತಲಾ ಅರ್ಧ ಪಾಲು ಸೂತ್ರ ಜಾರಿಗೊಳಿಸಲೆಂದೇ ಹಿರಿಯ ನಾಯಕರು ಪುನಾರಚನೆ ಸಂದೇಶ ರವಾನಿಸಿದ್ದಾರೆ. ಮುಂಬರುವ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ ದೃಷ್ಟಿಯಿಂದ ಸಮ ಪ್ರಮಾಣದಲ್ಲಿ ರಾಜಕೀಯ ಅಧಿಕಾರ ಹಂಚಿಕೆ ತುರ್ತು ಅಗತ್ಯವಾಗಿದೆ. ನಿಗಮ-ಮಂಡಳಿ ಅಧ್ಯಕ್ಷ ಹುದ್ದೆಯಲ್ಲಿ ಎರಡು ಅಥವಾ ಒಂದು ವರ್ಷ ಕಳೆದವರು ತಮ್ಮ ಸ್ಥಾನ ತ್ಯಜಿಸಿ ಬೇರೆಯವರಿಗೆ ಅವಕಾಶ ಮಾಡಿಕೊಡಬೇಕಾಗಿದೆ. ಬಿಎಸ್​ವೈ ಪದವಿ ತ್ಯಜಿಸುವ ಕೆಲವೇ ದಿನಗಳ ಮೊದಲು ನಿಗಮಗಳಿಗೆ ನೇಮಕವಾದವರು ಸಂಕಟಕ್ಕೆ ಸಿಲುಕಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.
ಮೊದಲ ದೆಹಲಿ ಪ್ರವಾಸ ವರಿಷ್ಠರಿಗೆ ಧನ್ಯವಾದ ಸಲ್ಲಿಸುವುದಕ್ಕೆ ಸೀಮಿತವಾಗಿರುತ್ತದೆ. 3-4 ದಿನಗಳ ಬಳಿಕ ಮತ್ತೊಮ್ಮೆ ಭೇಟಿಗೆ ಕಾಲಾವಕಾಶ ಪಡೆದು ತೆರಳಿದ ವೇಳೆ ಸಚಿವ ಸಂಪುಟ ವಿಸ್ತರಣೆ ಕುರಿತಂತೆ ರ್ಚಚಿಸಿ, ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.
|ಬಸವರಾಜ ಬೊಮ್ಮಾಯಿಮುಖ್ಯಮಂತ್ರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − three =
Remember me
