ಬೆಂಗಳೂರು:ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿಯ ವಿಷಯವಾಗಿ ಆಡಳಿತ ಪಕ್ಷ ಕಾಂಗ್ರೆಸ್​ನಲ್ಲಿ ಪರ- ವಿರೋಧದ ಕಾವು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಪಕ್ಷದ ಹಿರಿಯ ನಾಯಕ, ಅಖಿಲ ಭಾರತ ವೀರಶೈವ, ಲಿಂಗಾಯತ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಸಮೀಕ್ಷೆ ವರದಿ ಕುರಿತಾಗಿ ಮತ್ತೊಮ್ಮೆ ಗುಡುಗಿದ್ದು, ಲೋಕಸಭೆ ಚುನಾ ವಣೆಯಲ್ಲಿ ಹಿನ್ನಡೆಯಾದೀತು ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.
ಇನ್ನೊಂದೆಡೆ, ವರದಿಯನ್ನು ವಿರೋಧಿಸುವವರ ವಿರುದ್ಧ ಸಚಿವ ಸತೀಶ್ ಜಾರಕಿಹೊಳಿ ಅಸಮಾಧಾನ ಹೊರಹಾಕಿದ್ದಾರೆ. ಇನ್ನೂ ವರದಿಯನ್ನೇ ನೋಡಿಲ್ಲ. ಸರಿ ಇಲ್ಲ ಅಂದರೆ? ಎಲ್ಲರೂ ನೋಡಿದ ಬಳಿಕ ತಿರಸ್ಕಾರ ಮಾಡಲು ಅವಕಾಶ ಇದೆ. ಆದರೆ, ವರದಿ ಸಲ್ಲಿಕೆಗೂ ಮೊದಲೇ ವಿರೋಧಿಸೋದು ಸಮಂಜಸವಲ್ಲ ಎಂದು ಜಾರಕಿಹೊಳಿ ಹೇಳಿದ್ದಾರೆ. ಜಾತಿ, ಧರ್ಮ, ಭಾಷೆ ಬಂದಾಗ ಹಲವು ವರದಿಗಳು ಓಪನ್ ಆಗಿಲ್ಲ. ಅಂದಾಜು 40 ವರದಿಗಳು ಹಾಗೇ ಇವೆ. ಕಾಂತರಾಜು ವರದಿ 41ನೇಯದ್ದಾಗಿರಬಹುದು. ಅರಸು ಕಾಲದಿಂದಲೂ ಕೆಲವು ವರದಿಗಳು ಹಾಗೇ ಇವೆ. ಸರ್ಕಾರಕ್ಕೆ ವರದಿ ಸಲ್ಲಿಸಿದ ಬಳಿಕ ನಾನಾ ಹಂತಗಳಿವೆ, ವರದಿ ಸಲ್ಲಿಸಿದ ಬಳಿಕ ನೋಡಬೇಕಿದೆ. ಸರಿ ಇಲ್ಲ ಅಂದರೆ ಚರ್ಚೆಯಾಗಲಿ ಎಂದರು.
ಸಚಿವ ಪ್ರಿಯಾಂಕ್ ಖರ್ಗೆ ಕೂಡ ಇದೇ ವಿಷಯದಲ್ಲಿ ಪ್ರತಿಕ್ರಿಯೆ ನೀಡಿದ್ದು, ಮೊದಲು ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಲಿ. ವರದಿಯಲ್ಲಿ ಏನಿದೆ ಎಂಬುದು ಯಾರಿಗೂ ಗೊತ್ತಿಲ್ಲ. ವರದಿ ಸಲ್ಲಿಕೆಯಾದ ಬಳಿಕ ಸಾಧಕ-ಬಾಧಕಗಳ ಬಗ್ಗೆ ಚರ್ಚೆಯಾಗಲಿ. ಆ ನಂತರ ಲೋಪವಿದ್ದರೆ ಸರಿಪಡಿಸಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಶಾಮನೂರು ಸಿಡಿಮಿಡಿ:ಪ್ರತ್ಯೇಕ ಲಿಂಗಾಯತ ಧರ್ಮ ಎಂದು ಹೋದವರೆಲ್ಲ ಸೋತರು. ಬರೀ ಲಿಂಗಾಯತ ಎಂದು ಹೋದವರೆಲ್ಲ ಮಣ್ಣು ತಿಂದರು ಎಂದು ಸೂಚ್ಯವಾಗಿ ಶಾಮನೂರು ಶಿವಶಂಕರಪ್ಪ ಹೇಳಿದರು.
ಈಗ ಜಾತಿ ಗಣತಿ ಮೂಲ ವರದಿ ನಾಪತ್ತೆ ಆಗಿದೆ. ನಾನು ಕೊಟ್ಟಿದ್ದೀನಿ ಅಂತ ಕಾಂತರಾಜ್ ಹೇಳುತ್ತಿದ್ದಾರೆ. ಈಗ ಆಯೋಗದ ಅಧ್ಯಕ್ಷರ ಅವಧಿ ವಿಸ್ತರಣೆ ಆಗಿದೆ. ಇದೆಲ್ಲ ನೋಡೋಕೆ ಮಜಾ ಇದೆ ಎಂದರು.
ನಾವೂ ಸಹ ಸಿಎಂ ಸಿದ್ದರಾಮಯ್ಯರನ್ನ ಭೇಟಿ ಮಾಡುತ್ತೇವೆ, ಒಕ್ಕಲಿಗ ಸಮುದಾಯದ ರೀತಿಯೇ ಸಹಿ ಮಾಡಿ ವಿರೋಧ ವ್ಯಕ್ತಪಡಿಸುತ್ತೇವೆ. ಬಿಜೆಪಿ, ಜೆಡಿಎಸ್​ನವರೂ ಸಹ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು. ಒಂದು ವೇಳೆ ಸರ್ಕಾರ ವರದಿ ಸ್ವೀಕರಿಸಿದರೆ ಲೋಕಸಭಾ ಚುನಾವಣೆಯಲ್ಲಿ ಶೇ.100 ತೊಂದರೆ ಆಗುತ್ತದೆ. ಈ ಹಿಂದೆ ಪ್ರತ್ಯೇಕ ಧರ್ಮ ವಿಚಾರದಲ್ಲಿ ಆಗಿತ್ತಲ್ಲ, ಅದೇ ರೀತಿ ಎಂಪಿ ಚುನಾವಣೆಗೂ ಆಗಲಿದೆ ಎಂದರು.
ಕಾನೂನು ಚೌಕಟ್ಟಿನಲ್ಲಿ ಸಮೀಕ್ಷೆ ನಡೆಸಿ ತಯಾರಿಸಲಾದ ಸಾಮಾಜಿಕ, ಶೈಕ್ಷಣಿಕ ಅಂಶನ್ನೊಳಗೊಂಡ ವರದಿಯನ್ನು ರಾಜ್ಯ ಸರ್ಕಾರ ಯಥಾವತ್ತಾಗಿ ಸ್ವೀಕರಿಸಬೇಕೆಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್. ಕಾಂತರಾಜ ಒತ್ತಾಯಿಸಿದ್ದಾರೆ.
ಆಯೋಗದ ಈಗಿನ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ವರದಿಯನ್ನು ಯಥಾವತ್ತಾಗಿ ಸರ್ಕಾರಕ್ಕೆ ಸಲ್ಲಿಸಬೇಕು. ಯಾವುದೇ ಕಾರಣಕ್ಕೂ ಇದನ್ನು ಮರು ಪರಿಶೀಲಿಸಬಾರದು. ವರದಿಯಲ್ಲಿ ಯಾವುದೇ ಲೋಪದೋಷವಿಲ್ಲ. ಕಾನೂನಿನ ಪ್ರಕಾರ ಅಂತಿಮ ವರದಿಗೆ ಸದಸ್ಯ ಕಾರ್ಯದರ್ಶಿಯವರ ಸಹಿ ಅಗತ್ಯ ಇಲ್ಲ ಎಂದಿದ್ದಾರೆ.
ಒಟ್ಟಾರೆ 55 ಪ್ರಶ್ನಾವಳಿಗಳ ಮುಂದಿಟ್ಟುಕೊಂಡು ರಾಜ್ಯದ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಿದ್ದ ವರದಿ ವೈಜ್ಞಾನಿಕವಾಗಿದೆ. ವಿಳಂಬ ಮಾಡದೆ ವರದಿಯನ್ನು ಸರ್ಕಾರ ಸ್ವೀಕರಿಸಬೇಕು. ವರದಿಯನ್ನು ಸರ್ಕಾರ ಬಿಡುಗಡೆ ಮಾಡಿದ ನಂತರ ಪರಿಶೀಲಿಸಿ ಅಧ್ಯಯನ ಮಾಡಬೇಕು ಎಂದು ಹೇಳಿದ್ದಾರೆ. ಮನವಿಗಳ ಹೊರತಾಗಿಯೂ ಈ ಹಿಂದೆ ವರದಿ ಸಲ್ಲಿಸಲು ಅವಕಾಶ ದೊರೆಯಲಿಲ್ಲ ಎಂದು ಹೇಳಿದರು.
ಕಾಂತರಾಜ್ ಸಮಿತಿಯ ಸಮೀಕ್ಷಾ ವರದಿ ಸ್ವೀಕರಿಸಬೇಕಂದು ಒತ್ತಾಯಿಸಿ ಸಭೆ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಹಾಗೂ ಹಿಂದುಳಿದ ಜಾತಿಗಳ ಒಕ್ಕೂಟದ ಜಂಟಿ ಸಭೆ ಶಾಸಕರ ಭವನದಲ್ಲಿ ನಡೆಯಿತು. ಡಿಸೆಂಬರ್​ನಲ್ಲಿ ಅಹಿಂದ ಸಮಾವೇಶ ಮಾಡುವ ಸಂಬಂಧ ಚರ್ಚೆಯಾಯಿತು. ಕಾಂತರಾಜು ಆಯೋಗದ ವರದಿಗೆ ಡಿಸಿಎಂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅವರ ಜನಾಂಗದ ಉಪಮುಖ್ಯಮಂತ್ರಿ ಅನ್ನುವ ರೀತಿ ಆಡುತ್ತಿದ್ದಾರೆ. ಅವರನ್ನ ಯಾರ ಉಪಮುಖ್ಯಮಂತ್ರಿ ಎಂದು ಕೇಳಬೇಕು ಎಂದು ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ ಕಿಡಿಕಾರಿದರು.
ಸ್ವಜನ ಪಕ್ಷಪಾತ ಮಾಡಲ್ಲ, ಜಾತಿ ಮಾಡಲ್ಲ ಎಂದು ಪ್ರಮಾಣ ಮಾಡಿರುತ್ತಾರೆ, ಯಾವ ನೈತಿಕತೆ ಇಟ್ಟುಕೊಂಡು ಡಿಸಿಎಂ ಹುದ್ದೆಯಲ್ಲಿ ಮುಂದುವರಿಯುತ್ತಾರೆ. ಕೂಡಲೇ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ವರದಿಯಲ್ಲಿ ಲಿಂಗಾಯತರ ಸಂಖ್ಯೆ ಕಡಿಮೆ ಮಾಡಿದ್ದಾರೆ ಎಂದು ಶಾಮನೂರು ಶಿವಶಂಕರಪ್ಪ ಹೇಳುತ್ತಾರೆ, ಲಿಂಗಾಯತರು ಉಪ ಜಾತಿಯಲ್ಲಿ ಗುರುತಿಸಿಕೊಂಡು ಬೇರೆ ಬೇರೆ ಸೌಲಭ್ಯ ಪಡೆಯುತ್ತಿದ್ದಾರೆ. ಅದಕ್ಕೆ ನಾವು ಹೊಣೆಯಾಗಲು ಸಾಧ್ಯವೇ? ಇದು ಅವರಿಗೆ ಯಾಕೆ ಗೊತ್ತಾಗಿಲ್ಲ ಎಂದು ಪ್ರಶ್ನಿಸಿದರು.
ವಿರೋಧಕ್ಕೆ ನೀಡುವ ಕಾರಣಗಳು:ಮನೆ ಮನೆಗೆ ಹೋಗಿ ಸಮೀಕ್ಷೆ ಮಾಡಿಲ್ಲ. ಎಲ್ಲೋ ಕುಳಿತು ಗಣತಿ ಮಾಡುವುದಲ್ಲ. ಸರಿಯಾದ ರೀತಿಯಲ್ಲಿ ಜಾತಿಗಣತಿ ಆಗಿಲ್ಲ. ವರದಿಯ ಮೂಲಪ್ರತಿ ನಾಪತ್ತೆಯಾಗಿದೆ. ಬಹಳಷ್ಟು ಲೋಪಗಳಿವೆ. ಹೀಗಾಗಿ ವರದಿ ಸ್ವೀಕಾರ ಮಾಡುವುದು ಸರಿಯಲ್ಲ.  ವರದಿ ಸಿದ್ಧಪಡಿಸಿರುವ ವಿಧಾನದಲ್ಲಿ ಲೋಪವಾಗಿದೆ ಎಂಬ ಕಾರಣಕ್ಕೆ ನಮ್ಮ ವಿರೋಧ. ವೈಜ್ಞಾನಿಕವಾಗಿ ಮಾಹಿತಿ ಸಂಗ್ರಹಿಸಲಿ. ವರದಿಯಲ್ಲಿ ಏನಿದೆ ಎಂಬುದು ಲೀಕ್ ಆಗಿದೆ. ಲಿಂಗಾಯತ ವೀರಶೈವ ಎಂದು ಸಮುದಾಯ ಬರೆದುಕೊಂಡೇ ಇಲ್ಲ.  ವೀರಶೈವ-ಲಿಂಗಾಯತ ಸಮುದಾಯದ ಜನಸಂಖ್ಯೆ ಕಡಿಮೆ ಇದೆ ಎಂದು ತೋರಿಸಲಾಗಿದೆ. ಇದರಿಂದಾಗಿ ಸಮಾಜಕ್ಕೆ ತೀವ್ರ ಸ್ವರೂಪದಲ್ಲಿ ನಷ್ಟವಾಗಲಿದೆ.  ನಾವು ಜಾತಿಗಣತಿ ವಿರೋಧಿಗಳಲ್ಲ. ಯಾವುದೇ ವರದಿ ವೈಜ್ಞಾನಿಕವಾಗಿರಬೇಕು ಎಂಬುದು ನಮ್ಮ ಒತ್ತಾಸೆಯಾಗಿದೆ.
ಯಾರು ವಿರೋಧ ಮಾಡುತ್ತಾರೋ ಅದನ್ನು ಸಿಎಂ ಬೇಕು ಅನ್ನುತ್ತಾರೆ. ಸಿಎಂ ಸಿದ್ದರಾಮಯ್ಯ ಹಾಗೆಯೇ. ಈಗಾಗಲೇ ಮೌಖಿಕವಾಗಿ ಸಿಎಂ ಬಳಿ ಚರ್ಚೆ ನಡೆಸಿದ್ದೇವೆ. ನೋಡೋಣ ತಡಿಯಪ್ಪ ಎಂದು ಹೇಳಿದ್ದಾರೆ.
– ಶಾಮನೂರು ಶಿವಶಂಕರಪ್ಪ, ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 12 =
Remember me
