ಮಂಡ್ಯ:ರಾಜ್ಯಸರ್ಕಾರದ ನಿರ್ಲಕ್ಷ್ಯ, ಪ್ರತಿಪಕ್ಷಗಳ ಕಾಟಾಚಾರದ ಹೋರಾಟದ ಪರಿಣಾಮ ತಮಿಳುನಾಡಿಗೆ ಕಾವೇರಿ ನೀರು ಹರಿಯುತ್ತಲೇ ಇದೆ. ಇದರೊಟ್ಟಿಗೆ ಕೆಆರ್‌ಎಸ್ ಡ್ಯಾಂ ಬರಿದಾಗುತ್ತಿರುವಂತೆ ಜಿಲ್ಲೆಯ ರೈತರ ಬದುಕು ಕೂಡ ಬರಡಾಗುತ್ತಿದೆ. ಈ ನಡುವೆ ಗಾಯದ ಮೇಲೆ ಉಪ್ಪು ಸುರಿದಂತೆ ಮತ್ತೆ 16 ದಿನ ತ.ನಾಡಿಗೆ ನೀರು ಹರಿಸುವಂತೆ ಬುಧವಾರ ದೆಹಲಿಯಲ್ಲಿ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯಲ್ಲಿ ಆದೇಶ ಹೊರಡಿಸಿದೆ.ಹಿಂದಿನ ಆದೇಶದಂತೆ ಅ.15ರವರೆಗೆ ಪ್ರತಿನಿತ್ಯ ಮೂರು ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಸೂಚಿಸಲಾಗಿತ್ತು. ಇದೀಗ ಮತ್ತೊಮ್ಮೆ ಪ್ರತಿದಿನ ಮೂರು ಸಾವಿರ ಕ್ಯೂಸೆಕ್‌ನಂತೆ ಅ.31ರವರೆಗೆ ನೀರು ಹರಿಸುವಂತೆ ಕಟ್ಟಪ್ಪಣೆ ಹೊರಡಿಸಿದೆ. ಇಷ್ಟಾದರೂ ಕಾವೇರಿ ನೀರಿನ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವ ಜನಪ್ರತಿನಿಧಿಗಳು, ಒಬ್ಬೊರ ಮೇಲೊಬ್ಬರು ಆರೋಪ ಪ್ರತ್ಯಾರೋಪ ಮಾಡಿಕೊಂಡು ಕಾಲ ಮುಂದೂಡುತ್ತಿರುವುದು ದುರಂತ.ಅವರು ಬಿಟ್ರು, ನಾವು ಬಿಡ್ತಿದ್ದೀವಿ:ಕೃಷಿಯನ್ನೇ ನಂಬಿಕೊಂಡಿರುವ ಜಿಲ್ಲೆಯ ರೈತರ ಪಾಲಿಗೆ ತ.ನಾಡಿಗಿಂತ ನಮ್ಮ ಜನಪ್ರತಿನಿಧಿಗಳೇ ಮರಣ ಶಾಸನ ಬರೆಯುತ್ತಿದ್ದಾರೆ. ಅಂದರೆ ಈ ವರ್ಷ ಮಳೆಯ ಕೊರತೆ ಎನ್ನುವ ಮಾಹಿತಿಯನ್ನು ಹವಾಮಾನ ಇಲಾಖೆ ನೀಡಿದರೂ ಎಚ್ಚೆತ್ತುಕೊಳ್ಳಲಿಲ್ಲ. ಈ ನಡುವೆ ಸುರಿದ ಅಲ್ಪಸ್ವಲ್ಪ ಮಳೆಯಿಂದ ಡ್ಯಾಂನಲ್ಲಿ ಸಂಗ್ರಹವಾಗಿದ್ದ ನೀರಿನಿಂದ ಕೆರೆ, ಕಟ್ಟೆ ತುಂಬಿಸುವ ಕೆಲಸವನ್ನು ಮಾಡಲಿಲ್ಲ. ಅತ್ತ ಜನಪ್ರತಿನಿಧಿಗಳು ಮೈ ಮರೆತ್ತಿದ್ದು ಒಂದೆಡೆಯಾದರೆ, ಇತ್ತ ಅಧಿಕಾರಿಗಳು ತಮಗೂ ಇದಕ್ಕೂ ಸಂಬಂಧವೇ ಇಲ್ಲವೆನ್ನುವಂತೆ ಸುಮ್ಮನಾದರು. ಬದಲಿಗೆ ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶವನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದಾರೆ.ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಮಾಹಿತಿಯಂತೆ ಜೂನ್‌ನಿಂದ ಸುಮಾರು 27 ಟಿಎಂಸಿಯಷ್ಟು ನೀರು ತ.ನಾಡಿನ ಒಡಲು ಸೇರಿದೆ. ಆದರೆ ಜಿಲ್ಲೆಯ ರೈತರಿಗೆ ಸಿಕ್ಕಿದ್ದು ಕೇವಲ ಹತ್ತು ಟಿಎಂಸಿ ಮಾತ್ರ. ಇನ್ನು ಕಾವೇರಿ ನೀರಿನ ವಿಚಾರ ಜನಪ್ರತಿನಿಧಿಗಳಿಗೆ ‘ರಾಜಕೀಯ’ ಮಾಡಲು ಒಂದು ವಿಷಯವಷ್ಟೇ ಆಗಿದೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಈ ವಿವಾದ ಬಂದಾಗಲೆಲ್ಲ ಒಬ್ಬರ ಮೇಲೆ ಮತ್ತೊಬ್ಬರು ಆರೋಪ ಮಾಡುತ್ತಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ನೀರು ಬಿಟ್ಟಿಲ್ವಾ ಎನ್ನುವ ಮೂಲಕ ತ.ನಾಡಿಗೆ ನೀರು ಹರಿಸುವ ಸಂಬಂಧ ತಮ್ಮ ಸರ್ಕಾರದ ನಿಲುವನ್ನು ಪರೋಕ್ಷವಾಗಿ ಸಮರ್ಥಿಸಿಕೊಳ್ಳುತ್ತಿದ್ದಾರೆ. ಜೆಡಿಎಸ್, ಬಿಜೆಪಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕೆ ಮಾಡಿದರೆ, ಅತ್ತ ಕಾಂಗ್ರೆಸ್ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿ ತೋರಿಸುತ್ತಿದೆ. ಇವರ ರಾಜಕೀಯದಾಟ ನೋಡಿ ರೈತರು ಸುಮ್ಮನಾಗುತ್ತಿದ್ದಾರೆ. ಕಾವೇರಿ ನದಿ ನೀರಿನ ವಿಚಾರ ಹಿಂದಿನಿಂದಲೂ ರಾಜಕೀಯ ವಸ್ತು ವಿಷಯ ಎನ್ನಿಸಿದರೂ ಇತ್ತೀಚಿನ ವರ್ಷದಲ್ಲಿ ರಾಜಕೀಯವಾಗಿ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದೆ.ನೆನಪಾದ ಜಿಎಂ, ಕೆಎಸ್‌ಪಿ:ತ.ನಾಡಿಗೆ ಸರಾಗವಾಗಿ ನೀರು ಹರಿಯುತ್ತಿದ್ದರೂ ಮತ್ತು ಜಿಲ್ಲೆಯಲ್ಲಿ ಸಂಘಟನೆಗಳ ಹೋರಾಟ ನಡೆಯುತ್ತಿದ್ದರೂ ರಾಜ್ಯಸರ್ಕಾರ ಕನಿಷ್ಟ ಮಟ್ಟದಲ್ಲಿಯೂ ತಲೆಕೆಡಿಸಿಕೊಳ್ಳುತ್ತಿಲ್ಲ. ಅತ್ತ ತ.ನಾಡಿನಲ್ಲಿ ಕಾವೇರಿ ನೀರಿನ ವಿಚಾರಕ್ಕೆ ರಾಜಕೀಯ ಮರೆತು ಪಕ್ಷಗಳು ಒಂದಾಗುತ್ತಿದ್ದರೆ, ರಾಜ್ಯದಲ್ಲಿ ಅದಕ್ಕೆ ತದ್ವಿರುದ್ದವಾದ ಬೆಳವಣಿಗೆ ಇರುತ್ತಿದೆ.ಈ ನಡುವೆ ಹಿಂದೆ ಕಾವೇರಿ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಡಾ.ಜಿ.ಮಾದೇಗೌಡ, ಕೆ.ಎಸ್.ಪುಟ್ಟಣ್ಣಯ್ಯ ಅವರ ನೆನಪು ಜಿಲ್ಲೆಯ ಜನರನ್ನು ಕಾಡುತ್ತಿದೆ. ಕಾವೇರಿ ನೀರಿನ ವಿಚಾರದಲ್ಲಿ ಅನ್ಯಾಯವಾದಾಗ ಪಕ್ಷಾತೀತವಾಗಿ ಬೀದಿಗಿಳಿದು ಪ್ರತಿಭಟಿಸುತ್ತಿದ್ದರು. ಇದಕ್ಕೆ ಗೆಲುವು ಸಿಕ್ಕಿರುವುದು ಇದೆ. ಆದರೀಗ ಅವರ ಕುಟುಂಬದವರೇ ಹೋರಾಟಕ್ಕೆ ಬರುತ್ತಿಲ್ಲ ಎನ್ನುವುದು ಗುಟ್ಟೇನಲ್ಲ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − five =
Remember me
