|ರಮೇಶ್ ಮೈಸೂರುಬೆಂಗಳೂರು
ಮೂರು ವರ್ಷಗಳ ಬಳಿಕ ನಡೆಯುತ್ತಿರುವ 6-8 ನೇ ತರಗತಿ ಶಿಕ್ಷಕರ ನೇಮಕಾತಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಪಠ್ಯಕ್ರಮವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಆದರೆ, ಪಠ್ಯಕ್ರಮದ ವಿಶಾಲ ವ್ಯಾಪ್ತಿ ಅಭ್ಯರ್ಥಿಗಳನ್ನು ಕಳವಳಕ್ಕೀಡು ಮಾಡಿದೆ.
ಒಟ್ಟಾರೆ ಪರೀಕ್ಷಾ ಪ್ರಕ್ರಿಯೆಯನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸಲು ಮುಂದಾಗಿರುವ ಇಲಾಖೆಯ ತ್ವರಿತಗತಿಗೆ ಮೆಚ್ಚುಗೆ ಇದೆಯಾದರೂ ಪರೀಕ್ಷಾ ಸಿದ್ಧತೆಗೆ ಹೆಚ್ಚು ಸಮಯಾವಕಾಶ ಇಲ್ಲದಿರುವುದು ಚಿಂತೆಗೆ ಕಾರಣವಾಗಿದೆ. ಹೀಗಾಗಿ ಈ ಬಾರಿ ನೇಮಕಕ್ಕೆ ಅರ್ಹತೆ ಗಳಿಸುವ ಅಭ್ಯರ್ಥಿಗಳ ಸಂಖ್ಯೆ ಇಳಿಮುಖವಾಗಲಿದೆ ಎಂಬ ಅನುಮಾನ ಶಿಕ್ಷಣ ತಜ್ಞರದ್ದು. ಎಷ್ಟೇ ಓದಿಕೊಂಡಿದ್ದರೂ ಅಂತಿಮವಾಗಿ ಪಠ್ಯಕ್ರಮವನ್ನು ಆಧರಿಸಿ ಸಿದ್ಧತೆ ಮಾಡಿಕೊಳ್ಳಲೇಬೇಕಾಗುತ್ತದೆ. ಹೀಗಿರುವಾಗ 60 ದಿನಗಳಲ್ಲಿ ಸಜ್ಜುಗೊಳ್ಳುವುದು ಕಷ್ಟಸಾಧ್ಯ ಎಂಬುದು ಅಭ್ಯರ್ಥಿಗಳ ಅಭಿಮತ.
ಪರೀಕ್ಷೆ ಸ್ವರೂಪ:ಅಭ್ಯರ್ಥಿಗಳು ಒಟ್ಟು ಮೂರು ಪತ್ರಿಕೆಗಳಿಗೆ ಉತ್ತರಿಸಬೇಕಾಗಿದ್ದು, ಮೊದಲ ಪತ್ರಿಕೆ ಎಲ್ಲರಿಗೂ ಸಾಮಾನ್ಯವಾಗಿದೆ. 150 ಅಂಕಗಳ ಈ ಪತ್ರಿಕೆಯು ಬಹು ಆಯ್ಕೆ ಮಾದರಿಯದ್ದಾಗಿದೆ. ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್, ಸಾಮಾನ್ಯ ಜ್ಞಾನ ಹಾಗೂ ಪ್ರಚಲಿತ ವಿದ್ಯಮಾನ, ಶೈಕ್ಷಣಿಕ ಮನೋವಿಜ್ಞಾನ ಮತ್ತು ವಿಕಸನ ಹಾಗೂ ಬೋಧನಾ ವಿಧಾನ, ಮೌಲ್ಯ ಶಿಕ್ಷಣ ಹಾಗೂ ಆರೋಗ್ಯ ಶಿಕ್ಷಣ, ಕಂಪ್ಯೂಟರ್ ಸಾಕ್ಷರತೆ ಅಥವಾ ಪ್ರಬುದ್ಧತೆಯ ಪ್ರಶ್ನೆಗಳಿರುತ್ತವೆ. ಇದೊಂದೇ ಪತ್ರಿಕೆಗೆ ಓದಿನ ವ್ಯಾಪ್ತಿ ಅತ್ಯಂತ ವಿಸ್ತಾರವಾಗಿದೆ. ಈ ಪತ್ರಿಕೆಗೆ ಅರ್ಹತಾ ಅಂಕಗಳನ್ನು ನಿಗದಿಪಡಿಸಿಲ್ಲವಾದರೂ, ಹೆಚ್ಚು ಅಂಕ ಪಡೆಯುವುದು ಅನಿವಾರ್ಯ. ಎರಡನೇ ಪತ್ರಿಕೆಯು ಆಯಾ ವಿಷಯದ ಅಂದರೆ ಸಮಾಜ ವಿಜ್ಞಾನ, ಗಣಿತ, ವಿಜ್ಞಾನ ಹಾಗೂ ಜೀವ ವಿಜ್ಞಾನ ವಿಷಯದ್ದಾಗಿದೆ. ಇದರಲ್ಲಿ 50 ಅಂಕಗಳು ಬಹುಆಯ್ಕೆ ಮಾದರಿಯದ್ದಾಗಿದ್ದರೆ, ಇನ್ನುಳಿದ 100 ಅಂಕಗಳಿಗೆ ವಿವರಣಾತ್ಮಕ ಉತ್ತರ ಬರೆಯಬೇಕಿರುತ್ತದೆ. ಈ ಮೊದಲು ಶೇ.50 ಅರ್ಹತಾ ಅಂಕ ನಿಗದಿಯಾಗಿದ್ದರೆ, ಈಗ ಅದನ್ನು ಶೇ.45ಕ್ಕೆ ಇಳಿಸಲಾಗಿದೆ. ಇನ್ನು, ಮೂರನೇ ಪತ್ರಿಕೆಯಲ್ಲಿ ಭಾಷಾ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತದೆ. 100 ಅಂಕಗಳ ಈ ಪತ್ರಿಕೆಯಲ್ಲಿ ಅರ್ಹತೆಗೆ ಶೇ.50 ಅಂಕ ಗಳಿಸಬೇಕಿದೆ.
ತಿದ್ದುಪಡಿ ಅಧಿಸೂಚನೆ:ಆರಂಭದಲ್ಲಿಯೇ ಎಡವಟ್ಟು ಮಾಡಿಕೊಂಡಿದ್ದ ಇಲಾಖೆ ಎರಡನೇ ಪತ್ರಿಕೆಯ 100 ಅಂಕಗಳ ಪ್ರಶ್ನೆಗಳಿಗೆ ಒಎಂಆರ್ ಶೀಟ್​ನಲ್ಲಿ ಉತ್ತರಿಸಬೇಕು ಎಂದು ಹೇಳಿತ್ತು. ಹೊಸ ಪರೀಕ್ಷಾ ವಿಧಾನವಿರಬೇಕು ಎಂದುಕೊಂಡಿದ್ದ ಅಭ್ಯರ್ಥಿಗಳು ಇದರಿಂದ ಅನುಕೂಲವೇ ಆಗಲಿದೆ ಎಂದು ತಿಳಿದಿದ್ದರು. ಆದರೆ, ತಿದ್ದುಪಡಿ ಅಧಿಸೂಚನೆ ಹೊರಡಿಸಿದ ಇಲಾಖೆ, ಅದು ವಿವರಣಾತ್ಮಕ ಪ್ರಶ್ನೆಗಳು ಎಂದು ಸ್ಪಷ್ಟಪಡಿಸಿತು. ಇದೇ ರೀತಿ, ಭಾಷಾ ಸಾಮರ್ಥ್ಯ ವಿಷಯದಲ್ಲಿ ಕೈಬಿಟ್ಟಿದ್ದ ಜೀವ ವಿಜ್ಞಾನವನ್ನು ಮತ್ತೆ ಸೇರಿಸಿತು.
ಅಭ್ಯರ್ಥಿಗಳಗಷ್ಟೇ ಅಲ್ಲ…!:ಸಮಯಾವಕಾಶ ಕೊರತೆಯಾಗಿರುವುದು ಅಭ್ಯರ್ಥಿಗಳಿಗಷ್ಟೇ ಅಲ್ಲ, ಪ್ರಕಾಶಕರು, ತರಬೇತಿ ದಾರರು ಇದರ ಬಿಸಿ ತಟ್ಟಿದೆ. ಸಂಪನ್ಮೂಲ ವ್ಯಕ್ತಿಗಳನ್ನು ಹುಡುಕಿ, ಗುಣಮಟ್ಟದ ಪುಸ್ತಕ ಪ್ರಕಟಿಸುವ, ಅದಕ್ಕಾಗಿ ಅಭ್ಯರ್ಥಿಗಳನ್ನು ಸಿದ್ಧಪಡಿಸುವ ಕಾರ್ಯ ಸವಾಲಿನದ್ದಾಗಿದೆ ಎಂಬುದು ಅರವಿಂದ ಬುಕ್ ಹೌಸ್​ನ ಸ್ಪರ್ಧಾತ್ಮಕ ಪರೀಕ್ಷಾ ಮಾರ್ಗದರ್ಶಕ ಚೇತನಕುಮಾರ್ ಅಭಿಪ್ರಾಯ.
ಪೈಪೋಟಿ ಹೆಚ್ಚು:ಮೂರು ವರ್ಷಗಳ ಬಳಿಕ ಪರೀಕ್ಷೆ ನಡೆಯುತ್ತಿರುವುದರಿಂದ ಸಹಜವಾಗಿಯೇ ಪೈಪೋಟಿ ಹೆಚ್ಚಾಗಿದೆ. ಪದವಿ, ಬಿಇಡಿ, ಟಿಇಟಿಗಳಲ್ಲಿ ಕಡಿಮೆ ಅಂಕಗಳಿಸಿದವರು ಇದರಲ್ಲಿ ಹೆಚ್ಚು ಅಂಕಗಳಿಸಬೇಕಾದ ಒತ್ತಡದಲ್ಲಿದ್ದಾರೆ.
ಒಂದೇ ಪಠ್ಯಕ್ರಮ ಏಕಿಲ್ಲ?:ರಾಜ್ಯ ಸರ್ಕಾರಿ ಶಾಲಾ ಶಿಕ್ಷಕ ನೇಮಕಾತಿಗೆ ಪರೀಕ್ಷೆಗೆ ಸಜ್ಜಾಗುವ ಅಭ್ಯರ್ಥಿಗಳು, ಇದೇ ಸಿದ್ಧತೆ ಆಧಾರದಲ್ಲಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ನಡೆಸುವ ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆ ಬರೆಯವುದು ಕಷ್ಟಸಾಧ್ಯ. ಏಕೆಂದರೆ, ಅಲ್ಲಿಯ ಪಠ್ಯ ಕ್ರಮ ಭಿನ್ನವಾಗಿದೆ. ಪಠ್ಯಕ್ರಮದಲ್ಲಿ ಏಕ ರೂಪತೆ ಕಾಯ್ದುಕೊಂಡಿದ್ದೇ ಆದಲ್ಲಿ ಹೆಚ್ಚು ಉದ್ಯೋಗಾವಕಾಶಕ್ಕೆ ಆಕಾಂಕ್ಷಿಗಳು ತೆರೆದುಕೊಳ್ಳಲಿದ್ದಾರೆ ಎನ್ನುತ್ತಾರೆ ಧಾರ ವಾಡದ ಡಾ.ಗುರುರಾಜ ಬುಲಬುಲೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + seven =
Remember me
