ಎಚ್​ಐವಿ ಪೀಡಿತೆ ಎಂಬ ಕಾರಣಕ್ಕೆ ಒಂದು ಕಾಲದಲ್ಲಿ ಸಫಲಾ ನಾಗರತ್ನಾರಿಗೆ ಆಶ್ರಯ ನೀಡಲು ಯಾರೂ ಮುಂದೆ ಬರುತ್ತಿರಲಿಲ್ಲ. ಅಂಥದರಲ್ಲಿ ಈಗ ಆ ಮಹಿಳೆಯೇ ‘ಆಶ್ರಯ’ ಸಂಸ್ಥೆ ಮೂಲಕ ಎಚ್​ಐವಿ ಮಕ್ಕಳ ಬದುಕನ್ನು ಕಟ್ಟುತ್ತಿದ್ದಾರೆ. ಎಚ್​ಐವಿ ಕುರಿತು ಸಮಾಜದ ತಪು್ಪ ಕಲ್ಪನೆಗಳನ್ನು ಹೋಗಲಾಡಿಸುತ್ತಿದ್ದಾರೆ. ಅವರ ಸೇವಾ ಮನೋಭಾವಕ್ಕೆ ಕ್ಯಾಡ್​ಬರಿ ಡೈರಿಮಿಲ್ಕ್ ಧನ್ಯವಾದ ಅರ್ಪಿಸುತ್ತದೆ.
ಎಚ್​ಐವಿ ಪೀಡಿತರನ್ನು ಸಮಾಜ ಅಮಾನವೀಯವಾಗಿ ನಡೆಸಿಕೊಳ್ಳುವ ಪ್ರವೃತ್ತಿ ಈಗಲೂ ಜೀವಂತವಾಗಿದೆ. ಬೆಳಗಾವಿಯ ಸಫಲಾ ನಾಗರಾಜ್ ಅವರಿಗೆ 22 ವರ್ಷಗಳಹಿಂದೆ ಎಚ್​ಐವಿ ಸೋಂಕು ತಗುಲಿದಾಗ ಅವರು ಅನುಭವಿಸಿದ್ದು ಸಾಮಾಜಿಕ ಬಹಿಷ್ಕಾರದಂಥ ಯಾತನೆಯನ್ನು. ಬಂಧು,ಬಳಗ ಎಲ್ಲರೂ ಅವರಿಂದ ದೂರ ಸರಿದರು. ಆದರೆ, ಸಮಾಜದ ತಿರಸ್ಕಾರವನ್ನೇ ಸವಾಲಾಗಿ ಸ್ವೀಕರಿಸಿದ ಸಫಲಾ, ತಮ್ಮ ತಪ್ಪಿಲ್ಲದೆ ಎಚ್​ಐವಿ ಸೋಂಕಿಗೆ ಸಿಲುಕುವ ಯಾವುದೇ ಮಕ್ಕಳು, ಮಹಿಳೆಯರು ತಾವು ಅನುಭವಿಸಿದ ನೋವು ಅನುಭವಿಸಬಾರದು ಎಂಬ ಛಲದಿಂದ ಆಶ್ರಯ ಎಂಬ ಸಂಸ್ಥೆಯನ್ನೇ ಕಟ್ಟಿದರು. ಅಂದಿನಿಂದ ನಿರಂತರವಾಗಿ ಅವರು ಎಚ್​ಐವಿ ಪೀಡಿತರಿಗೆ ಬದುಕು ಕಟ್ಟಿಕೊಡಲು ಹೋರಾಡುತ್ತಿದ್ದಾರೆ.
ನಾಗರತ್ನ ಅವರ ಪತಿ ಎಚ್​ಐವಿ ಸೋಂಕಿನಿಂದ ತೀರಿಕೊಂಡಿದ್ದರು. ಪತಿಯಿಂದ ಸೋಂಕಿನ ಬಳವಳಿ ಪಡೆದಿದ್ದ ಸಫಲಾ, ಚಿಕ್ಕ ಮಗನನ್ನು ಸಾಕುವ ಜೊತೆಗೆ ಸಮಾಜದಲ್ಲಿ ಗೌರವಯುತವಾಗಿ ಬದುಕು ಕಟ್ಟಿಕೊಳ್ಳುವ ಸಲುವಾಗಿ ವಿವಿಧ ಸಂಘಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಬೆಳಗಾವಿ ಜಿಲ್ಲೆಯೊಂದರಲ್ಲೇ 30 ಸಾವಿರಕ್ಕೂ ಅಧಿಕ ಎಚ್​ಐವಿ ಪೀಡಿತ ಮಕ್ಕಳು ಇರುವುದು ಗಮನಕ್ಕೆ ಬಂದಿತ್ತು. ಎಚ್​ಐವಿ ಪೀಡಿತರನ್ನು ಸಮಾಜ ನಡೆಸಿಕೊಳ್ಳುವ ಬಗೆ, ತಾವು ಪಟ್ಟ ಕಷ್ಟ ಇವೆಲ್ಲದರಿಂದ ನೊಂದಿದ್ದ ಸಫಲಾ ಅವರಿಗೆ, ಎಚ್​ಐವಿ ಸೋಂಕಿನ ಕಾರಣಕ್ಕೆ ಯಾವ ಮಕ್ಕಳೂ ಜಿಗುಪ್ಸೆಗೆ ಒಳಗಾಗಬಾರದು ಎಂಬ ಯೋಚನೆಯೇ ಆಶ್ರಯ ಸಂಸ್ಥೆ ಕಟ್ಟುವುದಕ್ಕೆ ಪ್ರೇರಣೆಯಾಯಿತು. ಸಂಸ್ಥೆ ಕಟ್ಟಿ, ಮಕ್ಕಳಿಗೆ ಆಶ್ರಯ ಕೊಟ್ಟರೆ ಸಾಕೇ? ಅವರಿಗೆ ಬದುಕು ದಾರಿ ತೋರಿಸಬೇಕೆಂಬ ಯೋಚನೆ ಬಂದಾಗ ಮಕ್ಕಳಿಗೆ ಉಚಿತ ಆಹಾರ, ವಸತಿ ಜೊತೆಗೆ ಶಿಕ್ಷಣ, ಸಂಸ್ಕಾರ, ವೃತ್ತಿಕೌಶಲದ ತರಬೇತಿಯನ್ನೂ ಆರಂಭಿಸಿದರು. ಇಲ್ಲೀಗ ಬಾಲಕಿಯರು ಮತ್ತು ವಿಧವೆಯರು ಸೇರಿ 11 ಜನರಿದ್ದಾರೆ.
ತಂದೆ-ತಾಯಿಯನ್ನು ಕಳೆದುಕೊಂಡ ಈ ಮಕ್ಕಳನ್ನು ಸಂಬಂಧಿಕರು ಮೊದಲು ಎಲ್ಲೋ ಮನೆಯಿಂದ ದೂರದಲ್ಲಿ ಇಟ್ಟು, ಎರಡು ತುತ್ತು ಅನ್ನ ನೀಡುತ್ತಿದ್ದರಷ್ಟೇ. ಆದರೆ, ಆಶ್ರಯ ಸಂಸ್ಥೆಯ ಸ್ನೇಹಮಯ ವಾತಾವರಣದಿಂದ ಅವರೀಗ ನಗಲು ಕಲಿತಿದ್ದಾರೆ, ಹೊಸ ಕೌಶಲಗಳನ್ನು ಅಳವಡಿಸಿಕೊಂಡು ವಿವಿಧ ಕರಕುಶಲ ವಸ್ತುಗಳನ್ನು ತಯಾರಿಸುತ್ತ ಅವುಗಳನ್ನು ವಸ್ತು ಪ್ರದರ್ಶನದಲ್ಲಿ ಇರಿಸಿ ಹೆಮ್ಮೆಪಟ್ಟಿದ್ದಾರೆ. ಲಾಕ್​ಡೌನ್ ಅವಧಿಯಲ್ಲಿ ಸಾವಿರಾರು ಮಾಸ್ಕ್​ಗಳನ್ನು ತಯಾರಿಸಿದ್ದಾರೆ. ‘ನಾಗರತ್ನಕ್ಕ ನಮಗೆ ಜೀವನಕ್ಕೆ ಬೇಕಾದ ಕೌಶಲಗಳನ್ನೂ ಕಲಿಸುತ್ತಿದ್ದಾರೆ. ಮನೆಗಿಂತಲೂ ಆಪ್ತವಾದ ವಾತಾವರಣ ಇಲ್ಲಿದೆ. ನಾವು ತಯಾರಿಸಿದ ಕರಕುಶಲ ವಸ್ತುಗಳಿಗೆ ಇತ್ತೀಚೆಗೆ ಉತ್ತಮ ಮಾರುಕಟ್ಟೆಯೂ ಲಭ್ಯವಾಗುತ್ತಿದೆ’ ಎಂದು ಆ ಮಕ್ಕಳು ಹೇಳುತ್ತಾರೆ.

ತಮ್ಮ ಆಶ್ರಯದಲ್ಲಿರುವ ಎಚ್​ಐವಿ ಪೀಡಿತ ಮಕ್ಕಳು, ಮಹಿಳೆಯರಿಗೆ ಬದುಕು ಕಟ್ಟಿಕೊಡುವ ಜೊತೆಗೆ, ಸಫಲಾ, ಸಮಾಜದಲ್ಲಿ ಜಾಗೃತಿ ಮೂಡಿಸುವ ಸಲುವಾಗಿಯೂ ಶ್ರಮ ಪಡುತ್ತಿದ್ದಾರೆ. ತಮ್ಮದೇ ತಂಡ ಕಟ್ಟಿಕೊಂಡು ಶಾಲಾ-ಕಾಲೇಜುಗಳಲ್ಲಿ, ಉದ್ಯಮಗಳಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಎಚ್​ಐವಿ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಎಚ್​ಐವಿ ಪೀಡಿತರಿಗೆ ಆತ್ಮವಿಶ್ವಾಸ ಮೂಡಿಸುವ ಜಾಗೃತಿ ಒಂದೆಡೆಯಾದರೆ, ಎಚ್​ಐಪಿ ಪೀಡಿತರ ಬಗ್ಗೆ ತಾತ್ಸಾರ, ಕೊಂಕು ಬೇಡ. ಅವರೂ ನಿಮ್ಮತೆಯೇ ಮನುಷ್ಯರು. ಸಮಾಜದ ಮುಖ್ಯವಾಹಿನಿಯಲ್ಲಿ ಬದುಕಲು ಅವರಿಗೂ ಅವಕಾಶ ಕೊಡಿ ಎಂಬ ಅರಿವನ್ನು ಪ್ರಜ್ಞಾವಂತ ಸಮಾಜದ ನಡುವೆ ಮೂಡಿಸುತ್ತಿದ್ದಾರೆ.
ಎಚ್​ಐವಿ ಪೀಡಿತರು ಅನೇಕರು ಈಗಲೂ ಬಹಿರಂಗವಾಗಿ ಸಮಸ್ಯೆ ಹೇಳಿಕೊಳ್ಳಲು ಹಿಂಜರಿಯುತ್ತಾರೆ. ಅಂಥವರಿಗಾಗಿ ಸಫಲಾ, ದೂರವಾಣಿಯಲ್ಲೇ ಕೌನ್ಸೆಲಿಂಗ್ ಆರಂಭಿಸಿದ್ದಾರೆ. ತಿಂಗಳ ಅವಧಿಯಲ್ಲಿ ಕನಿಷ್ಠ 50-60 ಕೌನ್ಸೆಲಿಂಗ್​ಗಳನ್ನು ಅವರು ದೂರವಾಣಿಯಲ್ಲೇ ನಡೆಸುತ್ತಾರೆ. ನೇರವಾಗಿ ಆಶ್ರಯದ ಆವರಣಕ್ಕೆ ಬರುವವರಿಗೆ ಮಾರ್ಗದರ್ಶನ ಮಾಡುವುದಕ್ಕಂತೂ ಸಫಲಾ ದಿನದ 24 ಗಂಟೆ ಸಿದ್ಧರಿರುತ್ತಾರೆ.
ಇಷ್ಟೇ ಅಲ್ಲದೆ, ಮಕ್ಕಳಲ್ಲಿ ಸಕಾರಾತ್ಮಕ ಚಿಂತನೆಗಳನ್ನು ತುಂಬಲು ‘ಪಾಸಿಟಿವ್ ಟಾಕ್’ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಎಚ್​ಐವಿ ಹರಡುವುದನ್ನು ತಡೆಯಲು ವಧು-ವರರಿಬ್ಬರಿಗೂ ವಿವಾಹಪೂರ್ವ ಎಚ್​ಐವಿ ಪರೀಕ್ಷೆಯನ್ನು ಕಡ್ಡಾಯಗೊಳಿಸಬೇಕು ಎಂದು ಆಗ್ರಹಿಸುವ ನಾಗರತ್ನಾ ಈ ನಿಟ್ಟಿನಲ್ಲಿ ಪ್ರಧಾನಿ ಅವರಿಗೂ ಪತ್ರ ಬರೆದಿದ್ದಾರೆ.
ತಮ್ಮ ಸಂಸ್ಥೆಯ ವತಿಯಿಂದಲೇ ಅನೇಕ ಎಚ್​ಐವಿ ಪೀಡಿತ ಯುವಕ-ಯುವತಿಯರಿಗೆ ವಿವಾಹವನ್ನೂ ಮಾಡಿಸಿದ್ದಾರೆ. ಎಚ್​ಐವಿ ಪೀಡಿತರಿಗೆ ಘನತೆಯಿಂದ ಬದುಕು ದಾರಿ ತೋರಿಸಿ, ಅವರ ಸೇವೆಗೇ ತಮ್ಮನ್ನು ಸಮರ್ಪಿಸಿಕೊಂಡಿರುವ ಸಫಲಾ ನಾಗರತ್ನಾ ಅವರಿಗೆ ಕ್ಯಾಡ್​ಬರಿ ಡೈರಿ ಮಿಲ್ಕ್ ಧನ್ಯವಾದ ಅರ್ಪಿಸುತ್ತದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
