|ರುದ್ರಣ್ಣ ಹರ್ತಿಕೋಟೆಬೆಂಗಳೂರು
ಬೆಂಗಳೂರು:ರಾಜ್ಯ ಬಿಜೆಪಿ, ಸರ್ಕಾರದ ಮಟ್ಟದಲ್ಲಿ ಒಂದಷ್ಟು ಬದಲಾವಣೆ- ಬೆಳವಣಿಗೆ ಆಗಲಿದೆ ಎಂಬ ಬಹುದಿನಗಳ ಚರ್ಚೆಗೆ ಈ ತಿಂಗಳ ಕೊನೆಯ ವೇಳೆಗೆ ಸ್ಪಷ್ಟತೆ ಸಿಗುವ ನಿರೀಕ್ಷೆ ಇದೆ. ಮೊದಲು ಸರ್ಕಾರ, ಆನಂತರ ಪಕ್ಷದಲ್ಲಿ ಸರ್ಜರಿ ನಡೆಯುವುದು ಖಚಿತವಾಗಿದೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ನೇತೃತ್ವದಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿ ಹಾಗೂ ಕೋರ್ ಕಮಿಟಿ ಸಭೆಯಲ್ಲಿ ಸಂಪುಟ ವಿಸ್ತರಣೆ, ಪುನಾರಚನೆ ಹಾಗೂ ಪಕ್ಷ ಮತ್ತು ಸರ್ಕಾರದಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಚರ್ಚೆಯಾಗಿಲ್ಲ. ಆದರೆ ಈ ತಿಂಗಳ ಕೊನೆಯ ವೇಳೆಗೆ ಸ್ಪಷ್ಟತೆ ನೀಡುವುದಾಗಿ ನಡ್ಡಾ ಸೂಚ್ಯವಾಗಿ ಹೇಳುವ ಮೂಲಕ ಕುತೂಹಲ ಉಳಿಸಿದ್ದಾರೆ. ಬಿಜೆಪಿ ಆಡಳಿತದ ಯಾವುದೇ ರಾಜ್ಯದ ವಿಚಾರದಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಬೇಕಾದರೆ ಸಂಘ, ಪಕ್ಷದ ಪ್ರಮುಖರ ಸಭೆ ನಡೆಯ ಬೇಕು. ಆಯಾ ರಾಜ್ಯದ ಸಂಘದ ಮುಖಂಡರಿಂದಲೂ ಮಾಹಿತಿ ಪಡೆದುಕೊಳ್ಳಬೇಕು. ಈ ಪ್ರಕ್ರಿಯೆ ರಾಜ್ಯ ಕಾರ್ಯಕಾರಿಣಿ ಸಭೆಗೂ ಮುನ್ನವೇ ನಡೆಯಬೇಕಾಗಿತ್ತು. ಕಾರಣಾಂತರದಿಂದ ಆ ಸಭೆ ನಡೆದಿಲ್ಲ. ನಡ್ಡಾ ದೆಹಲಿಗೆ ವಾಪಸಾದ ನಂತರ ಯಾವುದೇ ಸಂದರ್ಭದಲ್ಲಿ ಸಭೆ ನಡೆಯಬಹುದಾಗಿದ್ದು, ಅಲ್ಲಿ ರಾಜ್ಯ ರಾಜಕಾರಣದ ಬಗ್ಗೆ ಸ್ಪಷ್ಟತೆ ಮೂಡಲಿದೆ.
ಸರ್ಕಾರದಲ್ಲಿ ಏನು ಬದಲಾವಣೆ:ಮಾಸಾಂತ್ಯದೊಳಗೆ ಸರ್ಕಾರದಲ್ಲಿ ಸರ್ಜರಿ ನಡೆಯಲಿದೆ. ಇದರ ಸ್ವರೂಪವನ್ನು ಸಂಘ ಮತ್ತು ಪಕ್ಷದ ವರಿಷ್ಠರ ನಡುವಿನ ಸಭೆ ನಿರ್ಧಾರ ಮಾಡುತ್ತದೆ. ರಾಜ್ಯದಿಂದ ಹೋಗುವ ವರದಿ ಯಾವ ಪ್ರಮಾಣದಲ್ಲಿ ಸರ್ಜರಿಗೆ ಸೂಚನೆ ನೀಡುತ್ತದೆಯೋ ಅದರಂತೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ.
ಮೂರು ರೀತಿಯಲ್ಲಿ ಯಾವುದಾದರೂ ಒಂದರಂತೆ ಬದಲಾವಣೆಯಾಗುತ್ತದೆ. ಸರ್ಕಾರದ ನಾಯಕತ್ವದಿಂದ ಹಿಡಿದು ಸಮಗ್ರ ಬದಲಾವಣೆ, ಖಾಲಿ ಇರುವ ಐದು ಸ್ಥಾನಗಳ ಭರ್ತಿ ಅಥವಾ ನಾಯಕತ್ವ ಉಳಿಸಿಕೊಂಡು ಸಂಪುಟ ಪುನಾರಚನೆ ಮಾಡುವುದು ವರಿಷ್ಠರ ಮುಂದಿರುವ ಚಿಂತನೆ. ಈ ಬಗ್ಗೆ ಸಂಘ ಹಾಗೂ ಪಕ್ಷದ ಮುಖಂಡರ ಸಭೆ ಅಂತಿಮ ನಿರ್ಧಾರ ಮಾಡುತ್ತದೆ. ಆ ಸಭೆಯ ನಂತರ ಮುಖ್ಯಮಂತ್ರಿಯನ್ನು ಕರೆದು ತಿಳಿಸಲಾಗುತ್ತದೆ. ಸದ್ಯಕ್ಕಂತೂ ಸಂಪುಟ ಪುನಾರಚನೆ ಕುರಿತು ಯಾವುದೇ ಸ್ಪಷ್ಟತೆ ಇಲ್ಲ. ಏಕೆಂದರೆ ನಡ್ಡಾ ಯಾರಿಗೂ ಯಾವುದೇ ರೀತಿಯ ಭರವಸೆಯನ್ನೇನೂ ಕೊಟ್ಟಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ. ಏಪ್ರಿಲ್ ತಿಂಗಳಿನೊಳಗೆ ಯಾವುದೇ ಬದಲಾವಣೆ ಕುರಿತು ಯಾವುದೇ ತೀರ್ವನವಾಗದಿದ್ದಲ್ಲಿ ಯಥಾಸ್ಥಿತಿ ಮುಂದುವರಿಯಲಿದೆ. ಆದರೆ ಆ ಸಾಧ್ಯತೆ ತೀರಾ ಕಡಿಮೆ.
ಪಕ್ಷಕ್ಕೆ ಜುಲೈ ನಂತರ ಸರ್ಜರಿ:ಸರ್ಕಾರದಲ್ಲಿನ ಸ್ವಚ್ಛತೆಗೆ ಏಪ್ರಿಲ್ ಅಂತ್ಯದೊಳಗೆ ತೀರ್ವನವಾದರೆ, ಪಕ್ಷದಲ್ಲಿನ ಸರ್ಜರಿ ಜುಲೈನಲ್ಲಿ ನಡೆಯಲಿದೆ. ಹಾಲಿ ಅಧ್ಯಕ್ಷರ ಅವಧಿ ಮುಕ್ತಾಯವಾದ ನಂತರ ಬದಲಾವಣೆ ಮಾಡಲಾಗುತ್ತದೆ. ಅಧ್ಯಕ್ಷರನ್ನು ಅವಧಿಗೆ ಮೊದಲೇ ಬದಲಾವಣೆ ಮಾಡಿರುವ ಉದಾಹರಣೆ ಬಿಜೆಪಿಯಲ್ಲಿ ಇಲ್ಲ. ಆದ್ದರಿಂದ ಜುಲೈ ಅಂತ್ಯದಲ್ಲಿ ಪಕ್ಷದ ನಾಯಕತ್ವಕ್ಕೆ ಹೊಸಬರು ಬರಲಿದ್ದಾರೆ. ಹಲವರು ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.
ಜಾತಿ ಸಮೀಕರಣ:ಒಕ್ಕಲಿಗರು ಬಿಜೆಪಿ ಜತೆಗಿಲ್ಲ ಎಂಬುದು ಪಕ್ಷದ ವರಿಷ್ಠರನ್ನು ಬಹಳವಾಗಿ ಕಾಡುತ್ತಿದೆ. ಆದ್ದರಿಂದ ಒಕ್ಕಲಿಗರ ಮತಬುಟ್ಟಿಗೆ ಕೈ ಹಾಕಲು ನಿರ್ಧರಿಸಿದ್ದಾರೆ. ಲಿಂಗಾಯತರ ಜತೆಗೆ ಒಕ್ಕಲಿಗರ ಮತಗಳನ್ನು ಸೆಳೆಯುವ ಉದ್ದೇಶದಿಂದ ಸರ್ಕಾರದ ನಾಯಕತ್ವ ಲಿಂಗಾಯತರಿಗೆ ಹಾಗೂ ಪಕ್ಷದ ನಾಯಕತ್ವಕ್ಕೆ ಒಕ್ಕಲಿಗರನ್ನು ತರಲಾಗುತ್ತದೆ. ಆ ಕಾಂಬಿನೇಷನ್ ಮೂಲಕವೇ ಚುನಾವಣೆ ಎದುರಿಸಲಾಗುತ್ತದೆ. ಎರಡು ಪ್ರಮುಖ ಜಾತಿಗಳ ಜತೆಗೆ ಸಮೀಕರಣ ಮಾಡಲಾಗುತ್ತದೆ ಎಂದು ಮೂಲಗಳು ಖಚಿತಪಡಿಸಿವೆ.
ಸರ್ಜರಿ ಹೇಗೆ?:ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ವಂತ ಬಲದ ಮೇಲೆ ಸರ್ಕಾರ ರಚನೆ ಮಾಡುವುದು ವರಿಷ್ಠರ ಉದ್ದೇಶವಾಗಿದೆ. ಹೀಗಾಗಿ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಸರ್ಕಾರ ಹಾಗೂ ಪಕ್ಷಕ್ಕೆ ತಕ್ಷಣ ಸರ್ಜರಿ ಮಾಡುವ ಉದ್ದೇಶ ಹೊಂದಿದ್ದಾರೆ. ಸರ್ಕಾರದಲ್ಲಿ ಮೊದಲು ಸರ್ಜರಿಯಾದರೆ, ನಂತರ ಪಕ್ಷದಲ್ಲಿ ಬದಲಾವಣೆ ಮಾಡಲಾಗುತ್ತದೆ ಎಂದು ಬಿಜೆಪಿಯ ಉನ್ನತ ಮೂಲಗಳು ಖಚಿತಪಡಿಸಿವೆ. ಪಕ್ಷ ಹಾಗೂ ಸರ್ಕಾರದಲ್ಲಿ ಸ್ವಚ್ಛತೆಗೆ ವರಿಷ್ಠರು ಆದ್ಯತೆ ನೀಡುತ್ತಿರುವುದರಿಂದ ಎಲ್ಲರ ಎದೆಯಲ್ಲಿಯೂ ನಡುಕ ಆರಂಭವಾಗಿದೆ.
ಚಾಟಿ ಬೀಸಿದ ವರಿಷ್ಠರು..:ಸರ್ಕಾರ ಹಾಗೂ ಪಕ್ಷಮುನ್ನಡೆಸುವವರಿಗೆ ವರಿಷ್ಠರು ಚಾಟಿ ಬೀಸಿದ್ದಾರೆ. ಸರ್ಕಾರದ ವಿರುದ್ಧ ಕೇಳಿ ಬರುತ್ತಿರುವ ಭ್ರಷ್ಟಾಚಾರ ಆರೋಪ, ಪರ್ಸೆಂಟೇಜ್ ದೂರು, ನಿರೀಕ್ಷಿತ ಪ್ರಮಾಣದಲ್ಲಿ ಆಗದಿರುವ ಪಕ್ಷದ ಸಂಘಟನೆ, ಪಕ್ಷ ಹಾಗೂ ಸರ್ಕಾರದ ಇಮೇಜ್ ಕುಸಿತವಾಗುತ್ತಿರುವ ಬಗ್ಗೆ ವರಿಷ್ಠರು ತಲೆ ಕೆಡಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ವರಿಷ್ಠರೇ ಸರ್ಕಾರ ಹಾಗೂ ಪಕ್ಷವನ್ನು ಚುನಾವಣೆಯಲ್ಲಿ ಮುನ್ನಡೆಸುವುದಾಗಿ ಸೂಚ್ಯವಾಗಿ ತಿಳಿಸಿರುವುದು ರಾಜ್ಯ ನಾಯಕರಲ್ಲಿ ಆತಂಕ ಮೂಡಿಸಿದೆ.
ಬೆಂಗಳೂರು:ರಾಜ್ಯ ಸಂಪುಟ ಸರ್ಜರಿ ಸಂಬಂಧ ಪಕ್ಷದ ವರಿಷ್ಠರ ಜತೆ ಚರ್ಚೆ ನಡೆದಿರುವ ಅಂಶವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಹಿರಂಗಪಡಿಸಿದ್ದಾರೆ. ದೆಹಲಿಯಲ್ಲಿ ಈ ಬಗ್ಗೆ ನಡೆಯುವ ಸಭೆಯ ಕುರಿತೂ ಸ್ಪಷ್ಟಪಡಿಸಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ನವದೆಹಲಿಯಲ್ಲಿ ಕರ್ನಾಟಕದ ಬಗ್ಗೆ ವಿಶೇಷ ಸಭೆ ಕರೆಯುವುದಾಗಿ ತಿಳಿಸಿದ್ದಾರೆ. ಸಭೆಯ ನಂತರ ದೆಹಲಿಗೆ ಬರುವಂತೆ ಅವರು ತಿಳಿಸಿದ್ದಾರೆ ಎಂದು ಸಿಎಂ ಹೇಳಿದರು. ಸಂಪುಟ ವಿಸ್ತರಣೆಯೋ ಅಥವಾ ಪುನರ್ ರಚನೆಯೋ ಎಂಬ ಪತ್ರಕರ್ತರ ಪ್ರಶ್ನೆಗೆ, ಈ ವಿಚಾರ ಅಲ್ಲಿಯೇ ತೀರ್ವನವಾಗಲಿದೆ ಎಂದರು. ಹುಬ್ಬಳ್ಳಿ ಘಟನೆಗೆ ಸಂಬಂಧಿಸಿದ ಎಲ್ಲರನ್ನೂ ಬಂಧಿಸ ಲಾಗಿದೆ. ಅದರ ಹಿಂದಿರುವ ನಾಯಕರ ತನಿಖೆಯಾಗಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದೆಂದು ತಿಳಿಸಿದರು.
ಕರ್ನಾಟಕದಲ್ಲಿ ಯುಪಿ ಮಾಡೆಲ್​; ರಾಜ್ಯದ 50 ವಿಧಾನಸಭಾ ಕ್ಷೇತ್ರಗಳಲ್ಲಿ ಸಂತರ ಸ್ಪರ್ಧೆ..
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 + twenty =
Remember me
