|ಗೋವಿಂದರಾಜು ಚಿನ್ನಕುರ್ಚಿಬೆಂಗಳೂರು
ನಕಲಿ ದಾಖಲೆಗಳನ್ನು ಸೃಷ್ಟಿಸಿ ಯಾರದ್ದೋ ಆಸ್ತಿಯನ್ನು ಇನ್ಯಾರದ್ದೋ ಹೆಸರಿಗೆ ನೋಂದಣಿ ಮಾಡಿಸುವ ಭೂಗಳ್ಳರ ನಿಯಂತ್ರಣಕ್ಕೆ ಕಂದಾಯ ಇಲಾಖೆ ಸಿದ್ಧತೆ ನಡೆಸಿದೆ. ನಕಲಿ, ತಿರುಚಿದ ದಾಖಲೆ ಸಲ್ಲಿಸಿ ಅಥವಾ ಬದಲಿ ವ್ಯಕ್ತಿಗಳು ಹಾಜರಾಗಿ ಸ್ಥಿರಾಸ್ತಿಯನ್ನು ನೋಂದಣಿ ಮಾಡಿಸಿ ಭೂಕಬ್ಜ ಮಾಡುವುದನ್ನು ತಡೆಯಲು ಕರ್ನಾಟಕ ನೋಂದಣಿ ಕಾಯ್ದೆ ತಿದ್ದುಪಡಿಗೆ ಪ್ರಕ್ರಿಯೆಗಳು ಆರಂಭವಾಗಿವೆ. ನಕಲಿ ಜಾಲಕ್ಕೆ ಸಿಲುಕಿ ತೊಂದರೆಗೆ ಒಳಗಾಗುವ ಅಸಲಿ ಭೂಮಾಲೀಕರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಈ ಯೋಜನೆ ಹಾಕಿಕೊಂಡಿದೆ.
ಕೃಷಿ ಭೂಮಿ, ವಿಲ್ಲಾ, ಸೈಟು, ಮನೆ, ಕಟ್ಟಡ ಸೇರಿ ಸ್ಥಿರಾಸ್ತಿಗಳ ಕ್ರಯ, ದಾನಪತ್ರ, ವಿಭಾಗಪತ್ರ, ಹಕ್ಕು ಬಿಡುಗಡೆ ಮತ್ತು ಕರಾರುಪತ್ರಗಳ ನೋಂದಣಿ ವೇಳೆ ನಕಲಿ ದಾಖಲೆ ಸಲ್ಲಿಸಿ ಅಥವಾ ಬದಲಿ ವ್ಯಕ್ತಿಗಳು ಸಬ್ ರಿಜಿಸ್ಟ್ರಾರ್ ಕಚೇರಿಗೆ ಹಾಜರಾಗಿ ನೋಂದಣಿ ಮಾಡಿಸಿದರೆ ಅಂತಹ ದಾಖಲೆಪತ್ರಗಳನ್ನು ರದ್ದುಪಡಿಸುವ ಅಧಿಕಾರವನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಜಿಲ್ಲಾ ನೋಂದಣಾಧಿಕಾರಿಗಳಿಗೆ (ಡಿಆರ್) ವಹಿಸಲು ಕಂದಾಯ ಇಲಾಖೆ ಮುಂದಾಗಿದೆ. ರಾಜ್ಯದಲ್ಲಿ 260 ಸಬ್ ರಿಜಿಸ್ಟ್ರಾರ್ ಕಚೇರಿಗಳಿದ್ದು, ವರ್ಷಕ್ಕೆ ಅಂದಾಜು 10 ಸಾವಿರ ದಾಖಲೆಪತ್ರಗಳು ನೋಂದಣಿ ಆಗುತ್ತವೆ. ಕಳೆದ ಸಾಲಿನಲ್ಲಿ 15 ಸಾವಿರ ಕೋಟಿ ರೂ.ಗೂ ಅಧಿಕ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹವಾಗಿದೆ.
ಆದರೆ, ನೋಂದಣಿ ಸಮಯದಲ್ಲಿ ದಾಖಲೆಪತ್ರಗಳು ಮತ್ತು ಪಕ್ಷಗಾರರು ಅಸಲಿಯೋ ನಕಲಿಯೋ ಎಂಬುದನ್ನು ಪರೀಕ್ಷಿಸುವ ಅಧಿಕಾರ ಸಬ್ ರಿಜಿಸ್ಟ್ರಾರ್​ಗಳಿಗಿಲ್ಲ. ದಿನಕ್ಕೆ ನೂರಾರು ದಾಖಲೆಪತ್ರಗಳು ನೋಂದಣಿ ಆಗುವ ಸಮಯದಲ್ಲಿ ಭೂಗಳ್ಳರು, ವಂಚಕರು ಸಂಚು ರೂಪಿಸಿ ನಕಲಿ ದಾಖಲೆ ಮತ್ತು ಬದಲಿ ಪಕ್ಷಗಾರರನ್ನು ಹಾಜರುಪಡಿಸಿ ನೋಂದಣಿ ಮಾಡಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.
ಒಮ್ಮೆ ನೋಂದಣಿಯಾದ ದಾಖಲೆಪತ್ರಗಳನ್ನು ರದ್ದುಪಡಿಸುವ ಅಧಿಕಾರ ಸಬ್ ರಿಜಿಸ್ಟ್ರಾರ್ ಅಥವಾ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತರಿಗೂ ಇಲ್ಲ. ಈಗ ನೋಂದಣಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ನಕಲಿ ದಾಖಲೆ ಎಂಬುದು ಗೊತ್ತಾದ ಕೂಡಲೇ ನೋಂದಣಿ ರದ್ದುಪಡಿಸುವ ಅಧಿಕಾರವನ್ನು ಜಿಲ್ಲಾ ನೋಂದಣಾಧಿಕಾರಿಗೆ ನೀಡಲಾಗುತ್ತಿದೆ.
ಈಗ ಯಾವ ಪದ್ಧತಿ ಇದೆ?:ನಕಲಿ ದಾಖಲೆ ಸಲ್ಲಿಸಿ ಭೂ ಕಬಳಿಸಿಕೆ ಗೊತ್ತಾದರೂ ಸಂಬಂಧಿಸಿದ ಆಸ್ತಿಯ ಮಾಲೀಕ ಕೋರ್ಟ್ ಮೊರೆ ಹೋಗಿಯೇ ನ್ಯಾಯ ಪಡೆಯಬೇಕಿದೆ. ಕೋರ್ಟ್ ಮೆಟ್ಟಿಲೇರದೆಯೇ ನ್ಯಾಯ ಒದಗಿಸಲು ತಮಿಳುನಾಡು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಮಾದರಿಯನ್ನು ರಾಜ್ಯದಲ್ಲಿ ಸಹ ಜಾರಿಗೆ ತರಲಾಗುತ್ತದೆ. ಕರ್ನಾಟಕ ನೋಂದಣಿ ಕಾಯ್ದೆಗೆ ತಿದ್ದುಪಡಿ ತಂದು ನಕಲಿ ದಾಖಲೆ ಅಥವಾ ಬದಲಿ ವ್ಯಕ್ತಿಗಳು ಹಾಜರಾಗಿ ಸ್ಥಿರಾಸ್ತಿ ನೋಂದಣಿ ಮಾಡಿಸಿದ್ದರೆ ರದ್ದು ಮಾಡುವ ಅಧಿಕಾರವನ್ನು ಜಿಲ್ಲಾ ನೋಂದಣಾಧಿಕಾರಿಗೆ (ಡಿಆರ್) ನೀಡಲಾಗುತ್ತದೆ. ಇದರಿಂದ ನಿಜವಾದ ವಾರಸುದಾರರಿಗೆ ಶೀಘ್ರ ನ್ಯಾಯದಾನ ಸಿಗಲಿದೆ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಎಚ್​ಕ್ಯೂಎಗೆ ಅಧಿಕಾರ ನೀಡಿದರೆ ಒಳಿತು:ಡಿಆರ್​ಗಳಿಗೆ ಈಗಾಗಲೇ ಕೆಲಸದ ಒತ್ತಡ ಇರುವುದರಿಂದ ಕೇಂದ್ರ ಕಚೇರಿ ಸಹಾಯಕರಿಗೆ (ಎಚ್​ಕ್ಯೂಎ) ರದ್ದುಪಡಿಸುವ ಅಧಿಕಾರ ವಹಿಸಿದರೆ ಒಳಿತು ಎಂಬ ವಾದವೂ ಕೇಳಿಬಂದಿದೆ. ಇಲಾಖೆಯಲ್ಲಿ 35 ಎಚ್​ಕ್ಯೂಎ ಹುದ್ದೆಗಳಿವೆ. ಕೆಲಸ ಇಲ್ಲದ ಕಾರಣ ಯಾರೂ ಈ ಹುದ್ದೆಗೆ ಬರಲು ಆಸಕ್ತಿ ತೋರಿಸುತ್ತಿಲ್ಲ. ಪರಿಣಾಮ 25 ಹುದ್ದೆಗಳು ಖಾಲಿ ಉಳಿದಿವೆ. ನಕಲಿ ದಾಖಲೆ ನೋಂದಣಿ ರದ್ದುಪಡಿಸುವ ಅಧಿಕಾರ ಎಚ್​ಕ್ಯೂಎಗೆ ಕೊಟ್ಟು ಮೇಲುಸ್ತುವಾರಿಯನ್ನು ಡಿಆರ್​ಗೆ ವಹಿಸಿದರೆ ಕೆಲಸಗಳು ಸುಸೂತ್ರವಾಗಿ ನಡೆಯಲಿವೆ. ಈಗಾಗಲೇ ನೋಂದಣಿ ಕಾಯ್ದೆ 8ರಲ್ಲಿ ಪರಿವೀಕ್ಷಕರ ಹುದ್ದೆ (ಎಚ್​ಕ್ಯೂಎ) ಅಧಿಕಾರ ಇದೆ. ಹೀಗಾಗಿ ಕಾನೂನು ತೊಡಕು ಇಲ್ಲವೆಂದು ತಜ್ಞರ ಅಭಿಪ್ರಾಯವಾಗಿದೆ.
ಭೂಗಳ್ಳರಿಂದ ವಂಚನೆ ಹೇಗೆ?:ಖಾಲಿ ಸೈಟ್​ಗಳನ್ನೇ ಟಾರ್ಗೆಟ್ ಮಾಡಿ ಸಂಬಂಧಪಟ್ಟ ಇಲಾಖೆಯಲ್ಲಿ ನಕಲು ದಾಖಲೆ ಪಡೆಯುವ ಭೂಗಳ್ಳರು, ನಕಲಿ ಖಾತೆ, ತೆರಿಗೆ ರಸೀದಿ, ಗುರುತಿನ ಚೀಟಿಗಳನ್ನು ಸೃಷ್ಟಿಸುತ್ತಾರೆ. ಅದಕ್ಕೆ ತಕ್ಕಂತೆ ವ್ಯಕ್ತಿಗಳನ್ನು ಹೊಂದಿಸಿ ಸಬ್-ರಿಜಿಸ್ಟ್ರಾರ್ ಕಚೇರಿಗೆ ಹಾಜರುಪಡಿಸಿ ಕೋಟ್ಯಂತರ ರೂ. ಮೌಲ್ಯದ ಆಸ್ತಿಗಳನ್ನು ಮಾರಾಟ ಮಾಡಿ ಹಣ ಕಬಳಿಸುತ್ತಿದ್ದಾರೆ. ಇನ್ನೂ ಕೆಲವರು ಮಾರಾಟಗಾರ ಮತ್ತು ಖರೀದಿದಾರರ ಬದಲಿಗೆ ಬೇರೆ ವ್ಯಕ್ತಿಗಳನ್ನು ಕರೆತಂದು ನಕಲಿ ಗುರುತಿನ ಚೀಟಿ ಆಧಾರದ ಮೇಲೆ ನೋಂದಣಿ ಮಾಡಿಸಿಕೊಂಡು ಬ್ಯಾಂಕ್​ನಲ್ಲಿ ಸಾಲ ಪಡೆದು ತಲೆಮರೆಸಿಕೊಳ್ಳುತ್ತಿದ್ದಾರೆ.
ನಕಲಿ ದಾಖಲೆ ಸೃಷ್ಟಿಸಿ ಬೇರೆಯವರ ಸ್ಥಿರಾಸ್ತಿ ಕಬಳಿಸುವವರ ಕಡಿವಾಣಕ್ಕೆ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ. ನಕಲಿ ದಾಖಲೆ ಮೇಲೆ ನೋಂದಣಿಯಾದ ದಾಖಲೆಪತ್ರಗಳನ್ನು ರದ್ದುಪಡಿಸುವ ಅಧಿಕಾರವನ್ನು ಜಿಲ್ಲಾ ನೋಂದಣಾಧಿಕಾರಿಗೆ ನೀಡಲಾಗುತ್ತದೆ.
|ಆರ್. ಅಶೋಕ್ಕಂದಾಯ ಸಚಿವ
ಎಫ್​ಐಆರ್ ದಾಖಲಿಸಿ ಶುಲ್ಕ ಜಪ್ತಿ:ನಕಲಿ ದಾಖಲೆ ಮೇಲೆ ನೋಂದಣಿಯಾದ ದಾಖಲೆಪತ್ರಗಳನ್ನು ಡಿಆರ್ ತನ್ನ ಅಧಿಕಾರ ಚಲಾಯಿಸಿ ಕಾವೇರಿ 2.0 ತಂತ್ರಾಂಶದಲ್ಲಿ ನೇರವಾಗಿ ರದ್ದ್ಧುಪಡಿಸಿದ ಮೇಲೆ ತಪ್ಪಿತಸ್ಥರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಗೆ ದೂರು ಕೊಟ್ಟು ಎಫ್​ಐಆರ್ ಮಾಡಿಸಲಾಗುತ್ತದೆ. ಆದರೆ, ಸರ್ಕಾರಕ್ಕೆ ಪಾವತಿ ಮಾಡಿರುವ ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಹಿಂತಿರುಗಿಸಲಾಗುವುದಿಲ್ಲ.
ನ್ಯಾಯ ಸಿಗಲು ಕನಿಷ್ಠ 5 ವರ್ಷ!:ನಕಲಿ ದಾಖಲೆ ಸಲ್ಲಿಸಿ ನೋಂದಣಿಯಾದ ಪತ್ರಗಳ ರದ್ದತಿಗೆ ನೈಜ ವಾರಸುದಾರರು ಕೋರ್ಟ್ ಮೊರೆ ಹೋದರೆ ನ್ಯಾಯದಾನಕ್ಕೆ ಕನಿಷ್ಠ 5 ವರ್ಷ ಬೇಕಾಗುತ್ತದೆ. ಇದನ್ನೇ ದುರ್ಬಳಕೆ ಮಾಡಿಕೊಳ್ಳುತ್ತಿರುವ ಭೂಗಳ್ಳರು, ನಕಲಿ ದಾಖಲೆ ಸಲ್ಲಿಸಿ ಆಸ್ತಿ ಕಬಳಿಸಿ ಕೋರ್ಟ್​ಗೆ ಎಳೆದು ರಾಜೀ-ಸಂಧಾನ ನೆಪದಲ್ಲಿ ವಾರಸುದಾರರಿಗೆ ತೊಂದರೆ ಕೊಡುತ್ತಿದ್ದಾರೆ. ಡಿಆರ್​ಗೆ ಅಧಿಕಾರ ನೀಡಿದರೆ ಒಂದೇ ತಿಂಗಳಲ್ಲಿ ನೋಂದಣಿ ಪತ್ರ ರದ್ದು ಮಾಡಿ ನ್ಯಾಯ ಒದಗಿಸಲು ಅನುಕೂಲ ಆಗಲಿದೆ.

ರೇಸ್‌ಕೋರ್ಸ್ ರಸ್ತೆಗೆ ರೆಬೆಲ್ ಸ್ಟಾರ್​ ಅಂಬರೀಷ್ ಹೆಸರು; ಮುಖ್ಯಮಂತ್ರಿ ಬೊಮ್ಮಾಯಿ ಘೋಷಣೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + eighteen =
Remember me
