ಬೆಂಗಳೂರು: ಜಾತಿ ಗಣತಿ ವರದಿ ವೈಜ್ಞಾನಿಕ- ಅವೈಜ್ಞಾನಿಕ ಎಂಬ ಚರ್ಚೆ ತೀವ್ರಗೊಳ್ಳುತ್ತಿರುವ ನಡುವೆ ಪ್ರತ್ಯಕ್ಷ- ಪರೋಕ್ಷ ಪೈಪೋಟಿ ಶುರುವಾಗಿದೆ. ಕಾಂತರಾಜು ನೇತೃತ್ವದಲ್ಲಿ ತಯಾರಾದ ಹಿಂದುಳಿದ ವರ್ಗಗಳ ಆಯೋಗದ ಜಾತಿ ಗಣತಿ ವರದಿಯನ್ನು ಸ್ವೀಕರಿಸಬಾರದೆಂದು ಸಹಿ ಸಂಗ್ರಹ ನಡೆದಿದೆ. ಪ್ರತಿಯಾಗಿ ವರದಿ ಸ್ವೀಕರಿಸಬೇಕು ಮತ್ತು ಮೀಸಲು ಮರು ವರ್ಗೀಕರಣ ಮಾಡಬೇಕೆಂದು ಒತ್ತಡ ಹೇರುವ ಭಾಗವಾಗಿ ಅಹಿಂದ ಬಳಗ ಶಕ್ತಿ ಪ್ರದರ್ಶನಕ್ಕೆ ನಿರ್ಧರಿಸಿದೆ.
ವಿಧಾನಸಭೆ ಚುನಾವಣೆಗೆ ಮುನ್ನ ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಮಾದರಿಯಲ್ಲಿ ಮತ್ತೊಂದು ಸಮಾವೇಶದ ಮೂಲಕ ಜಾತಿ ಗಣತಿ ಅಂಗೀಕಾರಕ್ಕೆ ಒಲವು ಹೊಂದಿರುವ ಸಿಎಂ ಸಿದ್ದರಾಮಯ್ಯ ಬೆನ್ನಿಗೆ ನಿಂತು, ಅಹಿಂದ ಸಮೀಕರಣ ಗಟ್ಟಿಗೊಳಿಸುವುದು ಸಮಾವೇಶದ ಉದ್ದೇಶ.
ಒತ್ತಡದಿಂದ ಪಾರಾಗುವ ತಂತ್ರ: ಕಾಂತರಾಜು ವರದಿ ಅವೈಜ್ಞಾನಿಕ, ಹೊಸದಾಗಿ ಗಣತಿ ನಡೆಯಲಿ ಎಂದು ಒಕ್ಕಲಿಗ ಸಮುದಾಯ ಸಹಿ ಸಂಗ್ರಹಿಸಿದೆ. ಇದಕ್ಕೆ ಪೂರಕವೆಂಬಂತೆ ವೀರಶೈವ ಲಿಂಗಾಯತ ಶಾಸಕರು ಪಕ್ಷಾತೀತವಾಗಿ ಸಹಿ ಸಂಗ್ರಹಿಸಿ ಒತ್ತಡ ತಂದಿರುವುದು ಸರ್ಕಾರಕ್ಕೆ ಇರಸುಮುರಸು ತಂದಿದೆ. ಮುಂದಿನ ಲೋಕಸಭೆ ಚುನಾವಣೆ ದೃಷ್ಟಿಯಿಂದ ಸರ್ಕಾರ ಅಡಕತ್ತರಿಗೆ ಸಿಲುಕಿದಂತಿದೆ. ಈ ಒತ್ತಡ ತಂತ್ರ ಅರಿತ ಅಹಿಂದ ಪಡೆ ಒಂದು ಹೆಜ್ಜೆ ಮಂದೆ ಹೋಗಿ ಶಕ್ತಿ ಪ್ರದರ್ಶನಕ್ಕೆ ಉತ್ಸುಕವಾಗಿದೆ. ಮಧ್ಯ ಕರ್ನಾಟಕದ ಚಿತ್ರದುರ್ಗದಲ್ಲಿ ಸಮಾವೇಶ ನಡೆಸಲಿದ್ದು, 10 ಲಕ್ಷ ಜನರನ್ನು ಸೇರಿಸಿ ನಾಡಿಗೆ ಸಂದೇಶ ಕಳಿಸಲು ಬಯಸಿದೆ.
ಜತೆಗೆ ಜಾತಿ ಗಣತಿ ವರದಿ ಅವೈಜ್ಞಾನಿಕ ಎಂಬ ವಾದವನ್ನು ಗಟ್ಟಿಗೊಳ್ಳದಂತೆ ನೋಡಿಕೊಳ್ಳಲು ಪ್ರಯತ್ನವೂ ನಡೆಯುತ್ತಿದೆ. ಎರಡು ಸಮುದಾಯಗಳು ಒಂದೆಡೆ, ಉಳಿದ ಸಮುದಾಯಗಳು ಮತ್ತೊಂದೆಡೆ ಎಂದು ಬಿಂಬಿಸುವುದು ಸಮಾವೇಶದ ಹಿಂದಿನ ಮರ್ಮ. ವರದಿ ಸ್ವೀಕರಿಸಿದ ಬಳಿಕ ಮುಂದಿನ ವಿಶ್ಲೇಷಣೆ ನಡೆಯಲಿ, ಈಗಲೇ ವೈಜ್ಞಾನಿಕ- ಅವೈಜ್ಞಾನಿಕ ಎಂದು ಹೇಳುವುದು ಸರಿಯಲ್ಲ ಎನ್ನುವುದು ಸಮರ್ಥನೀಯ ಎಂಬ ವಾದವಿದೆ.
ಆ ಮೂಲಕ ಆಯಾ ಸಮುದಾಯದ ಸಂಖ್ಯಾ ಬಲ ತಿಳಿದುಕೊಳ್ಳುವುದು, ಸಿದ್ದರಾಮಯ್ಯ ಪರವಾದ ವಾತಾವರಣ ಸೃಷ್ಟಿಸುವುದು ಸಮಾವೇಶದ ವ್ಯೂಹಾ ತ್ಮಕ ನಡೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಮಹಾಧಿವೇಶನ:ವೀರಶೈವ-ಲಿಂಗಾಯತ ಮಹಾ ಸಭೆಯ ಮಹಾಧಿವೇಶನವು 23 ಮತ್ತು 24ರಂದು ದಾವಣಗೆರೆಯಲ್ಲಿ ನಡೆಯಲಿದೆ. ಸಮಾವೇಶ ನಿರ್ದಿಷ್ಟವಾಗಿ ಜಾತಿ ಗಣತಿ ಕುರಿತಾಗಿ ನಡೆಯದಿದ್ದರೂ ಚರ್ಚೆಯಾಗುವುದು ನಿಶ್ಚಿತ.
ರಾಜ್ಯದಲ್ಲಿ ನಡೆದಿರುವ ಜಾತಿ ಗಣತಿ ಅಸಮರ್ಪಕ ವಾಗಿರುವ ಹಿನ್ನೆಲೆಯಲ್ಲಿ ಇದನ್ನು ಈ ಹಂತದಲ್ಲಿ ಅಂಗೀಕರಿಸಿದರೆ ನಮ್ಮ ಸಮುದಾಯಕ್ಕಷ್ಟೇ ಅಲ್ಲದೆ ಈ ಸಮಾಜದ ವಂಚಿತರು, ಶೋಷಿತರು, ಮಧ್ಯಮ ವರ್ಗದ ಆರ್ಥಿಕ ದುರ್ಬಲರಿಗೆ ಘೋರ ಅನ್ಯಾಯವಾಗುತ್ತದೆ ಎಂದು ಅಖಿಲ ಭಾರತ ವೀರಶೈವ ಮಹಾಸಭೆ ಸಮುದಾಯದ ಶಾಸಕರ ಸಹಿಯೊಂದಿಗೆ ಸರ್ಕಾರಕ್ಕೆ ತನ್ನ ನಿಲುವು ತಿಳಿಸಿದೆ. ಇದೇ ಕಾರಣಕ್ಕೆ ದಾವಣಗೆರೆ ಮಹಾಧಿವೇಶನ ಮಹತ್ವ ಪಡೆದುಕೊಂಡಿದೆ.
ತಾಲೂಕು ಮತ್ತು ಜಿಲ್ಲಾಮಟ್ಟದ ಸಭೆಗಳಲ್ಲಿ ಸಮೀಕ್ಷೆಯ ಬಗ್ಗೆ ಪ್ರಸ್ತಾಪಿಸಿದಾಗ ಅನೇಕರು ಮನೆಗೆ ಸರ್ಕಾರಿ ಅಧಿಕಾರಿಗಳು ಬಂದಿಲ್ಲ, ತಮ್ಮ ಕುಟುಂಬದ ಯಾವುದೇ ಮಾಹಿತಿ ಪಡೆದಿಲ್ಲ. ಕಚೇರಿಯಲ್ಲೇ ಕುಳಿತು ಈ ಸಮೀಕ್ಷೆ ವರದಿ ಸಿದ್ಧಪಡಿಸಿ ಕಳಿಸಿದ್ದಾ ರೆಂದು ಆರೋಪಿಸಿದ್ದಾರೆ ಎಂಬ ಸಂಗತಿಯನ್ನೂ ಮಹಾಸಭೆ ಸಿಎಂ ಗಮನಕ್ಕೆ ಖುದ್ದು ತಂದಿದೆ. ಅಷ್ಟೇ ಅಲ್ಲದೆ, ಈಗಿನ ವರದಿಯನ್ನು ಯಥಾವತ್ತಾಗಿ ಅಂಗೀಕರಿಸುವುದು ಸೂಕ್ತವಲ್ಲ. ಈ ನಿಟ್ಟಿನಲ್ಲಿ ವೈಜ್ಞಾನಿಕವಾಗಿ ಹೊಸದಾಗಿ ಜಾತಿ ಗಣತಿ ನಡೆಸಿ ವಾಸ್ತವ ಆಧರಿಸಿ ಅಂಕಿ-ಅಂಶಗಳನ್ನು ದಾಖಲಿಸಬೇಕೆಂದು ವಾದ ಮುಂದಿಟ್ಟಿದೆ.
ಕಾಂಗ್ರೆಸ್​ನಲ್ಲಿ ನಾಯಕತ್ವಕ್ಕೆ ಪೈಪೋಟಿ?:ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯ ಉತ್ತರಾಧಿಕಾರಿ ಹಿಂದುಳಿದ ವರ್ಗಗಳ ನಾಯಕನ ಸ್ಥಾನಕ್ಕೆ ಪೈಪೋಟಿ ಜೋರಾಗಿದೆ. ಸಿಎಂ ಸ್ಥಾನದ ಅಧಿಕಾರ ಹಂಚಿಕೆ ಕುರಿತಂತೆ ಸಾಕಷ್ಟು ಊಹಾಪೋಹಗಳಿವೆ. ಒಂದು ವೇಳೆ ನಾಯಕತ್ವ ಬದಲಾವಣೆ ಸಂದರ್ಭ ಎದುರಾದಲ್ಲಿ ಅವಕಾಶ ಸೃಷ್ಟಿಸಿಕೊಳ್ಳಲು ಈಗಲೇ ಪ್ರಯತ್ನ ನಡೆದಿದೆ.
ಅಷ್ಟೇ ಅಲ್ಲದೇ ಅಹಿಂದ ಸಮೀಕರಣವನ್ನು ಗಟ್ಟಿಯಾಗಿ ಉಳಿಸುವ ಇರಾದೆಯಿಂದಲೇ ಬೃಹತ್ ಸಮಾವೇಶ ನಡೆಸಲು ಬಯಸಲಾಗಿದೆ. ಇನ್ನೊಂದೆಡೆ, ಹಿಂದುಳಿದ ವರ್ಗದ ನಾಯಕತ್ವಕ್ಕಾಗಿ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಕೂಡ ಜನವರಿಯಲ್ಲಿ ಸಮಾವೇಶ ನಡೆಸಲು ತಯಾರಿ ಮಾಡುತ್ತಿದ್ದಾರೆ.
ಲೋಕಸಭೆ ಚುನಾವಣೆ ತರುವಾಯ ರಾಜ್ಯದಲ್ಲಿ ರಾಜಕೀಯ ಬದಲಾವಣೆಗಳ ಮುನ್ಸೂಚನೆ ಇದೆ ಎಂಬ ಚರ್ಚೆಗಳು ನಡೆದಿರುವ ನಡುವೆ ಈ ಸಮಾವೇಶಗಳು ಮಹತ್ವ ಪಡೆದುಕೊಂಡಿವೆ. ಬಹುಮುಖ್ಯವಾಗಿ ಸಿದ್ದರಾಮಯ್ಯ ನಾಯಕತ್ವ ಬಲಪಡಿಸುವ ಪ್ರಯತ್ನಕ್ಕೂ ಈ ವೇದಿಕೆ ಬಳಕೆಯಾಗಲಿದೆ ಎನ್ನುವುದು ಅಷ್ಟೇ ದಿಟವಾದ ಸಂಗತಿ. ಸಮಾವೇಶಕ್ಕೆ ಪೂರ್ವ ಸಿದ್ಧತೆಗಳು ಆರಂಭಗೊಂಡಿವೆ. ಹಲವಾರು ಉಪಸಮಿತಿಗಳನ್ನು ರಚಿಸಲಾಗಿದೆ. ಹಿಂದುಳಿದ
ವರ್ಗಗಳ ಆಯೋಗದ ವತಿಯಿಂದ ನಡೆಸಲಾದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ವರದಿಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಮಾವೇಶದಲ್ಲಿ ನಿರ್ಣಯವನ್ನೂ ಕೈಗೊಳ್ಳಲಾಗುತ್ತದೆ.
ಅನೇಕ ಶಾಸಕರ ಆಕ್ಷೇಪ: ಜಾತಿ ಗಣತಿ ಸರಿಯಾಗಿ ನಡೆದಿಲ್ಲ ಎಂದು ನಮ್ಮ ಅನೇಕ ಶಾಸಕರು ಆಕ್ಷೇಪ
ವ್ಯಕ್ತಪಡಿಸಿದ್ದಾರೆ. ಈ ಜಾತಿ ಗಣತಿ ವೈಜ್ಞಾನಿಕವಾಗಿ ಮಾಡಲಾಗಿದೆಯೇ ಎಂಬ ವಿಚಾರವಾಗಿ ನಾವು ಸ್ಪಷ್ಟೀಕರಣ ಕೇಳಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಪ್ರತಿಯಾಗಿ ಸಿದ್ದರಾಮಯ್ಯ ಆಪ್ತ ಸಚಿವರು ವರದಿಯನ್ನು ಸಮರ್ಥಿಸಿಕೊಂಡ ಬೆಳವಣಿಗೆ ಕೂಡ ನಡೆದಿದೆ.
ವಿರೋಧವಾಗಿ 71 ಶಾಸಕರ ಸಹಿ ಸಂಗ್ರಹ:ಕೇಂದ್ರ ಸಚಿವರು, ಸಂಸದರು ಸೇರಿ 38 ಒಕ್ಕಲಿಗ ಸಮುದಾಯದ ಶಾಸಕರಿಂದ ಸಹಿ ಸಂಗ್ರಹಿಸಿ, ಸರ್ಕಾರಕ್ಕೆ ಅಭಿಪ್ರಾಯ ತಿಳಿಸಲಾಗಿದೆ. ಇನ್ನೊಂದೆಡೆ, ವೀರಶೈವ ಲಿಂಗಾಯತ ಸಮುದಾಯದ 33 ಶಾಸಕರು ಸಹಿ ಸಂಗ್ರಹಿಸಿ ವೈಜ್ಞಾನಿಕ ಸಮೀಕ್ಷೆಗೆ ಒತ್ತಾಯಿಸುವ ಮೂಲಕ ಈಗಿನ ವರದಿಯನ್ನು ಒಪ್ಪಬಾರದೆಂದು ಸರ್ಕಾರದ ಮೇಲೆ ತೀವ್ರ ಒತ್ತಡ ತಂದಿದ್ದಾರೆ.
ವರದಿ ಅಂಗೀಕಾರ ಆಗಬೇಕು, ಇನ್ನೊಂದೆಡೆ, ಹೊಸದಾಗಿ ಗಣತಿ ನಡೆಯಬೇಕೆಂಬ ಪಟ್ಟು
ಲೋಕಸಭೆ ಚುನಾವಣೆಗೆ ಮುನ್ನ ಜಾತಿ ಬಲದ ಪರೀಕ್ಷೆಗೆ ವೇದಿಕೆಯಾಗುವ ಲಕ್ಷಣಗಳಿವೆ
ಶಾಶ್ವತ ಹಿಂದುಳಿದ ವರ್ಗಗಳ ಆಯೋಗವು ವರದಿ ಕೊಟ್ಟಿಲ್ಲ. ಕೊಡಲು ಬಂದಾಗ ವಿಚಾರ ಮಾಡುತ್ತೇವೆ. ಕೆಲವರು ವರದಿ ವೈಜ್ಞಾನಿಕವಲ್ಲ ಎನ್ನುತ್ತಿದ್ದು, ವರದಿ ಬಾರದೆ, ಏನಿದೆ ಎಂದು ತಿಳಿಯದೇ ಊಹಾಪೋಹದ ಮೇಲೆ ನಿರ್ಧಾರ ಮಾಡುತ್ತಿದ್ದಾರೆ. ವರದಿ ಬರಲಿ ನೋಡೋಣ.
| ಸಿದ್ದರಾಮಯ್ಯ ಮುಖ್ಯಮಂತ್ರಿ
ಜಾತಿಗಣತಿಗೆ ಸರ್ಕಾರ ಹಣ ಖರ್ಚು ಮಾಡಿದೆ. ವರದಿಯ ಇಂಪ್ಯಾಕ್ಟ್ ಬಗ್ಗೆ, ಬೇರೆಬೇರೆ ತೀರ್ವನಗಳ ಬಗ್ಗೆ ಪ್ರತಿಭಟಿಸಲಿ, ಸಲಹೆಗಳನ್ನು ನೀಡಲಿ. ಇದಕ್ಕೆ ತಕರಾರಿಲ್ಲ. ಆದರೆ, ವರದಿ ಜಾರಿಯಾಗಬಾರದು ಎನ್ನುವುದು ಸರಿಯಲ್ಲ.
| ಡಾ. ಜಿ. ಪರಮೇಶ್ವರ್ ಗೃಹ ಸಚಿವ
ಜಾತಿ ಗಣತಿ ವಿಷಯದಲ್ಲಿ ಈಗಾಗಲೇ ನಮ್ಮ ನಿಲುವನ್ನು ಸರ್ಕಾರಕ್ಕೂ ತಿಳಿಸಿದ್ದೇವೆ. ಮಹಾಧಿವೇಶನದಲ್ಲಿ ಜಾತಿ ಗಣತಿ ಬಗ್ಗೆ ವಿಸõತ ಚರ್ಚೆ ಮಾಡುತ್ತೇವೆ. ಬಳಿಕ ನಿರ್ಣಯ ಕೈಗೊಳ್ಳುವ ಬಗ್ಗೆ ನಿರ್ಧಾರವಾಗಲಿದೆ. ವೈಜ್ಞಾನಿಕವಾಗಿ ಗಣತಿ ನಡೆಯಬೇಕೆಂಬುದು ನಮ್ಮ ಬೇಡಿಕೆ.
| ಎಚ್.ಎಂ. ರೇಣುಕಾಪ್ರಸನ್ನ ವೀರಶೈವ ಲಿಂಗಾಯತ ಮಹಾಸಭೆ ಕಾರ್ಯದರ್ಶಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + nineteen =
Remember me
