ಬೆಂಗಳೂರು:ರಸ್ತೆ ತೆರಿಗೆ ಕಟ್ಟದೆ 2 ವರ್ಷದಿಂದ ಜೋಧಪುರ-ಬೆಂಗಳೂರು ಮಾರ್ಗದಲ್ಲಿ ಓಡಾಟ ನಡೆಸುತ್ತಿದ್ದ ರಾಜಸ್ಥಾನದ 2 ಖಾಸಗಿ ಬಸ್​ಗಳನ್ನು ಯಶವಂತಪುರ ಆರ್​ಟಿಒ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ತೆರಿಗೆ ಪಾವತಿಸಿರುವುದಾಗಿ ಕಲರ್ ಜೆರಾಕ್ಸ್ ತೋರಿಸಿ ಯಾಮಾರಿಸಲು ಯತ್ನಿಸಿದ್ದರಿಂದ ಅನುಮಾನಗೊಂಡ ಅಧಿಕಾರಿಗಳು, ಪರಿಶೀಲನೆ ನಡೆಸಿದಾಗ ಚಾಸ್ಸಿ ನಂಬರನ್ನೇ ನಕಲು ಮಾಡಿರುವ ವಿಚಾರ ಬಯಲಿಗೆ ಬಂದಿದೆ. ರಾಜಸ್ಥಾನದ ಟ್ರಾವೆಲ್ಸ್ ಏಜೆನ್ಸಿಗೆ ಸೇರಿದ ಆರ್​ಜೆ-19 ಪಿಬಿ-4598 ಮತ್ತು ಆರ್​ಜೆ-19 ಪಿಬಿ-4599 ಸಂಖ್ಯೆಯ ಬಸ್​ಗಳನ್ನು ಜ.3 ಮತ್ತು ಫೆ.12ರಂದು ಬೆಂಗಳೂರಿನಲ್ಲಿ ಜಪ್ತಿ ಮಾಡಲಾಗಿದೆ. 2 ತಿಂಗಳಾದರೂ ಈವರೆಗೆ ಮಾಲೀಕರು ಬಂದಿಲ್ಲ. 30 ಲಕ್ಷ ರೂ. ತೆರಿಗೆ ಪಾವತಿಸುವಂತೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಆರ್​ಟಿಒ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಿಕ್ಕಿಬಿದ್ದದ್ದು ಹೇಗೆ?:ಜ.3ರಂದು ಗೊರಗುಂಟೆ ಪಾಳ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇನ್​ಸ್ಪೆಕ್ಟರ್ ಸುಧಾಕರ್, ಆರ್​ಜೆ-19 ಪಿಬಿ-4598 ಸಂಖ್ಯೆ ಬಸ್ ತಡೆದು ದಾಖಲಾತಿ ಕೇಳಿದಾಗ ಚಾಲಕ/ಕ್ಲೀನರ್ ಕಲರ್ ಜ್ಹೆರಾಕ್ಸ್ ಪ್ರತಿ ಕೊಟ್ಟಿದ್ದಾರೆ. ಹೀಗಾಗಿ ಜಪ್ತಿ ಮಾಡಿ ಪರಿಶೀಲನೆ ಮುಂದುವರಿಸಿದಾಗ ಚಾಸ್ಸಿ ನಂಬರನ್ನು ಗ್ರೖೆಂಡಿಂಗ್ ಮಾಡಿ ಆ ಜಾಗದಲ್ಲಿ ಬೇರೊಂದು ಚಾಸ್ಸಿ ನಂಬರ್ ಅಚ್ಚೊತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ರಾಷ್ಟ್ರೀಯ ಪರಿವಾಹನ ಮೂಲಕ ಮಾಲೀಕರ ಹೆಸರು, ವಿಳಾಸ ಸಂಗ್ರಹಿಸಿ ಬಸ್ ದಾಖಲೆ ಒದಗಿಸುವಂತೆ ನೋಟಿಸ್ ನೀಡಿದ್ದರೂ ಉತ್ತರ ಕೊಟ್ಟಿಲ್ಲ. ಫೆ.12ರಂದು ರೇಸ್​ಕೋರ್ಸ್ ರಸ್ತೆಯಲ್ಲಿ ಹಿರಿಯ ಇನ್​ಸ್ಪೆಕ್ಟರ್ ರಾಜಣ್ಣ ಅವರು ಇದೇ ಟ್ರಾವೆಲ್ಸ್​ನ ಇನ್ನೊಂದು ಬಸ್ ಜಪ್ತಿ ಮಾಡಿದ್ದರು. ಎರಡೂ ಬಸ್​ಗಳು ತೆರಿಗೆ ಪಾವತಿಸದಿರುವುದು ದೃಢಪಟ್ಟಿತ್ತು. ಇದೇ ವೇಳೆ ಇಂಜಿನ್ ನಂಬರ್ ಹಾಗೂ ಚಾಸ್ಸಿ ನಂಬರ್ ಅಸಲಿತನದ ಕುರಿತು ಅನುಮಾನ ವ್ಯಕ್ತವಾಗಿತ್ತು.
ನಕಲು ದೃಢಪಡಿಸಿದ ಕಂಪನಿ:ಎರಡೂ ಬಸ್​ಗಳು 2017ರಲ್ಲಿ ಜೋಧಪುರದಲ್ಲಿ ನೋಂದಣಿಯಾಗಿವೆ. ಇಂಜಿನ್ ನಂಬರ್ ಹಾಗೂ ಚಾಸ್ಸಿ ನಂಬರ್ ಅಸಲಿತನವನ್ನು ದೃಢಪಡಿಸು ವಂತೆ ತಯಾರಕ ಕಂಪನಿಯಾದ ಅಶೋಕ ಲೇಲೆಂಡ್​ಗೆ ಕಳುಹಿಸಿದ್ದರು. ಇಂಜಿನ್ ನಂಬರ್ ಅಸಲಿಯಾಗಿದೆ. ಆದರೆ, ಚಾಸ್ಸಿ ನಂಬರನ್ನು ತಿರುಚಲಾಗಿದೆ ಎಂದು ಕಂಪನಿ ವರದಿ ಕೊಟ್ಟಿದೆ. ತೆರಿಗೆ ಪಾವತಿಸುವಂತೆ ಕೊಟ್ಟ ನೋಟಿಸನ್ನು ಮಾಲೀಕ ಸ್ವೀಕರಿಸಿದ್ದು, 2ನೇ ನೋಟಿಸ್ ಪಡೆದಿಲ್ಲ. ರಾಜಸ್ಥಾನದಲ್ಲೂ ತೆರಿಗೆ ಕಟ್ಟದೆ ಸಂಚರಿಸುತ್ತಿದ್ದ ವಿಚಾರ ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2 ಲಕ್ಷ ರೂ. ಡೀಲ್​ಗೆ ಬಂದಿದ್ದ ಏಜೆಂಟ್!: ಜಪ್ತಿ ಮಾಡಿರುವ ಬಸ್​ಗಳಿಗೆ 3 ತಿಂಗಳ ತೆರಿಗೆ ಪಾವತಿಸಲಾಗುತ್ತದೆ. ಜತೆಗೆ ಪ್ರತಿ ಬಸ್​ಗೂ 2 ಲಕ್ಷ ರೂ. ನಿಮಗೆ ಕೊಡಿಸುತ್ತೇನೆ ಪ್ರಕರಣ ದಾಖಲಿಸದೆ ಬಿಟ್ಟುಬಿಡುವಂತೆ ಏಜೆಂಟ್ ಒಬ್ಬ ಡೀಲ್ ಕುದುರಿಸಲು ಬಂದಿದ್ದ. ಈಗಾಗಲೇ ಕೇಸ್ ದಾಖಲಾಗಿದೆ. ಮಾಲೀಕ ಬಂದು ದಾಖಲೆ ಒದಗಿಸುವಂತೆ ಎಚ್ಚರಿಕೆ ಕೊಟ್ಟು ಕಳುಹಿಸಲಾಯಿತು. ನಂತರವೂ ಪದೇಪದೆ ಕರೆ ಮಾಡುತ್ತಿದ್ದ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ಕೊಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಒಂದೇ ನಂಬರಲ್ಲಿ ಹಲವು ವಾಹನ
ಒಂದೇ ರಿಜಿಸ್ಟ್ರೇಷನ್, ಒಂದೇ ಇನ್ಸುರೆನ್ಸ್ ಮತ್ತು ಒಂದೇ ತೆರಿಗೆ ಪಾವತಿ ದಾಖಲಾತಿಗಳನ್ನಿಟ್ಟುಕೊಂಡು 2 ಅಥವಾ 3 ವಾಹನಗಳನ್ನು ಸಂಚರಿಸುವ ಮೂಲಕ ತೆರಿಗೆ ವಂಚನೆ ಮಾಡಲಾಗುತ್ತದೆ. ಇಂಜಿನ್ ನಂಬರ್ ಒರಿಜಿನಲ್ ಇದ್ದರೂ ಚಾಸ್ಸಿ ನಂಬರನ್ನು ಮಾತ್ರ ನಕಲು ಮಾಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
