ಬೆಂಗಳೂರು:ಪ್ರತಿಪಕ್ಷ ನಾಯಕ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸೇರಿ ಗಣ್ಯರ ಗೈರು. ಸರಿಸುಮಾರು ಅರ್ಧದಷ್ಟು ಖಾಲಿ ಕುರ್ಚಿಗಳ ನಡುವೆಯೇ ರಾಜ್ಯಪಾಲ ಥಾವರ್​ಚಂದ್ ಗೆಹಲೋತ್ ವಿಧಾನ ಮಂಡಲ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಿ ರಾಜ್ಯ ಸರ್ಕಾರದ ಯೋಜನೆಗಳಿಗೆ ಬಹುಪರಾಕ್ ಹೇಳಿದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಸೇರಿ ಕೆಳಮನೆ ಮತ್ತು ಮೇಲ್ಮನೆಯ ಬಹುತೇಕ ಸದಸ್ಯರ ಗೈರು ಅಧಿವೇಶನದ ಮೊದಲ ದಿನವಾದ ಶುಕ್ರವಾರ ಕಂಡುಬಂತು.
ಸುದೀರ್ಘ ಒಂದು ಗಂಟೆ ಕಾಲ ಸರ್ಕಾರದ ಯೋಜನೆಗಳು, ಸಾಧನೆಗಳನ್ನು ರಾಜ್ಯಪಾಲರು ಶ್ಲಾಘಿಸಿದರು. ಭಾಷಣದುದ್ದಕ್ಕೂ ಸರ್ಕಾರದ ನಡೆಗಳನ್ನು ಸಮರ್ಥಿಸಿಕೊಳ್ಳುತ್ತ ಬಂದರಲ್ಲದೆ, ನನ್ನ ಸರ್ಕಾರ, ನನ್ನ ಸರ್ಕಾರ ಎಂದು ಹೇಳಿ ಬೆನ್ನುತಟ್ಟಿದರು. 34 ಪುಟಗಳ ಭಾಷಣದಲ್ಲಿ ಸರ್ಕಾರದ ಸಾಧನೆಗಳ ಸಿಂಹಾವಲೋಕನ ಮಾಡಿದ ರಾಜ್ಯಪಾಲರು, ಕರ್ನಾಟಕ ದೇಶದ ಮುಂಚೂಣಿ ರಾಜ್ಯಗಳಲ್ಲಿ ಒಂದಾಗಿದೆ. ಇಲ್ಲಿನ ಸರ್ಕಾರ ಪ್ರಗತಿಪರ, ಪ್ರಜಾಸ್ನೇಹಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ. ಸದಸ್ಯರೆಲ್ಲರೂ ರಚನಾತ್ಮಕ ಮತ್ತು ಗುಣಾತ್ಮಕ, ವಿಸ್ತೃ ಚರ್ಚೆಯಲ್ಲಿ ಪಾಲ್ಗೊಂಡು ರಾಜ್ಯವನ್ನು ಮತ್ತ್ತ್ಟು ಪ್ರಗತಿಪರದತ್ತ ಕೊಂಡೊಯ್ಯಬೇಕೆಂದು ಎಂದು ಬಯಸಿದರು. ರೈತರು, ಬಡವರು, ದುರ್ಬಲ ವರ್ಗದವರು ಮತ್ತು ಅವಕಾಶ ವಂಚಿತರ ಕಲ್ಯಾಣಕ್ಕಾಗಿ ಸರ್ಕಾರ ಬದ್ಧವಾಗಿ ಕೆಲಸ ಮಾಡುತ್ತಿದೆ. ಅಭಿವೃದ್ಧಿ ಪಥದಲ್ಲಿ ಮುಂಚೂಣಿ ರಾಜ್ಯವಾಗಿ ಹೊರ ಹೊಮ್ಮಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಕನಸಿನಂತೆ ಮುಂದಿನ 25 ವರ್ಷಗಳ ಅಮೃತ ಕಾಲದಲ್ಲಿ ಹಾಕಿಕೊಟ್ಟ ಪ್ರಗತಿಪಥದಲ್ಲಿ ಸರ್ಕಾರ ಕ್ರಮಿಸುವ ವಿಶ್ವಾಸ ವ್ಯಕ್ತಪಡಿಸಿದರು. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೊಷಣೆ ಮಾಡಿ 5300 ಕೋಟಿ ರೂ. ನೀಡಿರುವ ಕೇಂದ್ರ ಸರ್ಕಾರದ ಬಗ್ಗೆಯೂ ಭಾಷಣದಲ್ಲಿ ಪ್ರಸ್ತಾಪಿಸಿದರು. ಕೃಷ್ಣಾ ಮೇಲ್ದಂಡೆ ಯೋಜನೆ ಹಂತ -3 ರ ಅನುಷ್ಠಾನಕ್ಕೆ ಕ್ರಮ ಸೇರಿ ಬಯಲು ಸೀಮೆಯ ಜಿಲ್ಲೆಗಳ 527 ಕೆರೆಗಳಿಗೆ ಎತ್ತಿನ ಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಮೂಲಕ ನೀರು ತುಂಬಿಸುವ ಕ್ರಮವನ್ನೂ ಪ್ರಸ್ತಾಪಿಸಿದರು.
ಸಿದ್ದರಾಮಯ್ಯ ಹಿಂದೆ ಚುನಾವಣೆಗೆ ಹೋಗುವ 2 ತಿಂಗಳು ಮುಂಚೆ ಬಜೆಟ್​ನಲ್ಲಿ 15 ಲಕ್ಷ ಮನೆಗಳನ್ನು ಘೊಷಣೆ ಮಾಡಿ 3 ಸಾವಿರ ಕೋಟಿ ಮೀಸಲಿಡುತ್ತೇವೆ ಎಂದು ಸುಳ್ಳು ಹೇಳಿ, ಮೋಸ ಮಾಡಿದ್ದಾರೆ. ಆ ಮನೆಗಳನ್ನು ಕಟ್ಟುವ ಜವಾಬ್ದಾರಿ ನಮ್ಮ ಪಾಲಿಗೆ ಬಂದಿದೆ. 5 ಲಕ್ಷ ಮನೆಗಳನ್ನು ನಮ್ಮ ಸರ್ಕಾರ ಮಂಜೂರು ಮಾಡಿದೆ. ಇವೆಲ್ಲವೂ ಅವರಿಗೆ ತಿಳಿದಿದ್ದರೂ, ರಾಜಕೀಯ ಕಾರಣಕ್ಕಾಗಿ ಇಂತಹ ಅಪಾದನೆ ಮಾಡುತ್ತಿದ್ದಾರೆ.
|ಬಸವರಾಜ ಬೊಮ್ಮಾಯಿಮುಖ್ಯಮಂತ್ರಿ
ಬಿಪಿಎಲ್​ಗೆ ಉಚಿತ ವಿದ್ಯುತ್:ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಿಪಿಎಲ್ ಕುಟುಂಬಗಳಿಗೆ ಉಚಿತ ವಿದ್ಯುತ್ ನೀಡಲಾಗಿದ್ದು, ಸಮಾಜ ಕಲ್ಯಾಣ ಇಲಾಖೆ, ನಿಗಮದಲ್ಲಿ ಮಹಿಳೆಯರಿಗೆ ಶೇ.50 ಮೀಸಲಾತಿ ನೀಡಲಾಗಿದೆ. ಕೇಂದ್ರ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಯನ್ನು ಸಹ ಬೆಳಗಾವಿ ಜಿಲ್ಲೆಯಲ್ಲಿ ಪ್ರಾರಂಭ ಮಾಡಲಾಗಿದೆ.
271 ನಮ್ಮ ಕ್ಲಿನಿಕ್ ಕಾರ್ಯಾರಂಭ:ನಗರ ಪ್ರದೇಶಗಳಲ್ಲಿ 438 ನಮ್ಮ ಕ್ಲಿನಿಕ್​ಗಳನ್ನು ಸ್ಥಾಪಿಸಲು ಅನುಮೋದನೆ ನೀಡಲಾಗಿದೆ. 271 ನಮ್ಮ ಕ್ಲಿನಿಕ್ ಕಾರ್ಯಾರಂಭ ಮಾಡಿವೆ. ಅನುಮೋದನೆ ಆಗಿರುವ 128 ಮಹಿಳಾ ಸ್ವಾಸ್ಥ್ಯ ಕೇಂದ್ರಗಳಲ್ಲಿ 53 ಮಹಿಳಾ ಸ್ವಾಸ್ಥ್ಯ ಕೇಂದ್ರಗಳು ಸಾರ್ವಜನಿಕ ಸೇವೆಗೆ ಶೀಘ್ರವೇ ಲೋಕಾರ್ಪಣೆಗೊಳಿವೆ.
ಉಪನಗರ ರೈಲು ಯೋಜನೆ ಪ್ರಗತಿ:ಬಹು ನಿರೀಕ್ಷಿತ ಬೆಂಗಳೂರ ಮೆಟ್ರೋರೈಲು ಯೋಜನೆಯು ಮೈಸೂರು ರಸ್ತೆಯಿಂದ ಕೆಂಗೇರಿವರೆಗೆ 7.53 ಕಿ.ಮೀ, ಯಲಚೇನಹಳ್ಳಿಯಿಂದ ರೇಷ್ಮೆ ಸಂಸ್ಥೆವರೆಗೆ 6.12 ಕಿ.ಮೀ. ಸೇರಿ 13.65 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದೆ. ಇದೀಗ ಬೈಯ್ಯಪ್ಪನಹಳ್ಳಿಯಿಂದ ವೈಟ್​ಫೀಲ್ಡ್ವರೆಗಿನ 18.81 ಕಿ.ಮೀ. ಉದ್ದ ಕಾಮಗಾರಿ ಪೂರ್ಣಗೊಂಡಿದ್ದು, ಮಾರ್ಚ್​ನಲ್ಲಿ ಕಾರ್ಯಾರಂಭ ಮಾಡಲಿದೆ. ಹೊರವರ್ತಲ ರಸ್ತೆ, ಅಂತಾರಾಷ್ಟ್ರೀಯ ವಿಮಾಣ ನಿಲ್ದಾಣದ ಮೆಟ್ರೋ ಕಾಮಗಾರಿ ಪ್ರಗತಿಯಲ್ಲಿದೆ.
10.79 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ:ರೈತರು, ನೇಕಾರರು, ಮೀನುಗಾರರ ಮಕ್ಕಳಿಗೂ ವಿದ್ಯಾನಿಧಿ ಯೋಜನೆ ವಿಸ್ತರಿಸಲಾಗಿದೆ. 10.79 ಲಕ್ಷ ವಿದ್ಯಾರ್ಥಿಗಳಿಗೆ 484 ಕೋಟಿ ರೂ. ವಿದ್ಯಾರ್ಥಿ ವೇತನ ನೀಡಲಾಗಿದೆ. ರೈತಶಕ್ತಿ ಯೋಜನೆಯಡಿ ಪ್ರತಿ ಎಕರೆಗೆ 250 ರೂ. ಡೀಸೆಲ್ ಸಹಾಯಧನ ನೀಡಲಾಗಿದೆ. 160 ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ ಲೋಕಾರ್ಪಣೆ ಮಾಡಲಾಗಿದೆ. ಕೃಷಿ ಸಂಜೀವಿನಿ ಯೋಜನೆಯಡಿ ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯಕ್ಕೆ ಚಾಲನೆ ನೀಡಲಾಗಿದೆ.ಕೇಂದ್ರ ರೈಲ್ವೆ ಸಚಿವಾಲಯದೊಂದಿಗೆ ಶೇ.50:50 ಪಾಲುದಾರಿಕೆಯೊಂದಿಗೆ 9 ಹೊಸ ರೈಲು ಮಾರ್ಗಗಳ ಯೋಜನೆ ಕೈಗೆತ್ತಿಕೊಳ್ಳಲಾಗುತ್ತದೆ. ಮೈಸೂರು-ಬೆಂಗಳೂರು-ಚೆನ್ನೈ ನಡುವೆ ಸೆಮಿ ಹೈಸ್ಪೀಡ್ ರೈಲು ಸೇವೆ ಹಾಗೂ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ಸೇವೆ ಪ್ರಾರಂಭಿಸಲಾಗಿದೆ.
ಹೂಡಿಕೆದಾರರಿಗೆ ಆಹ್ವಾನ:2021-22ರಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರಿಗೆ ರಾಜ್ಯಕ್ಕೆ ಆಹ್ವಾನ ಮಾಡಲಾಗಿದೆ. ನಿರುದ್ಯೋಗ ನಿವಾರಣೆಗೆ ರಾಜ್ಯ ಸರ್ಕಾರ ರೋಜ್​ಗಾರ್ ನೀತಿ ತಂದಿದೆ. ರಾಜ್ಯದಲ್ಲಿ ವಿಮಾನಯಾನ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡಿದ್ದು, ಸದ್ಯದಲ್ಲೇ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಯಾಗಲಿದೆ. ವಿಜಯಪುರ, ಹಾಸನ ಏರ್​ಪೋರ್ಟ್ ನಿರ್ಮಾಣ ಕಾರ್ಯ ಮುಗಿದಿದ್ದು, ರಾಯಚೂರು ವಿಮಾನ ನಿಲ್ದಾಣ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.
ಬಹುತೇಕರು ಗೈರು:ಕಾಂಗ್ರೆಸ್, ಜೆಡಿಎಸ್ ಸದಸ್ಯರ ಕುರ್ಚಿಗಳು ಖಾಲಿ ಇದ್ದವು. ಸಿದ್ದರಾಮಯ್ಯ ಪ್ರಜಾಧ್ವನಿ ಯಾತ್ರೆಯ ಪ್ರವಾಸದಲ್ಲಿದ್ದರೆ, ಕುಮಾರಸ್ವಾಮಿ ಪಂಚರತ್ನ ರಥಯಾತ್ರೆ ಪ್ರವಾಸದಲ್ಲಿರುವುದರಿಂದ ಸದನಕ್ಕೆ ಗೈರಾಗಿದ್ದರು. ಬೆಳಗಾವಿ ಜಿಲ್ಲೆಯ ಶಾಸಕರಾದ ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ, ಲಕ್ಷಿ್ಮೕ ಹೆಬ್ಬಾಳ್ಕರ್ ಗೈರಾಗಿದ್ದು ಎದ್ದುಕಂಡಿತು.
ರಾಜಸ್ವ ಶೇ.90 ಗುರಿ ಸಾಧನೆ:ರಾಜ್ಯದ ರಾಜಸ್ವ ಸಂಗ್ರಹಣೆಯು ಕಳೆದ ಜನವರಿ ಅಂತ್ಯಕ್ಕೆ ಶೇ.90 ಗುರಿ ಸಾಧಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಇದು ಶೇ.21 ಹೆಚ್ಚಳವಾಗಿದೆ. ಬಂಡವಾಳ ವೆಚ್ಚವು 33,991 ಕೋಟಿ ರೂ. ಆಗಿದೆ. ಕಳೆದ ಸಾಲಿನಲ್ಲಿ 26,915 ಕೋಟಿ ರೂ. ಆಗಿತ್ತು. ಜನವರಿ 2023ರ ವೇಳೆಗೆ ಆಯವ್ಯಯ ಅಂದಾಜಿನ ಶೇ.75 ರಷ್ಟನ್ನು ವೆಚ್ಚ ಮಾಡಲಾಗಿದೆ.
100 ಸರ್ಕಾರಿ ಗೋಶಾಲೆ:ಜಾನುವಾರು ಸಂರಕ್ಷಣೆಗೆ ರಾಜ್ಯ ಸರ್ಕಾರದಿಂದ 100 ಹೊಸ ಸರ್ಕಾರಿ ಗೋಶಾಲೆ ನಿರ್ವಿುಸಲಾಗಿದೆ. ಸಾರ್ವಜನಿಕ ಸಹಭಾಗಿತ್ವ ಪೋ›ತ್ಸಾಹಿಸುವ ಪುಣ್ಯಕೋಟಿ ದತ್ತು ಯೋಜನೆ ಜಾರಿಗೊಳಿಸಲಾಗಿದೆ. ಜಾನುವಾರುಗಳಲ್ಲಿ ಕಾಣಿಸಿಕೊಂಡಿರುವ ಚರ್ಮಗಂಟು ರೋಗ ನಿಯಂತ್ರಣಕ್ಕಾಗಿ 1 ಕೋಟಿಗೂ ಹೆಚ್ಚು ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. ಮರಣ ಹೊಂದಿದೆ ಕರು, ದನ, ಎತ್ತುಗಳಿಗೆ ಪರಿಹಾರ ನೀಡಲು ಸರ್ಕಾರದಿಂದ 37 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ:ದೇಶದಲ್ಲೇ ಮೊದಲ ಬಾರಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ. ಬೀದರ್, ಹಾವೇರಿ, ಚಾಮರಾಜನಗರ, ಬಾಗಲಕೋಟೆ, ಕೊಡಗು, ಕೊಪ್ಪಳ, ಹಾಸನದಲ್ಲಿ 7 ಹೊಸ ವಿವಿ ಸ್ಥಾಪನೆ, 7 ಇಂಜಿನಿಯರಿಂಗ್ ಕಾಲೇಜುಗಳನ್ನು ಐಐಟಿ ಮಾದರಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗಿದೆ. 11,333 ಪೌರ ಕಾರ್ವಿುಕರನ್ನು ಕಾಯಂಗೊಳಿಸಲು ಸರ್ಕಾರ ಕ್ರಾಂತಿಕಾರಕ ಹೆಜ್ಜೆಯನ್ನಿಟ್ಟಿದೆ. ಈ ವರ್ಷ 5,11,687 ಕಾರ್ವಿುಕರನ್ನು ಕಾರ್ವಿುಕರ ಕಲ್ಯಾಣ ಮಂಡಳಿಯಲ್ಲಿ ಫಲಾನುಭವಿಗಳಾಗಿ ನೋಂದಾಯಿಸಲಾಗಿದೆ. ಕಳಸಾ-ಬಂಡೂರ ನಾಲಾ ತಿರುವ ಯೋಜನೆಯ ವಿಸõತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗ ಸಮ್ಮತಿಸಿದೆ.
ವಿಶೇಷ ಕೋರ್ಟ್ ಸ್ಥಾಪನೆ:ಅತ್ಯಾಚಾರ ಪ್ರಕರಣಗಳು ಮತ್ತು ಪೋಕ್ಸೋ ಕಾಯ್ದೆ ಪ್ರಕರಣಗಳ ವಿಚಾರಣೆಗಾಗಿ 31 ಶೀಘ್ರಗತಿ ವಿಶೇಷ ನ್ಯಾಯಾಲಯ ಸ್ಥಾಪನೆಗೆ ಮಂಜೂರಾತಿ ನೀಡಲಾಗಿದೆ. ರಾಜ್ಯದ 1475 ತಾಂಡಾ, ಗೊಲ್ಲರ ಹಟ್ಟಿ, ಕುರುಬರಹಟ್ಟಿ ಮತ್ತಿತರ ಕಡೆ ವಾಸಿಸುತ್ತಿದ್ದ ದಾಖಲೆ ರಹಿತ ಜನರಿಗೆ ಶಾಶ್ವತವಾಗಿ ಸೂರು ಕಲ್ಪಿಸುವ ವ್ಯವಸ್ಥೆ ಮಾಡಲಾಗಿದೆ. ಪ್ರಧಾನಿ ಮೋದಿ 52,200 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಿರುವುದು ದಾಖಲೆಯಾಗಿದೆ.
ತೌಡು ಕುಟ್ಟಿದ ಭಾಷಣ:ಬೆಂಗಳೂರು: ಬಿಜೆಪಿ ಸರ್ಕಾರವು ನಾಲ್ಕು ವರ್ಷಗಳಲ್ಲಿ ಭ್ರಷ್ಟಾಚಾರ ಹಾಗೂ ಧರ್ಮ-ಜಾತಿಗಳ ನಡುವೆ ಸಂಘರ್ಷ ಬಿಟ್ಟು ರಾಜ್ಯದ ಅಭಿವೃದ್ಧಿ ಸಾಧಿಸಿಲ್ಲವೆಂಬುದನ್ನು ರಾಜ್ಯಪಾಲರ ಭಾಷಣದ ಮೂಲಕ ಒಪ್ಪಿಕೊಂಡಿರುವುದಕ್ಕೆ ರಾಜ್ಯಪಾಲರು ಹಾಗೂ ಸರ್ಕಾರವನ್ನು ಅಭಿನಂದಿಸುವುದಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ರಾಜ್ಯಪಾಲ ಭಾಷಣ ತೌಡು ಕುಟ್ಟಿದಂತೆ ಕಾಣಿಸುತ್ತಿದೆ. ಭತ್ತ ಕುಟ್ಟಿದರೆ ಅಕ್ಕಿ ಬರುತ್ತದೆ. ತೌಡು ಕುಟ್ಟಿದರೆ ಬರಿ ಉಬ್ಬಲು ಬರುತ್ತದೆ. ಸರ್ಕಾರ ಯಾವ ಸಾಧನೆಯನ್ನೂ ಮಾಡದಿರುವುದನ್ನು ಸ್ವತಃ ಒಪ್ಪಿಕೊಂಡಿರುವುದರಿಂದ ಸರ್ಕಾರವು ತಯಾರು ಮಾಡಿದ ಈ ಭಾಷಣವನ್ನು ನಾನು ಭೂಸಾ ಅಥವಾ ತೌಡು ಕುಟ್ಟುವ ಭಾಷಣ ಎಂದು ಕರೆಯ ಬಯಸುವುದಾಗಿ ವ್ಯಂಗ್ಯವಾಡಿದ್ದಾರೆ. ರಾಜ್ಯವು ಹಲವು ಗಂಭೀರ ಸಮಸ್ಯೆ ಎದುರಿಸುತ್ತಿದ್ದು, ಅವುಗಳನ್ನು ಗುರುತಿಸಿ ಹೋಗಲಾಡಿಸುವುದು ಮಾತ್ರ ನಿಜವಾದ ಸರ್ಕಾರ ಎಂದು ಕರೆಸಿಕೊಳ್ಳುತ್ತದೆ. ಆದರೆ, ಇಡಿ ರಾಜ್ಯಪಾಲರ 82 ಪ್ಯಾರಾಗಳ ಭಾಷಣದಲ್ಲಿ ಒಂದೇ ಒಂದು ಮಾತನ್ನೂ ಈ ಸಮಸ್ಯೆಗಳ ಕುರಿತು ಪ್ರಸ್ತಾಪಿಸಿಲ್ಲ ಎಂದಿದ್ದಾರೆ.
ಸರ್ಕಾರಕ್ಕೆ ಕುಟುಕಿದ ಕಾಂಗ್ರೆಸ್:ರಾಜ್ಯಪಾಲರು ಮಾಡಿರುವ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕರು, ಭಾಷಣದಲ್ಲಿ ಕೇವಲ ಹಸಿಸುಳ್ಳುಗಳೇ ಇವೆ. ಕಾಂಗ್ರೆಸ್ ಸರ್ಕಾರದ ಕೆಲಸಗಳಿಗೆ ಬಿಜೆಪಿ ಸರ್ಟಿಫಿಕೇಟ್ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ಕುಟುಕಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ರಾಜ್ಯಪಾಲರ ಭಾಷಣದಲ್ಲಿ ಸರ್ಕಾರದ ಸಾಧನೆ, ರಾಜ್ಯದ ಜನರ ಸಮಸ್ಯೆಗಳಿಗೆ ಪರಿಹಾರದಂತಹ ಯಾವುದೇ ಅಂಶಗಳು ಇಲ್ಲ. ಸರ್ಕಾರದ ಯಾವುದೇ ಹೊಸ ಅಡುಗೆ ಇಲ್ಲ. ನಮ್ಮ ಅಡುಗೆಯನ್ನು ಅವರದು ಎಂದು ಹೇಳಿಕೊಂಡಿದ್ದಾರೆ ಎಂದರು.
ಅಗಲಿದ ಗಣ್ಯರಿಗೆ ಸಂತಾಪ:ಇತ್ತೀಚೆಗೆ ನಿಧನರಾದ ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮಿಜಿ, ಖ್ಯಾತ ಗಾಯಕಿ ವಾಣಿ ಜಯರಾಂ, ಚಿತ್ರಕಲಾವಿದರಾಗಿದ್ದ ಡಾ. ಬಿಕೆಎಸ್ ವರ್ಮ ಸೇರಿ ಅಗಲಿದ ಹಲವು ಗಣ್ಯರಿಗೆ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನಲ್ಲಿ ಸಂತಾಪ ಸೂಚಿಸಿ, ಒಂದು ನಿಮಿಷ ಮೌನ ಆಚರಿಸಲಾಯಿತು. ಮಾಜಿ ಸಚಿವ ಡಾ. ಹೆಗ್ಗಪ್ಪ ದೇಶಪ್ಪ ಲಮಾಣಿ, ಮಾಜಿ ಶಾಸಕರಾದ ಎಲ್.ಟಿ. ತಿಮ್ಮಪ್ಪ ಹೆಗಡೆ ಮತ್ತು ಶಿವಾನಂದ ಅಂಬಗಟ್ಟಿ, ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ಟಸ್ಟ್ ಅಧ್ಯಕ್ಷರಾಗಿದ್ದ ಡಾ. ಎಂ.ಕೆ. ಪಾಂಡುರಂಗಶೆಟ್ಟಿ, ಹಿರಿಯ ಸಂಶೋಧಕ, ಸಾಹಿತಿ ಡಾ. ಎಚ್. ಚಂದ್ರಶೇಖರ್, ಗಮಕಿ ಹಾರ್ಯಾಡಿ ಚಂದ್ರಶೇಖರ ಕೆದ್ಲಾಯ, ವಿಮರ್ಶಕ ಕೆೆ.ವಿ. ತಿರಮಲೇಶ್, ಲೇಖಕಿ ಸಾರ ಅಬೂಬಕರ್, ಹಿರಿಯ ಪತ್ರಕರ್ತ ಸತ್ಯ ಅವರನ್ನೂ ಈ ವೇಳೆ ಸ್ಮರಿಸಲಾಯಿತು. ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಸಿದ್ದೇಶ್ವರ ಸ್ವಾಮೀಜಿಗೆ ಸಂತಾಪ ಸೂಚನೆ ಮಾಡಲ್ಲ, ಅವರು ಜೀವಂತ ಇದ್ದಾರೆ ಎಂದು ಪ್ರತಿಪಾದಿಸಿದರು. ಬಿ.ಎಸ್.ಯಡಿಯೂರಪ್ಪ, ಯು.ಟಿ.ಖಾದರ್, ಎಚ್.ಕೆ.ಪಾಟೀಲ್ ಮತ್ತಿತರರು ಅಗಲಿದ ಗಣ್ಯರಿಗೆ ನುಡಿನಮನ ಸಲ್ಲಿಸಿದರು.
ಅತಿಯಾದ ಸ್ಮಾರ್ಟ್​ಫೋನ್ ಬಳಕೆಯಿಂದ ದೃಷ್ಟಿ ಕಳೆದುಕೊಂಡ ಮಹಿಳೆ; ಏನಿದು ಸ್ಮಾರ್ಟ್​ಫೋನ್​ ವಿಷನ್ ಸಿಂಡ್ರೋಮ್?

ತನ್ನ ನೆಚ್ಚಿನ ನಾಯಕ ಸಿಎಂ ಆಗಲೆಂದು 25 ವರ್ಷದಿಂದ ಗಡ್ಡ ಬಿಟ್ಟ ಅಭಿಮಾನಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − nine =
Remember me
