ಬೆಂಗಳೂರು:ವೃತ್ತಿಪರ ಕೋರ್ಸ್​ಗಳ ಪ್ರವೇಶಕ್ಕೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) 2020ಕ್ಕೆ ಹೈಕೋರ್ಟ್ ಹಸಿರು ನಿಶಾನೆ ತೋರಿದ್ದು, ಸುರಕ್ಷತಾ ಕ್ರಮ ಅನುಸರಿಸಿ ಜು.30 ರಿಂದ ಆ. 1ರವರೆಗೆ ನಡೆಸಲು ಸರ್ಕಾರ ನಿರ್ಧರಿಸಿದೆ.
ಆ ಪ್ರಕಾರ ಗುರುವಾರ ಪರೀಕ್ಷೆ ಆರಂಭವಾಗಲಿದೆ. ಕರೊನಾ ಪಾಸಿಟಿವ್ ಹಾಗೂ ಕಂಟೇನ್​ವೆುಂಟ್ ವಲಯದ ವಿದ್ಯಾರ್ಥಿಗಳಿಗೂ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದೆ. ರಾಜ್ಯಾದ್ಯಂತ 1,94,356 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಕರೊನಾ ಸಂದಿಗ್ಧತೆಯಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆಗೆ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮವನ್ನೇ ಸಿಇಟಿ ಪರೀಕ್ಷೆಗೂ ಕೈಗೊಳ್ಳಲಾಗಿದೆ. ರಾಜ್ಯದ 120 ಸ್ಥಳಗಳ 497 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಬೆಳಗ್ಗೆ 10.30ರಿಂದ 11.50ರ ವರೆಗೆ ಹಾಗೂ ಮಧ್ಯಾಹ್ನ 2.30ರಿಂದ 3.30 ವರೆಗೆ ಪರೀಕ್ಷೆ ನಡೆಯಲಿದೆ.
ಬೆಂಗಳೂರಿನಲ್ಲಿ 83 ಕೇಂದ್ರಗಳ ವ್ಯವಸ್ಥೆ ಮಾಡಲಾಗಿದ್ದು, 40,200 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 30 ಮಂದಿ ವಿದೇಶಿ ವಿದ್ಯಾರ್ಥಿಗಳಿದ್ದಾರೆ. ಹೊರನಾಡು ಹಾಗೂ ಗಡಿನಾಡು ವಿದ್ಯಾರ್ಥಿಗಳ ಕನ್ನಡ ಭಾಷಾ ಪರೀಕ್ಷೆ ಆಗಸ್ಟ್ 1ರಂದು ನಡೆಯಲಿದೆ.
ಗಡಿನಾಡ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬೆಂಗಳೂರಿಗೆ ಬರಬೇಕಾಗಿಲ್ಲ. ಗಡಿನಾಡಿನ 188 ವಿದ್ಯಾರ್ಥಿಗಳು, ಗಡಿಭಾಗದಲ್ಲಿರುವ ಬಳ್ಳಾರಿ, ಬೆಳಗಾವಿ, ಬೆಂಗಳೂರು, ಮಂಗಳೂರು, ಬೀದರ್​ಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಕೋವಿಡ್ ಕಾರಣಕ್ಕೆ ಈಗಾಗಲೇ ಅನೇಕ ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಕೇಂದ್ರಗಳನ್ನು ಬದಲಾಯಿಸಿಕೊಂಡಿದ್ದಾರೆ. ಸಿಇಟಿ ಪರೀಕ್ಷೆ ಬರೆಯಲಿರುವ ವಿದೇಶಿ ಅಥವಾ ಹೊರಗಿನ ವಿದ್ಯಾರ್ಥಿಗಳಿಗೆ ಹಾಗೂ ಅವರ ಜತೆಯಲ್ಲಿ ಬರುವ ಪೋಷಕರಿಗೆ 4 ದಿನಗಳ ಕಾಲ ಕ್ವಾರಂಟೈನ್​ನಿಂದ ವಿನಾಯಿತಿ ನೀಡಲಾಗಿದೆ. ಕರೊನಾ ಸೋಂಕಿತ ವಿದ್ಯಾರ್ಥಿಗಳಿಗೆ ಹಾಗೂ ಕಂಟೇನ್ಮೆಂಟ್ ವಲಯದ ವಿದ್ಯಾರ್ಥಿಗಳಿಗೆ ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ತಡೆ ನೀಡಲು ನಿರಾಕರಣೆ: ಬೆಂಗಳೂರಿನ ವಕೀಲರಾದ ಎಸ್.ಪಿ. ಪ್ರದೀಪ್​ಕುಮಾರ್ ಹಾಗೂ ಎಸ್. ಹನುಮಂತೇಗೌಡ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಬುಧವಾರ ಮೂರು ಗಂಟೆಗೂ ಅಧಿಕ ಸಮಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ್ ಕುಮಾರ್ ನೇತೃತ್ವದ ವಿಭಾಗೀಯ ಪೀಠ, ಸಿಇಟಿಗೆ ತಡೆ ನೀಡಲು ನಿರಾಕರಿಸಿತು.
ಹೈಕೋರ್ಟ್ ಷರತ್ತುಗಳು:ಪರೀಕ್ಷೆಗೆ ಹಾಜರಾಗಲಿರುವ ಎಲ್ಲ ವಿದ್ಯಾರ್ಥಿಗಳಿಗೂ ಎಸ್​ಒಪಿ ಅನುಸಾರ ಪರೀಕ್ಷೆ ಬರೆಯಲು ಅನುವು ಮಾಡಿಕೊಡಬೇಕು. ಒಂದೊಮ್ಮೆ ಕೋವಿಡ್-19 ಸೋಂಕು ಉಳ್ಳವರು ಮುಂಚಿತವಾಗಿ ಮಾಹಿತಿ ನೀಡಲು ವಿಫಲರಾಗಿದ್ದರೆ ಅಂಥವರಿಗೆ ಪರೀಕ್ಷೆ ಅವಕಾಶ ನಿರಾಕರಿಸಬಾರದು. ಸೋಂಕಿತ ಅಭ್ಯರ್ಥಿಗಳಷ್ಟೇ ಅಲ್ಲದೆ ಸೋಂಕುರಹಿತ ಅಭ್ಯರ್ಥಿಗಳಿಗೂ ಅವರ ಮನವಿ ಮೇರೆಗೆ ಅಗತ್ಯ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಕಂಟೇನ್ಮೆಂಟ್ ವಲಯಗಳಲ್ಲಿರುವ ವಿದ್ಯಾರ್ಥಿಗಳು ತಮ್ಮ ಪ್ರವೇಶಪತ್ರ ತೋರಿಸಿದರೆ ಆ ವಿದ್ಯಾರ್ಥಿಗಳಿಗೆ ಪಾಲಕರ ಜತೆ ಹೊರ ಬರಲು ಅವಕಾಶ ಕಲ್ಪಿಸಬೇಕು. ಈ ವಿಚಾರವಾಗಿ ಪೊಲೀಸ್ ಹಾಗೂ ಆರೋಗ್ಯ ಸಿಬ್ಬಂದಿಗೆ ಅಗತ್ಯ ನಿರ್ದೇಶನ ನೀಡಬೇಕು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 7 =
Remember me
