| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ಎರಡು ಕ್ಷೇತ್ರಕ್ಕೆ ಮಂಗಳವಾರ ನಡೆಯುತ್ತಿರುವ ಉಪಚುನಾವಣೆ ಮೂರೂ ರಾಜಕೀಯ ಪಕ್ಷಗಳ ಪಾಲಿಗೆ ಮಹತ್ವದ್ದು. ಮುಂದೆ ಎದುರಾಗುವ ಚುನಾವಣೆಗಳು, ಪಕ್ಷದ ಬೆಳವಣಿಗೆ, ಸಂಘಟನೆ ಕಾರಣಕ್ಕೆ ಉಪಸಮರ ಮಹತ್ವ ಪಡೆದುಕೊಂಡಿದೆ.
ಶಿರಾ ಮತ್ತು ರಾಜರಾಜೇಶ್ವರಿ ನಗರದಲ್ಲಿ 6.7 ಲಕ್ಷ ಮಂದಿ ಮತದಾನದ ಹಕ್ಕು ಪಡೆದುಕೊಂಡಿದ್ದು, ಅವರ ಆಸಕ್ತಿಯು ರಾಜಕೀಯ ಪಕ್ಷ, ಸರ್ಕಾರ ಮತ್ತು ನಾಯಕತ್ವದ ಸಾಮರ್ಥ್ಯವನ್ನು ಒರೆಗೆ ಹಚ್ಚಲಿದೆ. ಮೈತ್ರಿ ಸರ್ಕಾರ ಪತನವಾಗಿ ಈ ಸರ್ಕಾರ ರಚನೆಯಾಗಿ ಒಂದೂವರೆ ವರ್ಷ ಕಳೆಯುತ್ತಿದೆ. ಕರೊನಾ, ಆರ್ಥಿಕ ಬರ, ಅತಿವೃಷ್ಟಿಯಂತಹ ಬೆಳವಣಿಗೆ ನಡುವೆ ಸರ್ಕಾರವನ್ನು ಜನ ಯಾವ ರೀತಿ ಗಮನಿಸುತ್ತಿದ್ದಾರೆಂಬ ಜನತಾ ವಿಮರ್ಶೆ ಸಹ ಫಲಿತಾಂಶದ ಮೂಲಕ ಹೊರಬರಲಿದೆ.
ಉಪಚುನಾವಣೆ ನಡೆಯುತ್ತಿರುವ ಎರಡು ಕ್ಷೇತ್ರಗಳ ಪೈಕಿ 2018ರ ವಿಧಾನಸಭಾ ಚುನಾವಣೆಯಲ್ಲಿ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್, ಮತ್ತೊಂದರಲ್ಲಿ ಜೆಡಿಎಸ್ ಗೆಲುವು ಸಾಧಿಸಿತ್ತು. ಇಲ್ಲಿ ತಾನು ಗೆಲ್ಲುವ ಮೂಲಕ ಜನತೆ ತನ್ನ ಪರ ಇದ್ದಾರೆಂಬುದನ್ನು ತೋರಿಸಿಕೊಳ್ಳುವುದು ಬಿಜೆಪಿಗೆ ಬಹುಮುಖ್ಯವಾಗಿದೆ. ಮುಂದೆ ನಡೆಯುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಗ್ರಾಮ ಪಂಚಾಯಿತಿ, ಮಸ್ಕಿ ಹಾಗೂ ಬಸವಕಲ್ಯಾಣ ಚುನಾವಣೆಗಳ ಮೇಲೂ ಈ ಫಲಿತಾಂಶ ಸಣ್ಣ ಪರಿಣಾಮ ಬೀರುವುದು ನಿಶ್ಚಿತ. ಈ ಕಾರಣಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಕೂಡ ಪ್ರಚಾರದ ವೇಳೆ ಪೈಪೋಟಿ ನಡೆಸಿತ್ತು.
ಒಂದು ವೇಳೆ ತಾನು ಎರಡು ಕ್ಷೇತ್ರದಲ್ಲಿ ಗೆದ್ದರೆ ಮುಂದಿನ ವಿಧಾನಸಭೆ ಸಾರ್ವತ್ರಿಕ ಚುನಾವಣೆಯ ಪೂರ್ವಭಾವಿಯಾಗಿ ಇಲ್ಲಿಂದಲೇ ಗೆಲುವಿನ ಅಭಿಯಾನ ಆರಂಭ ಎಂಬಂತೆ ಕಾಂಗ್ರೆಸ್ ನಂಬಿಕೊಂಡಿದೆ. ಪಕ್ಷದ ಸಂಘಟನೆಗೆ ಚೈತನ್ಯ ತರಲು ಪಕ್ಷಕ್ಕೆ ಈ ಚುನಾವಣೆ ಫಲಿತಾಂಶ ಮಹತ್ವದ್ದು. ಇನ್ನೊಂದು ಪ್ರಮುಖ ಸಂಗತಿ ಎಂದರೆ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಕ್ಕಲಿಗ ಮತಗಳ ಮೇಲೆ ಹಿಡಿತ ಸಾಧಿಸಲು ನಿರಂತರವಾಗಿ ಪ್ರಯತ್ನಿಸುತ್ತಲೇ ಇದ್ದಾರೆ. ಒಕ್ಕಲಿಗರ ಪ್ರಾಬಲ್ಯ ಇರುವ ರಾಜರಾಜೇಶ್ವರಿ ನಗರ ಕ್ಷೇತ್ರ ಈ ಪ್ರಯತ್ನದ ಮೊದಲ ಫಲಿತಾಂಶವಾಗಲಿದೆ ಎಂಬ ಅಭಿಪ್ರಾಯ ರಾಜಕೀಯ ವಲಯ ದಲ್ಲಿದೆ. ಈ ಕ್ಷೇತ್ರದ ಫಲಿತಾಂಶಕ್ಕಿಂತ ಒಕ್ಕಲಿಗ ವೋಟ್ ಶೇರಿಂಗ್​ನಲ್ಲಿ ಯಾರಿಗೆ ಹೆಚ್ಚು ಮತ ಬರಲಿದೆ ಎಂಬ ದೃಷ್ಟಿಯನ್ನು ಇಬ್ಬರು ನಾಯಕರು ನೆಟ್ಟಿದ್ದಾರೆ. ಮುಂಬರುವ ಬಿಬಿಎಂಪಿ ಚುನಾವಣೆ ಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಮೂರೂ ಪಕ್ಷಗಳ ಪೈಪೋಟಿ ಸಹಜ. 28 ವಿಧಾನಸಭಾ ಕ್ಷೇತ್ರ ಹೊಂದಿರುವ ಬೆಂಗಳೂರಿನಲ್ಲಿ ಹೆಚ್ಚು ಸ್ಥಾನ ಗೆಲ್ಲಬೇಕೆಂದರೆ ಬಿಬಿಎಂಪಿ ಮೇಲೆ ಹಿಡಿತ ಸಾಧಿಸುವುದೂ ಮುಖ್ಯವಾಗುತ್ತದೆ. ಈ ಕಾರಣಕ್ಕೆ ರಾಜರಾಜೇಶ್ವರಿ ನಗರ ಚುನಾವಣೆಯಲ್ಲಿ ಗೆಲ್ಲುವ ಮೂಲಕ ನಗರದ ಜನತೆಗೆ ಸಂದೇಶ ಕಳಿಸಲು ಮೂರೂ ಪಕ್ಷಗಳು ಹಾತೊರೆದಿವೆ.
ಗೆಲುವಿನ ಲೆಕ್ಕಾಚಾರ ಒಂದು ಭಾಗವಾದರೆ, ಸೋಲು ಸಹ ಪ್ರಮುಖ ನಾಯಕರಿಗೆ ಎಚ್ಚರಿಕೆ ಗಂಟೆಯಾಗಲಿದೆ. ಕೆಪಿಸಿಸಿ ಅಧ್ಯಕ್ಷರಾದ ನಂತರ ಮೊದಲ ಚುನಾವಣೆಯನ್ನು ಡಿ.ಕೆ.ಶಿವಕುಮಾರ್ ಎದುರಿಸುತ್ತಿದ್ದಾರೆ. ಇಲ್ಲಿ ತಮ್ಮ ಆಯ್ಕೆಯ ಅಭ್ಯರ್ಥಿ ಗೆಲ್ಲಿಸಿಕೊಂಡು ಬಾರದೆ ಇದ್ದರೆ ಪಕ್ಷದಲ್ಲಿ ಅವರ ಮಹತ್ವಕ್ಕೆ ಸಣ್ಣ ಮುಕ್ಕು ಬರಲಿದೆ. ಬಿಜೆಪಿ ಸೋತರೆ ಸರ್ಕಾರದ ಕಾರ್ಯವೈಖರಿಗೆ ಎಚ್ಚರಿಕೆ ಗಂಟೆಯೂ ಆಗಲಿದೆ. ಸರ್ಕಾರಕ್ಕೆ ಅಗತ್ಯವಾದ ಬಹುಮತಕ್ಕೆ ಈ ಚುನಾವಣೆ ಫಲಿತಾಂಶ ಯಾವುದೇ ಪರಿಣಾಮ ಬೀರದು. ಆದರೂ, ಉಪಚುನಾವಣೆ ಫಲಿತಾಂಶ ಒಂದೋ ಹೊಣೆಗಾರಿಕೆ ಹೆಚ್ಚಿಸಲಿದೆ, ಇಲ್ಲವಾದರೆ ಎಚ್ಚರಿಕೆಯೂ ಆಗಬಹುದು.
ಬೆಂಗಳೂರು:ಮೈತ್ರಿ ಸರ್ಕಾರದ ಪತನ ಜತೆಗೆ ಕಾಂಗ್ರೆಸ್ ಶಾಸಕರ ಬಲ ಇಳಿಕೆಗೆ ಕಾರಣರಾದ ಶಾಸಕರು ನಿಧಾನವಾಗಿ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಬೇರು ಬಿಡುತ್ತಿದ್ದು, ಕೈ ಪಾಳಯಕ್ಕೆ ಹಂತ ಹಂತವಾಗಿ ನಷ್ಟ ಉಂಟುಮಾಡಲು ಆರಂಭಿಸಿದ್ದಾರೆ. ಸಚಿವ ಡಾ.ಕೆ.ಸುಧಾಕರ್, ಶಿವರಾಂ ಹೆಬ್ಬಾರ್ ಸೇರಿ ಹಲವರು ತಮ್ಮ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿಯನ್ನು ಅಧಿಕಾರದ ಗದ್ದುಗೆಗೆ ತಂದಿದ್ದಾರೆ. ಉಪಚುನಾವಣೆ ವೇಳೆ ಪಕ್ಷದ ಪದಾಧಿಕಾರಿಗಳು, ಸ್ಥಳೀಯ ಸಂಸ್ಥೆ ಸದಸ್ಯರೊಂದಿಗೆ ಬಿಜೆಪಿಗೆ ಆಗಮಿಸಿದ್ದ ಇವರೆಲ್ಲ, ಈಗ ನಿಧಾನವಾಗಿ ಸ್ಥಳೀಯ ಸಂಸ್ಥೆ ನೇತೃತ್ವವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲಾರಂಭಿಸಿದ್ದಾರೆ. ಕಾಂಗ್ರೆಸ್​ಗೆ ಕೈಕೊಟ್ಟ ಕ್ಷೇತ್ರಗಳಲ್ಲೆಲ್ಲ ಆ ಪಕ್ಷಕ್ಕೆ ಹಿನ್ನೆಡೆಯಾಗುತ್ತಿದ್ದು, ಪಕ್ಷ ಕೂಡ ಅಲ್ಲಿ ಪರ್ಯಾಯ ನಾಯಕತ್ವ ಬೆಳವಣಿಗೆ ಕುರಿತು ಹೆಚ್ಚಿನ ಗಮನ ಕೊಡಲು ಸಾಧ್ಯವಾಗಿಲ್ಲ. ಇನ್ನೊಂದು ಮಗ್ಗುಲಲ್ಲಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಟೀಕೆ ಮಾಡಿದಾಗ ವಲಸೆ ಬಂದವರ ಮೂಲಕವೇ ಖಾರವಾಗಿ ಪ್ರತಿಕ್ರಿಯೆ ಕೊಡಿಸಿ ಪ್ರತಿಪಕ್ಷದ ಬಾಯಿ ಮುಚ್ಚಿಸುವ ಕೆಲಸವನ್ನು ಬಿಜೆಪಿ ಅಚ್ಚುಕಟ್ಟಾಗಿ ಮಾಡುತ್ತಿದೆ. ಸರ್ಕಾರದ ಪರ ವಕಾಲತ್ತು ವಹಿಸುವ ಬಿಜೆಪಿ ನಾಯಕರ ಸಮರ್ಥನೆಗಿಂತ ವಲಸೆ ನಾಯಕರ ಸಮರ್ಥನೆ ದನಿ ಬಲವಾಗಿದ್ದು, ಸಿಎಂ ಯಡಿಯೂರಪ್ಪ ಬೆನ್ನಿಗೆ ಬಲವಾಗಿ ನಿಲ್ಲುವವರೂ ಅವರೇ ಎಂಬಂತಾಗಿದ್ದಾರೆ. ಬೂತ್ ಮಟ್ಟವನ್ನು ಬಲಗೊಳಿಸುವ ಮತ್ತು ಕೇಡರ್ ಬಲಗೊಳಿಸಬೇಕೆಂಬ ಪಕ್ಷದ ಗುರಿ ಇನ್ನು ಮಾತಿನಲ್ಲೇ ಉಳಿದಿದೆ. ಹೀಗಾಗಿ ಈ ವಲಸೆ ಮುಖಂಡರ ಕ್ಷೇತ್ರದಲ್ಲಿ ಪಕ್ಷ ಇನ್ನಷ್ಟು ಸೊರಗಿರುವುದು ಕಂಡುಬಂದಿದೆ. ಮುಂದೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಈ ಶಾಸಕರ ಪ್ರಭಾವ ಹೆಚ್ಚಾಗಿ ಅವರು ತಮ್ಮ ನೆಲೆ ಇನ್ನಷ್ಟು ಭದ್ರಗೊಳಿಸಿಕೊಳ್ಳುವ ಸಾಧ್ಯತೆಯೂ ಇದೆ. ಇದು ಕಾಂಗ್ರೆಸ್​ಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.
ಬೆಂಗಳೂರು:ಉಪಚುನಾವಣೆ ತಲೆಬಿಸಿ ಮುಗಿಯುತ್ತಿದ್ದಂತೆ ಸಂಪುಟ ಸರ್ಕಸ್​ಗೆ ಕೈ ಹಾಕಲಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ನವದೆಹಲಿ ತಲೆಬೇನೆ ಶುರುವಾಗಿದೆ. ಸಂಪುಟ ಪ್ರಕ್ರಿಯೆ ಬಗ್ಗೆ ವರಿಷ್ಠರ ಒಪ್ಪಿಗೆ ಪಡೆದುಕೊಳ್ಳಲು ದೆಹಲಿಗೆ ತೆರಳಲು ಸಿಎಂ ಉತ್ಸುಕರಾಗಿದ್ದು, ಈಗಾಗಲೆ ಆಪ್ತ ಸಚಿವರ ಜತೆಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಇನ್ನೊಂದು ವಾರದಲ್ಲಿ ದೆಹಲಿ ಯಾತ್ರೆ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಹೈಕಮಾಂಡ್​ನಿಂದ ಗ್ರೀನ್ ಸಿಗ್ನಲ್ ಬರುವ ಸಾಧ್ಯತೆಯೂ ಇದೆ ಎಂದು ತಿಳಿದುಬಂದಿದೆ. ಚುನಾವಣೆಗೆ ಮುನ್ನವೇ ಸಂಪುಟ ಸೇರ್ಪಡೆಗೆ ಮುಂದಾಗಿದ್ದ ಬಿಎಸ್​ವೈಗೆ, ಚುನಾವಣೆ ಬಳಿಕ ದೆಹಲಿಗೆ ಬರು ವಂತೆ ವರಿಷ್ಠರು ಸೂಚನೆ ಹಿನ್ನೆಲೆಯಲ್ಲಿ ಪ್ರವಾಸ ಕಾರ್ಯಕ್ರಮ ಮುಂದೂಡಿದ್ದರು. ಸಂಪುಟ ಸೇರ್ಪಡೆಗೊಳ್ಳಲು ಪೈಪೋಟಿಯಲ್ಲಿರುವ ಶಾಸಕರಿಗೂ ಸಿಎಂ ಸಮಾಧಾನದ ಮಾತುಗಳನ್ನೆ ಹೇಳಿ ಸಾಕಾಗಿ ಹೋಗಿದೆ. ಇನ್ನು ಯಾವುದೇ ಕುಂಟು ನೆಪ ಕೇಳುವ ಸ್ಥಿತಿಯಲ್ಲಿ ಯಾರೂ ಇಲ್ಲ ಎನ್ನುವುದು ಸಿಎಂಗೆ ಮನದಟ್ಟಾಗಿದೆ. ದೆಹಲಿ ಪ್ರವಾಸವನ್ನು ಮತ್ತೆ ಮುಂದೂಡಿದರೆ ಪಕ್ಷದೊಳಗೆ ಭಿನ್ನಮತ ಉಂಟಾಗಬಹುದು. ಸಂಪುಟ ಸೇರ್ಪಡೆ ಪ್ರಕ್ರಿಯೆ ಮುಗಿಸಬೇಕೆನ್ನುವ ತೀರ್ಮಾನ ತೆಗೆದುಕೊಂಡಿರುವ ಸಿಎಂಗೆ ಹೈಕಮಾಂಡ್ ಸ್ಪಂದನೆ ನೀಡುವುದೇ ಕಾದು ನೋಡಬೇಕಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನೀಲಿನಕ್ಷೆ ಸಿದ್ಧಪಡಿಸಲು ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಖಾಸಗಿ ಕಂಪನಿ ಮೊರೆ ಹೋಗಿದ್ದಾರೆ. ಮುಂದಿನ ವಿಧಾನಸಭೆ ಸಾರ್ವತ್ರಿಕ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಈಗಿನಿಂದಲೇ ತಂತ್ರಗಾರಿಕೆ ರೂಪಿಸುವ ಉದ್ದೇಶದಿಂದ ದೆಹಲಿಯ ಡಿಸೈನ್ಡ್ ಬಾಕ್ಸ್ ಎಂಬ ಕಂಪನಿಗೆ ಆಹ್ವಾನ ನೀಡಿದ್ದಾರೆ. ಮಂಗಳವಾರ ಬೆಳಗ್ಗೆ ಸದಾಶಿವನಗರದ ತಮ್ಮ ನಿವಾಸದಲ್ಲಿ ಡಿ.ಕೆ.ಶಿವಕುಮಾರ್ ಈ ಕಂಪನಿಯೊಂದಿಗೆ ಪ್ರಥಮ ಸುತ್ತಿನ ಸಭೆ ನಡೆಸುವರು. ಕಳೆದ ವಾರ ಬೆಂಗಳೂರಿಗೆ ಆಗಮಿಸಿದ್ದ ಸಂಸದ ಕಾರ್ತಿ ಚಿದಂಬರಂ ಇದೇ ವಿಚಾರವಾಗಿ ಡಿಕೆಶಿ ಜತೆ ಚರ್ಚೆ ನಡೆಸಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − one =
Remember me
