ಮಕ್ಕಳಿಲ್ಲ ಎಂಬ ಕೊರಗಿದ್ದವರೆಲ್ಲ ಅನಾಥ ಮಕ್ಕಳನ್ನು ಸಾಕುವಷ್ಟು ಉದಾರ ಮನಸ್ಸು ಹೊಂದಿರುವುದಿಲ್ಲ. ಆದರೆ, ಬಳ್ಳಾರಿ ಜಿಲ್ಲೆ ಕೊಟ್ಟೂರಿನ ರುದ್ರಮ್ಮ ಅಂಗವಿಕಲ ಮಗುವನ್ನು ದತ್ತು ಪಡೆದು ಸಾಕುವ ಜೊತೆಗೆ ಅಂಧರು, ಕಿವುಡರು, ಹಾಗೂ ಮಕ್ಕಳಿಂದ ತಿರಸ್ಕೃತರಾಗಿ ಬೀದಿಗೆ ಬಿದ್ದ ವೃದ್ಧರಿಗಾಗಿ ಅನಾಥಾಶ್ರಮವನ್ನೇ ನಡೆಸುತ್ತಿದ್ದಾರೆ. ಸೇವಾಮನೋಭಾವಕ್ಕೆ ಮಾದರಿಯಾಗಿರುವ ಮಾತೃಹೃದಯಿ ರುದ್ರಮ್ಮಅವರಿಗೆ ಕ್ಯಾಡ್​ಬರಿ ಡೈರಿ ಮಿಲ್ಕ್ ಧನ್ಯವಾದ ಅರ್ಪಿಸುತ್ತದೆ.
ಇವರದು 17 ಸದಸ್ಯರ ಕೂಡುಕುಟುಂಬ. ವಿಶೇಷವೆಂದರೆ ಈ ಮನೆಯ ಸದಸ್ಯರೆಲ್ಲರೂ, ಅಂಧರು, ಕಿವುಡರು, ಮಕ್ಕಳಿಂದ ತಿರಸ್ಕೃತಗೊಂಡು ಬೀದಿಗೆ ಬಿದ್ದಿರುವ ವೃದ್ಧರು. ಇವರೆಲ್ಲರನ್ನೂ ಮನೆಯ ಮಕ್ಕಳಿಗಿಂತ ಹೆಚ್ಚು ಪ್ರೀತಿಯಿಂದ ನೋಡಿಕೊಳ್ಳುತ್ತಿರುವವರು 71 ವರ್ಷದ ಓರ್ವ ಮಹಾಮಾತೆ. ಅವರೇ ರುದ್ರಮ್ಮ. ಅವರೇನು ಕೋಟ್ಯಂತರ ರೂ. ಆಸ್ತಿಪಾಸ್ತಿ ಹೊಂದಿದವರಲ್ಲ. ಸರ್ಕಾರಿ ನೌಕರರಾಗಿ ನಿವೃತ್ತರಾಗಿರುವ ಪತಿಯ ಪಿಂಚಣಿ ಹಣ ಹಾಗೂ ಒಂದು ಮನೆಯ ಬಾಡಿಗೆ ಆದಾಯದಿಂದಲೇ ದೊಡ್ಡ ಕುಟುಂಬವೊಂದರ ನಿರ್ವಹಣೆಯನ್ನು ರುದ್ರಮ್ಮ ಮಾಡುತ್ತಿದ್ದಾರೆ.
ರುದ್ರಮ್ಮ ಅವರ ಪತಿ ಕೊಟ್ರಸ್ವಾಮಿ ಆರೋಗ್ಯ ಇಲಾಖೆಯಲ್ಲಿ ನೌಕರರಾಗಿದ್ದರು. ಮಕ್ಕಳಿಲ್ಲ ಎಂಬ ಕೊರಗು ತೀವ್ರವಾದಾಗ ಈ ದಂಪತಿ ಓರ್ವ ಅಂಗವಿಕಲ ಮಗುವನ್ನು ದತ್ತುತೆಗೆದುಕೊಂಡು ಪಾಲನೆ ಮಾಡಿದರು. ಈ ಸಮಾಜಮುಖಿ ಮನೋಭಾವದಿಂದಲೇ ಮುಂದೆ ಅವರು ತಮ್ಮ ಮನೆಯನ್ನೇ ವೃದ್ಧಾಶ್ರಮವನ್ನಾಗಿ ಪರಿವರ್ತನೆ ಮಾಡಿ ಅನಾಥರು, ಅಸಹಾಯಕರಿಗೆ ಆಶ್ರಯನೀಡಿದರು.
ಕೊಟ್ಟೂರಿನ ಉತ್ತಂಗಿ ಹಿರೇಮಠದ ರುದ್ರಮ್ಮ ಕೊಟ್ರಸ್ವಾಮಿ ಅನಾಥಾಶ್ರಮದಲ್ಲಿರುವ ಅಂಧರು, ಕಿವುಡರು, ಮಕ್ಕಳಿಲ್ಲದ, ಕುಟುಂಬದ ಆಸರೆಯಿಲ್ಲದ ಅನಾಥ ವೃದ್ಧರ ಪಾಲಿಗೆ ರುದ್ರಮ್ಮ ಅವರೇ ಅನ್ನಪೂರ್ಣೆಶ್ವರಿ ಆಗಿಬಿಟ್ಟಿದ್ದಾರೆ. ದಿನಸಿ ತರಕಾರಿ ತರುವುದರಿಂದ ಅಡುಗೆ ಮಾಡಿ ಬಡಿಸುವವರೆಗೆ ಎಲ್ಲ ಜವಾಬ್ದಾರಿಯನ್ನೂ ಇವರೇ ನಿರ್ವಹಿಸುತ್ತಾರೆ. ಪ್ರತಿಯೊಬ್ಬರ ದಿನನಿತ್ಯದ ಅಗತ್ಯಗಳನ್ನು ಯಾವುದೇ ಕೊರತೆಯಿಲ್ಲದಂತೆ ನಿಭಾಯಿಸುತ್ತಾರೆ.
ಅಂಗವಿಕಲರು, ವೃದ್ಧರನ್ನು ಪಾಲನೆ ಮಾಡುವುದೆಂದರೆ ಸುಲಭದ ಕೆಲಸವೇನಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ವೃದ್ಧರು ತಾಳ್ಮೆ ಕಳೆದುಕೊಂಡು ಜಗಳವಾಡುತ್ತಾರೆ. ತಮ್ಮ ಬದುಕಿನ ಅತೃಪ್ತಿ-ಹತಾಶೆಗಳನ್ನು ವಿಚಿತ್ರ ವರ್ತನೆಗಳ ಮೂಲಕ ಹೊರಹಾಕುತ್ತಾರೆ. ಆದರೆ, ಮಾತೃಹೃದಯಿ ರುದ್ರಮ್ಮ ಶಾಂತಸ್ವಭಾವದ ಮಹಾಮಾತೆ. ಪ್ರತಿಯೊಬ್ಬರನ್ನೂ ಮಕ್ಕಳಂತೆ ಸಂತೈಸುತ್ತಾರೆ ಎನ್ನುವುದು ಪ್ರತ್ಯಕ್ಷದರ್ಶಿಗಳ ಅನುಭವದ ಮಾತು.

ರುದ್ರಮ್ಮ ಒಂಭತ್ತು ವರ್ಷಗಳಿಂದ ಅನಾಥಾಶ್ರಮ ನಡೆಸುತ್ತಿದ್ದರೂ ಇದುವರೆಗೂ ಯಾರೊಬ್ಬರ ಬಳಿಯೂ ನೆರವಿಗಾಗಿ ಕೈಚಾಚಿದವರಲ್ಲ. ಕುಟುಂಬಕ್ಕೆ ಸೇರಿದ ಎರಡು ಮನೆಗಳಲ್ಲೇ ಒಂದು ಮನೆಯನ್ನು ಅನಾಥಾಶ್ರಮವಾಗಿ ಪರಿವರ್ತಿಸಿ ಅಲ್ಲೇ ತಾವೂ ವಾಸವಾಗಿದ್ದರು. ಇನ್ನೊಂದು ಮನೆಯನ್ನು ಬಾಡಿಗೆ ನೀಡಿ, ಅದರ ಆದಾಯದಲ್ಲಿ ಆಶ್ರಮ ನಿರ್ವಹಣೆ ಮಾಡುತ್ತಿದ್ದರು. ವೃದ್ಧಾಶ್ರಮ ನಿರ್ವಹಣೆಗೆ ಪತಿಯ ಪಿಂಚಣಿ ಮೊತ್ತ, ಮನೆ ಬಾಡಿಗೆ ಹಣ ಸಾಕಾಗದಿದ್ದಾಗ ಇದ್ದ 100 ಗ್ರಾಂ ಬಂಗಾರವನ್ನು ಹಂತಹಂತವಾಗಿ ಮಾರಿ ಅನಾಥಾಶ್ರಮ ವಾಸಿಗಳಿಗೆ ತೊಂದರೆಯಾಗದಂತೆ ನೋಡಿಕೊಂಡರು. ಅನಾಥಾಶ್ರಮದಲ್ಲಿ ಜನರ ಸಂಖ್ಯೆ ಹೆಚ್ಚಾಗಿ ಮನೆಯಲ್ಲೇ ನಿರ್ವಹಿಸುವುದು ಕಷ್ಟವಾದಾಗ ಪಟ್ಟಣ ಪಂಚಾಯಿತಿಯವರು ಇತ್ತೀಚೆಗೆ ಸಮುದಾಯ ಭವನ ನೀಡಿ ನೆರವಾಗಿದ್ದಾರೆ. ಸದ್ಯ ಅನಾಥಾಶ್ರಮವನ್ನು ಸಮುದಾಯ ಭವನಕ್ಕೆ ಸ್ಥಳಾಂತರಿಸಿರುವ ರುದ್ರಮ್ಮ, ತಮ್ಮ ಎರಡು ಮನೆಗಳನ್ನು ಮಾರಿ, ಬರುವ ಹಣವನ್ನು ಬ್ಯಾಂಕಿನಲ್ಲಿಟ್ಟು ಬಡ್ಡಿ ಹಣದಲ್ಲಿ ಅನಾಥಾಶ್ರಮ ನಡೆಸುವ, ಜೊತೆಗೆ ವರ್ಷಕ್ಕಿಬ್ಬರು ಬಡವಿದ್ಯಾರ್ಥಿಗಳಿಗೆ ನೆರವಾಗಲು ಯೋಜನೆ ಹಾಕಿಕೊಂಡಿದ್ದಾರೆ.
ಹಿಂದೆ ಕೊಟ್ಟೂರು ತಹಸೀಲ್ದಾರ್ ಆಗಿದ್ದ ಮಂಜುನಾಥ್ ಎನ್ನುವವರು ನೀಡಿದ್ದ 25 ಸಾವಿರ ರೂ. ದೇಣಿಗೆ ಹಣದಲ್ಲಿ ರುದ್ರಮ್ಮ ಹಸು ತಂದು ಸಾಕಿದ್ದಾರೆ. ಸಮುದಾಯ ಭವನದ ಆವರಣದಲ್ಲೇ ತರಕಾರಿ ಹಾಗೂ ಹಸುವಿಗೆ ಮೇವು ಬೆಳೆಸಿ ಸ್ವಾವಲಂಬಿ ಮಾರ್ಗ ಕಂಡುಕೊಂಡಿದ್ದಾರೆ.
ರುದ್ರಮ್ಮ ಹಾಗೂ ಕೊಟ್ರಸ್ವಾಮಿ ದಾಂಪತ್ಯ ಜೀವನದ ಆರಂಭದಲ್ಲಿ ಎರಡು ಬಾರಿ ಮಕ್ಕಳು ಹುಟ್ಟುವ ಮೊದಲೇ ತೀರಿಕೊಂಡಿದ್ದರಿಂದ ನೊಂದಿದ್ದರು. ಈ ಕೊರಗೇ ಅವರು ಅಂಗವಿಕಲ ಮಗು ದತ್ತು ಪಡೆಯಲು ಕಾರಣವಾಗಿತ್ತು. ಮಗು ಎಲ್ಲರಂತೆ ಆರೋಗ್ಯವಂತನಾಗಿ ಬೆಳೆಯಲಿ ಎಂದು ಆಸ್ಪತ್ರೆಗಳಿಗೆ ಅಲೆದಿದ್ದರು. ತಾವು ಇರುವವರೆಗೆ ಮಗನನ್ನು ನೋಡಿಕೊಳ್ಳುತ್ತೇವೆ. ಮುಂದೇನು ಎಂಬ ಪ್ರಶ್ನೆ ಅವರಿಗೆ ಅನಾಥಾಶ್ರಮ ಸ್ಥಾಪನೆಗೆ ಪ್ರೇರಣೆಯಾಗಿತ್ತು. ಹೀಗೆ ಆರಂಭವಾದ ಅನಾಥಾಶ್ರಮವನ್ನು ಎಷ್ಟೇ ಕಷ್ಟ ಬಂದರೂ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.
ಆಶ್ರಮಕ್ಕೆ ಸೇರಿಸಿಕೊಳ್ಳುವಾಗ ಯಾರೊಬ್ಬರ ಜಾತಿ, ಮತಗಳನ್ನು ವಿಚಾರಿಸದೆ ಮಾನವೀಯತೆಯೇ ಮನುಜ ಧರ್ಮ ಎಂದು ನಂಬಿರುವ ರುದ್ರಮ್ಮ ಅವರಿಗೆ ಕ್ಯಾಡ್​ಬರಿ ಡೈರಿಮಿಲ್ಕ್ ಧನ್ಯವಾದ ಅರ್ಪಿಸುತ್ತದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + eight =
Remember me
