|ವಿಲಾಸ ಮೇಲಗಿರಿಬೆಂಗಳೂರು
ಗ್ರಾಮ ಪಂಚಾಯಿತಿಗಳ ಆಡಳಿತ ನಿಯಂತ್ರಣಕ್ಕೆ ಸಿಕ್ಕರೆ ಬೇರು ಮಟ್ಟದಲ್ಲಿ ಪಕ್ಷ ಬಲವರ್ಧನೆ ಸಾಧ್ಯ. ಅದೇ ಕಾರಣಕ್ಕೆ ಈ ಚುನಾವಣೆ ಮಹತ್ವದ್ದು. ಇಲ್ಲಿ ಗೆದ್ದವನಿಗೆ ಮುಂದಿನ ಚುನಾವಣೆಗಳಲ್ಲಿ ಬೇಡಿಕೆ ಹೆಚ್ಚು. ಹಾಗಾಗಿ, ಗ್ರಾಪಂ ಸದಸ್ಯನಾಗಲು ಆಕಾಂಕ್ಷಿ ಮತಕ್ಕಾಗಿ ಎಷ್ಟು ಬೇಕಿದ್ದರೂ ಖರ್ಚು ಮಾಡಲು ಸಿದ್ಧನಿರುತ್ತಾನೆ. ಇನ್ನು ಅವಿರೋಧ ಆಯ್ಕೆ ಹೆಸರಿನಲ್ಲಂತೂ ಭಾರಿ ಹಣ ಚಲಾವಣೆಯಾಗುತ್ತದೆ.
ಹೌದು.. ಹೇಗಾದರೂ ಸರಿ, ಸದಸ್ಯನಾಗಲೇಬೇಕು ಎಂದು ಕೊಂಡಿರುವ ಆಕಾಂಕ್ಷಿಗಳು ಗ್ರಾಮಗಳ ಜಾತ್ರೆ, ದೇವಸ್ಥಾನ ಜೀಣೋದ್ಧಾರ, ಶಾಲಾ ಕಟ್ಟಡ ನಿರ್ವಣ, ದುರಸ್ತಿ ಮತ್ತಿತರ ಕಾಮಗಾರಿ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಚೆಲ್ಲುತ್ತಿದ್ದಾರೆ. ಕಲಬುರಗಿ ಜಿಲ್ಲೆ ಯಡ್ರಾಮಿಯಲ್ಲಿ ಗ್ರಾಪಂ ಸದಸ್ಯ ಸ್ಥಾನಗಳನ್ನು ಹರಾಜು ಹಾಕಲಾಗಿದೆ. ತುಮಕೂರಿನಲ್ಲಿ ಸದಸ್ಯ ಸ್ಥಾನವೊಂದು 6 ಲಕ್ಷ ರೂಪಾಯಿಗೆ ಹರಾಜಾಗಿದೆ. ಗ್ರಾಪಂ ಚುನಾವಣೆಯಲ್ಲಿ ನೀತಿ ಸಂಹಿತೆ ಪಾಲನೆಯಾಗುತ್ತಿಲ್ಲ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ನಗರ ಪ್ರದೇಶಗಳಿಂದ ಮದ್ಯ ಖರೀದಿಸಿ ದಾಸ್ತಾನು ಮಾಡುತ್ತಿರುವ ಪ್ರಕರಣ ವರದಿಯಾಗುತ್ತಿವೆ. ಅಲ್ಲಲ್ಲಿ ಪೊಲೀಸರು ಜಫ್ತಿ ಮಾಡಿರುವ ಉದಾಹರಣೆಗಳೂ ಇವೆ. ಈ ಬಾರಿಯ ಚುನಾವಣೆ ವೇಳೆ ಹಿಂದೆಂದಿಗಿಂತಲೂ ಹೆಚ್ಚು ಮದ್ಯ ಮಾರಾಟವಾಗುತ್ತಿದೆ. ರಾಜ್ಯದ ಒಟ್ಟು 5735 ಗಾಪಂಗಳಿಗೆ ಚುನಾವಣೆ ನಡೆಯಲಿದ್ದು, ಸುಮಾರು 92,121 ಸದಸ್ಯರು ಆಯ್ಕೆ ಆಗಬೇಕಿದೆ. ಈ ಪೈಕಿ ಐದಾರು ಸಾವಿರ ಸದಸ್ಯ ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆ ನಡೆಯುವ ಸಾಧ್ಯತೆಗಳಿವೆ.
ಸಿರಿವಂತರಿಗೆ ಅಧಿಕಾರ ಗದ್ದುಗೆ:ಹಣವೇ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಶ್ರೀಮಂತರು, ತೋಳ್ಬಲವುಳ್ಳವರು ಅಧಿಕಾರ ಗದ್ದುಗೆ ಹಿಡಿಯುತ್ತಿದ್ದಾರೆ. ವಿಶೇಷವಾಗಿ ನಗರ/ಪಟ್ಟಣಗಳಿಗೆ ಹೊಂದಿಕೊಂಡಂತಿರುವ ಗ್ರಾಮ ಪಂಚಾಯಿತಿಗಳಲ್ಲಿ ಮತದಾರರಿಗೆ ದೊಡ್ಡ ಮೊತ್ತದ ಕೊಡುಗೆಗಳು, ಮೋಜು ಮಸ್ತಿಯ ಭಾಗ್ಯ ದೊರೆಯುತ್ತಿದೆ. ರಾಜ್ಯ ಚುನಾವಣಾ ಆಯೋಗ ಚುನಾವಣೆಯ ಸಂಪೂರ್ಣ ಉಸ್ತುವಾರಿ ಯನ್ನು ಜಿಲ್ಲಾಡಳಿತಗಳಿಗೆ ವಹಿಸುವುದರಿಂದ ನೀತಿ ಸಂಹಿತೆಯ ಕಟ್ಟು ನಿಟ್ಟಿನ ಪಾಲನೆ, ಅಕ್ರಮಗಳಿಗೆ ನಿಯಂತ್ರಣ ಕಷ್ಟ ಎನ್ನಲಾಗಿದೆ.
ಅಕ್ರಮ ತಡೆಗೆ ಒತ್ತು ಅಗತ್ಯ:ಮತಕ್ಕೋಸ್ಕರ ಅಭ್ಯರ್ಥಿಗಳು ಹೊಸ ಹೊಸ ಆಮಿಷಗಳನ್ನು ಒಡ್ಡುತ್ತಲೇ ಇದ್ದಾರೆ. ಸದಸ್ಯತ್ವ ಹರಾಜು, ಗ್ರಾಮಗಳ ಅಭಿವೃದ್ಧಿ ಕಾರ್ಯಗಳಿಗೆ ಅಭ್ಯರ್ಥಿಗಳಿಂದ ಆರ್ಥಿಕ ನೆರವು ಪಡೆಯುವುದನ್ನು ಈಗಿರುವ ಕಾಯ್ದೆಯನ್ನೇ ಬಳಸಿಕೊಂಡು ತಡೆಯಬೇಕಿದೆ ಎನ್ನುತ್ತಾರೆ ಮತದಾನ ತಜ್ಞರು. ಪ್ರಜಾಪ್ರತಿನಿಧಿ ಕಾಯ್ದೆ, ಗ್ರಾಮ ಸ್ವರಾಜ್ ಕಾಯ್ದೆ 308 ಎಸಿ ಅಡಿ ಚುನಾವಣೆ ಅಕ್ರಮಗಳ ತಡೆಗೆ ರಾಜ್ಯ ಚುನಾವಣಾ ಆಯೋಗಕ್ಕೆ ಅಧಿಕಾರ ಕೊಡಲಾಗಿದೆ. ಈ ಅಧಿಕಾರವನ್ನು ಕಟ್ಟುನಿಟ್ಟಾಗಿ ಚಲಾಯಿಸಿ ಅಕ್ರಮಗಳಿಗೆ ತಡೆ ಹಾಕಬೇಕಿದೆ.
ನೀತಿ ಸಂಹಿತೆಯೂ ನಿರ್ಲಕ್ಷ್ಯ:ನೀತಿ ಸಂಹಿತೆ ಜಾರಿಯಾದ ನಂತರವೂ ಬಿಜೆಪಿ ಗ್ರಾಮ ಸ್ವರಾಜ್ ಸಮಾವೇಶ, ಕಾಂಗ್ರೆಸ್ ಪ್ರಜಾಪ್ರತಿನಿಧಿ ಸಮಿತಿ ಯಂತಹ ಕಾರ್ಯಕ್ರಮಗಳ ಮೂಲಕ ಮತದಾರರನ್ನು ಓಲೈಸುವ ಪ್ರಯತ್ನ ಮಾಡುತ್ತಿವೆ. ರಾಜಾರೋಷವಾಗಿ ಮತದಾರನ ಮೇಲೆ ಪ್ರಭಾವ ಬೀರುವ ಪ್ರಯತ್ನಗಳು ನಡೆಯುತ್ತಿದ್ದರೂ ಕೇಳುವವರೇ ಇಲ್ಲವಾಗಿದೆ.
ಹಾವೇರಿ ತಾಲೂಕು ಬಸಾಪುರ ಗ್ರಾಮದಲ್ಲಿ ಈ ಬಾರಿ ಗ್ರಾಮಸ್ಥರೆಲ್ಲ ಮುಖಂಡರ ಸಮ್ಮುಖ ಅವಿರೋಧ ಆಯ್ಕೆಗೆ ಒಲವು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣ ಆಲದಮ್ಮ ದೇವಿ! ಗ್ರಾಮದಲ್ಲಿ ದೇವಿಯ ದೊಡ್ಡ ದೇವಸ್ಥಾನ ನಿರ್ಮಾಣ ಕಾರ್ಯ ಆರಂಭವಾಗಿದೆ. ಹೀಗಾಗಿ, ಗ್ರಾಪಂ ಚುನಾವಣೆಯಿಂದಾಗಿ ಪರಸ್ಪರ ವೈಮನಸ್ಸು ಬರಬಾರದು ಎಂಬ ಸದುದ್ದೇಶದಿಂದ ಗ್ರಾಮಸ್ಥರೆಲ್ಲ ಒಗ್ಗಟ್ಟಿನಿಂದ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲು ನಿರ್ಧರಿಸಿದ್ದಾರೆ. ಗ್ರಾಮಸ್ಥರ ನಿರ್ಣಯದಂತೆ ಬಿಜೆಪಿ ಬೆಂಬಲಿತ ಐವರು, ಕಾಂಗ್ರೆಸ್ ಬೆಂಬಲಿತ 6 ಮಂದಿಯನ್ನು ಆಯ್ಕೆ ಮಾಡಿಕೊಳ್ಳಬೇಕು. 5 ಸದಸ್ಯರನ್ನು ಹೊಂದಿದ ಬಿಜೆಪಿ ಬೆಂಬಲಿತ ಗುಂಪಿನವರನ್ನು ಮೊದಲ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು. ನಂತರ 6 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಬೆಂಬಲಿತ ಗುಂಪಿನವರಿಗೆ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಬಿಟ್ಟು ಕೊಡಬೇಕು ಎಂದು ನಿರ್ಣಯ ಕೈಗೊಳ್ಳಲಾಗಿದೆ. ಇದೇ ಗ್ರಾಪಂನ ಇನ್ನು ನಾಲ್ವರನ್ನು ಆಯ್ಕೆ ಮಾಡಬೇಕಾದ ಬಮ್ಮನಕಟ್ಟಿಯಲ್ಲಿಯೂ ಅವಿರೋಧ ಆಯ್ಕೆಗೆ ಪ್ರಯತ್ನ ನಡೆದಿದೆ.
ಗ್ರಾಮ ಪಂಚಾಯತಿ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆ ಸೋಮವಾರ ಆರಂಭಗೊಳ್ಳಲಿದೆ. ಮೊದಲ ಹಂತದಲ್ಲಿ 2,867 ಗ್ರಾಪಂಗಳಿಗೆ ಡಿ.22ರಂದು ಮತದಾನ ನಡೆಯಲಿದೆ. 2ನೇ ಹಂತದಲ್ಲಿ 2,868 ಗ್ರಾಪಂಗಳಿಗೆ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆ ಡಿ.11ರಂದು ಆರಂಭಗೊಳ್ಳಲಿದೆ.
ಅವಿರೋಧ ಆಯ್ಕೆ ನಿರ್ಧಾರ:ಕಲಬುರಗಿ ಜಿಲ್ಲೆ ಶಹಾಬಾದ್ ತಾಲೂಕು ಸೇವಾ ನಗರ(ತರಿ ತಾಂಡಾ) ವ್ಯಾಪ್ತಿಯ ಮೂವರನ್ನು ಅವಿರೋಧವಾಗಿ ಆಯ್ಕೆ ಮಾಡಲು ಅಲ್ಲಿನ ನಿವಾಸಿಗಳು ನಿರ್ಧರಿಸಿದ್ದಾರೆ. ಮೂವರ ಹೆಸರನ್ನು ಈಗಾಗಲೆ ಸೂಚಿಸಿದ್ದು, ಇವರ ವಿರುದ್ಧ ಯಾರೂ ಕಣಕ್ಕೆ ಇಳಿಯಬಾರದು ಎಂಬ ನಿರ್ಧಾರ ಮಾಡಲಾಗಿದೆ.
1500 ಕೋಳಿ ಬಲಿ:ಮಂಡ್ಯದ ಸೊಳ್ಳೇಪುರ ಗ್ರಾಮದ ನಿವಾಸಿ, ಕಿಕ್ಕೇರಿ ಗ್ರಾಪಂ ಮಾಜಿ ಅಧ್ಯಕ್ಷ ಜಯರಾಮ್ ಅವರ ಕೋಳಿಫಾಮರ್್​ಗೆ ಶನಿವಾರ ತಡರಾತ್ರಿ ಕಿಡಿಗೇಡಿಗಳು ವಿಷ ಹಾಕಿ 1,500 ಕೋಳಿ ಮರಿಗಳನ್ನು ಸಾಯಿಸಿದ್ದಾರೆ. ಗ್ರಾಪಂಗೆ 3 ಬಾರಿ ಚುನಾಯಿತರಾಗಿದ್ದ ಜಯರಾಮ್ ಈ ಚುನಾವಣೆಯಿಂದ ಹಿಂದೆ ಸರಿಯುವಂತೆ ಮಾಡಲು ಷಡ್ಯಂತ್ರ ರೂಪಿಸಿರಬಹುದು ಎಂದು ಶಂಕಿಸಲಾಗಿದೆ.
ತುಮಕೂರು ತಾಲೂಕು ದೊಡ್ಡ ನಾರವಂಗಲ ಗ್ರಾಪಂ ವ್ಯಾಪ್ತಿಯ 2 ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆಗೆ ಹರಾಜು ನಡೆದಿದೆ. ಅಸಲೀಪುರದ ವಾರ್ಡ್ 8 ಸಾಮಾನ್ಯ ಮಹಿಳೆಗೆ ಮೀಸಲಿದ್ದು ಮಂಜುಳಾ ಸಂಪತ್ ಕುಮಾರ್ ಎಂಬುವರು ಬಿಡ್​ನಲ್ಲಿ 6 ಲಕ್ಷಕ್ಕೆ ಕ್ಷೇತ್ರ ಪಡೆದುಕೊಂಡಿದ್ದಾರೆ. ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಕ್ಷೇತ್ರವನ್ನು 2.35 ಲಕ್ಷ ರೂ.,ಗೆ ಜಯಣ್ಣ ಎಂಬುವರು ಹರಾಜು ಕೂಗಿ ಪಡೆದಿದ್ದು, ಹಣವನ್ನು ಅಸಲೀಪುರದ ನರಸಿಂಹಸ್ವಾಮಿ ದೇವಸ್ಥಾನಕ್ಕೆ ನೀಡಲಾಗುತ್ತದೆ.
ಮತದಾರರು ಅಭ್ಯರ್ಥಿಗಳ ಕೊಡುಗೆ ಏನು ಎಂಬುದನ್ನು ಪ್ರಶ್ನಿಸಬೇಕು. ಉತ್ತರದಾಯಿತ್ವ ಪ್ರಶ್ನಿಸುವ ಛಾತಿ ಬೆಳೆಸಿಕೊಳ್ಳಬೇಕು. ಜನ ಜಾಗೃತರಾಗದ ಹೊರತು ಕಾನೂನಿನಿಂದ ಎಲ್ಲವೂ ಸಾಧ್ಯವಿಲ್ಲ. ಗ್ರಾಪಂ ಮಟ್ಟದಲ್ಲೇ ಯೋಗ್ಯ ಅಭ್ಯರ್ಥಿ ಆಯ್ಕೆ ಮಾಡಬೇಕು.
|ಎಂ.ಎಂ.ಕೃಪಾಕಾರ್ಯಾಲಯ ಸದಸ್ಯೆ, ಗ್ರಾಪಂ ಹಕ್ಕೊತ್ತಾಯ ಆಂದೋಲನ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 1 =
Remember me
