|ವಿಲಾಸ ಮೇಲಗಿರಿಬೆಂಗಳೂರು
ಕಬ್ಬು ಈಗ ಕಲ್ಪವೃಕ್ಷವಾಗುತ್ತಿದೆ. ಕೇವಲ ಸಕ್ಕರೆ ಅಥವಾ ಬೆಲ್ಲ ಉತ್ಪಾದನೆಗಷ್ಟೇ ಸೀಮಿತವಾಗಿದ್ದ ಕಬ್ಬಿನಿಂದ ಇಂದು ಅನೇಕ ಉಪ ಉತ್ಪನ್ನಗಳು ತಯಾರಾಗುತ್ತಿದ್ದು, ಬೆಳೆಗಾರರ ಉಜ್ವಲ ಭವಿಷ್ಯಕ್ಕೆ ಭಾಷ್ಯ ಬರೆದಿದೆ. ಕಾರ್ಖಾನೆಗಳು ಭರ್ಜರಿ ಲಾಭ ಪಡೆಯುತ್ತಿವೆ. ಇದರಲ್ಲಿ ರೈತರಿಗೂ ಪಾಲು ಸಿಗಬೇಕೆಂಬ ಆಗ್ರಹ ಇದೀಗ ಕೇಳಿಬರುತ್ತಿದೆ.
ಕಬ್ಬಿನ ವಾರ್ಷಿಕ ವಹಿವಾಟು ಸುಮಾರು 30 ಸಾವಿರ ಕೋಟಿ ರೂ.ಗಳಾದರೆ, ಪರೋಕ್ಷ ಆದಾಯ(ಮದ್ಯಸಾರ)ದಿಂದ ಸುಮಾರು 30 ಸಾವಿರ ಕೋಟಿ ರೂ. ಸರ್ಕಾರಕ್ಕೆ ಸಂದಾಯವಾಗುತ್ತದೆ. ಹಾಗಾಗಿ ಸರ್ಕಾರ ರೈತರಿಗೆ ಗರಿಷ್ಠ ಮಟ್ಟದ ಎಫ್​ಆರ್​ಪಿ ನೀಡಬೇಕು ಎಂಬುದು ಹೋರಾಟಗಾರರ ಒಕ್ಕೊರಲ ಅಭಿಪ್ರಾಯ.
ಬದಲಾದ ಕಾಲ: ಮೊದಲೆಲ್ಲ ಕಬ್ಬು ಕೊಟ್ಟು ವರ್ಷಗಟ್ಟಲೆ ಹಣಕ್ಕಾಗಿ ಕಾರ್ಖಾನೆ ಬಾಗಿಲು ಕಾಯುವ ಪರಿಸ್ಥಿತಿ ಇತ್ತು. ಕಟ್ಟುನಿಟ್ಟಿನ ಕಾಯ್ದೆ ಜಾರಿಯಿಂದ ಕಬ್ಬು ಬೆಳೆಗಾರರಿಗೆ ತುಸು ಹೆಚ್ಚು ಕಡಿಮೆ ಕಾಲ-ಕಾಲಕ್ಕೆ ಕಬ್ಬಿನ ಹಣ ಪಾವತಿಯಾಗುತ್ತಿದೆ. ಈ ಹಿಂದೆ ರೈತರ ಕಬ್ಬಿನ ಬಾಕಿ ಕೊಡಿಸಲು ಸರ್ಕಾರ ಅನೇಕ ಕಂಪನಿಗಳ ವಿರುದ್ಧ ಕಾನೂನು ಪ್ರಯೋಗ ಮಾಡಿತ್ತು. ಮತ್ತೆ ಕೆಲವು ಕಾರ್ಖಾನೆಗಳ ಸಕ್ಕರೆ ಮುಟ್ಟುಗೋಲು ಹಾಕಿಕೊಳ್ಳುತ್ತಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ರೈತನಿಗೆ ಕಾಲ ಕಾಲಕ್ಕೆ ಕಬ್ಬು ಮಾರಾಟದ ಹಣ ಕೈಸೇರುತ್ತಿದೆ. ಕಬ್ಬಿನ ಬಾಕಿ ಪಾವತಿಯಲ್ಲಿ ದೇಶದಲ್ಲೇ ರಾಜ್ಯ ನಂಬರ್ 1 ಸ್ಥಾನದಲ್ಲಿದೆ.
ಕಬ್ಬಿನಿಂದ ಪ್ರಮುಖವಾಗಿ ಎಥೆನಾಲ್ ಸೇರಿ ಉಪ ಉತ್ಪನ್ನಗಳನ್ನು ತಯಾರಿಸುತ್ತಿದ್ದು, ಇನ್ನು ಕೆಲವೇ ವರ್ಷಗಳಲ್ಲಿ ಕಾರ್ಖಾನೆ ಮಾಲೀಕರೇ ಕಬ್ಬಿಗಾಗಿ ರೈತನ ಮನೆ ಬಾಗಿಲು ಬಡಿದರೂ ಆಶ್ಚರ್ಯವಿಲ್ಲ!
ರೈತನಿಗೆ ಆದಾಯ ಹಂಚಿಕೆ ಅವಶ್ಯ:ಕಬ್ಬಿನ ಉತ್ಪಾದನಾ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಕಾರ್ವಿುಕರ ಕೂಲಿ, ಸಾಗಣೆ ವೆಚ್ಚ, ಕೀಟನಾಶಕ ಹಾಗೂ ರಸಗೊಬ್ಬರದ ದರ ಏರಿಕೆ ರೈತನಿಗೆ ಕಬ್ಬನ್ನು ಸಿಹಿಯಾಗಿಸುವ ಬದಲು ಕಹಿಯಾಗಿಸುತ್ತಿದೆ. ಹಾಗಾಗಿ ನ್ಯಾಯಯುತ ಬೆಲೆಗೆ ಒತ್ತಾಯಿಸಿ ಕಬ್ಬು ಬೆಳೆಗಾರರು ಪ್ರತಿಭಟನೆ, ಹೋರಾಟ, ಅಹೋರಾತ್ರಿ ಧರಣಿ ಮತ್ತಿತರ ಮಾರ್ಗಗಳ ಮೂಲಕ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಕಬ್ಬಿಗೆ ಬೆಂಬಲ ಬೆಲೆ ಹೆಚ್ಚಿಸಬೇಕು. ಜತೆಗೆ ಉಪ ಉತ್ಪನ್ನಗಳ ಲೆಕ್ಕ ಹಾಕಿ ಆದಾಯ ಹಂಚಿಕೆಯಾಗಬೇಕು ಎಂಬುದು ರೈತರ ಪ್ರಮುಖ ಬೇಡಿಕೆ. ಕೇವಲ ಪ್ರತಿಭಟನೆ ನಡೆಸಿದಾಗ 100-200 ರೂ. ಬೆಂಬಲ ಬೆಲೆ ಹೆಚ್ಚಿಸಿದರೆ ಸಾಕಾಗುವುದಿಲ್ಲ. ಕಾರ್ಖಾನೆಗಳಿಗೆ ಬರುವ ಕಬ್ಬಿನ ಎಲ್ಲ ಉತ್ಪನ್ನಗಳ ಆದಾಯವನ್ನು ವೈಜ್ಞಾನಿಕವಾಗಿ ಲೆಕ್ಕ ಹಾಕಿ ರೈತರಿಗೂ ಪಾಲು ಹಂಚಿಕೆ ಮಾಡಬೇಕು ಎಂಬುದು ಬಲವಾದ ಆಗ್ರಹ.
ಈ ಹಿನ್ನೆಲೆಯಲ್ಲಿ ಸರ್ಕಾರ ತಾಂತ್ರಿಕ ಸಮಿತಿಯೊಂದನ್ನು ರಚನೆ ಮಾಡಿದೆ. ಕೆಲವೇ ದಿನಗಳಲ್ಲಿ ಈ ವರದಿ ಸರ್ಕಾರದ ಕೈಸೇರಿ ಸರ್ಕಾರ ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ಕೊಡುವ ನಿರೀಕ್ಷೆ ಇದೆ.
ಎಥೆನಾಲ್​ನಿಂದ ರೈತರ ಆದಾಯ ಏರಿಕೆ:ಸಾಂಪ್ರದಾಯಿಕ ಇಂಧನದ ಮೇಲಿನ ಒತ್ತಡ ಕಡಿಮೆ ಮಾಡಲು ಸರ್ಕಾರ ವಿಶೇಷ ಆಸ್ತಿ ವಹಿಸಿದೆ. ಈ ಹಿನ್ನೆಲೆಯಲ್ಲಿ ಕಬ್ಬಿನಿಂದ ಎಥೆನಾಲ್ ಉತ್ಪಾದಿಸಲು ಮತ್ತು ಅದನ್ನು ಬಳಸಲು ಸಾಕಷ್ಟು ಉತ್ತೇಜನ ನೀಡುತ್ತಿದೆ. ಇದರ ಪರಿಣಾಮವಾಗಿ ಸಕ್ಕರೆ ಕಾರ್ಖಾನೆಗಳು ಸಕ್ಕರೆ ಉತ್ಪಾದನೆಗೆ ಕೊಡುವ ಆದ್ಯತೆಯನ್ನೇ ಎಥೆನಾಲ್​ಗೂ ಕೊಡುತ್ತಿವೆ.
ಉಪ ಉತ್ಪನ್ನ ಏನೇನು?:ಕಬ್ಬಿನಿಂದ ಸಕ್ಕರೆ ಮಾತ್ರವಲ್ಲದೆ, ಎಥೆನಾಲ್, ಪ್ರೆಸ್ ಮಡ್, ಬಯೋ ಫರ್ಟಿಲೈಸರ್, ಮೊಲಾಸಸ್, ಅಲ್ಕೋಹಾಲ್, ಬಗಾಸ್, ಸ್ಟೀಮ್ ವಿದ್ಯುತ್​ಗಳನ್ನು ಕಾರ್ಖಾನೆಗಳು ಉಪ ಉತ್ಪನ್ನಗಳಾಗಿ ಉತ್ಪಾದಿಸುತ್ತಿವೆ.
ಮದ್ಯಸಾರ ತಯಾರಿಕೆ ಆದಾಯ:ಸರ್ಕಾರಕ್ಕೆ ಮದ್ಯ ಸಾರದಿಂದ 2022-23ರ ಸಾಲಿನಲ್ಲಿ 25,311 ಕೋಟಿ ರೂ., ಬೀಯರ್​ನಿಂದ 3000, ಸನ್ನದು ಶುಲ್ಕ 660 ಕೋಟಿ ರೂ. ಹಾಗೂ ಇತರೆ ಮೂಲಗಳಿಂಧ 29 ಕೋಟಿ ರೂ. ಸೇರಿ 29,000 ಕೋಟಿ ರೂ. ಅಬಕಾರಿ ರಾಜಸ್ವವನ್ನು ಸರ್ಕಾರ ನಿರೀಕ್ಷಿಸಿದೆ.
41 ಕಾರ್ಖಾನೆಗೆ ಪ್ರಸ್ತಾವನೆ:ಕಬ್ಬಿನ ಉಪ ಉತ್ಪನ್ನಗಳ ಲಾಭಕ್ಕೆ ಆಕರ್ಷಿತವಾಗಿರುವ ಉದ್ಯಮಿಗಳು 41 ಹೊಸ ಕಾರ್ಖಾನೆ ತೆರೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಪೈಕಿ ಬೆಳಗಾವಿ 10, ಬಾಗಲಕೋಟೆ 5, ವಿಜಯಪುರ 7, ಧಾರವಾಡ 6, ಹಾವೇರಿ 4, ಗದಗ 1, ಕೊಪ್ಪಳ 2, ಬೀದರ್ 1, ಕಲಬುರಗಿ 5, ವಿಜಯನಗರ 1, ಮೈಸೂರು1 ಅರ್ಜಿಗಳು ಸಲ್ಲಿಕೆಯಾಗಿವೆ. ಈ ವರ್ಷ 35ಕ್ಕೂ ಹೆಚ್ಚು ಕಾರ್ಖಾನೆಗೆ ಸರ್ಕಾರ ಒಪ್ಪಿಗೆ ನೀಡುವ ಸಾಧ್ಯತೆಗಳಿವೆ.
ಸರ್ಕಾರ ರೈತರ ಮೂಗಿಗೆ ತುಪ್ಪ ಸವರಬಾರದು. ಕಂದಾಯ ಹಂಚಿಕೆ ಸೂತ್ರವನ್ನು ಅಳವಡಿಸಿಕೊಳ್ಳಬೇಕು. ಸಿ.ರಂಗರಾಜನ್ ವರದಿ ಅನ್ವಯ ರೈತರಿಗೆ ನ್ಯಾಯಯುತ ಪಾಲು ನೀಡಬೇಕು. ಉಪ ಉತ್ಪನ ವಿಚಾರದಲ್ಲಿ 30:70 ಅನುಪಾತ ಪಾಲನೆಯಾಗಬೇಕು. ಕೇವಲ ಎಫ್​ಆರ್​ಪಿ ಹೆಚ್ಚಿಸಿ ರೈತರನ್ನು ಪದೇ ಪದೆ ವಂಚಿಸಬಾರದು. ಕಾರ್ಖಾನೆ ಮಾಲೀಕರ ಒತ್ತಡಕ್ಕೆ ಮಣಿಯಬಾರದು.
|ಸಿದಗೌಡ ಮೋದಗಿರಾಜ್ಯಾಧ್ಯಕ್ಷ, ಭಾರತೀಯ ಕೃಷಿಕ ಸಮಾಜ
(100 ಕೆಜಿ ಸಕ್ಕರೆ: ಶೇ.10 ಇಳುವರಿಗೆ)
ಪುರುಷರೇ ‘ಸೋ ಸ್ವೀಟ್​’, ಮಹಿಳೆಯರಲ್ಲ..!; ಇಲ್ಲಿದೆ ಅಂಕಿ-ಅಂಶ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + fourteen =
Remember me
