ಕೇಂದ್ರೀಯ ತನಿಖಾ ಸಂಸ್ಥೆಗೆ ದೂರು ನೀಡಿದ ಯೂನಿಯನ್ ಬ್ಯಾಂಕ್ | ಸಚಿವರ ರಾಜೀನಾಮೆಗೆ ಬಿಜೆಪಿ ಪಟ್ಟು | ಫಲಿತಾಂಶ ಮುನ್ನ ಕ್ರಮ ಡೌಟು
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಹಣ ತೆಲಂಗಾಣದ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾಗಿರುವ ವಿಚಾರ ಸಂಚಲನ ಸೃಷ್ಟಿಸಿರುವಂತೆಯೇ ಪ್ರಕರಣದಲ್ಲಿ ಸಿಬಿಐ ರಂಗಪ್ರವೇಶದ ಸಾಧ್ಯತೆ ಗೋಚರಿಸಿದೆ. ನಿಗಮದ ಬ್ಯಾಂಕ್ ಖಾತೆಯಿಂದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುವಂತೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಗುರುವಾರ ಕೇಂದ್ರೀಯ ತನಿಖಾದಳದ (ಸಿಬಿಐ) ಕದತಟ್ಟಿ ದೂರು ಸಲ್ಲಿಸಿದೆ. ಇನ್ನೊಂದೆಡೆ ಸಚಿವ ನಾಗೇಂದ್ರ ರಾಜೀನಾಮೆಗೆ ಪಟ್ಟು ಹಿಡಿದಿರುವ ಬಿಜೆಪಿ, ರಾಜ್ಯ ಸರ್ಕಾರಕ್ಕೆ ಜೂ.6ರ ಗಡುವು ನೀಡಿದೆ.
ಸಿಬಿಐಗೆ ಬ್ಯಾಂಕ್ ದೂರು: ವಾಲ್ಮೀಕಿ ನಿಗಮದ ಖಾತೆಗಳಲ್ಲಿನ ವಂಚನೆಯ ವಹಿವಾಟಿನ ಬಗ್ಗೆ ಬ್ಯಾಂಕ್​ಗೆ ಸ್ಪಷ್ಟ ಅರಿವಿದೆ. ಅಕ್ರಮ ಬೆಳಕಿಗೆ ಬಂದ ತಕ್ಷಣವೇ ಕಾನೂನುಬಾಹಿರ ವ್ಯವಹಾರವೆಂದು ಘೊಷಿಸಲಾಗಿದೆ. ಅಲ್ಲದೇ ಹೆಚ್ಚುವರಿ ವಿಚಾರಣೆಗಾಗಿ ಸಂಬಂಧಪಟ್ಟ ಶಾಖೆಯ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಪಾರದರ್ಶಕತೆಯ ಅತ್ಯುನ್ನತ ಮಾನದಂಡ ಎತ್ತಿಹಿಡಿಯಲು ಬದ್ಧ. ಈ ಸಮಸ್ಯೆಯನ್ನು ನ್ಯಾಯಯುತವಾಗಿ ಮತ್ತು ತ್ವರಿತವಾಗಿ ಪರಿಹರಿಸಲು ನಾವು ತನಿಖಾಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಬ್ಯಾಂಕ್ ಹೇಳಿಕೊಂಡಿದೆ. ಅಲ್ಲದೆ ಸಂಪೂರ್ಣ ತನಿಖೆ ಮತ್ತು ಅಪರಾಧಿಗಳ ತ್ವರಿತ ಗುರುತಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು, ಮೇ 30ರಂದು ಸಿಬಿಐಗೆ ಔಪಚಾರಿಕವಾಗಿ ದೂರುಸಲ್ಲಿಸಲಾಗಿದೆ ಎಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ.
ಬಿಜೆಪಿ ಪ್ರತಿಭಟನೆ:ಮತ್ತೊಂದೆಡೆ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣವನ್ನು ಪ್ರಬಲ ಅಸ್ತ್ರವಾಗಿಸಿಕೊಂಡಿರುವ ಬಿಜೆಪಿ ಹೋರಾಟವನ್ನು ತೀವ್ರಗೊಳಿಸಲು ತೀರ್ವನಿಸಿದೆ. ಕೇಸರಿ ಪಡೆ ನಾಯಕರು, ಕಾರ್ಯಕರ್ತರು ಗುರುವಾರ ಸಿಎಂ ಮನೆಗೆ ಮುತ್ತಿಗೆ ಹಾಕುವ ಯತ್ನ ನಡೆಸಿದರು. ಜತೆಗೆ ಜೂ.6ರೊಳಗೆ ಸಚಿವರ ತಲೆದಂಡ ಆಗದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸುವ ಎಚ್ಚರಿಕೆ ರವಾನಿಸಿದ್ದಾರೆ.
ರಾಜೀನಾಮೆಗೆ ಆತುರ ಇಲ್ಲ:ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಡ ಹೆಚ್ಚುತ್ತಿದ್ದರೂ ಲೋಕಸಭೆ ಫಲಿತಾಂಶದವರೆಗೆ ಸಚಿವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರಲು ಸಿಎಂ ನಿರ್ಧರಿಸಿದ್ದಾರೆಂದು ತಿಳಿದು ಬಂದಿದೆ. ಮೊದಲು ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ವರದಿ ಬರಲಿ, ಅದನ್ನು ಆಧರಿಸಿ ತೀರ್ಮಾನ ಮಾಡೋಣ ಎಂಬ ನಿಲುವು ತಾಳಿದ್ದಾರೆನ್ನಲಾಗಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಜತೆ ಚರ್ಚೆ ವೇಳೆ ಈ ವಿಚಾರವನ್ನು ಸಿಎಂ ಸ್ಪಷ್ಟವಾಗಿ ಹೇಳಿದ್ದಾರೆಂದು ತಿಳಿದು ಬಂದಿದೆ. ಏಕಾಏಕಿ ರಾಜೀನಾಮೆ ಪಡೆಯುವ ಅಗತ್ಯವೇನಿಲ್ಲ. ಸಚಿವರ ವಿರುದ್ಧ ಎಫ್​ಐಆರ್ ಕೂಡ ದಾಖಲಾಗಿಲ್ಲ. ತನಿಖಾ ವರದಿ ಬಂದ ಬಳಿಕವೇ ತೀರ್ವನಿಸುವ ಸಂದೇಶ ನೀಡಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.
ಸಿಐಡಿ ತನಿಖೆ ಚುರುಕು:ಪ್ರಕರಣದ ತನಿಖೆ ತೀವ್ರಗೊಳಿಸಿರುವ ಸಿಐಡಿ ದಾಖಲೆ ಸಂಗ್ರಹ ಹಾಗೂ ಪ್ರಕರಣದ ವ್ಯಾಪ್ತಿ ಬಗ್ಗೆ ಅವಲೋಕನ ನಡೆಸಿದ್ದಾರೆ. ನಿಗಮದ ಖಾತೆಯಿಂದ ವರ್ಗಾವಣೆಯಾದ 94.73 ಕೋಟಿ ರೂಗಳ ಪೈಕಿ 5 ಕೋಟಿಯನ್ನು 2 ದಿನದ ಹಿಂದೆ ವಾಪಸ್ ಪಡೆಯಲಾಗಿತ್ತು, ಇದೀಗ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಅನ್ಯ ಖಾತೆಯಲ್ಲಿದ್ದ 20 ಕೋಟಿ ರೂ. ಹಣವನ್ನು ನಿಗಮದ ಖಾತೆಗೆ ಮರು ವರ್ಗಾಯಿಸಲಾಗಿದೆ.
ಬ್ಯಾಂಕ್​ನಿಂದ ವರದಿ ಕೇಳಿದ ಎಂಡಿ:ವಾಲ್ಮೀಕಿ ನಿಗಮದ ಬ್ಯಾಂಕ್ ಖಾತೆಯ ವಿವರ ನೀಡುವಂತೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಆರ್.ರಾಜಕುಮಾರ್ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾವನ್ನು ಕೋರಿದ್ದಾರೆ. ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ನಿಗಮದ ಖಾತೆಯಿಂದ ಆದ ವ್ಯವಹಾರದ ಬಗ್ಗೆ ಮಾಹಿತಿ ಕೊಡುವಂತೆ ಮನವಿ ಮಾಡಿದ್ದಾರೆ. ಇದೇ ವೇಳೆ ಗುರುವಾರ ಸಂಜೆವರೆಗೆ ನಿಗಮಕ್ಕೆ ಸೇರಿದ 50 ಕೋಟಿ ರೂಪಾಯಿ ನಿಗಮದ ಮೂಲ ಖಾತೆಗೆ ವಾಪಸ್ ಆಗಿದೆ ಎಂದು ಮೂಲಗಳು ತಿಳಿಸಿವೆ.
ಸಿಎಂ, ಡಿಸಿಎಂಗೆ ತಲೆಬಿಸಿ: ಸರ್ಕಾರ ಒಂದು ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ವಾಲ್ಮೀಕಿ ನಿಗಮದಲ್ಲಿ ನಡೆದ ಅವ್ಯವಹಾರ, ಅಧಿಕಾರಿ ಆತ್ಮಹತ್ಯೆ ಪ್ರಕರಣ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರಿಗೆ ಕಸಿವಿಸಿ ಉಂಟುಮಾಡಿದೆ. ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿ ಆಯ್ಕೆಗೆ ದೆಹಲಿಗೆ ತೆರಳಿಸಿದ್ದ ಸಿಎಂ ಸಿದ್ದರಾಮಯ್ಯ ಗುರುವಾರ ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ತನಿಖಾ ಪ್ರಗತಿಯ ವರದಿ ಪಡೆದುಕೊಂಡರು. ಡಿಸಿಎಂ ಜತೆಗಿನ ಚರ್ಚೆ ವೇಳೆ ಡಿಜಿ ಅಲೋಕ್ ಮೋಹನ್​ರಿಂದ ಪ್ರಕರಣದ ಮಾಹಿತಿ ತಿಳಿದರಲ್ಲದೇ, ಸದ್ಯ ಪ್ರಕರಣದ ತನಿಖೆ ಯಾವ ಹಂತದಲ್ಲಿದೆ, ಪ್ರಾಥಮಿಕ ಹಂತದ ರಿಪೋರ್ಟ್​ನಲ್ಲಿ ಏನಿದೆ? ಈ ಹಂತದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂಬುದನ್ನು ರ್ಚಚಿಸಿದರು.

1. ಹಗರಣ ಸಂಬಂಧ ಇಬ್ಬರೋ ಮೂವರೋ ಅಧಿಕಾರಿಗಳ ಅಮಾನತು ಮಾಡಿದರೆ ಸಾಲದು, ಸಮಯ ವ್ಯರ್ಥ ಮಾಡದೆ ಸಂಬಂಧಪಟ್ಟ ಸಚಿವರ ರಾಜೀನಾಮೆ ಪಡೆಯಬೇಕು
2. ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರನ್ ಮನೆಯಿಂದ ಅಧಿಕಾರಿಗಳು ಪೆನ್ ಡ್ರೖೆವ್, ಲ್ಯಾಪ್ ಟಾಪ್ ತೆಗೆದುಕೊಂಡು ಹೋಗಿದ್ದಾರೆ. ಇದು ಯಾವ ರೀತಿ ದುರುಪಯೋಗ ಆಗಲಿದೆ ಎಂಬುದು ನನಗಂತೂ ಗೊತ್ತಿಲ್ಲ. ಈ ಪ್ರಕರಣದ ನಿಷ್ಪಕ್ಷಪಾತ ತನಿಖೆಗಾಗಿ ಸಿಬಿಐ ಪ್ರವೇಶ ಅನಿವಾರ್ಯ
3. ಲೋಕಸಭಾ ಚುನಾವಣೆ ಸಂದರ್ಭದಲ್ಲೇ ನೂರಾರು ಕೋಟಿ ಮೊತ್ತವನ್ನು ಮತ್ತೊಂದು ನಕಲಿ ಬ್ಯಾಂಕ್ ಖಾತೆ ಮೂಲಕ ತೆಲಂಗಾಣ ರಾಜ್ಯಕ್ಕೆ ವರ್ಗಾವಣೆ ಮಾಡಿದ್ದಾರೆ. ಇದರ ಹಿಂದೆ ದೊಡ್ಡ ಪಿತೂರಿ ಅಡಗಿದೆ, ಸಮಗ್ರ ತನಿಖೆ ಅಗತ್ಯವಿದೆ
ಮಹರ್ಷಿ ವಾಲ್ಮೀಕಿ ನಿಗಮದ ಖಾತೆಯಿಂದ ತೆಲಂಗಾಣದ ವಿವಿಧ ಬ್ಯಾಂಕ್ ಖಾತೆಗಳಿಗೆ 94.73 ಕೋಟಿ ರೂ. ವರ್ಗಾವಣೆ ಮಾಡಿ ಇನ್ನಷ್ಟು ಕೋಟಿಗಳನ್ನು ವರ್ಗಾಯಿಸಲು ಸಂಚುರೂಪಿಸಿದ್ದ ‘ಮಾಸ್ಟರ್​ವೆುೖಂಡ್’ ಯಾರೆಂಬ ಕುರಿತು ಇನ್ನೂ ಉತ್ತರ ಸಿಕ್ಕಿಲ್ಲ. ಮತ್ತೊಂದು ಬೆಳವಣಿಗೆಯಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಗಳು ಈ ಪ್ರಕರಣದಲ್ಲಿನ ಬೆಳವಣಿಗೆ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ವಿಜಯವಾಣಿಯೊಂದಿಗೆ ಅನೌಪಚಾರಿಕ ಚರ್ಚೆ ನಡೆಸಿದ ಬ್ಯಾಂಕ್​ನ ಹಿರಿಯ ಅಧಿಕಾರಿ, ನಿಗಮದ ಹಣ ವರ್ಗಾವಣೆಯಲ್ಲಿ ಬ್ಯಾಂಕ್ ಮೇಲೆ ಅಪವಾದ ಹೊರಿಸುವ ಪ್ರಯತ್ನ ನಡೆದಿದೆ, ಇದರಲ್ಲಿ ಸಣ್ಣಪುಟ್ಟ ಅಧಿಕಾರಿಗಳು ಇರಲು ಸಾಧ್ಯವೇ ಇಲ್ಲ. ಈ ರೀತಿ ಹಣ ವರ್ಗಾವಣೆ ರಾತ್ರಿ ಬೆಳಗಿನೊಳಗೆ ಏಕಾಏಕಿ ಆಗಿದ್ದೂ ಅಲ್ಲ ಎಂದಿದ್ದಾರೆ.
1. ಆರ್ಥಿಕ ವರ್ಷದ ಕೊನೆಯವರೆಗೂ ಹಣ ವೆಚ್ಚ ಮಾಡದೆ ಖಾತೆಯಲ್ಲಿ ಇಟ್ಟುಕೊಂಡು ಅದನ್ನು ಮತ್ತೊಂದು ಖಾತೆಗೆ ವರ್ಗಾಯಿಸಿದ್ದೇ ಒಂದು ತಂತ್ರಗಾರಿಕೆ. ಇದು ದಿನಬೆಳಗಾಗುವುದರೊಳಗೆ ನಡೆದ ಪ್ಲಾ್ಯನ್ ಅಲ್ಲ.
2. ನಿಗಮದ ಮೂಲ ಖಾತೆಯಿಂದ ಹಣ ಬೇರೆ ಖಾತೆಗೆ ವರ್ಗಾಯಿಸಿದ ನಂತರ ಸಂಬಂಧಪಟ್ಟ ಯೋಜನೆಗೆ ವೆಚ್ಚವಾಗಿದೆ ಎಂದು ಕಾಗದ ಪತ್ರದಲ್ಲಿ ತೋರಿಸಿ ಸರ್ಕಾರಕ್ಕೆ ಆರ್ಥಿಕ ಪ್ರಗತಿಯನ್ನು ತೋರಿಸುವ ‘ಅಭಿವೃದ್ಧಿ ಸಿದ್ಧಾಂತ’ ಇದರಲ್ಲಡಗಿದೆ.
3. ಮುಂದೊಂದು ದಿನ ವರ್ಗಾವಣೆಯಾದ ಹಣವನ್ನು ಹೊಸದಾಗಿ ತೆಗೆದ ಬ್ಯಾಂಕ್ ಖಾತೆಗೆ ಜಮಾ ಮಾಡಿಕೊಂಡು ಪುನಃ ಮೂಲ ಖಾತೆಗೆ ವರ್ಗಾಯಿಸುವ ಯೋಜನೆ ಇದ್ದಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ಆ ಮೂಲಕ ತಾತ್ಕಾಲಿಕ ಹಣದ ಹೊಂದಾಣಿಕೆಯಷ್ಟೇ ಇದೆ.
4. ನಿಗಮದ ಹಣ ವರ್ಗಾವಣೆಯಾದ ಹನ್ನೊಂದು ಖಾತೆ ಯಾರಿಗೆ ಸೇರಿದ್ದು, ಅಲ್ಲಿಂದ ಹಣ ಎಲ್ಲಿಗೆ ವರ್ಗಾವಣೆಯಾಯಿತೆಂದು ತನಿಖೆ ವಿಸ್ತರಣೆಯಾಗುವ ಅಗತ್ಯವಿದೆ. ಇದರಿಂದ ಮಾತ್ರ ಸತ್ಯ ಹೊರಬೀಳಲಿದೆ.
5. ಹಣ ವರ್ಗಾವಣೆ ಕೋರಿಕೆ ಇಲ್ಲದೆ ಯಾವುದೇ ಬ್ಯಾಂಕ್​ಗಳು ಏಕಾಏಕಿ ಯಾವುದೇ ಖಾತೆಗೆ ವರ್ಗಾಯಿಸಲ್ಲ. ನಿಗಮದ ‘ಅಧಿಕೃತ’ ಕೋರಿಕೆ ಹೊರತು ಸರ್ಕಾರ ಖಾತೆ ಹಣ ವರ್ಗಾವಣೆ ಅಸಾಧ್ಯದ ಮಾತು
6. ಒಂದು ವೇಳೆ ಸರ್ಕಾರದ ಖಾತೆಯಿಂದ ವರ್ಗಾವಣೆಯಾದರೂ ಡಿಜಿಟಲ್ ದಾಖಲೆ ಸಿಕ್ಕಿಹೋಗುತ್ತದೆ. ಹೀಗಾಗಿ ದಾಖಲೆ ಅಥವಾ ಕೋರಿಕೆ ಪ್ರಸ್ತಾವನೆ ಇಟ್ಟುಕೊಳ್ಳದೆ ಬ್ಯಾಂಕ್ ಸಿಬ್ಬಂದಿ ಹಣ ವರ್ಗಾವಣೆ ಮಾಡುವಷ್ಟು ದಡ್ಡರೂ ಇರುವುದಿಲ್ಲ.
7. ನಿಗಮದ ಯಾವುದೇ ಅಧಿಕಾರಿಗಳ ಉಪಸ್ಥಿತಿ ಇಲ್ಲದೆ ಮತ್ತು ವ್ಯವಸ್ಥಾಪಕ ನಿರ್ದೇಶಕರು ಹಾಗೂ ಲೆಕ್ಕಾಧಿಕಾರಿಗಳ ಭೌತಿಕ ಪರಿಶೀಲನೆ ಇಲ್ಲದೆ ಹಣ ವರ್ಗಾವಣೆ ನಡೆದಿದೆ ಎಂಬುದನ್ನು ಒಪ್ಪಲಾಗದು, ಇದಕ್ಕೆ ಸೂಕ್ತ ದಾಖಲೆ ಇದ್ದೇ ಇರುತ್ತದೆ, ಇದರಿಂದ ನಿಜಬಣ್ಣವೂ ಬಯಲಾಗುತ್ತದೆ
ಡೆತ್​ನೋಟ್​ನಲ್ಲಿ ನಾಗರಾಜ್ ಎಂಬವವರ ಹೆಸರು ಇದೆ. ನಾಗರಾಜ್, ನಾಗೇಂದ್ರ ಅವರ ಬಿಜಿನೆಸ್ ಪಾರ್ಟನರ್. ಸಿಎಂ, ಡಿಸಿಎಂ, ನಾಗೇಂದ್ರ ಜತೆ ಸ್ಪೆಷಲ್ ಫ್ಲೈಟ್​ನಲ್ಲಿ ಹೋಗಿದ್ದಾರೆ. ಇದು ದೊಡ್ಡ ಹಗರಣ. ನಾಗೇಂದ್ರ ಸಚಿವ ಸ್ಥಾನಕ್ಕೆ ಕೂಡಲೇ ರಾಜೀನಾಮೆ ಕೊಡಬೇಕು.
– ಸಿ.ಟಿ.ರವಿ, ಬಿಜೆಪಿ ನಾಯಕ
ಸಚಿವ ನಾಗೇಂದ್ರ ವಿರುದ್ಧ ನೇರ ಆರೋಪವಿಲ್ಲ. ಇದು ಸಣ್ಣ ವಿಚಾರವೂ ಅಲ್ಲ. ಸಿಎಂ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಸಚಿವರನ್ನು ಕರೆಸಿ ಮಾಹಿತಿ ಪಡೆಯುತ್ತೇವೆ. ಸತ್ಯಾಸತ್ಯತೆ ಪರಿಶೀಲಿಸುತ್ತೇವೆ.
ಡಿ.ಕೆ.ಶಿವಕುಮಾರ್​, ಉಪ ಮುಖ್ಯಮಂತ್ರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
