ಬೆಂಗಳೂರು:ತಮಿಳುನಾಡಿಗೆ ನೀರು ಹರಿಸುವುದಕ್ಕೆ ಸಂಬಂಧಿಸಿದಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶವನ್ನು ಪ್ರಾಧಿಕಾರವೂ ಎತ್ತಿ ಹಿಡಿದಿದ್ದು, ಆದೇಶ ಮರು ಪರಿಶೀಲಿಸಬೇಕೆಂದು ಕಾವೇರಿ ನಿರ್ವಹಣಾ ಪ್ರಾಧಿಕಾರ ಹಾಗೂ ಸುಪ್ರೀಂ ಕೋರ್ಟ್​ಗೆ ಶನಿವಾರವೇ ಅರ್ಜಿ ಸಲ್ಲಿಸಲು ತೀರ್ವನಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಪ್ರಕಟಿಸಿದರು.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರು, ಮಾಜಿ ಅಡ್ವೊಕೇಟ್ ಜನರಲ್​ಗಳ ಜತೆಗೆ ಶುಕ್ರವಾರ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಸರ್ಕಾರದ ಕಾನೂನುನಾತ್ಮಕ ಕಾರ್ಯತಂತ್ರ, ಹೋರಾಟಗಳ ಕುರಿತು ಸಭೆಯಲ್ಲಿ ಚರ್ಚೆಯಾಗಿದ್ದು, ಕಾನೂನಾತ್ಮಕ ನಡೆ ದೃಷ್ಟಿಯಿಂದ ಎಲ್ಲ ವಿಷಯಗಳನ್ನು ಬಹಿರಂಗಪಡಿಸಲಾಗದು. ಸಮಿತಿ ಆದೇಶವನ್ನು ಪ್ರಾಧಿಕಾರ ಎತ್ತಿ ಹಿಡಿದಿದ್ದು, ಮರು ಪರಿಶೀಲಿಸಲು ಕೋರಿ ಸುಪ್ರೀಂ ಕೋರ್ಟ್ ಹಾಗೂ ಪ್ರಾಧಿಕಾರಕ್ಕೆ ಕೂಡಲೆ ಅರ್ಜಿ ಸಲ್ಲಿಸಬೇಕೆಂದು ಸಭೆ ಸಲಹೆ ನೀಡಿದೆ ಎಂದರು.
ಅರ್ಜಿ ಹಾಕುವುದಕ್ಕೆ ಸುಪ್ರೀಂ ಕೋರ್ಟ್ ನಿರ್ಬಂಧವೇನೂ ಇಲ್ಲ. ನಮ್ಮಕಷ್ಟ ಹೇಳಿಕೊಳ್ಳ ಹೇಳಿಕೊಳ್ಳಲು ಕೋರ್ಟ್ ಮುಂದೆ ಮತ್ತೆ ಹೋಗುತ್ತಿದ್ದೇವೆ ಎಂದು ಸಿಎಂ ಸಮಜಾಯಿಷಿ ನೀಡಿದರು.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ, ನಿವೃತ್ತ ನ್ಯಾಯಾಧೀಶರಾದ ಡಾ.ಶಿವರಾಜ ಪಾಟೀಲ್, ವಿ.ಲ.ಗೋಪಾಲಗೌಡ, ಆರ್.ವಿ.ರವೀಂದ್ರನ್, ಪಿ.ವಿಶ್ವನಾಥಶೆಟ್ಟಿ, ಎ.ಎನ್.ವೇಣುಗೋಪಾಲಗೌಡ, ಮಾಜಿ ಅಡ್ವೊಕೇಟ್ ಜನರಲ್​ಗಳಾದ ಬಿ.ವಿ.ಆಚಾರ್ಯ, ಮಧುಸೂದನ್ ನಾಯಕ್, ವಿಜಯಶಂಕರ್, ಉದಯ್ ಹೊಳ್ಳ, ಪ್ರೊ.ರವಿವರ್ಮಕುಮಾರ್, ಪ್ರಭುಲಿಂಗ ನಾವದಗಿ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಎಚ್.ಕೆ.ಪಾಟೀಲ, ಸಿಎಂ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ಎಜಿ ಶಶಿಕಿರಣ್​ಶೆಟ್ಟಿ, ಸಿಎಸ್ ವಂದಿತಾ ಶರ್ಮಾ ಇದ್ದರು.
ಜಲ ಸಂಕಷ್ಟ ಸಂದರ್ಭದಲ್ಲಿ ಮೇಕೆದಾಟು ಯೋಜನೆ ಪರಿಹಾರವಾಗಲಿದೆ. ಸುಪ್ರೀಂ ಕೋರ್ಟ್ ಈ ಯೋಜನೆ ವಿಚಾರವನ್ನು ಅವಲೋಕಿಸಿ, ಮುಂದಿನ ವಾರಗಳಲ್ಲಿ ವಿಚಾರಣಾ ಪಟ್ಟಿಗೆ ಸೇರಿಸುವುದಾಗಿ ತಿಳಿಸಿದೆ. ಪ್ರಸ್ತಾವಿತ ಯೋಜನೆಯು ಸಂಕಷ್ಟಕ್ಕೆ ಪರಿಹಾರ ಆಗುವ ಬಗೆಯನ್ನು ಸುಪ್ರೀಂ ಕೋರ್ಟ್​ಗೆ ಮನವರಿಕೆ ಮಾಡಿಕೊಟ್ಟು, ತಮಿಳುನಾಡಿಗೆ ಹೆಚ್ಚಿನ ಅನುಕೂಲವಾಗುವ ಬಗ್ಗೆ ಒತ್ತಿ ಹೇಳಬೇಕು ಎಂದು ಸಭೆ ಸಲಹೆ ನೀಡಿದೆ.
ಮೇಕೆದಾಟು ಬಳಿ 67 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಸಮತೋಲನ ಜಲಾಶಯ ನಿರ್ವಿುಸುವುದು ಯೋಜನೆ ಮುಖ್ಯ ಉದ್ದೇಶ. ಯೋಜನೆಯಡಿ ಸಂಗ್ರಹಿಸಿದ ನೀರು ವಿದ್ಯುತ್ ಉತ್ಪಾದನೆ ಮತ್ತು ಕುಡಿಯುವ ನೀರಿಗಾಗಿ ಬಳಕೆ ಮಾಡುತ್ತಿದ್ದು, ತಮಿಳುನಾಡಿಗೆ ಸಂಕಷ್ಟ ಸಂದರ್ಭದಲ್ಲಿ ಪೂರೈಸಲು ನೆರವಾಗುತ್ತದೆ ಎಂಬುದರ ಮೇಲೆ ಬೆಳಕು ಚೆಲ್ಲಬೇಕು ಎಂದು ಸಭೆ ಸೂಚಿಸಿದೆ.
ಪರಿಣತರ ಸಮಿತಿ ರಚನೆ:ಅಂತಾರಾಜ್ಯ ಜಲ ವಿವಾದಗಳನ್ನು ಅತ್ಯಂತ ಸಮರ್ಪಕ, ಪರಿಣಾಮಕಾರಿ ನಿರ್ವಹಣೆಗೆ ಪರಿಣತರ ಸಲಹಾ ಸಮಿತಿ ರಚಿಸಬೇಕು ಎಂದು ಸಭೆಯಲ್ಲಿ ಸಲಹೆ ನೀಡಲಾಗಿದೆ. ಈ ಸಮಿತಿಯು ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ, ಒಳ-ಹೊರ ಹರಿವು, ಪುನರ್ ಉತ್ಪತ್ತಿಯಾದ ನೀರು ಇತ್ಯಾದಿ ದತ್ತಾಂಶಗಳನ್ನು ಪ್ರತಿದಿನ ಸಂಗ್ರಹಿಸುವ ಜತೆಗೆ ಸರ್ಕಾರಕ್ಕೆ ಸಲಹೆ ನೀಡಬೇಕು. ವ್ಯಾಜ್ಯಗಳ ವಿಚಾರಣೆ ವೇಳೆ ರಾಜ್ಯದ ಕಾನೂನು ತಂಡದೊಂದಿಗೆ ಸಮನ್ವಯ ಸಾಧಿಸಿ ಅಂಕಿ-ಅಂಶ ನೀಡುವುದು ಈ ಸಮಿತಿ ಜವಾಬ್ದಾರಿಯಾಗಿರಲಿ ಎಂದು ಸೂಚಿಸಲಾಗಿದೆ.
ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರವು ಮೊದಲಿಗೆ 5000 ಕ್ಯೂಸೆಕ್ ನೀರು ಬಿಡಲು ಆದೇಶಿಸಿದ ತಕ್ಷಣವೇ ಸುಪ್ರೀಂ ಕೋರ್ಟ್​ಗೆ ಮಧ್ಯಂತರ ಅರ್ಜಿ ಸಲ್ಲಿಸಬೇಕಿತ್ತು. ಆರಂಭದಲ್ಲಿ ನೀರು ಬಿಟ್ಟು ಎಡವಿದಿರಿ? ಎಂಬ ಅನಿಸಿಕೆಯನ್ನು ಕೆಲವು ನ್ಯಾಯಾಧೀಶರು ವ್ಯಕ್ತಪಡಿಸಿದರು ಎನ್ನಲಾಗಿದೆ. ಇದುವರೆಗೆ ಆದದ್ದಾಯಿತು, ರಿವಿಷನ್ ಪಿಟಿಷನ್ ಸಲ್ಲಿಸಿ ನಿರ್ದೇಶನ ಬರುವ ತನಕ ಕಾದು ನೋಡುವುದು ಒಳಿತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು ಎನ್ನಲಾಗಿದೆ. ಹಾಗೆಯೇ ಜಲಾಶಯಗಳ ಒಳ, ಹೊರಹರಿವು ಬಗ್ಗೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡುವುದು ಸರಿಯಲ್ಲ ಎಂಬ ಎಚ್ಚರಿಕೆಯನ್ನೂ ನಿವೃತ್ತ ನ್ಯಾಯಾಧೀಶರು ನೀಡಿದರು ಎನ್ನಲಾಗಿದೆ.
ನಮ್ಮ ಬಳಿ ನೀರಿಲ್ಲ, ಹೀಗಾಗಿ ಬಿಡಲಾಗುತ್ತಿಲ್ಲ. ಉದ್ದೇಶಪೂರ್ವಕ ವಾಗಿ ಆದೇಶ ಪಾಲಿಸದಿದ್ದರೆ ಮಾತ್ರ ನ್ಯಾಯಾಂಗ ನಿಂದನೆ ಆಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಸಿಡಬ್ಲ್ಯುಎಂಎ ಸಭೆಯಲ್ಲಿ ನಮ್ಮ ಅಧಿಕಾರಿಗಳು ಅಂಕಿ-ಅಂಶಗಳ ಸಹಿತ ನಮ್ಮಲ್ಲಿ ನೀರಿಲ್ಲವೆಂಬ ವಾದ ಮಂಡಿಸಿದ್ದಾರೆ. ಆದರೂ ಪ್ರಾಧಿಕಾರದವರು ನಮ್ಮ ಹಿಂದಿನ ಆದೇಶ ಪೂರ್ಣವಾಗಿ ಪಾಲಿಸಿಲ್ಲ. ತಮಿಳುನಾಡಿಗೆ ನೀರು ಹರಿಸಬೇಕೆಂಬ ಸಿಡಬ್ಲ್ಯುಆರ್​ಸಿ ಆದೇಶ ಸರಿಯಾಗಿದೆ ಎಂದಿದ್ದಾರೆ. ನಮ್ಮ ಜಲಾಶಯಗಳಲ್ಲಿ ನೀರಿಲ್ಲವೆಂದು ನಿವೇದಿಸಿಕೊಂಡ ಮೇಲೂ ಈ ಆದೇಶ ಹೊರಬಿದ್ದಿದ್ದು, ಮರು ಪರಿಶೀಲನಾ ಅರ್ಜಿ ಸಲ್ಲಿಸುವುದು ಅನಿವಾರ್ಯವಾಗಿದೆ ಎಂದು ಸಮರ್ಥಿಸಿಕೊಂಡರು.
ಕರ್ನಾಟಕ ಬಂದ್​ನಿಂದಾಗಿ ವ್ಯಾಪಾರ, ವಾಣಿಜ್ಯ ಮತ್ತು ಕೈಗಾರಿಕೆಗಳಿಗೆ ಅಂದಾಜು 400 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಎಫ್​ಕೆಸಿಸಿಐ ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ ತಿಳಿಸಿದ್ದಾರೆ. ಬಂದ್​ಗೆ ವ್ಯಾಪಾರ, ವಾಣಿಜ್ಯ ಮತ್ತು ಕೈಗಾರಿಕಾ ವಲಯದ ಸುಮಾರು ಶೇ.70 ಬೆಂಬಲ ನೀಡಿದ್ದಾರೆ.
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:two × 1 =
Remember me
