ನವದೆಹಲಿ:ಈ ಬಾರಿಯ ಜ.26ರ ಗಣರಾಜ್ಯೋತ್ಸವ ಪರೇಡ್​ನಲ್ಲಿ ಬಿಜೆಪಿಯೇತರ ಪಕ್ಷಗಳು ಆಡಳಿತಲ್ಲಿರುವ ರಾಜ್ಯಗಳಿಗೆ ಅವಕಾಶ ನೀಡಬೇಕೆಂದು ಕರ್ನಾಟಕದ ಸ್ತಬ್ದಚಿತ್ರ ಪ್ರಸ್ತಾವವನ್ನು ಕೈಬಿಟ್ಟಿದ್ದ ಸ್ತಬ್ದಚಿತ್ರ ಆಯ್ಕೆ ಸಮಿತಿ ತನ್ನ ನಿಲುವು ಬದಲಿಸಿದ್ದು, ರಾಜ್ಯದ ನಾರಿಶಕ್ತಿ ವೈಭವ (ಮಹಿಳಾ ಸಬಲೀಕರಣ) ಸ್ತಬ್ದಚಿತ್ರ ವಿಷಯವನ್ನು ಒಪ್ಪಿಕೊಂಡಿದೆ. ಈ ಹಿನ್ನೆಲೆಯಲ್ಲಿ ಮುಂದಿನ 10 ದಿನಗಳಲ್ಲಿ ಸ್ತಬ್ದಚಿತ್ರ ನಿರ್ಮಾಣ ಮಾಡುವ ಒತ್ತಡಕ್ಕೆ ರಾಜ್ಯ ವಾರ್ತಾ ಇಲಾಖೆ ಸಿಲುಕಿದ್ದು, ಗುರುವಾರ ಸಂಜೆಯೇ ಸ್ತಬ್ದಚಿತ್ರ ವಿನ್ಯಾಸ, ತಯಾರು ಮಾಡುವ ಕಲಾವಿದರ ಒಂದು ತಂಡವನ್ನು ದೆಹಲಿಗೆ ಕಳುಹಿಸಿದೆ.
ಕಳೆದ 13 ವರ್ಷಗಳಿಂದ ರಾಜ್ಯದ ಸ್ತಬ್ದಚಿತ್ರಕ್ಕೆ ಕೇಂದ್ರ ರಕ್ಷಣಾ ಇಲಾಖೆ ವ್ಯಾಪ್ತಿಯಲ್ಲಿ ಬರುವ ಟ್ಯಾಬ್ಲೋ ಆಯ್ಕೆ ಸಮಿತಿ ಅನುಮತಿ ನೀಡುತ್ತಿದ್ದು, ಈ ಬಾರಿ ಬಿಜೆಪಿಯೇತರ ರಾಜ್ಯಗಳಿಗೆ ಅವಕಾಶ ಮಾಡಿಕೊಡಬೇಕಾದ ಅನಿವಾರ್ಯದಿಂದ ಕರ್ನಾಟಕದ ಪ್ರಸ್ತಾವವನ್ನು ಕೊನೆಕ್ಷಣದಲ್ಲಿ ಕೈಬಿಟ್ಟಿತ್ತು. ಕಳೆದ ಬಾರಿ ತಮಿಳುನಾಡು, ಆಂಧ್ರಪ್ರದೇಶ, ಕೇರಳ, ತೆಲಂಗಾಣ, ಪಶ್ಚಿಮ ಬಂಗಾಳ ರಾಜ್ಯಗಳು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಉದ್ದೇಶಪೂರ್ವಕವಾಗಿ ನಮ್ಮ ಪ್ರಸ್ತಾವಗಳನ್ನು ಕೈಬಿಡಲಾಗುತ್ತಿದೆ ಎಂದು ಆರೋಪ ಮಾಡಿದ್ದವು. ಹೀಗಾಗಿ, ಕೇಂದ್ರ ಸರ್ಕಾರ ಈ ರಾಜ್ಯಗಳಿಗೂ ಈ ಬಾರಿ ಅವಕಾಶ ಇರಬೇಕು ಎಂಬ ಸದುದ್ದೇಶದಿಂದ ಕಳೆದ ಬಾರಿ ಅವಕಾಶ ಗಿಟ್ಟಿಸಿಕೊಂಡಿದ್ದ 9 ರಾಜ್ಯಗಳ ಪ್ರಸ್ತಾವವನ್ನು ಕೈಬಿಟ್ಟಿತ್ತು. ಈ ಪಟ್ಟಿಯಲ್ಲಿ ಕರ್ನಾಟಕವೂ ಇತ್ತು. ಆದರೆ, ರಾಜ್ಯದಲ್ಲಿ ವಿಪಕ್ಷಗಳು ಮತ್ತು ಕನ್ನಡ ಪರ ಹೋರಾಟಗಾರರು ಬಿಜೆಪಿ ವಿರುದ್ಧ ಅಭಿಯಾನ ಶುರು ಮಾಡಿದ್ದರಿಂದ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯದ ಕೇಂದ್ರ ಸಚಿವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಮೇಲಾಗಿ, ರಾಜ್ಯ ವಿಧಾನಸಭೆ ಚುನಾವಣೆಯೂ ಸನಿಹದಲ್ಲಿರುವುದರಿಂದ ಕನ್ನಡ ಅಸ್ಮಿತೆಗೆ ಬಿಜೆಪಿಯಿಂದ ಅವಮಾನ ಎಂದು ವಿಪಕ್ಷ ಅಭಿಯಾನ ಶುರು ಮಾಡಲಿದೆ ಎಂಬ ಆತಂಕವೂ ರಾಜ್ಯ ಬಿಜೆಪಿ ಸರ್ಕಾರವನ್ನು ಕಾಡಿತ್ತು.
ಸ್ತಬ್ದಚಿತ್ರ ವಿಷಯದಲ್ಲಿ ಕರ್ನಾಟಕ ಎಂದಿಗೂ ಗುಣಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಂಡಿಲ್ಲ ಮತ್ತು ಪ್ರತಿವರ್ಷವೂ ಆಯ್ಕೆ ಸಮಿತಿ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ, ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲರಿಗೂ ಅವಕಾಶ ಇರಬೇಕು ಎಂಬ ಕಾರಣದಿಂದ ಕೇಂದ್ರ ಸರ್ಕಾರ ಬೇರೆ ರಾಜ್ಯಗಳಿಗೆ ಅವಕಾಶ ಮಾಡಿಕೊಡಲು ಕರ್ನಾಟಕದ ಹೆಸರು ಕೈಬಿಟ್ಟಿತ್ತು. ಆದರೆ, ರಾಜಕೀಯ ಒತ್ತಡಕ್ಕೆ ಮಣಿದು ಅವಕಾಶ ನೀಡಿದ್ದಾರೆ. ನಿಜಹೇಳಬೇಕೆಂದರೆ 10 ದಿನಗಳಲ್ಲಿ ಸ್ತಬ್ದಚಿತ್ರ ತಯಾರು ಮಾಡಲು ಸಾಧ್ಯವೇ ಇಲ್ಲ. ಆದರೆ, ಯುದ್ಧೋಪಾದಿಯಲ್ಲಿ ಕೆಲಸ ಮಾಡಿ ಎಂದು ಸಿಎಂ ಕಚೇರಿಯಿಂದ ಸೂಚನೆ ಬಂದಿದೆ. ಹೀಗಾಗಿ, ಹಗಲು-ರಾತ್ರಿಯೆನ್ನದೆ ಕೆಲಸ ಮಾಡಲಿದ್ದೇವೆ ಮತ್ತು ಕರ್ನಾಟಕದ ಪ್ರತಿಷ್ಠೆಗೆ ಚ್ಯುತಿ ಬಾರದಂತೆ ನಿರ್ವಹಿಸಲಿದ್ದೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ವಿಜಯವಾಣಿ ಜತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸ್ತಬ್ದಚಿತ್ರ ನಿರ್ಮಾಣ ಕಾರ್ಯ ದೆಹಲಿಯ ಕಂಟೋನ್​ವೆುಂಟ್ ಪ್ರದೇಶದಲ್ಲಿರುವ ರಾಷ್ಟ್ರೀಯ ರಂಗಶಾಲೆಯಲ್ಲಿ ನಡೆಯುತ್ತದೆ. ಸಾಮಾನ್ಯವಾಗಿ ಡಿಸೆಂಬರ್ 25ರಿಂದ ಈ ಪ್ರದೇಶವನ್ನು ಕಲಾವಿದರಿಗೆ ಬಿಟ್ಟುಕೊಡಲಾಗುತ್ತದೆ. ಆದರೆ, ಕರ್ನಾಟಕಕ್ಕೆ ಜ.12ರಂದು ಒಪ್ಪಿಗೆ ಸಿಕ್ಕಿರುವುದರಿಂದ ಹತ್ತೇ ದಿನದಲ್ಲಿ ಸ್ತಬ್ದಚಿತ್ರ ಪೂರ್ಣಗೊಳಿಸುವ ದೈತ್ಯ ಸವಾಲು ಕಲಾವಿದರ ಮುಂದಿದೆ.
ಕರ್ತವ್ಯಪಥದಲ್ಲಿ ಮೂವರು ಸಾಧಕರು
ಈ ಬಾರಿ ರಾಮನಗರದ ರೇಷ್ಮೆ ಉದ್ಯಮ, ಸಿರಿಧಾನ್ಯ, ಬೆಂಗಳೂರಿನ ಪುಷ್ಪೋದ್ಯಮ ಮತ್ತು ನಾರಿಶಕ್ತಿ ವೈಭವ (ಮಹಿಳಾ ಸಬಲೀಕರಣ) ಸೇರಿ ನಾಲ್ಕು ಸ್ತಬ್ದಚಿತ್ರ ಪ್ರಸ್ತಾವಗಳನ್ನು ಕೇಂದ್ರ ಆಯ್ಕೆ ಸಮಿತಿಗೆ ರಾಜ್ಯ ಸರ್ಕಾರ ಕಳುಹಿಸಿಕೊಟ್ಟಿತ್ತು. ನಾರಿಶಕ್ತಿ ವಿಷಯದಲ್ಲಿ ಸಾಲುಮರದ ತಿಮ್ಮಕ್ಕ, ಸೂಲಗಿತ್ತಿ ನರಸವ್ವ ಮತ್ತು ಹಾಲಕ್ಕಿ ತುಳಸಿಗೌಡರ ಸಾಧನೆ ಬಿಂಬಿಸುವ ಒಳಗೊಂಡ ಸ್ತಬ್ದಚಿತ್ರ, ವಿನ್ಯಾಸ ಮತ್ತು ಸಂಗೀತ ಆಯ್ಕೆ ಸಮಿತಿ ಮೆಚ್ಚುಗೆಗೂ ಪಾತ್ರವಾಗಿ, ಅದನ್ನು ಅಂತಿಮಗೊಳಿಸಲು ಸೂಚಿಸಲಾಗಿತ್ತು. ಆದರೆ, ಐದನೇ ಸಭೆ ವೇಳೆ ಕರ್ನಾಟಕ ವಿಷಯ ಕೈಬಿಡುವ ನಿರ್ಧಾರ ಮಾಡಲಾಗಿತ್ತು. ಈಗ ನಾರಿಶಕ್ತಿ ಸ್ತಬ್ದಚಿತ್ರಕ್ಕೆ ಒಪ್ಪಿಗೆ ಸಿಕ್ಕಿದ್ದು, ಜ.26ರಂದು ದೆಹಲಿಯ ಕರ್ತವ್ಯಪಥದಲ್ಲಿ (ರಾಜಪಥ ಹಿಂದಿನ ಹೆಸರು) ಮೂವರು ಹಿರಿಯ ಮಹಿಳಾ ಸಾಧಕರ ಸ್ತಬ್ದಚಿತ್ರ ದೇಶದ ಗಮನಸೆಳೆಯಲು ಸಜ್ಜುಗೊಳ್ಳಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + fourteen =
Remember me
