ಸರ್ಕಾರಿ ಸೇವೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ನಿವೃತ್ತಿ ಬಳಿಕವೂ ಉಚಿತ ಆರೋಗ್ಯ ಸೇವೆ ಮೂಲಕ ಜನಾನುರಾಗಿಯಾದವರು ಹುಬ್ಬಳ್ಳಿಯ ಡಾ. ವಿ.ಡಿ. ಕರ್ಪೂರಮಠ. ಧಾರವಾಡ ಜಿಲ್ಲಾ ಸರ್ಜನ್ ಆಗಿ ನಿವೃತ್ತಿ ನಂತರವೂ ಜನರ ನಡುವೆ ಇದ್ದು ಸಾರ್ವಜನಿಕರ ಆರೋಗ್ಯ ಕಾಳಜಿ ಮಾಡುತ್ತಿರುವ ಇವರು, 80ರ ಹರೆಯದಲ್ಲೂ ಪಾದರಸದಂತೆ ಓಡಾಡಿ ರಕ್ತದಾನ, ಉಚಿತ ಆರೋಗ್ಯ ಸಲಹಾ ಶಿಬಿರಗಳನ್ನು ಆಯೋಜಿಸುತ್ತಿದ್ದಾರೆ. ಇವರ ಈ ಸೇವಾ ಕಾರ್ಯಕ್ಕೆ ಕ್ಯಾಡ್​ಬರಿ ಡೈರಿ ಮಿಲ್ಕ್ ಧನ್ಯವಾದ ಅರ್ಪಿಸುತ್ತದೆ.
ಧಾರವಾಡ, ಗದಗ, ಹಾವೇರಿ ಸೇರಿ ಹಲವು ಜಿಲ್ಲೆಗಳಲ್ಲಿ ರಕ್ತದಾನ ಶಿಬಿರಗಳು, ಸಾರ್ವಜನಿಕ ಆರೋಗ್ಯ ಕಾಳಜಿ ಕುರಿತ ವಿಚಾರಗಳಲ್ಲಿ ಮೊದಲು ನೆನಪಾಗುವ ಹೆಸರೇ ಡಾ. ವಿ.ಡಿ. ಕರ್ಪರಮಠ. ಧಾರವಾಡದಲ್ಲಿ ಜಿಲ್ಲಾ ಸರ್ಜನ್ ಆಗಿ ನಿವೃತ್ತಿ ಹೊಂದಿದ ನಂತರ ನಿರಂತರವಾಗಿ 22 ವರ್ಷಗಳಿಂದ ಸಾರ್ವಜನಿಕ ಸೇವೆಗೆ ತಮ್ಮ ಬದುಕು ಮುಡಿಪಾಗಿಟ್ಟಿರುವ ಇವರು, 80ರ ಹರೆಯದಲ್ಲೂ ಪಾದರಸದಂತೆ ಓಡಾಡಿಕೊಂಡು ಜನಸೇವೆಗೆ ಹಾತೊರೆಯುತ್ತಿದ್ದಾರೆ.
ವೈದ್ಯಕೀಯ ಲೋಕದಲ್ಲಿ, ಅದರಲ್ಲೂ ಸರ್ಕಾರಿ ಸೇವೆ ಮುಗಿದ ನಂತರ ಖಾಸಗಿಯಾಗಿ ದುಡ್ಡು ಮಾಡಲು ಹವಣಿಸುವ ಅನೇಕ ವೈದ್ಯರ ನಡುವೆ ಇವರದು ತೀರಾ ವಿಭಿನ್ನ ವ್ಯಕ್ತಿತ್ವ. ಕಲಿತ ವಿದ್ಯೆಯನ್ನು ಸಾರ್ವಜನಿಕ ಆರೋಗ್ಯ ಸೇವೆಗೆ ಮೀಸಲಿಟ್ಟಿರುವ ಡಾ. ಕರ್ಪರಮಠ ಮೂಲತಃ ವಿಜಯಪುರ ಜಿಲ್ಲೆಯವರು. ಸದ್ಯ ಹುಬ್ಬಳ್ಳಿಯ ನವನಗರದಲ್ಲಿ ನೆಲೆಸಿದ್ದಾರೆ. ಸಾವಿರಾರು ರಕ್ತದಾನ ಶಿಬಿರ ಆಯೋಜಿಸುವ ಮೂಲಕ ಒಂದು ಲಕ್ಷಕ್ಕೂ ಅಧಿಕ ಯೂನಿಟ್ ರಕ್ತ ಸಂಗ್ರಹ ಮಾಡಿದ್ದಾರೆ. ಆ ಮೂಲಕ 3 ಲಕ್ಷ ಜನರಿಗೆ ಜೀವದಾನ ಮಾಡಿದ್ದಾರೆ. ಧಾರವಾಡ ಜಿಲ್ಲೆಯ ಬಹುತೇಕ ಎಲ್ಲ ರಕ್ತ ಭಂಡಾರಗಳೊಂದಿಗೆ ಕೆಲಸ ಮಾಡಿದ್ದಾರೆ. ರೋಟರಿ, ಲಯನ್ಸ್ ಸೇರಿ ಅನೇಕ ಸಂಘ- ಸಂಸ್ಥೆಗಳ ಸಹಕಾರದೊಂದಿಗೆ ನೂರಾರು ಸಾಮಾಜಿಕ ಸೇವಾ ಕಾರ್ಯ ಕೈಗೊಂಡಿದ್ದಾರೆ. ಕಾರ್ಗಿಲ್ ಯುದ್ಧ ಸಂದರ್ಭದಲ್ಲೂ ಸೇನೆಗಾಗಿ ರಕ್ತದಾನ ಶಿಬಿರ ನಡೆಸಿದ ಖ್ಯಾತಿ ಇವರದು.
ಇನ್ನು ಸಾರ್ವಜನಿಕ ಆರೋಗ್ಯ ಕಾಪಾಡುವ ದಿಸೆಯಲ್ಲಿ ಇವರ ಕಾರ್ಯಗಳು ಈಗಲೂ ಮುಂದುವರಿದಿವೆ. ಉಚಿತ ಆರೋಗ್ಯ ಶಿಬಿರಗಳ ಮೂಲಕ ಒಂದು ಲಕ್ಷ ಜನರ ಆರೋಗ್ಯ ತಪಾಸಣೆ ಮಾಡಿದ್ದಾರೆ. ಮಹಿಳೆಯರ ಆರೋಗ್ಯ ರಕ್ಷಣೆಯಲ್ಲಿ ಇವರ ಕಾಳಜಿ ಅಪಾರ. ಗರ್ಭಿಣಿಯರ ಆಹಾರ ಪದ್ಧತಿ, ಹೆರಿಗೆ ನಂತರ ಮಹಿಳೆಯರ ಆರೋಗ್ಯ ಸುಧಾರಣೆಗೆ ಇವರು ಉಚಿತ ಸಲಹೆ, ಚಿಕಿತ್ಸೆ ನೀಡುತ್ತ ಬಂದಿದ್ದಾರೆ. ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಯುವಕರಿಗೆ ಜಾಗೃತಿ ಮೂಡಿಸಿದ್ದಾರೆ. ಶಾಲೆ, ಕಾಲೇಜುಗಳಲ್ಲಿ ಉಪನ್ಯಾಸ ನೀಡಿದ್ದಾರೆ. ಎಚ್​ಐವಿ, ಕ್ಯಾನ್ಸರ್ ಪೀಡಿತರಿಗೂ ಇವರ ಸೇವೆ ತಲುಪಿದೆ. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ತಜ್ಞ ವೈದ್ಯರ ತಂಡದೊಂದಿಗೆ ಆರೋಗ್ಯ ಶಿಬಿರ ಏರ್ಪಡಿಸಿ ಜನರಿಗೆ ಸ್ವಚ್ಛತೆ, ಆರೋಗ್ಯ ರಕ್ಷಣೆ ಬಗ್ಗೆ ತಿಳಿವಳಿಕೆ ನೀಡಿದ್ದಾರೆ. ಅಂಗವಿಕಲರಿಗಾಗಿಯೂ ಇವರು ಹಲವು ಶಿಬಿರ ಮಾಡಿದ್ದಾರೆ. ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರೋಟರಿ ಜೊತೆಗೂಡಿ ಅನೇಕ ಸೇವಾ ಕಾರ್ಯ ಕೈಗೊಂಡಿದ್ದಾರೆ.
ಗಂಡು- ಹೆಣ್ಣು ಲಿಂಗ ತಾರತಮ್ಯ ಹಾಗೂ ಜನರಲ್ಲಿ ಇದ್ದ ತಪು್ಪ ತಿಳಿವಳಿಕೆ ಹೋಗಲಾಡಿಸುವ ಕೆಲಸ ಮಾಡಿದ್ದಾರೆ. ಕುಸುಮರೋಗಿಗಳ ನೆರವಿಗಾಗಿ ಡಾ. ಎಸ್.ಪಿ. ಬಾಲಸುಬ್ರಮಣ್ಯಂ ಅವರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಿ ದೇಣಿಗೆ ಸಂಗ್ರಹಿಸಿದ್ದಾರೆ. ಸರ್ಕಾರದಿಂದ ರೋಗಿಗಳಿಗೆ ಔಷಧಿ ವಿತರಣೆಗೂ ಶ್ರಮಿಸಿದ್ದಾರೆ. ಕರ್ಪರಮಠ ಅವರಿಂದ ಉಚಿತವಾಗಿ ಚಿಕಿತ್ಸೆ ಪಡೆದು ಕಾಯಿಲೆಗಳಿಂದ ಗುಣಮುಖರಾದ ರೋಗಿಗಳು ಈ ಡಾಕ್ಟರ್ ನಮ್ಮ ಪಾಲಿನ ದೇವರು ಎಂದು ಕೃತಜ್ಞತೆ ವ್ಯಕ್ತಪಡಿಸುತ್ತಾರೆ. ಇವರ ಮಾತೃಹೃದಯದ ಸೇವಾಮನೋಭಾವ ಬಾಯಿಂದ ಬಾಯಿಗೆ ಪ್ರಚಾರವಾಗಿ ಜನ ಇವರನ್ನೇ ಹುಡುಕಿಕೊಂಡು ಬಂದು ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಕೃತಿ ವಿಕೋಪ ಸಂಭವಿಸಿದಾಗ ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ. ಆರೋಗ್ಯ ತಪಾಸಣೆ ಜೊತೆಗೆ ಸಂಘ- ಸಂಸ್ಥೆಗಳ ನೆರವಿನೊಂದಿಗೆ ಅಗತ್ಯ ಸಾಮಗ್ರಿ ಪೂರೈಸಿದ್ದಾರೆ. ಎಪಿಎಂಸಿ ಹಮಾಲರು, ಚಿಂದಿ ಆಯುವವರು, ಅಲೆಮಾರಿಗಳಿಗೂ ಆರೋಗ್ಯ ಶಿಬಿರ ನಡೆಸಿದ್ದಾರೆ. ಹುಬ್ಬಳ್ಳಿ ನವನಗರದ ಕರ್ನಾಟಕ ಕ್ಯಾನ್ಸರ್ ಥೆರಪಿ ಹಾಗೂ ಸಂಶೋಧನಾ ಸಂಸ್ಥೆಯೊಂದಿಗೆ ಕೂಡಿ ಅನೇಕ ಶಿಬಿರಗಳ ಮೂಲಕ ಕ್ಯಾನ್ಸರ್ ಜಾಗೃತಿ ಮೂಡಿಸುತ್ತಿದ್ದಾರೆ. ‘ಆರೋಗ್ಯವಂತ ಯುವಕರು ಆರೋಗ್ಯ ಭಾರತ’ ಅಭಿಯಾನ ಮುಂದುವರಿದಿದೆ. ಸಮಾಜಕ್ಕೆ ಆರೋಗ್ಯಭಾಗ್ಯ ಕಲ್ಪಿಸಲು ಶ್ರಮಿಸುತ್ತಿರುವ ಡಾ. ಕರ್ಪರಮಠ ಅವರಿಗೆ ಕ್ಯಾಡ್​ಬರಿ ಡೈರಿಮಿಲ್ಕ್ ಧನ್ಯವಾದ ಅರ್ಪಿಸುತ್ತದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + five =
Remember me
