ಬೆಂಗಳೂರು:ವಿಧಾನಸಭೆ ಚುನಾವಣೆಗೆ ಇನ್ನು ವರ್ಷ ಕೂಡ ಬಾಕಿ ಇಲ್ಲ. ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್​ನಲ್ಲಿ ಮುಂದಿನ ಸಿಎಂಗೆ ಪೈಪೋಟಿ ಆರಂಭವಾಗಿದ್ದರ ನಡುವೆ ಹೊಸದಾಗಿ ಮುಖಂಡರು ಒಕ್ಕಲಿಗ ವಿಷಯ ಎಳೆದು ತಂದು ಕಿತ್ತಾಟ ಶುರುಮಾಡಿದ್ದಾರೆ. ಒಕ್ಕಲಿಗ ಸಮುದಾಯಕ್ಕಿಂತಲೂ ನಮ್ಮ ಸಮುದಾಯ ದೊಡ್ಡದಿದೆ ಎಂಬ ಜಮೀರ್ ಅಹ್ಮದ್ ಹೇಳಿಕೆ ಕಾಂಗ್ರೆಸ್​ನಲ್ಲಿ ಕಂಪನ ಉಂಟುಮಾಡಿದೆ. ಇದೇ ಕಾರಣಕ್ಕೆ ಬಾಯಿಮುಚ್ಚಿಕೊಂಡು ಕೆಲಸ ಮಾಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಫರ್ವನು ಹೊರಡಿಸಿದ್ದರು. ಈ ಬೆಳವಣಿಗೆಯ ಮುಂದುವರಿದ ಭಾಗವಾಗಿ ಭಾನುವಾರ ಕೆಲವು ಬೆಳವಣಿಗೆಗಳು ನಡೆದಿವೆ.
ಭಾರತ್ ಜೋಡೋ ಪಾದಯಾತ್ರೆ ವಿಚಾರವಾಗಿ ಡಿ.ಕೆ.ಶಿವಕುಮಾರ್ ಕರೆದಿದ್ದ ಸಭೆಯಲ್ಲಿ ಮಾಜಿ ಸಚಿವ ಚೆಲುವರಾಯ ಸ್ವಾಮಿ ಪಾಲ್ಗೊಂಡಿದ್ದರು. ಈ ವೇಳೆ ಒಕ್ಕಲಿಗರ ಬಗ್ಗೆ ಲಘುವಾಗಿ ಮಾತನಾಡಿದ ಜಮೀರ್ ಕುರಿತು ಪಕ್ಷದ ಅಧ್ಯಕ್ಷರು ಅಸಮಾಧಾನ ಹೊರಹಾಕಿದ್ದಾರೆಂದು ಗೊತ್ತಾಗಿದೆ. ಚೆಲುವರಾಯಸ್ವಾಮಿಯವರು ಜಮೀರ್ ಅಹ್ಮದ್​ಗೆ ದೂರವಾಣಿ ಕರೆ ಮಾಡಿ ಒಕ್ಕಲಿಗರ ವಿಚಾರವಾಗಿ ಮಾತನಾಡುವುದು ಸರಿಯಲ್ಲ, ಅಧ್ಯಕ್ಷರ ಬಗ್ಗೆ ಹಾಗೆಲ್ಲ ಮಾತನಾಡದಂತೆ ಬುದ್ಧಿವಾದ ಹೇಳಿದ್ದಾರೆ. ಈ ಸಂದರ್ಭದಲ್ಲಿ ಜಮೀರ್ ಕೂಡ ತಾವು ಹೇಳಿದ್ದರಲ್ಲಿ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆಂದು ತಿಳಿದುಬಂದಿದೆ. ಆದರೂ, ಮತ್ತೆ ಮುಂದಿನ ಸಿಎಂ ಬಗ್ಗೆ ಮಾತನಾಡಬೇಡ, ಗೊಂದಲ ಸೃಷ್ಟಿಯಾಗುತ್ತದೆ ಎಂದು ತಿಳಿಹೇಳಿದರೆನ್ನಲಾಗಿದೆ.
ನನ್ನ ಲೆವೆಲ್​ಗೆ ಮಾತನಾಡುವವರ ವಿಚಾರ ನಾನು ಮಾತನಾಡುತ್ತೇನೆ. ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸವನ್ನು ಬಾಯಿ ಮುಚ್ಚಿಕೊಂಡು ಮಾಡಬೇಕು. ಪಕ್ಷದ ಬಗ್ಗೆ ನಿಜವಾಗಲೂ ಆಸಕ್ತಿ ಇದ್ದರೆ ವ್ಯಕ್ತಿಪೂಜೆ ಬಿಟ್ಟು ಪಕ್ಷ ಪೂಜೆ ಮಾಡಿ. ಹೆಚ್ಚಿನ ಜನರನ್ನು ಪಕ್ಷಕ್ಕೆ ಕರೆ ತರುವತ್ತ ಗಮನಹರಿಸಿ ಎಂದು ಶನಿವಾರ ಜಮೀರ್ ಮೇಲೆ ಹರಿಹಾಯ್ದಿದ್ದ ಡಿ.ಕೆ.ಶಿವಕುಮಮಾರ್, ಭಾನುವಾರ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಲು ಆಸಕ್ತಿ ತೋರಿಸಲಿಲ್ಲ. ಪಕ್ಷ ಸಂಘಟನೆ ಹೊರತು ಬೇರೆ ಯಾವುದರ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಿಲ್ಲ ಎಂದಷ್ಟೇ ಅಭಿಪ್ರಾಯ ಸೀಮಿತಗೊಳಿಸಿದರು. ಭಾರತ ಜೋಡೋ ಪಾದಯಾತ್ರೆ ಚಾಮರಾಜನಗರ, ಮೈಸೂರು, ಶ್ರೀರಂಗಪಟ್ಟಣ, ನಾಗಮಂಗಲ, ಮೇಲುಕೋಟೆ, ಪಾಂಡವಪುರ, ಮಾರ್ಗವಾಗಿ ತುಮಕೂರು ಜಿಲ್ಲೆ ಪ್ರವೇಶಿಸಲಿದೆ. ಇದಕ್ಕೆ ಸಂಬಂಧಿಸಿದ ತಯಾರಿ ಕುರಿತು ಚರ್ಚೆ ಮಾಡಿದ್ದೇವೆ ಎಂದರು. ಇನ್ನೊಂದೆಡೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ಮಾಜಿ ಡಿಸಿಎಂ ಜಿ.ಪರಮೇಶ್ವರ್, ಖರ್ಗೆಯವರಿಗೆ ಹುಟ್ಟುಹಬ್ಬದ ಶುಭ ಕೋರುವುದರ ಜತೆಗೆ ರಾಜಕೀಯ ಚಟುವಟಿಕೆಗಳ ಬಗ್ಗೆ ರ್ಚಚಿಸಿದ್ದಾರೆ. ಸೋಮವಾರ ಖರ್ಗೆಯವರು ದೆಹಲಿಗೆ ತೆರಳುತ್ತಿದ್ದು, ಇಲ್ಲಿನ ಬೆಳವಣಿಗೆ ಬಗ್ಗೆ ಅವರು ಪ್ರಮುಖರೊಂದಿಗೆ ಚರ್ಚೆ ನಡೆಸುವ ಸಾಧ್ಯತೆಯೂ ಇದೆ.
ಬೆಂಗಳೂರು:ನ್ಯಾಷನಲ್ ಹೆರಾಲ್ಡ್ ಅಕ್ರಮ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಎರಡನೇ ಬಾರಿಗೆ ವಿಚಾರಣೆಗೆ ಹಾಜರಾಗುವಂತೆ ಸೋನಿಯಾ ಗಾಂಧಿಯವರಿಗೆ ಸಮನ್ಸ್ ನೀಡಿರುವುದನ್ನು ವಿರೋಧಿಸಿ ಮಂಗಳವಾರ ಕಾಂಗ್ರೆಸ್ ಪುನಃ ಪ್ರತಿಭಟನೆ ಹಮ್ಮಿಕೊಂಡಿದೆ. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸೋನಿಯಾ ಗಾಂಧಿ ಅವರಿಗೆ 26ರಂದು ವಿಚಾರಣೆಗೆ ಬರುವಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮತ್ತೆ ಸಮನ್ಸ್ ಜಾರಿ ಮಾಡಿದ್ದಾರೆ. ನನ್ನ ಪ್ರಕರಣದಲ್ಲಿ ನನ್ನ ತಾಯಿಗೂ ಇದೇ ರೀತಿ ಕಿರುಕುಳ ನೀಡಿದ್ದರು. ಆ ಸಂದರ್ಭದಲ್ಲಿ ಮನೆಯಲ್ಲೇ ವಿಚಾರಣೆ ಮಾಡಲು ನ್ಯಾಯಾಲಯದ ಮೊರೆ ಹೋಗಿದ್ದೆ ಎಂದರು. ಸೋನಿಯಾ ಗಾಂಧಿ ನ್ಯಾಯಾಲಯದ ಮೊರೆ ಹೋಗದೆ ಧೈರ್ಯವಾಗಿ ವಿಚಾರಣೆ ಎದುರಿಸಿ ಬಂದಿದ್ದಾರೆ. ಆದರೂ ಕಿರುಕುಳ ನಿಲ್ಲುತ್ತಿಲ್ಲ. ಹೀಗಾಗಿ ಕಾಂಗ್ರೆಸ್ ಭವನದ ಗಾಂಧಿ ಪ್ರತಿಮೆ ಬಳಿ ರಾಜ್ಯದ ಎಲ್ಲ ನಾಯಕರು, ಶಾಸಕರು, ಬ್ಲಾಕ್ ಅಧ್ಯಕ್ಷರು, ಕಾರ್ಪೆರೇಟರ್, ಮಾಜಿ ಕಾರ್ಪೆರೇಟರ್, ಪಕ್ಷದ ಪದಾಧಿಕಾರಿಗಳು ಮೌನ ಸತ್ಯಾಗ್ರಹ ಮಾಡಲಿದ್ದೇವೆ ಎಂದು ಹೇಳಿದರು. ಕಾಂಗ್ರೆಸ್ ಜಗಳ ಬೀದಿಗೆ ಬಂದಿದೆ, ಒಂದು ಹುದ್ದೆಗೆ ನಾಲ್ಕು ಜನ ಕಿತ್ತಾಡುತ್ತಿದ್ದಾರೆ ಎಂಬ ಸಚಿವ ಅಶೋಕ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ಬಹಳ ಸಂತೋಷ. ಜನ ಕಾಂಗ್ರೆಸ್​ಗೆ ಅಧಿಕಾರ ನೀಡಲಿದ್ದಾರೆ ಎಂಬ ಸತ್ಯವನ್ನು ಅವರು ಒಪ್ಪಿಕೊಂಡಿದ್ದಾರೆ. ಅವರಿಗೆ ಅಭಿನಂದನೆಗಳು ಎಂದು ತಿಳಿಸಿದರು.
ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಕಾಂಗ್ರೆಸ್ ತಿರುಕನ ಕನಸು ಕಾಣುತ್ತಿದೆ ಎಂಬ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿಕೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಯಡಿಯೂರಪ್ಪ ಯಾವ ಪಕ್ಷದವರು? ಅವರು ಕಾಂಗ್ರೆಸ್ ಪರವಾಗಿ ಮಾತನಾಡುತ್ತಾರೆಯೇ? ಕಾಂಗ್ರೆಸ್ ವಿರುದ್ಧವೇ ಮಾತಾಡಬೇಕಲ್ಲವಾ? ಎಂದು ಮಾಧ್ಯಮಗಳಿಗೆ ಪ್ರಶ್ನೆ ಹಾಕಿದ ಸಿದ್ದರಾಮಯ್ಯ, ಆ ಮಾತು ಯಡಿಯೂರಪ್ಪರ ಅಂತರಾಳದಿಂದ ಹೇಳುವ ಮಾತಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅಂತಾ ಅದರ ಅರ್ಥ ಎಂದರು.
ಕಾಂಗ್ರೆಸ್ ನಾಯಕರು ಬಿಜೆಪಿಯನ್ನು ನೋಡಿ ಶಿಸ್ತು ಕಲಿಯಲಿ ಎಂಬ ಕಂದಾಯ ಸಚಿವರ ಹೇಳಿಕೆ ಬಗ್ಗೆ ಉತ್ತರಿಸಿ, ಬಸನಗೌಡ ಪಾಟೀಲ್ ಯತ್ನಾಳ್ ಎರಡೂವರೆ ಸಾವಿರ ಕೋಟಿ ಕೊಟ್ಟರೆ ಸಿಎಂ ಮಾಡುತ್ತಾರೆ ಎಂದರು, ಅದು ಶಿಸ್ತಾ? ಯಡಿಯೂರಪ್ಪ ಮನೆಯಲ್ಲಿ ಭ್ರಷ್ಟಾಚಾರ ನಡೀತಿದೆ ಅಂದವರು ಯಾರು? ಎಂದು ಹೇಳಿದರು. ಈಶ್ವರಪ್ಪ ಪ್ರಕರಣದಲ್ಲಿ ಬಿ ರಿಪೋರ್ಟ್ ಹಾಕಿರೋದು ಪೋಲಿಸರು ಹೊರತು ಕೋರ್ಟ್ ನೀಡಿರೋದಲ್ಲ. ಕ್ಲೀನ್ ಚಿಟ್ ಅಂದರೆ ಏನು? ಕೇಸ್ ಮುಚ್ಚಿ ಹಾಕಿದರು ಎಂದಲ್ಲವೇ? ತನಿಖೆಯ ದಿಕ್ಕು ತಪ್ಪುತ್ತಿದೆ ಎಂದು ಗುತ್ತಿಗೆದಾರರು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ, ಏನಾಯಿತು? ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಹಿಂದ ಮರೆತರು ಎಂಬ ಸಿ.ಟಿ. ರವಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಸಿ.ಟಿ. ರವಿಗೆ ಅಹಿಂದ, ಅಂದರೇನು ಅಂತನೂ ಗೊತ್ತಿಲ್ಲ. ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿರೋದು ಬಿಜೆಪಿಯವರು. ಮಂಡಲ್ ಕಮಿಷನ್ ವರದಿ ವಿರೋಧ ಮಾಡಿದ್ದು ಯಾರು? ರಾಮಜೋಯಿಸ್ ಏಕೆ ಸುಪ್ರೀಂಕೋರ್ಟ್​ಗೆ ಹೋಗಿದ್ದರು, ಯಾವ ಪಕ್ಷದವರು ವಿರೋಧ ಮಾಡಿದ್ದು? ಎಂದರು.
ಕಾಂಗ್ರೆಸ್ ಒಳಗೆ ಸಧ್ಯ ನಡೆಯುತ್ತಿರುವ ಆಂತರಿಕ ಘರ್ಷಣೆಯಲ್ಲಿ ಹಿರಿಯ ನಾಯಕ ಜಿ.ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾನುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಒಕ್ಕಲಿಗ ಸಮುದಾಯದ ಓಲೈಕೆ ತಪ್ಪೇನಿಲ್ಲ. ಸಮುದಾಯದ ಮುಂದೆ ಕೇಳಬಾರದು ಅನ್ನಲು ಆಗುತ್ತದೆಯೇ? ಆ ಸಮುದಾಯ ಆಸೆ ಪಟ್ಟರೆ ಬೇಡ ಎಂದು ಹೇಳಲು ನಾವು ಯಾರು? ಎಂದು ಪ್ರಶ್ನಿಸಿದರು. ಸಾಮೂಹಿಕ ನಾಯಕತ್ವದಲ್ಲಿ ಪಕ್ಷ ಹೋಗಲಿದೆ. ಒಟ್ಟಿಗೆ ಹೋಗುವ ಇಚ್ಛಾಶಕ್ತಿ ಎಲ್ಲರಲ್ಲೂ ಇರಬೇಕು ಎಂದ ಅವರು ಮೊದಲು ಪಕ್ಷವನ್ನ ಅಧಿಕಾರಕ್ಕೆ ತರಬೇಕು, ಇದಕ್ಕೂ ಮೊದಲೇ ಸಿಎಂ ಬಗ್ಗೆ ಚರ್ಚೆ ಮಾಡುವುದು ಅಪ್ರಸ್ತುತ ಎಂದರು.
ಕಾಂಗ್ರೆಸ್​ನವರು ತಿರುಕನ ಕನಸು ಕಾಣುತ್ತಿದ್ದಾರೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬಿಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶಪಥ ಮಾಡಿದ್ದಾರೆ. ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳು, ಅಭಿವೃದ್ಧಿ ಕೆಲಸಗಳನ್ನು ಜನರ ಮುಂದಿಡಲು ಒಟ್ಟಾಗಿ ರಾಜ್ಯ ಸುತ್ತೋಣವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಹೇಳಿರುವೆ ಎಂದು ತಿಳಿಸಿದರು. ಮುಂಬರುವ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆದ್ದು ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತವೆಂದ ಬಿಎಸ್​ವೈ, ಚುನಾವಣೆಗೆ ಮುನ್ನವೇ ಕಾಂಗ್ರೆಸ್ ಪಕ್ಷದ ನಾಯಕರು ಸಿಎಂ ಕುರ್ಚಿಗಾಗಿ ಕಚ್ಚಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಜಾತಿ ಹೆಸರಿನಲ್ಲಿ ಹೋದವರು, 2018ರಲ್ಲಿ ನಾನೇ ನಾನೆ ಎಂದವರನ್ನು ಜನರು ಮಣ್ಣು ಮುಕ್ಕಿಸಿದ್ದಾರೆ. ಜಾತಿ ಹೆಸರಿನಲ್ಲಿ ಕಿತ್ತಾಡುತ್ತಿರುವವರಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಾಂಗ್ರೆಸ್, ಜೆಡಿಎಸ್​ಗೆ ಸಿ.ಟಿ.ರವಿ ತಿವಿದರು. ಬಿಜೆಪಿ ನೀತಿ ರಾಜಕಾರಣ ಮಾಡುತ್ತದೆಯೇ ಹೊರತು ಸಮುದಾಯವನ್ನು ಬಳಸುವುದಿಲ್ಲ. ಒಕ್ಕಲಿಗ ಯಾವತ್ತಿಗೂ ಸಣ್ಣ ಮನಸ್ಥಿತಿಯಲ್ಲಿ ಯೋಚಿಸುವುದಿಲ್ಲ. ಸ್ವಾರ್ಥ, ಭ್ರಷ್ಟಾಚಾರದ ರಾಜಕಾರಣವನ್ನು ಒಕ್ಕಲಿಗರು ಬೆಂಬಲಿಸುವುದಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಚರ್ಚೆಗೆ ಬರುವಂತೆ ಹಾಕಿದ ಸವಾಲು ಸ್ವೀಕರಿಸುವೆ. ಯಾವಾಗ ಕರೆದರೂ ಚರ್ಚೆಗೆ ಸಿದ್ಧವೆಂದು ಸಿ.ಟಿ.ರವಿ ಪ್ರತಿಯಾಗಿ ಸವಾಲು ಹಾಕಿದರು.
ಕಾಂಗ್ರೆಸ್​ನವರು ಸಿಎಂ ಹುದ್ದೆಯನ್ನು ಅವರ ಅಪ್ಪನ ಮನೆ ಆಸ್ತಿ ಅಂದುಕೊಂಡುಬಿಟ್ಟಿದ್ದಾರೆ. ಕೂಸು ಹುಟ್ಟುವ ಮುಂಚೆ ಕುಲಾವಿ ಹೊಲಿಸಿದಂತೆ ಸಿಎಂ ಸ್ಥಾನಕ್ಕೆ ಫೈಟ್​ಗೆ ಇಳಿದಿದ್ದಾರೆ.
|ಸಿ.ಟಿ.ರವಿಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ಡಿ.ಕೆ. ಶಿವಕುಮಾರ್​ಗೆ ಸಿಎಂ ಆಗಲು ಮುಂದೆ ಅವಕಾಶ ಸಿಗಲಿದೆ. ಅವರಿಗೆ ಸಿಎಂ ಆಗಲು ಅವಕಾಶ ಇಲ್ಲವೆಂದು ಯಾರು ಹೇಳಿದ್ದಾರೆ? ಸಿದ್ದರಾಮಯ್ಯ ಅವರು ಸಿಎಂ ಆಗಬೇಕೆಂದು ಅಭಿಮಾನಿಗಳು ಬಯಸಿದ್ದಾರೆ. ಒಂದು ಸಮಾಜಕ್ಕೆ ಸೀಮಿತರಾದವರು ಸಿಎಂ ಆಗಬಾರದು. ಎಲ್ಲ ಸಮಾಜಕ್ಕೆ ಬೇಕಾದವರು ಸಿಎಂ ಆಗಬೇಕು.
|ಜಮೀರ್ ಅಹ್ಮದ್ಶಾಸಕ
ಒಕ್ಕಲಿಗ ಸಮುದಾಯ ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತವಾಗಿಲ್ಲ. ಒಕ್ಕಲಿಗರನ್ನು ಹಗುರವಾಗಿ ಪರಿಗಣಿಸಿ, ಪಕ್ಷ ರಾಜಕಾರಣಕ್ಕೆ ಎಳೆದು ತರಬೇಡಿ ಎಂದು ಕಾಂಗ್ರೆಸ್ ನಾಯಕರಿಗೆ ಸಚಿವ ಆರ್.ಅಶೋಕ್ ಎಚ್ಚರಿಸಿದರು. ಒಕ್ಕಲಿಗರು ದೇಶಕ್ಕೆ ಅನ್ನ ಕೊಡುವವರು. ರಾಷ್ಟ್ರಕವಿ ಕುವೆಂಪು ಹುಟ್ಟಿದ ಸಮುದಾಯದ ನಾವು ವಿಶ್ವಮಾನವರಾಗಬೇಕು. ಆದರೆ ಪದೇ ಪದೆ ಒಕ್ಕಲಿಗ ಜಾತಿ ಬೀದಿಗೆ ತಂದು ರಂಪಾಟ ಮಾತನಾಡುತ್ತಿರುವುದು ಎಲ್ಲ ಮಠಾಧೀಶರು ಹಾಗೂ ವೈಯಕ್ತಿಕವಾಗಿ ನನಗೆ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಪಕ್ಷ ರಾಜಕಾರಣಕ್ಕೆ ಒಕ್ಕಲಿಗ ಸಮುದಾಯದ ಹೆಸರು ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ. ಇದರಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಚಿವ ಜಮೀರ್ ಅಹ್ಮದ್ ಅವರಿಗೆ ಒಳ್ಳೆಯದಾಗುವುದಿಲ್ಲ ಎಂದು ಸಲಹೆ ನೀಡಿದರು. ಜಾತಿ ಹೆಸರಿನಲ್ಲಿ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ. ಒಕ್ಕಲಿಗ ಸಮುದಾಯ ತಮ್ಮದೇ ಬ್ರಾ್ಯಂಡ್ ಎಂದು ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಿತ್ತಾಡಿಕೊಳ್ಳುತ್ತಿದ್ದು, ಇವರಿಬ್ಬರ ಜಗಳ ಬಿಜೆಪಿ ಲಾಭ ತರಲಿದೆ ಎಂದು ಆರ್.ಅಶೋಕ್ ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × five =
Remember me
