ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಉಚಿತವಾಗಿ ಬ್ಯಾಗ್, ಪಠ್ಯ ಪುಸ್ತಕ, ಪೆನ್ನು, ಪೆನ್ಸಿಲ್ ಮೊದಲಾದ ಲೇಖನಸಾಮಗ್ರಿ ಉಚಿತವಾಗಿ ನೀಡುತ್ತಿರುವ ಕೊಡಗು ಜಿಲ್ಲೆಯ ಕುಶಾಲನಗರದ ಶಿಬು ಥಾಮಸ್ ಸದ್ದು-ಗದ್ದಲವಿಲ್ಲದೆ ಸಮಾಜಸೇವೆ ಮಾಡುತ್ತಾ ಬಂದಿದ್ದಾರೆ. ಕ್ಯಾಡ್​ಬರಿ ಡೈರಿ ಮಿಲ್ಕ್ ಅವರಿಗೆ ಧನ್ಯವಾದ ಅರ್ಪಿಸುತ್ತದೆ.
ಉಳ್ಳವರೆಲ್ಲರಿಗೂ ಬಡವರಿಗೆ ಸಹಾಯ ಮಾಡುವ ಔದಾರ್ಯ ಇರುವುದಿಲ್ಲ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ದಾಸವಾಣಿಯಂತೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಮಾಜದಿಂದ ಪಡೆದಿದ್ದನ್ನು ಸಮಾಜಕ್ಕೆ ನೀಡುವ ಗುಣವಂತರು ನಮ್ಮ ನಡುವೆ ವಿರಳ. ಆದರೆ, ಕೊಡಗು ಜಿಲ್ಲೆ ಕುಶಾಲನಗರದ ಶಿಬು ಥಾಮಸ್ ನಿರಂತರವಾಗಿ ಸಮಾಜಸೇವೆಗೆ ತಮ್ಮ ಆದಾಯದ ಒಂದು ಭಾಗವನ್ನು ಮೀಸಲಿಟ್ಟಿದ್ದಾರೆ. ವೃತ್ತಿಯಲ್ಲಿ ಗುತ್ತಿಗೆದಾರರಾಗಿರುವ ಶಿಬು
ಥಾಮಸ್​ಗೆ ಕಷ್ಟ ಪಡುವವರನ್ನುಕಂಡರೆ ಕನಿಕರ. ಕಷ್ಟ ಹೇಳಿಕೊಂಡು ತಮ್ಮ ಬಳಿ ಬರುವವರನ್ನು ಅವರು ಯಾವತ್ತೂ ಬರಿಗೈಯಲ್ಲಿ ಕಳಿಸುವುದಿಲ್ಲ. ಬಲಗೈಯಲ್ಲಿ ದಾನ ಮಾಡಿದ್ದು ಎಡಗೈಗೆ ಗೊತ್ತಾಗಬಾರದೆಂಬ ಮಾತೊಂದಿದೆ. ಥಾಮಸ್ ಕೂಡ ಅದೇ ರೀತಿ ತಮ್ಮ ಸಹಾಯ ತಮ್ಮ ಖುಷಿಗಾಗಿಯೇ ಹೊರತು ಊರಿಗೆಲ್ಲ ಡಂಗುರ ಸಾರಿ ಪ್ರಚಾರ ಪಡೆಯುವುದಕ್ಕಲ್ಲ ಎಂದು ನಂಬಿದವರು.
ಅದರಲ್ಲೂ ಥಾಮಸ್​ಗೆ ಬಡವಿದ್ಯಾರ್ಥಿಗಳೆಂದರೆ ವಿಪರೀತ ಕಾಳಜಿ. ಒಮ್ಮೆ ಅವರು ಕೊಳ್ಳೆಗಾಲದ ಮಾರ್ಟಳ್ಳಿಗೆ ಸೋದರಿಯ ಮನೆಗೆ ತೆರಳಿದ್ದಾಗ ಅನೇಕ ಮಕ್ಕಳು ನೋಟ್​ಪುಸ್ತಕ ತೆಗೆದುಕೊಳ್ಳಲು ಹಣವಿಲ್ಲ ಎಂಬ ಕಾರಣಕ್ಕೆ ಶಾಲೆಗೆ ಬರುವುದನ್ನೇ ನಿಲ್ಲಿಸಿದ್ದಾರೆ ಎಂದು ಗೊತ್ತಾಗಿತ್ತು. ಅಂದಿನಿಂದ ಬಡ ಮಕ್ಕಳಿಗೆ ಲೇಖನ ಸಾಮಗ್ರಿ ಕೊಡಿಸುವುದನ್ನೇ ಅವರು ನಿರಂತರ ಸೇವೆಯಾಗಿ ಆರಂಭಿಸಿದರು. ಆ ಪ್ರಕಾರ ಪ್ರತೀ ವರ್ಷ ಒಂದೊಂದು ಶಾಲೆಯನ್ನು ಆಯ್ಕೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ನೋಟ್​ಪುಸ್ತಕ ಮತ್ತಿತರ ಲೇಖನ ಸಾಮಗ್ರಿಗಳನ್ನು ಉಚಿತವಾಗಿ ನೀಡುತ್ತಾರೆ. ಪ್ರತೀ ವರ್ಷ ಯಾವ ಶಾಲೆಗಳಿಗೆ ನೆರವು ಕೊಡಬೇಕೆಂಬ ಬಗ್ಗೆ ಊರಪ್ರಮುಖರು, ಸಂಘಸಂಸ್ಥೆಗಳು, ಸರ್ಕಾರಿ ಶಾಲೆ ಶಿಕ್ಷರ ಸಲಹೆ ಪಡೆದು ತಮ್ಮ ನೆರವು ಸದ್ವಿನಿಯೋಗ ಆಗುವಂತೆ ನೋಡಿಕೊಳ್ಳುತ್ತಾರೆ. ಅಷ್ಟೇ ಅಲ್ಲ ವಿದ್ಯಾರ್ಥಿಗಳ ವ್ಯಕ್ತಿಗತ ಕಷ್ಟಗಳಿದ್ದರೆ, ಅದಕ್ಕೂ ನೆರವಾಗುತ್ತಾರೆ. ದೂರದ ಪ್ರದೇಶದಿಂದ ಶಾಲೆಗೆ ಬಂದುಹೋಗಲು ಬಸ್​ಪಾಸ್ ಮಾಡಿಸಿಕೊಡುತ್ತಾರೆ.
ಸಿವಿಲ್ ಇಂಜಿನಿಯರಿಂಗ್ ಪದವೀಧರ ರಾಗಿರುವ ಕೊಚ್ಚಿನ್ ಮೂಲದ ಶಿಬು ಥಾಮಸ್ ಹಲವು ವರ್ಷಗಳ ಹಿಂದೆ ಕೊಡಗಿಗೆ ಬಂದು ಇಲ್ಲಿಯೇ ನೆಲೆಸಿದವರು. ಸರ್ಕಾರಿ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿದ್ದ ಅಮ್ಮ ಹ್ಯಾಲಿಸ್ ಅವರ ಸೇವಾಮನೋಭಾವವೇ ಥಾಮಸ್​ಗೆ ಸಮಾಜ ಸೇವೆ ಮಾಡುವುದಕ್ಕೆ ಸ್ಪೂರ್ತಿ.

ಬಡತನದ ನಡುವೆಯೇ ಕಷ್ಟಪಟ್ಟು ಓದಿ ಈಗ ಬೇರೆಯವರಿಗೆ ನೆರವು ನೀಡುವ ಮಟ್ಟಕ್ಕೆ ಬೆಳೆದಿರುವ ಥಾಮಸ್, ವಿದ್ಯಾಭ್ಯಾಸದ ಮಹತ್ವವನ್ನು ಅರಿತವರು. ಎಷ್ಟೇ ಬಡತನ, ಕಷ್ಟಕೋಟಲೆಗಳಿದ್ದರೂ ಮಕ್ಕಳ ವಿದ್ಯಾಭ್ಯಾಸ ನಿಲ್ಲಬಾರದು ಎನ್ನುವುದು ಅವರ ಆಶಯ. ಬಡತನದ ಕಾರಣದಿಂದ ಮಕ್ಕಳು ಶಾಲೆ ಬಿಡುವುದು ಜಾಗತಿಕ ಸಮಸ್ಯೆ. ಸರ್ಕಾರಗಳು ಮಕ್ಕಳಿಗೆ ಉಚಿತ ಶಿಕ್ಷಣ ಕಲ್ಪಿಸಲು ಏನೇ ವ್ಯವಸ್ಥೆ, ಯೋಜನೆಗಳನ್ನು ಜಾರಿಗೆ ತಂದರೂ ನಾನಾ ಕಾರಣಕ್ಕೆ ಶಾಲಾವ್ಯಾಸಂಗ ಅರ್ಧಕ್ಕೆ ಬಿಡುವ ಮಕ್ಕಳ ಸಂಖ್ಯೆ ಕಡಿಮೆಯಾಗಿಲ್ಲ. ಅದರಲ್ಲೂ ಕಡುಬಡತನದ ಕುಟುಂಬಗಳಲ್ಲಿ ಮಕ್ಕಳು ಚಿಕ್ಕವಯಸ್ಸಿನಲ್ಲೇ ದುಡಿಮೆಗೆ ತೆರಳುವಂತೆ ಪಾಲಕರೇ ಒತ್ತಡ ಹೇರುತ್ತಿರುತ್ತಾರೆ. ಅನೇಕ ಕುಟುಂಬಗಳಲ್ಲಿ ತಂದೆ ಅಥವ
ತಾಯಿ ಅಥವ ಇಬ್ಬರ ಅಕಾಲಿಕ ನಿಧನದಿಂದ ಮನೆಯ ಜವಾಬ್ದಾರಿ ತಲೆಮೇಲೆ ಹೊತ್ತುಕೊಂಡು ಶಾಲೆ ಬಿಟ್ಟಿರುತ್ತಾರೆ. ಊರಿಂದೂರಿಗೆ ಬದುಕು ಹುಡುಕಿಕೊಂಡು ತೆರಳುವ ವಲಸೆ ಕಾರ್ವಿುಕರ ಮಕ್ಕಳಂತೂ ಶಾಲೆ ಮೆಟ್ಟಿಲು ಹತ್ತುವ ಅವಕಾಶದಿಂದಲೇ ವಂಚಿತರಾಗುತ್ತಿರುತ್ತಾರೆ. ಸ್ವತಃ ಓರ್ವ ಗುತ್ತಿಗೆದಾರರಾಗಿ ಮಕ್ಕಳು ಯಾವ ಯಾವ ಕಾರಣಗಳಿಗೆ ಶಾಲಾ ಶಿಕ್ಷಣದಿಂದ ವಂಚಿತರಾಗುತ್ತಾರೆ ಎಂದು ಹತ್ತಿರದಿಂದ ಕಂಡಿರುವ ಥಾಮಸ್, ಬಡಮಕ್ಕಳನ್ನು ಶಾಲೆಗೆ ಸೇರಿಸಲು, ಅವರ ಶುಲ್ಕವನ್ನು ಭರಿಸಲು, ಮಕ್ಕಳಿಗೆ ಪಠ್ಯಪುಸ್ತಕ, ಲೇಖನ ಸಾಮಗ್ರಿ ಕೊಡಿಸುವ ಮೂಲಕ ವರ್ಷ ಪೂರ್ತಿ ಅವರ ವ್ಯಾಸಂಗ ಸುಗಮವಾಗಿ ಸಾಗಲು ನೆರವಾಗುತ್ತಾರೆ. ಕಷ್ಟಗಳು ಮನುಷ್ಯರಿಗೆ ಬರುವುದೇ ಹೊರತು ಮರಕ್ಕಲ್ಲ. ಮಕ್ಕಳಿಗೆ ತಂದೆತಾಯಿ ಮಾಡಬಹುದಾದ ಅತಿದೊಡ್ಡ ಆಸ್ತಿಯೆಂದರೆ, ಅವರಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವುದು. ಹೀಗಾಗಿ ಯಾವುದೇ ಕಾರಣಕ್ಕೂ ಮಕ್ಕಳನ್ನು ಶಾಲೆ ಬಿಡಿಸಬೇಡಿ ಎಂದು ಅವರು ಪಾಲಕರಲ್ಲಿ ಅರಿವು ಮೂಡಿಸುತ್ತಾರೆ. ಹೀಗೆ ಬಡಮಕ್ಕಳ ಅಕ್ಷರ ಕಲಿಕೆ ಸುಗಮವಾಗಿ ಸಾಗಲು ವಿಶಿಷ್ಠ ಸೇವೆ ಸಲ್ಲಿಸುತ್ತಿರುವ ಶಿಬು ಥಾಮಸ್ ಅವರಿಗೆ ಕ್ಯಾಡ್​ಬರಿ ಡೈರಿಮಿಲ್ಕ್ ಧನ್ಯವಾದ ಅರ್ಪಿಸುತ್ತದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
