ಬೆಂಗಳೂರು:ಕರೊನಾತಂಕದ ನಡುವೆಯೇ ಅಂತಾರಾಜ್ಯ ಪ್ರಯಾಣದ ಮೇಲಿನ ನಿರ್ಬಂಧವನ್ನು ಕೇಂದ್ರ ಸರ್ಕಾರ ತೆರವುಗೊಳಿಸಿದ್ದರಿಂದಾಗಿ ಸೋಂಕು ಹರಡುವಿಕೆಯಲ್ಲಿ ನಿಯಂತ್ರಣ ಸಾಧಿಸಿದ್ದ ರಾಜ್ಯ ಸರ್ಕಾರ ತಲೆ ಮೇಲೆ ಕೈಹೊತ್ತು ಕೂರು ವಂತಾಗಿದೆ. ಲಾಕ್​ಡೌನ್-5.0 ಮಾರ್ಗ ಸೂಚಿ ಹೊರಬಿದ್ದ ಬೆನ್ನಲ್ಲೇ ಭಾನುವಾರ ಕೇಂದ್ರದ ಮಾರ್ಗಸೂಚಿಯನ್ನು ಯಥಾವತ್ ಅನುಸರಿ ಸುತ್ತಲೇ ವಲಸಿಗರ ಮೇಲೆ ನಿಗಾ ಇಡುವುದಕ್ಕಾಗಿ ಪ್ರಮಾಣಿತ ಕಾರ್ಯ ನಿರ್ವಹಣಾ ವಿಧಾನ ಪ್ರಕಟಿಸಿದೆ. ಜೂ.1ರಿಂದ ರಾಜ್ಯ ಪ್ರವೇಶಿಸುವವರು ಇದನ್ನು ಪಾಲಿಸುವುದು ಕಡ್ಡಾಯ.
ರಾಜ್ಯದಲ್ಲಿ ಪ್ರತಿ ನಿತ್ಯ ದೃಢಪಡುವ ಕರೊನಾ ಸೋಂಕಿತರ ಸಂಖ್ಯೆಯಲ್ಲಿ ಶೇ.75ಕ್ಕಿಂತ ಹೆಚ್ಚು ಮಂದಿ ವಲಸಿಗರೇ ಆಗಿದ್ದಾರೆ. ಹೀಗಾಗಿ ಕರೊನಾ ಎದುರಿಸಲು ರಾಜ್ಯ ಸರ್ಕಾರ ಮಾಡಿಕೊಂಡ ತಯಾರಿ, ಆರೋಗ್ಯ ವ್ಯವಸ್ಥೆ, ವಾರಿಯರ್​ಗಳ ಶ್ರಮ, ಕ್ವಾರಂಟೈನ್ ವ್ಯವಸ್ಥೆ ಎಲ್ಲವೂ ಅನ್ಯರಾಜ್ಯದಿಂದ ಬರುತ್ತಿರುವವರ ಬಳಕೆಗೆ ಸೀಮಿತವಾಗುವಂತಾಗಿದೆ. ಇದು ಬೊಕ್ಕಸಕ್ಕೂ ಹೊರೆ ಆಗುತ್ತಿದೆ. ಈ ಕಾರಣಕ್ಕಾಗಿಯೇ ವಿಶೇಷ ವಿಧಾನ ಕಂಡುಕೊಂಡಿದೆ. ಇದು ಜೂ.1ರಿಂದ 8ರವರೆಗೆ ಮಾತ್ರ ಅನ್ವಯಿಸಲಿದ್ದು, ಬಳಿಕ ಪರಿಷ್ಕರಣೆಗೊಳ್ಳುವ ಸಾಧ್ಯತೆ ಇದೆ.
ಸರ್ಕಾರಕ್ಕೆ ಕಸಿವಿಸಿ:ಹೊರ ರಾಜ್ಯಗಳಿಂದ ಬಂದು ಹೋಗುವವರು ಹೆಚ್ಚಿದಂತೆಯೇ ಈಗಿನ ಪರೀಕ್ಷಾ ವ್ಯವಸ್ಥೆ, ಸಾಂಸ್ಥಿಕ ಕ್ವಾರಂಟೈನ್, ಇನ್ನಿತರ ಕೇಂದ್ರೀಕೃತ ಕ್ರಮಗಳು ದುಸ್ತರವಾಗಲಿವೆ. ಅಲ್ಲದೆ ಆರ್ಥಿಕ ಪರಿಸ್ಥಿತಿ ಸುಧಾರಣೆ, ತುರ್ತು ಅಗತ್ಯದ ಕೆಲಸ, ಕಾರ್ಯಗಳು ಅಭಿವೃದ್ಧಿ ಚಟುವಟಿಕೆಗಳಿಗೆ ಆಡಳಿತ ಯಂತ್ರವನ್ನು ತೊಡಗಿಸಬೇಕಿರುವುದರಿಂದ ಸೀಮಿತ ನಿರ್ಬಂಧವೊಂದೇ ಸದ್ಯಕ್ಕಿರುವ ಏಕೈಕ ಪರಿಹಾರ. ಆದರೆ, ಅದರ ಅನುಷ್ಠಾನ ಕಷ್ಟವಾಗಿದೆ.
ಪಂಚ ರಾಜ್ಯಗಳ ಆಘಾತ
ವಿವಿಧ ಕ್ಷೇತ್ರಗಳ ಅಪೇಕ್ಷೆಯಂತೆ ಲಾಕ್​ಡೌನ್ ನಿರ್ಬಂಧ ಹಂತ ಹಂತವಾಗಿ ಸಡಿಲಗೊಳ್ಳುತ್ತಿವೆ. ಇದರಿಂದಾಗಿ ಪರಿಸ್ಥಿತಿ ಸಹಜವಾಗಲಿದೆ ಎಂದು ಜನರು ನಿರಾಳಭಾವ ವ್ಯಕ್ತಪಡಿಸುವ ಸಂದರ್ಭದಲ್ಲೇ ಕರೊನಾ ಸೋಂಕು ಬಾಧಿತ ಮಹಾರಾಷ್ಟ್ರ, ತಮಿಳುನಾಡು, ಕೇರಳ, ಗುಜರಾತ್ ಮತ್ತು ಮಧ್ಯಪ್ರದೇಶದಿಂದ ಜನರು ವಲಸೆ ಬರುತ್ತಿರುವುದು ರಾಜ್ಯ ಸರ್ಕಾರಕ್ಕೆ ಆಘಾತ ತಂದಿದೆ.
ಮುನ್ನೆಚ್ಚರಿಕೆ ಕ್ರಮವಾಗಿ 5 ರಾಜ್ಯಗಳಿಗೆ ರಸ್ತೆ ಸಂಚಾರ ನಿಷೇಧಿಸಿ, ಅಂತಾರಾಜ್ಯ ಪ್ರಯಾಣದ ಪಾಸ್​ಗಳನ್ನು ರದ್ದುಪಡಿಸಿತ್ತು. ಅಲ್ಲದೆ, ವಿಮಾನಯಾನಕ್ಕೂ ಅವಕಾಶ ಕೊಡಬಾರದು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ. ಆದರೆ 5ನೇ ಲಾಕ್ ಡೌನ್ ನಿಯಮಾವಳಿ ಪ್ರಕಾರ ನಿಯಂತ್ರಿತ ಪ್ರದೇಶ ಹೊರತುಪಡಿಸಿ ಉಳಿದೆಡೆ ಜೂ.8ರಿಂದ ಅಂತಾರಾಜ್ಯ ಪ್ರಯಾಣ ಸೇರಿದಂತೆ ಎಲ್ಲ ಚಟುವಟಿಕೆಗಳು ಮುಕ್ತವಾಗಲಿದ್ದು, ಹೊರ ರಾಜ್ಯಗಳು ಅದರಲ್ಲೂ ಸೋಂಕು ಪೀಡಿತ 5 ರಾಜ್ಯಗಳ ಜನರು ಬರುವ ಪ್ರಮಾಣ ಏರಿಕೆಯಾಗುವ ಚಿಂತೆ ಸರ್ಕಾರವನ್ನು ಕಾಡಲಾರಂಭಿಸಿದೆ.
ಜಿಲ್ಲಾಳಿತಕ್ಕೆ ಬೇರೆ ಕೆಲಸವಿಲ್ಲ!
ಕ್ವಾರಂಟೈನ್ ಕೇಂದ್ರದಲ್ಲಿ ಇರುವವರನ್ನು ಕಾಯುವುದು ಬಿಟ್ಟು ಜಿಲ್ಲಾ ಆಡಳಿತಗಳಿಗೆ ಬೇರೆ ಕೆಲಸ ಇಲ್ಲದಂತಾಗಿದೆ ! ಊಟೋಪಚಾರ, ಅಗತ್ಯ ಸವಲತ್ತಿನ ನಿಗಾ, ಮಾದರಿ ಪರೀಕ್ಷೆಗಳ ವರದಿ ಬಂದ ನಂತರ ಪ್ರಕರಣ ದೃಢಪಟ್ಟರೆ ಸೂಕ್ತ ಚಿಕಿತ್ಸಾ ವ್ಯವಸ್ಥೆ ಹಾಗೂ ಇತರೆಡೆ ಮಾರ್ಗಸೂಚಿಗಳ ಪಾಲನೆ ಮೇಲ್ವಿಚಾರಣೆಗೆ ಆಡಳಿತ ಯಂತ್ರದ ಎಲ್ಲ ಶಕ್ತಿ ವಿನಿಯೋಗವಾಗುತ್ತಿದೆ. ಜೂನ್ 2ನೇ ವಾರದಿಂದ ರೈಲು, ಬಸ್​ಗಳ ಸಂಚಾರ ಸೇರಿದಂತೆ ವಿವಿಧ ಚಟುವಟಿಕೆಗಳು ಮತ್ತಷ್ಟು ಹೆಚ್ಚಲಿದ್ದು, ಜಿಲ್ಲಾ ಆಡಳಿತಗಳಿಗೆ ಕೆಲಸದ ಭಾರವೂ ಏರಿಕೆಯಾಗಲಿದೆ. ಕ್ವಾರಂಟೈನ್ ಕೇಂದ್ರಗಳಷ್ಟೇ ಅಲ್ಲ, ಜನ ಸಮುದಾಯದ ನಡುವೆ ಓಡಾಡುವ ಸೋಂಕಿತರು ಹಾಗೂ ಶಂಕಿತರನ್ನು ಶೋಧಿಸಿ ಪತ್ತೆ ಹೆಚ್ಚಿ ಪರೀಕ್ಷೆ, ಚಿಕಿತ್ಸಾ ಕ್ರಮಗಳಿಗೆ ಒತ್ತು ನೀಡಬೇಕಾಗಿದ್ದು, ಜನರ ಸಹಕಾರ ನಿರ್ಣಾಯಕವಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಪ್ರವೇಶಕ್ಕೆ ಷರತ್ತು
ಕರ್ನಾಟಕ ಪ್ರವೇಶಿಸುವವರಿಗೆ ಇನ್ಮುಂದೆ ಅನುಮತಿ ಅಗತ್ಯವಿಲ್ಲವಾದರೂ ಸೇವಾಸಿಂಧು ಪೋರ್ಟಲ್​ನಲ್ಲಿ ಸ್ವ ವಿವರ ನೋಂದಣಿ ಕಡ್ಡಾಯ. ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಜತೆಗೆ ವ್ಯಾಪಾರಸ್ಥರು ತಮ್ಮ ಭೇಟಿಯ ಉದ್ದೇಶ ವಿವರಿಸಬೇಕಾಗುತ್ತದೆ. ಇದೇ ವೇಳೆ ಗಡಿ ತಪಾಸಣಾ ಕೇಂದ್ರ, ವಿಮಾನ ನಿಲ್ದಾಣ, ರೈಲು, ಬಸ್ ನಿಲ್ದಾಣಗಳಲ್ಲಿ ಆರೋಗ್ಯ ತಪಾಸಣೆ ಕಾರ್ಯ ಮುಂದುವರಿಯಲಿದೆ. ಕ್ವಾರಂಟೈನ್ ನಿಯಮಗಳ ಪ್ರಕಾರ 14 ದಿನಗಳ ಹೋಂ ಕ್ವಾರಂಟೈನ್​ಗೆ ಮುದ್ರೆ ಒತ್ತಲಾಗುತ್ತದೆ. ಬೇರೆ ರಾಜ್ಯಗಳಿಂದ ಬಂದವರಲ್ಲಿ ಸೋಂಕು ಲಕ್ಷಣ ಕಂಡರೆ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್, ಮತ್ತೆ 7 ದಿನಗಳ ಹೋಂ ಕ್ವಾರಂಟೈನ್ ಮಾಡಬೇಕಾಗುತ್ತದೆ.
ಪರೀಕ್ಷೆ ಮಾಡಿ ಪಾಸಿಟಿವ್ ಬಂದಲ್ಲಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಮಹಾರಾಷ್ಟ್ರದಿಂದ ಬರುವವರ ಮೇಲೆ ಹೆಚ್ಚಿನ ನಿಗಾ ಇಡಲು ಪ್ರತ್ಯೇಕ ನಿಯಮಗಳನ್ನು ಅಳವಡಿಸಲಾಗಿದೆ. ಒಂದು ವೇಳೆ ಐಸಿಎಂಆರ್ ಅನುಮೋದಿತ ಲ್ಯಾಬ್​ಗಳಲ್ಲಿ ಪರೀಕ್ಷೆಗೊಳಪಟ್ಟು ನೆಗೆಟಿವ್ ವರದಿಯೊಂದಿಗೆ (2 ದಿನಗಳ ಕಾಲಮಿತಿ) ಆಗಮಿಸಿದ್ದರೆ ಅವರಿಗೆ ಏಳು ಸಾಂಸ್ಥಿಕ ಕ್ವಾರಂಟೈನ್​ನಿಂದ ವಿನಾಯಿತಿ ನೀಡಲಾಗುತ್ತದೆ. ಆದರೆ 14 ದಿನ ಮನೆಯಲ್ಲಿ ಕ್ವಾರಂಟೈನ್ ಕಡ್ಡಾಯ. ಮಹಾರಾಷ್ಟ್ರ ಹೊರತು ಉಳಿದ ರಾಜ್ಯಗಳಿಂದ ಬರುವವರಿಗೆ 14 ದಿನಗಳ ಹೋಂ ಕ್ವಾರಂಟೈನ್ ಅನಿವಾರ್ಯ. ಆದರೆ, ದೊಡ್ಡ ಕುಟುಂಬ ಅಥವಾ ಮನೆಯಲ್ಲಿ ಪ್ರತ್ಯೇಕ ಕೊಠಡಿ ಇಲ್ಲದವರು, ವಲಸಿಗರು, ಸ್ಲಂ ನಿವಾಸಿಗಳು, ಇಕ್ಕಟ್ಟಾದ ಮನೆಯಲ್ಲಿ ವಾಸವಿರಬೇಕಾದವರು ಸಾಂಸ್ಥಿಕ ಕ್ವಾರಂಟೈನ್​ಗೆ ಹೋಗಬೇಕಾಗುತ್ತದೆ. ವ್ಯಾವಹಾರಿಕ ದೃಷ್ಟಿಯಿಂದ ರಾಜ್ಯಕ್ಕೆ ಬಂದು ಹೋಗುವವರು ಸೂಕ್ತ ದಾಖಲೆ ನೀಡಿದರೆ ಕ್ವಾರಂಟೈನ್ ಹಾಗೂ ಹ್ಯಾಂಡ್ ಸ್ಟಾಂಪಿಂಗ್ ಇರುವುದಿಲ್ಲ. ಇನ್ನು ಮುಂದೆ ಸಾಂಸ್ಥಿಕ ಕ್ವಾರಂಟೈನ್ ವ್ಯವಸ್ಥೆ ಕಡಿಮೆ ಮಾಡಿ ಮನೆಗಳಲ್ಲಿಯೇ ಪ್ರತ್ಯೇಕವಾಗಿ ಇರಲು ಮಹತ್ವ ಕೊಡಲಾಗುತ್ತಿದೆ. ವ್ಯವಾಹಾರಿಕ ಉದ್ದೇಶಕ್ಕೆ ಬಂದು ಹೋಗುವವರನ್ನು ಹೊರತುಪಡಿಸಿ ಉಳಿದವರು ಮನೆಯಲ್ಲಿ ಯಾವ ರೀತಿ ಕ್ವಾರಂಟೈನ್ ಆಗಬೇಕೆಂದು ಸರ್ಕಾರ ಸ್ಪಷ್ಟ ಸೂಚನೆ ನೀಡಿದೆ. ಗ್ರಾಮೀಣ ಪ್ರದೇಶಲ್ಲಿ ಕ್ವಾರಂಟೈನ್ ಆದವರ ಬಗ್ಗೆ ನೆರೆಹೊರೆಯ ಇಬ್ಬರಿಗೆ ಮಾಹಿತಿ, ಪರಿಶೀಲನೆಗೆ ಟಾಸ್ಕ್ ಫೋರ್ಸ್, ಮೇಲ್ವಿಚಾರಣಾ ಸಮಿತಿ, ಜಾಗೃತ ದಳ ರಚಿಸಲಾಗುತ್ತದೆ. ನಿಯಮ ಉಲ್ಲಂಘಿಸಿದರೆ ಎಫ್​ಐಆರ್ ದಾಖಲಿಸಿ ಅಂಥವರನ್ನು ಸಾಂಸ್ಥಿಕ ಕ್ವಾರಂಟೈನ್​ಗೆ ಕಳಿಸಲಾಗುತ್ತದೆ. ನಗರ ಪ್ರದೇಶದಲ್ಲಾದರೆ ವಾರ್ಡ್ ಸಮಿತಿಗಳು ಮೇಲ್ವಿಚಾರಣೆ ಮಾಡುತ್ತವೆ.
ಎರಡು ದಿನದಲ್ಲಿ ಮಹಾಮಾರಿ ಕರೊನಾಗೆ ಇಬ್ಬರು ಪೊಲೀಸ್​ ಅಧಿಕಾರಿಗಳು ಬಲಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
