ವಿಜಯವಾಣಿ ಸುದ್ದಿಜಾಲ ಬೆಂಗಳೂರು
‘ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಯಾಗಲಿ..’, ‘ಕೆಪಿಸಿಸಿ ಅಧ್ಯಕ್ಷರು ಬದಲಾಗಲಿ..’ ಎಂಬ ಒಡಕು ಧ್ವನಿಯಿಂದ ಆರಂಭವಾದ ಕಾಂಗ್ರೆಸ್ ಒಳಜಗಳ ‘ಮುಖ್ಯಮಂತ್ರಿಗಳು ಸ್ಥಾನ ಬಿಟ್ಟುಕೊಡಲಿ..’ ಎಂಬಲ್ಲಿಗೆ ತಿರುವು ಪಡೆದುಕೊಂಡ ಬಳಿಕ ಜಾತಿ ಆಧಾರಿತ ಸಿಎಂ ಬೇಡಿಕೆಯೊಂದಿಗೆ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ. ‘ಒಕ್ಕಲಿಗ ಸಿಎಂ’, ‘ಲಿಂಗಾಯತ ಸಿಎಂ’, ‘ದಲಿತ ಸಿಎಂ’, ‘ಹಿಂದುಳಿದ ಸಿಎಂ’ ಎಂಬ ಜಾತಿ ಆಧಾರಿತ ದಾಳಗಳನ್ನು ನಾಯಕರು, ಮಠಾಧೀಶರು ಉರುಳಿಸುತ್ತಿದ್ದು, ಹೈಕಮಾಂಡ್ ಮಧ್ಯ ಪ್ರವೇಶ ಮಾಡಿ ವಿಷಯ ತಿಳಿಗೊಳಿಸುವುದು ಮತ್ತು ನಾಯಕರ ನಡುವೆ ಉಂಟಾಗಿರುವ ಕಂದಕ ಅಳಿಸಿ ಹಾಕುವುದು ಅನಿವಾರ್ಯ ಎಂಬ ಸ್ಥಿತಿ ನಿರ್ವಣವಾಗಿದೆ.
‘ಸಿದ್ದರಾಮಯ್ಯನವರೇ, ಮುಖ್ಯ ಮಂತ್ರಿ ಸ್ಥಾನವನ್ನು ಡಿ.ಕೆ. ಶಿವಕುಮಾರ್​ಗೆ ಬಿಟ್ಟುಕೊಡಿ. ನೀವು ಮನಸು ಮಾಡಿದರೆ ಸಮಸ್ಯೆ ಇಲ್ಲದೇ ಡಿಕೆಶಿಯನ್ನು ಮುಖ್ಯಮಂತ್ರಿಯನ್ನಾಗಿಸಲು ಸಾಧ್ಯವಿದೆ’ ಎಂಬ ವಿಶ್ವ ಒಕ್ಕಲಿಗ ಮಹಾಸಂಸ್ಥಾನದ ಚಂದ್ರಶೇಖರನಾಥ ಸ್ವಾಮೀಜಿಯವರ ಹೇಳಿಕೆಯಿಂದ ಈ ಪ್ರಕರಣ ಆರಂಭವಾಗಿದೆ. ನಂತರ ‘ನಾನು ಸೆಲೆಕ್ಟೆಡ್ ಸಿಎಂ ಅಲ್ಲ, ಎಲೆಕ್ಟೆಡ್ ಸಿಎಂ‘ ಎಂಬ ಸಿದ್ದರಾಮಯ್ಯನವರ ಖಡಕ್ ಹೇಳಿಕೆ ದೆಹಲಿ ಕಾಂಗ್ರೆಸ್​ನಲ್ಲೂ ಸಂಚಲನ ಮೂಡಿಸಿದೆ. ಸಿಎಂ ಆಪ್ತ ಶಾಸಕ, ಸಚಿವರು ಸ್ವಾಮೀಜಿ ವಿರುದ್ಧ ಹರಿಹಾಯ್ದರೆ, ಮತ್ತೊಂದು ಕಡೆ ಜಾತಿ ಆಧಾರದಲ್ಲಿ ಸಿಎಂ ಗಾದಿಗೆ ಬೇಡಿಕೆ ಇಡುವ ಪ್ರಯತ್ನ ನಡೆದಿದೆ. ಒಟ್ಟಾರೆ ಬೆಳವಣಿಗೆಯಲ್ಲಿ ನಾಯಕರ ನಡುವೆ ಪ್ರತ್ಯೇಕತೆ ಕಾಣಿಸಿದ್ದು, ಪೂರ್ವ ನಿಗದಿತ ಸಭೆಗಳಲ್ಲಿ ‘ಅನಿವಾರ್ಯ ನಗೆ’ ತೋರ್ಪಡಿಸಿ ಒಟ್ಟಿಗೆ ಹಾಜರಾಗುತ್ತಿದ್ದಾರೆ.
ಹೈಕಮಾಂಡ್​ಗೆ ವರದಿ…:ಇಡೀ ಬೆಳವಣಿಗೆ ಬಗ್ಗೆ ಹೈಕಮಾಂಡ್ ವರದಿ ಪಡೆದುಕೊಂಡಿದ್ದು, ಪ್ರತಿಯೊಬ್ಬರ ಅಭಿಪ್ರಾಯ ಮತ್ತು ಅದರ ಹಿಂದಿನ ಉದ್ದೇಶ ಕುರಿತು ವಿವರವಾದ ಮಾಹಿತಿ ತರಿಸಿಕೊಂಡಿದೆ. ಈಗಾಗಲೇ ಅನೌಪಚಾರಿಕವಾಗಿ ವಿಚಾರ ವಿನಿಮಯ ನಡೆದಿದ್ದು ಶನಿವಾರ ರಾತ್ರಿ ಅಥವಾ ಭಾನುವಾರ ಬೆಳಗ್ಗೆ ಮಹತ್ವದ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬರಲಿದೆ. ಒಂದು ಮಾಹಿತಿ ಪ್ರಕಾರ ಸಿಎಂ ಹಾಗೂ ಡಿಸಿಎಂ ಪ್ರತ್ಯೇಕವಾಗಿ ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಬಳಿಕ ಒಟ್ಟಿಗೆ ಒಂದು ಸಭೆ ನಡೆಸಿ ಪರಿಹಾರ ಸೂತ್ರ ಕಂಡುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಡಿಕೆಶಿ ಹೇಳಿಕೊಟ್ಟು ಮಾಡಿಸಿದ್ದು!:ಸರ್ಕಾರಿ ಕಾರ್ಯಕ್ರಮದಲ್ಲಿ ಸಿಎಂ ಸ್ಥಾನ ಡಿಕೆಶಿಗೆ ಬಿಟ್ಟುಕೊಡುವಂತೆ ಸ್ವಾಮೀಜಿ ನೀಡಿದ ಹೇಳಿಕೆ ಹಿಂದೆ ಡಿ.ಕೆ.ಶಿವಕುಮಾರ್ ಇದ್ದಾರೆ ಎಂಬ ಅಂಶವನ್ನು ಮುಖ್ಯಮಂತ್ರಿಯವರೇ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ. ದೆಹಲಿಯಲ್ಲಿ ಸಭೆಯಲ್ಲಿ ಪಾಲ್ಗೊಳ್ಳಲು ಆಪ್ತ ಸಚಿವರೊಂದಿಗೆ ತೆರಳುತ್ತಿದ್ದಾಗ ಲಿಫ್ಟ್​ನಲ್ಲಿ ಈ ಅಂಶವನ್ನು ಪ್ರಸ್ತಾಪಿಸಿದ್ದಾರೆ. ಸ್ವಾಮೀಜಿಗೆ ಹೇಳಿಕೊಟ್ಟು ಮಾಡಿಸಿದ್ದಿದು ಎಂದು ಸಿಎಂ ಹೇಳುವಾಗ, ಗೃಹ ಸಚಿವ ಪರಮೇಶ್ವರ, ಹೌದೌದು ಎಂದು ತಲೆಯಾಡಿಸಿದರು ಎಂದು ಹೇಳಲಾಗುತ್ತಿದೆ.
ಶಾಸಕರು ನಿರ್ಧರಿಸುತ್ತಾರೆ :ಸ್ವಾಮೀಜಿಗಳಿಗೂ ರಾಜಕೀಯಕ್ಕೂ ಸಂಬಂಧ ವಿಲ್ಲ. ಸ್ವಾಮೀಜಿ ಮಾತಿಗೆಲ್ಲ ಮಹತ್ವ ನೀಡುವ ಅಗತ್ಯವಿಲ್ಲ. ಅವರಿಗೂ ಪಕ್ಷಕ್ಕೂ ಏನಾದ್ರೂ ಸಂಬಂಧವಿದೆೆಯೇ? ಸಿಎಂ ಯಾರಾಗಬೇಕು ಎಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕರು ತೀರ್ಮಾನ ಮಾಡುತ್ತಾರೆ. ಹೈಕಮಾಂಡ್ ಕೂಡ ನಿರ್ಧಾರ ಮಾಡುತ್ತದೆ. ಹೀಗಾಗಿ, ಸ್ವಾಮೀಜಿ ಹೇಳಿಕೆಗೆ ಪ್ರಾಮುಖ್ಯತೆ ನೀಡಬೇಕಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಡಿ.ಕೆ. ಶಿವಕುಮಾರ್ ಕಾಟದಿಂದ ತಪ್ಪಿಸಿಕೊಳ್ಳಲು ಡಿ.ಕೆ.ಸುರೇಶ್ ಅವರನ್ನು ಸಿಎಂ ಸಿದ್ದರಾಮಯ್ಯ ಸೋಲಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಡಿ.ಕೆ. ಶಿವಕುಮಾರ್ ಒಕ್ಕಲಿಗ ಸ್ವಾಮೀಜಿ ಕೈಯಲ್ಲಿ ಈಗ ಸಿಎಂ ಸ್ಥಾನ ಬಿಟ್ಟುಕೊಡುವ ಹೇಳಿಕೆ ಕೊಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಸ್ವಪಕ್ಷದ ಶಾಸಕರ ಶಾಪದಿಂದಲೇ ಬೀಳಲಿದೆ.
| ಆರ್. ಅಶೋಕ ಪ್ರತಿಪಕ್ಷ ನಾಯಕ
ಮಾಂಜರಿ (ಬೆಳಗಾವಿ):ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮತ್ತು ಡಿಸಿಎಂ ಸ್ಥಾನ ಹೆಚ್ಚುವರಿ ಮಾಡುವುದಾದರೆ ವೀರಶೈವ ಲಿಂಗಾಯತ ಸಮುದಾಯದವರಿಗೆ ಆದ್ಯತೆ ನೀಡಬೇಕು ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತರಾಧ್ಯ ಶಿವಾಚಾರ್ಯ ಶ್ರೀಗಳು ಆಗ್ರಹಿಸಿದರು. ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಿದ್ದಾರೆ. ರಾಜ್ಯದಲ್ಲಿ ಸರ್ಕಾರ ರಚಿಸಬೇಕಾದರೆ ವೀರಶೈವ ಲಿಂಗಾಯತ ಮತದಾರ ಮತ್ತು ಜನಪ್ರತಿನಿಧಿಗಳ ಕೊಡುಗೆ ಅಪಾರವಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಮಾಡಬೇಕಾದರೆ ವೀರಶೈವ ಲಿಂಗಾಯತ ಸಮುದಾಯದ ಎಂ.ಬಿ. ಪಾಟೀಲ್, ಈಶ್ವರ ಖಂಡ್ರೆ, ಎಸ್.ಎಸ್. ಮಲ್ಲಿಕಾರ್ಜುನ, ಶಾಮನೂರು ಶಿವಶಂಕರಪ್ಪ ಅಂತವರಿಗೆ ಅವಕಾಶ ನೀಡಬೇಕು ಎಂದು ಶ್ರೀಗಳು ಒತ್ತಾಯಿಸಿದರು. ಸಿಎಂ ಮತ್ತು ಡಿಸಿಎಂ ಸ್ಥಾನ ಬದಲಾವಣೆ ಕುರಿತು ಕಾಶಿ, ಉಜ್ಜಯಿನಿ ಜಗದ್ಗುರುಗಳ ಜತೆಗೂ ರ್ಚಚಿಸಲಾಗಿದೆ. ರಾಜ್ಯದಲ್ಲಿ ಆಡಳಿತ ನಡೆಸಿರುವ ಸರ್ಕಾರಗಳು ವೀರಶೈವರನ್ನು ಕಡೆಗಣಿಸಿದ್ದರಿಂದ ಆ ಪಕ್ಷಗಳಿಗೆ ಕಟು ಅನುಭವವಾಗಿದೆ. ಆದ್ದರಿಂದ ವೀರಶೈವ ಲಿಂಗಾಯತ ಸಮುದಾಯದವರಿಗೆ ಪ್ರಥಮಾದ್ಯತೆ ನೀಡಬೇಕು ಎಂದು ಶ್ರೀಗಳು ಒತ್ತಾಯಿಸಿದರು.
ತುಮಕೂರು:ಒಂದು ಧಾರ್ವಿುಕ ಸಭೆಯಲ್ಲಿ ಸಿಎಂ ಅವರನ್ನು ವೇದಿಕೆಯಲ್ಲಿ ಕೂರಿಸಿಕೊಂಡು ಅಧಿಕಾರ ಬದಲಾವಣೆ ಬಗ್ಗೆ ಮಾತನಾಡಿದರೆ ಶೋಭೆ ತರುತ್ತದೆಯೇ? ಎಂದು ವಿಶ್ವ ಒಕ್ಕಲಿಗ ಸಂಸ್ಥಾನದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಸಹಕಾರ ಸಚಿವ ಕೆ.ಎನ್.ರಾಜಣ್ಣ ಹರಿಹಾಯ್ದಿದ್ದಾರೆ.

ನಾಡಪ್ರಭು ಕೆಂಪೇಗೌಡ ಜಯಂತಿಯಲ್ಲಿ ಎಲ್ಲರೂ ಆಸಕ್ತಿಯಿಂದ ಭಾಗವಹಿಸಿದ್ದರು. ಅಲ್ಲಿ ರಾಜಕೀಯ ಮಾತನಾಡಿದರೆ ಯಾರಿಗೂ ಶೋಭೆ ತರುವುದಿಲ್ಲ. ಸ್ವಾಮೀಜಿಗಳು ಜಾತಿಗಷ್ಟೇ ಒಳ್ಳೆಯದು ಮಾಡುವವರಲ್ಲ. ಇಡೀ ಸಮಾಜಕ್ಕೆ ಒಳಿತು ಮಾಡಬೇಕು. ಆದರೆ, ಒಂದಷ್ಟು ಸ್ವಾಮೀಜಿಗಳು ಲೇಟೆಸ್ಟ್, ಹೈಟೆಕ್ ಸ್ವಾಮೀಜಿಗಳಾಗಿದ್ದಾರೆ ಎಂದು ಕುಟುಕಿದರು. ಅಲ್ಲದೇ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ದೇವೇಗೌಡರ ಅಳಿಯನ ಪರವಾಗಿ ಪ್ರಚಾರ ನಡೆಸಿ, ಜನಪರವಾಗಿ ಕೆಲಸ ಮಾಡಿದ್ದ ಡಿ.ಕೆ.ಸುರೇಶ್ ಸೋಲಿಗೆ ಕಾರಣವಾಗಿದ್ದೂ ಇವರೇ. ಈಗ ಅದನ್ನು ಮರೆಸಲು ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡಿ ಎಂದು ಹೇಳುತ್ತಿದ್ದಾರೆ ಅಷ್ಟೇ ಎಂದು ಟೀಕಿಸಿದರು. ಏತನ್ಮಧ್ಯೆ, ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲಿ ಎಂದು ಮನವಿ ಮಾಡುವ ಸ್ವಾಮೀಜಿ, ತಾವೂ ಮಠಾಧಿಪತಿ ಸ್ಥಾನ ಬಿಟ್ಟುಕೊಡಲಿ, ನಾನೂ ಸ್ವಾಮೀಜಿ ಆಗುತ್ತೇನೆ ಎಂದು ಟೀಕಿಸಿದ್ದ ರಾಜಣ್ಣ ಶುಕ್ರವಾರ, ಸುಲಭವಾಗಿ ಜೀವನ ಮಾರ್ಗವನ್ನು ಸ್ವಾಮೀಜಿ ತೋರಿಸಿಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು. ಇದಕ್ಕೆ ಪ್ರತಿಯಾಗಿ ಶಾಸಕ ಎ.ಮಂಜು ನಾನೇ ಹತ್ತು ಎಕರೆ ಭೂಮಿ ಕೊಡುತ್ತೇನೆ, ರಾಜಣ್ಣ ಸ್ವಾಮೀಜಿಯಾಗಲಿ ಎಂದು ಸವಾಲು ಹಾಕಿದ್ದಾರೆ.
ಸ್ವಾಮೀಜಿಯವರದ್ದು ವೈಯಕ್ತಿಕ ಹೇಳಿಕೆ. ಪಕ್ಷದ ಅಂತರಿಕ ವಿಚಾರದಲ್ಲಿ ವರಿಷ್ಠರು, ಶಾಸಕರು ತೀರ್ಮಾನ ಮಾಡ್ತಾರೆ. ಸಿಎಂ ಬದಲಾವಣೆ ಅಪ್ರಸ್ತುತ ವಿಚಾರ.
– ಈಶ್ವರ ಖಂಡ್ರೆ, ಅರಣ್ಯ ಸಚಿವ
ಸ್ವಾಮೀಜಿಗಳ ಅಭಿಪ್ರಾಯ ಅವರ ವೈಯಕ್ತಿಕದ್ದು. ಡಿಕೆಶಿ ಹಾಗೂ ಸಿಎಂ ನಡುವೆ ತಂದಿಡುವ ಕೆಲಸ ಮಾಡುವುದು ಬೇಡ. ಸದ್ಯಕ್ಕೆ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಎಷ್ಟು ವರ್ಷ, ಏನು ಅಂತ ಇಲ್ಲ.
– ಬೈರತಿ ಸುರೇಶ್, ನಗರಾಭಿವೃದ್ಧಿ ಸಚಿವ
ಸಿಎಂ, ಡಿಸಿಎಂ ಅವರೇ ಇದನ್ನು ಬಗೆಹರಿಸಬೇಕು. ರಾಜ್ಯದ ಸಮಯ ಸರಿಯಿಲ್ಲ ಅನಿಸುತ್ತದೆ. ಸ್ವಾಮೀಜಿ ಸಾರ್ವಜನಿಕವಾಗಿ ಹಾಗೆ ಹೇಳುವ ಅವಶ್ಯಕತೆಯಿಲ್ಲ. ನಮ್ಮದು ಹೈಕಮಾಂಡ್ ಪಕ್ಷ.
– ಚಲುವರಾಯಸ್ವಾಮಿ, ಕೃಷಿ ಸಚಿವ
ಸಿಎಂ ಬದಲಾವಣೆ ಬಗ್ಗೆ ಸ್ವಾಮೀಜಿ ಹೇಳುವುದು ಸರಿಯಲ್ಲ. ನಾಳೆ ಮತ್ತೊಂದು ಸಮುದಾಯದ ಸ್ವಾಮೀಜಿ ಸಿಎಂ ಸ್ಥಾನದ ಬಗ್ಗೆ ಮಾತನಾಡುತ್ತಾರೆ. ಇದರಿಂದ ಗೊಂದಲ ಸೃಷ್ಟಿಯಾಗಲಿದೆ.
– ಎಚ್.ಎಂ.ರೇವಣ್ಣ, ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ
ಸ್ವಾಮೀಜಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ, ಸಿಎಂ ಬದಲಾವಣೆ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡಲಿದೆ. ಅನಗತ್ಯವಾಗಿ ಹೇಳಿಕೆ ನೀಡಿದರೆ ಗೊಂದಲ ಸೃಷ್ಟಿಯಾಗಲಿದೆ.
– ಎನ್. ಎಸ್.ಬೋಸರಾಜು, ಸಣ್ಣ ನೀರಾವರಿ ಸಚಿವ
ಐವರು ಅಥವಾ ಒಂದು ಡಜನ್ ಮಂದಿಯನ್ನು ಡಿಸಿಎಂ ಮಾಡಲಿ. ಅದಕ್ಕೂ ಮುನ್ನ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಬೇಕು. ಡಿಸಿಎಂ, ಸಿಎಂ ಸ್ಥಾನದ ಬಗ್ಗೆ ಮಾತನಾಡದಂತೆ ಹೈಕಮಾಂಡ್ ಈ ಹಿಂದೆ ತಾಕೀತು ಮಾಡಿತ್ತು. ಹಿರಿಯ ಸಚಿವರು ಡಿಸಿಎಂ ಸ್ಥಾನದ ಬಗ್ಗೆ ಬೇಡಿಕೆ ಇಟ್ಟಿರುವುದರಿಂದ ನನ್ನ ಮಾತೂ ಅನಿವಾರ್ಯವಾಗಿದೆ. ಕಾರ್ಯಕ್ರಮವೊಂದರಲ್ಲಿ ಒಕ್ಕಲಿಗೆ ಸ್ವಾಮೀಜಿ ಹೇಳಿರುವುದೂ ಸರಿ ಇದೆ.
– ಶಿವಗಂಗಾ ಬಸವರಾಜ್, ಚನ್ನಗಿರಿ ಶಾಸಕ
NEET ವಿವಾದ: ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಪ್ರಾಂಶುಪಾಲರ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + five =
Remember me
