ನಮ್ಮ ದೇಶ ಭವ್ಯ ಭಾರತ. ಅದರ ಹೆಸರಿಗಿಂತ ಎತ್ತರವಾದದ್ದು ಅದರ ಚರಿತ್ರೆ. ಪಾಚಿಮಾತ್ಯರು ಮುಟ್ಟಲು ಆಗದ ಎಷ್ಟೋ ವಿಷಯಗಳನ್ನು ಭಾರತ ಜಗತ್ತಿಗೆ ತಿಳಿಸಿಕೊಡುವುದಷ್ಟೇ ಅಲ್ಲ ಅದರ ಹಿರಿತನವನ್ನು ಇನ್ನು ಹಾಗೆ ಉಳಿಸಿಕೊಂಡು ಬಂದಿದೆ.
“ವಿಜ್ಞಾನಕ್ಕೆ ಅಂತಿಮವಾದದ್ದು ತತ್ವಜ್ಞಾನಕ್ಕೆ ಆರಂಭ.”ಕಂಡದನ್ನು ಮಾತ್ರ ಹೇಳಿದ್ದು ವಿಜ್ಞಾನ,ಕಾಣದ್ದನ್ನೂ ತಿಳಿಸಿದ್ದು ತತ್ವಜ್ಞಾನ.ದೇಹ ಖುಷಿಗಾಗಿಯೇ ಬದುಕು ಎಂದದ್ದು ಪಾಚಿಮಾತ್ಯ.ಆತ್ಮ ಖುಷಿಗಾಗಿ ಬದುಕು ಎಂದದ್ದು ಭಾರತಬಾಹ್ಯ ಜೀವನವೇ ಆನಂದ ಎಂದದ್ದು ಪಾಚಿಮಾತ್ಯ.ಆಂತರಿಕ ಅನಂದವೇ ನಿತ್ಯ ಎಂದದ್ದು ಭಾರತ.ಯಂತ್ರವೇ ಸಾಧನೆ ಎಂದದ್ದು ಹೊರದೇಶ.ಮಂತ್ರವೇ ಸಾಧನ ಎಂದದ್ದು ಒಳದೇಶ.ದೇಹವೇ ಮುಖ್ಯ ಎಂದದ್ದು ಪಾಚಿಮಾತ್ಯ.ಆತ್ಮವೇ ಪರಮಪವಿತ್ರ ಎಂದದ್ದು ಹಿಂದೂಸ್ಥಾನ”.
ಹೀಗೆ ಆತ್ಮವೇ ಪರಮಪವಿತ್ರ ಎಂದು ಸಾರಿ, ದಿವ್ಯ ಚೇತನವಾಗಿ ಬದುಕಿ, ಅವರ ದೇಹತ್ಯಾಗದ ನಂತರವೂ ಅಜರಾಮರಾದವರು ಎಷ್ಟೋ ಪುಣ್ಯ ಜೀವಿಗಳು ಭರತ ನಾಡಿನಲ್ಲಿ ಜನಿಸಿಹೋಗಿದ್ದಾರೆ. ಅಂತಹ ಪರಮಪುಣ್ಯವಿದ್ದ ನಾಡು ಕನ್ನಡ ನಾಡಿನ ರಾಣೆಬೆನ್ನೂರ ಪ್ರಾಂತದಲ್ಲಿ ಬರುವ “ಉದಗಟ್ಟಿ” ಎಂಬ ಕ್ಷೇತ್ರ. ಅಲ್ಲಿಯ ತುಂಗಭದ್ರಾ ನದಿಯ ತಟದಲ್ಲಿ ಇರುವ ಸ್ಥಳವನ್ನು ಕ್ಷೇತ್ರವನ್ನಾಗಿ ಮಾಡಿದ ಶ್ರೀಮತ್ ಪರಮಹಂಸ ಪರಿವ್ರಾಜಕಾಚಾರ್ಯ, ಯಮನಿಯಮಾಸನ, ಯೋಗಾನುಷ್ಟಾನನಿಷ್ಠ, ವೈದಿಕ ಮಾರ್ಗ ಪ್ರವರ್ತಕ, ಋಷ್ಯ ಶೃಂಗಾಪುರ ವರಾದೀಶ್ವರ ಶ್ರೀ ವಿದ್ಯಾಶಂಕರ ದೇವದಿವ್ಯ ಪಾದಪದ್ಮ ಆರಾಧಕ ಶ್ರೀಮತ್ ಜಗದ್ಗುರು ಶ್ರೀ ಶಂಕರಾಚಾರ್ಯ ಮಹಾಸಂಸ್ಥಾನ ಶ್ರೀ ದಕ್ಷಿಣಾಮ್ನಾಯ ಮೂಲ ಶಾರದಾ ಪೀಠದ ಪರಮಪೂಜ್ಯ ಶ್ರೀ ಚತುರ್ಥ ನರಸಿಂಹ ಭಾರತಿ ಎಂಬ ದಿವ್ಯ ಚೇತನರ ಬಗ್ಗೆ ಸ್ಮರಣೆಮಾಡುವ ಪುಣ್ಯಕಾಲವಿಂದು.
ಶ್ರೀಗಳು ಕೂಡಲಿಯಲ್ಲಿ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಶ್ರೀಮದ್ ಜಗದ್ಗುರು ಶ್ರೀ ಕೂಡಲಿ ಶೃಂಗೇರಿ ಶಂಕರಾಚಾರ್ಯ ಮೂಲ ಮಹಾಸಂಸ್ಥಾನದ ಶ್ರೀಪೀಠದ ಕ್ರಿ.ಶ.1714ರ ಕಾಲಘಟ್ಟದಲ್ಲಿ ಪೀಠಾಧಿಪತಿಗಳಾಗಿದ್ದು ಸಂಚಾರ ಮಾಡುತ್ತಾ ಊದಗಟ್ಟಿ ಗ್ರಾಮಕ್ಕೆ ಬಂದು ಅಲ್ಲಿಯ ಸ್ಥಳ ಮಹಿಮೆಯನ್ನು ಕಂಡು ಅಲ್ಲೊಂದು ಶಾಖಾಮಠವನ್ನು ಸ್ಥಾಪಿಸುತ್ತಾರೆ.
“ಸಾಧನೆಗೆ ಸಿದ್ಧಿ ಶಾಶ್ವತ ಸತ್ಯ” ಎಂಬಂತೆ ಸಾಧನಾ ಪಥದಿಂದ ಸಿದ್ಧಿ ಪಡೆದ ಶ್ರೀಗಳಿಂದ ಅನೇಕ ಪವಾಡ ಸದೃಶ ಕಾರ್ಯಗಳು ನಡೆದಿವೆ. ಇವರ ತಪಶ್ಯಕ್ತಿಗೆ ಮೆಚ್ಚಿ , ಇವರ ಮಹಿಮೆಗೆ ಒಳಗಾಗಿ ಹಾವನೂರು ದೇಸಾಯಿಗಳಾದ ಬಹದ್ದೂರ್ ಹನುಮನಗೌಡರು ತಮ್ಮ ಅಳ್ವಿಕೆಯಲ್ಲಿದ್ದ ಉದಗಟ್ಟಿ, ಚಿಕ್ಕಕುರುವತ್ತಿ, ಹಿರೇಮೈಲಾರ, ಸಿರಿಗೆರೆ, ಬಿಲಸ್ತುರು, ಕುದುರೆಹಾಲ್, ಹುಚಿಹೋಲ, ಹೀಗೆ ಅನೇಕ ಗ್ರಾಮಗಳಲ್ಲಿಯ ಕೆಲವು ಭೂಮಿಗಳನ್ನು ಶ್ರೀಗಳಿಗೆ ದಾನವಾಗಿ ಕೊಟ್ಟಿದ್ದಾರೆ. ಬಾಗಳಿ ಸೋಮಶೇಖರ ನಾಯಕನು ನಿಟ್ಟೂರ, ಬಸಾಪುರ ಗ್ರಾಮಗಳು ಕೂಡ ಶ್ರೀಗಳಿಗೆ ದಾನವಾಗಿ ಸಂದಿವೆ.
ಚಿತ್ರದುರ್ಗದ ಪಾಳೆಗಾರರು, ಸಂಡೂರಿನ ಘೋರ್ಪಡೆಯವರು ಶ್ರೀಗಳ ಮಹಿಮೆಗೆ ಶಿರಬಾಗಿ ಇವರನ್ನು ಆಸ್ಥಾನ ಗುರುಗಳೆಂದು ಕರೆದಿದ್ದು ಇತಿಹಾಸ. ಸನ್ಯಾಸಿಗಳಾಗಿ ಒಂದು ಪೀಠದಲ್ಲೇ ಸುಮ್ಮನೆ ನೆಲಸದೆ ಊರೂರು ಸಂಚಾರಮಾಡುತ್ತಾ ಭಕ್ತರ ಕಷ್ಟಗಳಿಗೆ ಸ್ಪಂದಿಸುತ್ತಾ, ಆಧ್ಯಾತ್ಮ ಅನುಭವವನ್ನು ನೀಡುತ್ತಾ ಸಾಗಿತ್ತು ಇವರ ಪವಿತ್ರ ಆತ್ಮವನ್ನು ಹೊತ್ತ ದೇಹ.
ಕೇವಲ ತಮ್ಮ ತೀಕ್ಷ್ಣ ಕಣ್ಣ ನೋಟದಿಂದಲೇ ಭೂತ, ಪ್ರೇತ ಭಾದೆಗಳನ್ನು ಹೋಗಲಾಡಿಸಿದ ಶ್ರೀಗಳು, ಅನೇಕರಿಗೆ ಸಕಲ ಭಾಗ್ಯಗಳನ್ನು ನೀಡಿ ಹರಸುತ್ತಿದರು. ಇವರ ಕರುಣೆಯಿಂದ ಸಂತಾನ ಪಡೆದವರೆಷ್ಟೋ, ರೋಗ ವಾಸಿಮಾಡಿಕೊಂಡವರೆಷ್ಟೋ, ಫಲವತ್ತಾಗಿ ಬೆಳೆದವರೆಷ್ಟೋ, ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡಿಕೊಂಡವರೆಷ್ಟೋ. ಅವರೆಲ್ಲ ವಂಶದ ಕುಡಿಗಳು ಈಗಲೂ ಉದಗಟ್ಟಿಯ ಶ್ರೀಪೀಠಕ್ಕೆ ಹರಕೆ ಸಲ್ಲಿಸುವುದು ಸ್ಮರಣಾರ್ಹ.
“ಹಕ್ಕಿ ಎಷ್ಟೇ ಎತ್ತರಕ್ಕೆ ಹಾರಿದರೂ ಮತ್ತೆ ತನ್ನ ಗೂಡಿನತ್ತ ಮರಳಿ ಬರುವಂತೆ” ಎಷ್ಟೆಷೋ ಸಂಚಾರ ನಡೆಸಿದ್ದ ಶ್ರೀಗಳು ತಮ್ಮ ದೇಹತ್ಯಾಗವನ್ಮು ಮಾಡಿದ್ದು ತಮ್ಮಿಷ್ಟದ ತಪೋಭೂಮಿಯಾದ ಉದಗಟ್ಟಿಯಲ್ಲೇ. ಶಾಲಿವಾಹನ ಶಕೆ 1684ನೇ ವಿಶ್ವಾವಸು ಸಂವತ್ಸರದ ಪುಷ್ಯ ಬಹುಳ ಷಷ್ಠಿ ಬುಧವಾರದಂದು.
ಆ ಪುಣ್ಯಾತ್ಮ ತನ್ನ ಮಹಿಮೆಬರೆಯುವ ಸೇವೆಮಾಡಲು ನಮ್ಮನ್ನು ಶ್ರೀಪೀಠಕ್ಕೆ ಕರೆಸಿಕೊಂಡದ್ದು ಅದೇ ಪುಷ್ಯ ಮಾಸದ, ಅದೇ ಜನವರಿಯ, ಅದೇ ಬುಧವಾರ, ಅದೇ 12 ನೇ ತಾರೀಖಿನಂದು. ಇದೊಂದು ಅನುಭವ ಸಾಕು ಆ ಗುರುದೇವನ ಮಹಿಮೆ ಅರಿಯಲು.
ಶ್ರೀ ನರಸಿಂಹ ಭಾರತಿ ಶ್ರೀಗಳ ದೇಹದಲ್ಲಿದ್ದಾಗ ಆತ್ಮ ಎಷ್ಟು ಪವಾಡ ತೋರಿತ್ತೋ, ಆ ದಿವ್ಯ ಆತ್ಮ ದೇಹವನ್ನು ಬಿಟ್ಟಾಗಿನಿಂದಲೂ ಅಂತಹದೇ ಪವಾಡ ಸದೃಶ ಘಟನೆಗಳನ್ನು ತೋರಿಸುತ್ತಿದೆ. ಅವರು ದೇಹಬಿಟ್ಟ ನಂತರ ಅವರ ಶಿಷ್ಯರಾದ ತೃತೀಯ ಶಂಕರ ಭಾರತಿ ಶ್ರೀಗಳು ತಮ್ಮ ಗುರುಗಳಿಗೆ ಸಮಾಧಿಯ ಭಾಗದ ಮೇಲೆ ಒಂದು ಶಿಲಾ ಮಂಟಪವನ್ನು ಕಟ್ಟಿಸುತ್ತಿದರು. ಕಟ್ಟುವ ಸಂಧರ್ಭದಲ್ಲಿ ದಿನದ ಸಮಯ ಮುಗಿದಿದ್ದರಿಂದ ಕಟ್ಟುವ ಕೆಲಸ ಕಾರ್ಮಿಕರು ಶಿಲಾ ಮಂಟಪಕ್ಕೆ ಕಂಬವನ್ನು ತಿಳಿಯದೆ ಶ್ರೀಗಳ ಶಿರಸ್ಸಿರುವ ಸ್ಥಳದ ಮೇಲೆ ಇಟ್ಟು ಮನೆಗೆ ತೆರಳುತ್ತಾನೆ.
ಅಂದೇ ತಮ್ಮ ಶಿಷ್ಯರಿಗೆ ಸಪ್ನದಲ್ಲಿ ದರುಶನ ಕೊಟ್ಟು “ಏನ್ರಪಾ ನಮ್ಮ ತಲೆಯ ಮೇಲೆ ಕಂಬವನ್ನು ಇಟ್ಟಿದ್ದೀರಾ? ” ಎಂದು ಕೇಳುತ್ತಾರೆ. ತಮ್ಮ ತಪ್ಪಿನ ಅರಿವಾದ ಶಿಷ್ಯರು ತಿಳಿಯದೆ ನಮ್ಮಿಂದ ಆದ ಅಪರಾಧಕ್ಕೆ ಕ್ಷಮಿಸಬೇಕು, ನಾಳೆಯೇ ಕಂಬವನ್ನು ತೆಗೆಸುತ್ತೇವೆ” ಎಂದು ಹೇಳುತ್ತಾರೆ. ಅದಕ್ಕೆ ಉತ್ತರವಿತ್ತ ಶ್ರೀಗಳು ” ಅದೇನು ಬೇಡ ಜಗದ ಭಾರ ಹೊತ್ತವನಿಗೆ, ಕಂಬದ ಭಾರವೇನು ಹೆಚ್ಚಿನದಲ್ಲ. ಅದಕ್ಕೂ ಮಿಗಿಲಾಗಿ ಇದು ದೇವ ನಿರ್ಣಯ, ಆ ನರಸಿಂಹನ ಅವತಾರವಾಗಿದ್ದು ಕಂಬದಲ್ಲೇ, ಆದ್ದರಿಂದ ನಮ್ಮ ಹೆಸರು ಆ ಅವತಾರಿಯ ಹೆಸರು ಒಂದೇ ಇರುವುದರಿಂದ ಅದು ಆ ಸ್ಥಳದಲ್ಲೇ ಇರಲಿ. ಆ ಕಂಬದ ಮೇಲೆ ಒಂದು ಲಿಂಗವನ್ನು ಪ್ರತಿಷ್ಠಾಪಿಸಿ ಅದಕ್ಕೆ ಪೂಜೆಮಾಡಿಕೊಂಡು ಹೋಗಿ. ಇನ್ನೂ ಮೇಲೆ ನಮ್ಮ ಹೆಸರು “ಕಂಬದ ನರಸಿಂಹ ಸ್ವಾಮಿಗಳೆಂದೇ” ಪ್ರತೀತಿಗೆ ಬರಲಿ.” ಎಂದು ತಿಳಿಸಿದರಂತೆ ಅಂದಿನಿಂದ ಇಂದಿನವರೆಗೂ ಆ ಶಿಲಾಸ್ಥಂಭಕ್ಕೆ ಪೂಜೆ ಸಲ್ಲುತ್ತಾ ಬಂದಿದೆ.
“ಒಂದು ಜ್ಯೋತಿ ಸಾವಿರ ಜ್ಯೋತಿಗಳನ್ನು ಹೊತ್ತಿಸಿ, ಬೆಳಗಿಸುವಂತೆ” ಕಲಿಯುಗದಲ್ಲಿ ಸುತ್ತಲೂ ಅಂಧಕಾರದ ಕರಾಳ ಮುಖಗಳಿದ್ದರೂ ಅದರ ಮಧ್ಯೆ ದಿವ್ಯಜ್ಯೋತಿಯಾಗಿ ಪ್ರಸ್ತುತ ಆ ದಿವ್ಯ ಪೀಠಕ್ಕೆ ಅಧೀಶ್ವರರಾಗಿ ಅವರ ಸ್ಥಾನವನ್ನು ಅಲಂಕರಿಸಿರುವುದು ಪರಮಪೂಜ್ಯ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಮಹಾಸ್ವಾಮಿಗಳು. ಶ್ರೀಗಳು ತಪೋನಿಷ್ಠರಾಗಿ, ಧ್ಯಾನನಿರತರಾಗಿ, ಮಗು ಮನಸಿನ ಸ್ವಭಾವದವರಾಗಿದ್ದು, ಮಿತ ಭಾಷಿಗಳಾಗಿ, ದಿವ್ಯ ತೇಜಧರಿಸಿ, ಶ್ರೀಪೀಠಕ್ಕೆ ಬಳಲಿ ಬಂದವರಿಗೆ ಸಾಂತ್ವನ ನೀಡುತ್ತಾ , ತಂಪು ಹೃದಯವ ಹೊತ್ತ ಪ್ರಖರ ಸೂರ್ಯವಾಗಿದ್ದಾರೆ.
ಮೊದಲೇ ನದಿ ದಂಡೆಯಲ್ಲಿ ಇದ್ದ ಆ ಪವಿತ್ರ ಕ್ಷೇತ್ರಕ್ಕೆ ತಮ್ಮ ತಪಶಕ್ತಿಯಿಂದ ಮತಷ್ಟು ಶಕ್ತಿ ತುಂಬಿ ಅದನ್ನು ಒಂದು ಜಾಗೃತ ಸ್ಥಳವನ್ನಾಗಿಮಾಡಿ, ಉದಗಟ್ಟಿ ಗ್ರಾಮವನ್ನು ಕ್ಷೇತ್ರವಾಗಿಸಿ ದೇಹಿ ಎಂದು ಬಂದವರ ಪಾಲಿನ ಕಾಮಧೇನುವಾಗಿದ್ದಾರೆ ಪೂಜ್ಯ ಶ್ರೀ ಶ್ರೀ ಕಂಬದ ನರಸಿಂಹ ಸ್ವಾಮಿಗಳು.
ಇದೇ ದಿನಾಂಕ 23/01/2022 ಭಾನುವಾರ ಆ ಪುಣ್ಯಪುರುಷರ ಆರಾಧನಾ ಮಹೋತ್ಸವ ಶ್ರೀಕ್ಷೇತ್ರದಲ್ಲಿ ಜರುಗಲಿದೆ. ಎಲ್ಲ ಮುಮುಕ್ಷಗಳು ಆ ದಿವ್ಯತೇಜನ ದರುಶನ ಮಾಡಿ ಅವರ ಕೃಪಾನೇತ್ರಕ್ಕೆ ಕಂಡು “ನಿಮ್ಮ ಶರಣರ, ಅನುಭಾವಿಗಳ ಸಂಗದಿಂದ ನಾನು ಪರಮಸುಖಿಯಾದೆ” ಎನ್ನುವ ಅಕ್ಕಮಹಾದೇವಿಯ ವಚನದಂತೆ ಪರಮಸತ್ಯ ಸುಖಿತ್ವವನ್ನು ಪ್ರಸ್ತುತ ಶ್ರೀಗಳ ಜೊತೆಗೆ ಅನುಭವಿಸಿ, ಜೀವನ ಪಾವನಗೊಳಿಸಿಕೊಳ್ಳಬೇಕೆಂದು ಆಶಿಸುತ್ತೇವೆ.
ನಿರ್ಮಲಚಿತ್ತದಿಂದ, ಶುದ್ಧ ಭಕ್ತಿಯಿಂದ…ಶ್ರೀ ಶ್ರೀಕಂಠಸ್ವಾಮಿಗಳು,ಶ್ರೀಮತ್ ಆನೆಗೊಂದಿ ಮಹಾಸಂಸ್ಥಾನ, ಸರಸ್ವತಿ ಪೀಠ ಶ್ರೀಮಠ ಗಿಣಿಗೇರಾ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 6 =
Remember me
