ಬೆಂಗಳೂರು:‘ಅವರು ಕೊಡೆ ನಾ ಬಿಡೆ’ ಎಂಬ ಹಗ್ಗಜಗ್ಗಾಟದ ಮಧ್ಯೆ ಬಿಜೆಪಿ ಹೈಕಮಾಂಡ್ ಸಚಿವ ಸಂಪುಟ ವಿಸ್ತರಣೆಗೆ ಆಂಶಿಕ ಒಲವು ವ್ಯಕ್ತಪಡಿಸಿದೆ. ಹೀಗಾಗಿ ‘ಸಂಪುಟ ಚೌಕಾಸಿ’ ಇನ್ನಷ್ಟು ಬಿರುಸಾಗಿದ್ದು, ವರಿಷ್ಠರನ್ನು ಓಲೈಸಲೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಹೊಸ ಶಾಸಕರು ಒಂದು ಹೆಜ್ಜೆ ಹಿಂದೆ ಸರಿದಿದ್ದಾರೆ.
ಸಂಪುಟಕ್ಕೆ 16 ಮಂದಿ ಸೇರಿಸಿಕೊಂಡು ಬಿಜೆಪಿ ಸರ್ಕಾರ ಬರಲು ಕಾರಣರಾದವರ ಋಣ ಸಂದಾಯ ಮಾಡುವುದು ಬಿಎಸ್​ವೈ ಯೋಚನೆಯಾಗಿತ್ತು. ಒಟ್ಟಾಗಿ ಸಚಿವ ಸಂಪುಟ ಸೇರುವುದು ‘ತ್ಯಾಗ’ ಮಾಡಿದವರ ಉಮೇದಿಯಾಗಿತ್ತು. ಉಪಚುನಾವಣೆ ಫಲಿತಾಂಶ ಪ್ರಕಟವಾಗಿ 24 ತಾಸಲ್ಲ, ತಿಂಗಳು ಕಳೆದರೂ ವರಿಷ್ಠರು ಒಂದು ಹೆಜ್ಜೆ ಆಚೀಚೆ ಸರಿಯಲಿಲ್ಲ. ಕಾದು ಬೇಸತ್ತ ‘ಅರ್ಹರು’ ಒತ್ತಡ ಹೇರಲಾರಂಭಿಸಿದರು. ಕೊಟ್ಟ ಮಾತಿನಂತೆ ನಡೆದುಕೊಳ್ಳದಿದ್ದರೆ ಪಕ್ಷ, ಸರ್ಕಾರದ ಬಗ್ಗೆ ತಪು್ಪ ಸಂದೇಶ ರವಾನೆಯಾಗುತ್ತದೆ ಎಂದು ವರಿಷ್ಠರಲ್ಲಿ ಬಿಎಸ್​ವೈ ಪರಿ ಪರಿಯಾಗಿ ನಿವೇದಿಸಿಕೊಂಡರು.
ಅಳೆದು ಸುರಿದು ವಿಸ್ತರಣೆಗೆ ಒಲವು ವ್ಯಕ್ತಪಡಿಸಿದ ವರಿಷ್ಠರು, ‘ಅರ್ಹ’ರ ಪೈಕಿ ಆರು ಜನರಿಗೆ ಮಾತ್ರ ಅವಕಾಶ ಕಲ್ಪಿಸುವ ಸಂದೇಶ ರವಾನಿಸಿದರು. ಪಕ್ಷದವರಿಗೂ ಅವಕಾಶ ಕೊಡದಿದ್ದರೆ ಸಂಘಟನೆಗೆ ಪೆಟ್ಟು ಬೀಳುತ್ತದೆಂಬ ಕಾರಣಕ್ಕೆ ಹೈಕಮಾಂಡ್ ಈ ನಿಲುವು ತಳೆದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ದೆಹಲಿ ಚುನಾವಣೆಗೆ ಮುಂಚೆ ವರಿಷ್ಠರ ಸಕಾರಾತ್ಮಕ ಸ್ಪಂದನೆ ಲಾಭ ಪಡೆಯಲೆಂದು ಹೊಸಬರ ಪೈಕಿ 9 ಶಾಸಕರಿಗೆ ಸಚಿವ ಸ್ಥಾನ ಕೊಡುವುದು. ಜೂನ್​ನಲ್ಲಿ ಸಂಪುಟ ಪುನಾರಚಿಸಿ ಆಗ ‘ತ್ಯಾಗ’ ಮಾಡಿದ ಎಲ್ಲರಿಗೂ ಪ್ರಾತಿನಿಧ್ಯ ನೀಡಲು ಬಿಎಸ್​ವೈ ಯೋಚಿಸಿದ್ದಾರೆ.
ಬಿಗಿಪಟ್ಟು ಸಡಿಲ: ಉಪ ಚುನಾವಣೆಯಲ್ಲಿ ಗೆದ್ದವರಿಗೆ ಮೊದಲು ಅವಕಾಶ, ನಂತರ ಉಳಿದವರದ್ದು ಎನ್ನುವ ಮೂಲಕ ಹೊಸ ಶಾಸಕರು ಬಿಗಿಪಟ್ಟು ಸಡಿಲಿಸಿದ್ದಾರೆ. ಹೀಗಾಗಿಯೇ ವರಿಷ್ಠರು ಒಪು್ಪವ ಆಶಾಭಾವನೆ ಇಟ್ಟುಕೊಂಡು 9 ಹೊಸಬರು, 7 ಪಕ್ಷದ ಶಾಸಕರಿಗೆ ಸಚಿವ ಸ್ಥಾನ ಕಲ್ಪಿಸುವ ಸೂತ್ರ ಮಂಡಿಸಿದ್ದಾರೆ. ಈ ಮಧ್ಯೆ, ನಿಗಮ-ಮಂಡಳಿ ಸ್ಥಾನಕ್ಕೆ ಉಳಿದ ಇಬ್ಬರನ್ನು ಒಪ್ಪಿಸುವುದು, ಸ್ಪರ್ಧೆ ವಂಚಿತ ಆರ್.ಶಂಕರ್ ಹಾಗೂ ಸೋತ ಎಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ತಗಾದೆ ಇತ್ಯರ್ಥ ವಾಗಬೇಕಿದೆ.
ಹೀಗಾಗಿ ವಿಸ್ತರಣೆಗೆ ಹೈಕಮಾಂಡ್ ಅಸ್ತು ಎಂದರೂ ಮತ್ತೊಂದು ಸವಾಲು ಸಿಎಂಗೆ ಎದುರಾಗುತ್ತದೆ ಎನ್ನುತ್ತವೆ ಮೂಲಗಳು. ಮುಂದಾಲೋಚನೆಯ ಹಿಡಿತ: ಉಪಚುನಾವಣೆಯಲ್ಲಿ ಗೆದ್ದವರ ಪೈಕಿ ಕೆಲವರನ್ನು ಕೈಬಿಡಲು ಒಪ್ಪಿದರೆ ಮುಂದೆಯೂ ಸಚಿವ ಸ್ಥಾನ ಸಿಗುವುದಿಲ್ಲ ಎನ್ನುವುದು ‘ತ್ಯಾಗ’ ಮಾಡಿದವರ ಪೈಕಿ ಕೆಲವರ ಅಳುಕು. ಈ ಕಾರಣಕ್ಕೆ ಜೂನ್​ನಲ್ಲಿ ಪರಿಷತ್ ಸದಸ್ಯರನ್ನಾಗಿ ಮಾಡಿ ಸಂಪುಟಕ್ಕೆ ಸೇರಿಸಿಕೊಳ್ಳಲೆಂಬ ಮುಂದಾ ಲೋಚನೆಯಿಂದ ಸೋತವರು ಬಿಗಿ ಹಿಡಿದಿದ್ದಾರೆ ಎಂದು ಹೇಳಲಾಗುತ್ತಿದೆ.
ಕೊನೆವರೆಗೂ ಪ್ರಯತ್ನ
ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾದ ಎಲ್ಲರಿಗೂ ಸಚಿವ ಸ್ಥಾನ ನೀಡುವುದಾಗಿ ಬಿಎಸ್​ವೈ ಭರವಸೆ ನೀಡಿದ್ದರು. ಇದೀಗ ವರಿಷ್ಠರಿಗೆ ಆ ಭರವಸೆಯನ್ನು ಮನವರಿಕೆ ಮಾಡಿಕೊಟ್ಟು, ಕೊಟ್ಟ ಮಾತು ಉಳಿಸಿಕೊಳ್ಳಲು ಮುಖ್ಯಮಂತ್ರಿ ಪ್ರಯತ್ನ ನಿರತರಾಗಿದ್ದಾರೆ. ಪ್ರಸ್ತುತ 11 ಅರ್ಹ ಶಾಸಕರಿಗೆ ಸಚಿವ ಸ್ಥಾನ, ನಂತರ ಆರ್.ಶಂಕರ್, ಮುನಿರತ್ನ, ಪ್ರತಾಪ್​ಗೌಡ ಪಾಟೀಲ್, ಎಚ್.ವಿಶ್ವನಾಥ್, ಎಂಟಿಬಿ ನಾಗರಾಜ್​ಗೆ ಅವಕಾಶ ಕೊಡಿಸಲೇಬೇಕೆಂಬ ಹಠ ಹಿಡಿದಿದ್ದಾರೆ. ಎಂಟಿಬಿ ಸಚಿವ ಸ್ಥಾನ ಇದ್ದರೂ ಬಿಟ್ಟುಬಂದು ಶಾಸಕ ಸ್ಥಾನ ಕಳೆದುಕೊಂಡಿದ್ದಾರೆ, ವಿಶ್ವನಾಥ್ ಪಕ್ಷದ ಅಧ್ಯಕ್ಷ ಸ್ಥಾನ ತ್ಯಜಿಸಿ ಇಲ್ಲಿ ಬಂದು ಅತಂತ್ರರಾಗಿದ್ದಾರೆ. ಹೀಗಾಗಿ ಅವರಿಗೆ ನೆಲೆ ಕಲ್ಪಿಸುವುದು ನಮ್ಮ ಧರ್ಮ ಎಂದು ಈಗಾಗಲೇ ಬಿಎಸ್​ವೈ ವರಿಷ್ಠರಿಗೆ ವಿವರಿಸಿದ್ದಾರೆ.
ಅವಕಾಶ ತಪ್ಪಿದ್ದಕ್ಕೆ ಸಿದ್ದರಾಮಯ್ಯಗೆ ತೃಪ್ತಿ?
ಸಂಪುಟ ವಿಸ್ತರಣೆ ವೇಳೆ ಎಚ್.ವಿಶ್ವನಾಥ್ ಮತ್ತು ಎಂ.ಟಿ.ಬಿ.ನಾಗರಾಜ್​ಗೆ ಅವಕಾಶ ಸಿಗದಿರುವ ಬಗ್ಗೆ ಸಿದ್ದರಾಮಯ್ಯ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಪಕ್ಷದ್ರೋಹಿಗಳಿಗೆ ಸರಿಯಾದ ಪಾಠ ಆಗಿದೆ. ನಂಬಿದವರಿಗೆ ದ್ರೋಹ ಮಾಡಿದವರಿಗೆ ಇದೇ ಶಿಕ್ಷೆ ಆಗಬೇಕು ಎಂದಿದ್ದಾರೆ. ವಾಸ್ತವವಾಗಿ ಕುರುಬ ಸಮಾಜಕ್ಕೆ ಸೇರಿದ ವಿಶ್ವನಾಥ್ ಮತ್ತು ಎಂಟಿಬಿ ಮೈತ್ರಿ ಸರ್ಕಾರ ಪತನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಜತೆಗೆ ಉಪಚುನಾವಣೆ ವೇಳೆ ಸಿದ್ದರಾಮಯ್ಯ ವಿರುದ್ಧ ಆರೋಪಗಳ ಮಳೆಗರೆದಿದ್ದರು. ಕುರುಬ ಸಮಾಜದ ಬೇರೆಯವರು ಬೆಳೆಯಬಾರದೇ? ಮಂತ್ರಿಗಳಾಗಬಾರದೇ ಎಂದೆಲ್ಲ ಪ್ರಶ್ನೆ ಹಾಕಿದ್ದರು. ಇದೀಗ ಅವರಿಗೆ ಯಡಿಯೂರಪ್ಪ ಸರ್ಕಾರದಲ್ಲಿ ಅವಕಾಶ ಸಿಗುತ್ತಿಲ್ಲ ಎಂಬ ಮಾತು ಹರಿದಾಡುತ್ತಿರುವಾಗಲೇ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ ಗಮನ ಸೆಳೆದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − seven =
Remember me
