ಬೆಂಗಳೂರು:ಲೋಕಸಭೆ ಚುನಾವಣೆ ಹೊತ್ತಲ್ಲೇ ರಾಜ್ಯ ಸರ್ಕಾರ ಎರಡು ಹಳೆಯ ಪ್ರಕರಣವನ್ನು ಮತ್ತೆ ಕೈಗೆತ್ತಿಕೊಳ್ಳುವ ಮೂಲಕ ರಾಜಕೀಯ ಅಚ್ಚರಿ ಮೂಡಿಸಿದೆ. ಮೈಸೂರು-ಕೊಡಗು ಲೋಕಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಯದುವೀರ್ ಒಡೆಯರ್​ಗೆ ಘೋಷಣೆ ಆದ ಮರು ದಿನವೇ ಬೆಂಗಳೂರಿನಲ್ಲಿರುವ ಮೈಸೂರು ಅರಮನೆ ಜಾಗ ಕುರಿತ ವ್ಯಾಜ್ಯ ಪರಿಹಾರಕ್ಕೆ ಸರ್ಕಾರ ಮುಂದಾಗಿದೆ. ಇದರ ಜತೆಗೆ 545 ಸಬ್​ಇನ್​ಸ್ಪೆಕ್ಟರ್ ಹುದ್ದೆ ನೇಮಕ ಅಕ್ರಮ ತನಿಖೆಯನ್ನು ಎಸ್​ಐಟಿಗೆ ವಹಿಸಲು ಗುರುವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಬೆಂಗಳೂರಿನ ಅರಮನೆ ಮೈದಾನದ (ಮೈಸೂರು ಅರಸರ ಕುಟುಂಬದ ಸುಪರ್ದಿಯಲ್ಲಿರುವ ಜಾಗ) ಜಾಗದ ವ್ಯಾಜ್ಯ ಬಹಳ ಕಾಲದಿಂದ ಸುಪ್ರೀಂಕೋರ್ಟ್​ನಲ್ಲಿದೆ.
ಆ ಜಾಗವನ್ನು ಸರ್ಕಾರದ ತೆಕ್ಕೆಗೆ ತೆಗೆದುಕೊಳ್ಳುವ ಕುರಿತು ಬಲವಾದ ವಾದ ಮಂಡಿಸಲು ಪ್ರಬಲ ವಕೀಲರನ್ನು ನೇಮಿಸು ವಂತೆ ಅಧಿಕಾರಿಗಳಿಗೆ ಸಿಎಂ ತಾಕೀತು ಮಾಡಿದ್ದಾರೆ. ಜತೆಗೆ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಪೊಲೀಸ್ 545 ಸಬ್ ಇನ್​ಸ್ಪೆಕ್ಟರ್ ನೇಮಕ ಸಂದರ್ಭದಲ್ಲಿ ನಡೆದ ಅವ್ಯವಹಾರ ಸಂಬಂಧ ಹೆಚ್ಚಿನ ತನಿಖೆ ಕೈಗೊಳ್ಳಲು ವಿಶೇಷ ತನಿಖಾ ತಂಡ ರಚನೆ ಆಗಲಿದೆ.
ಏನಿದು ವಿವಾದ?:ಬೆಂಗಳೂರಿನ ಅರಮನೆ ಮೈದಾನದಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರಿಗೆ ನಾಲ್ಕು ಪಾಲು ಇದೆ. ಅವರ ಸಹೋದರಿಯರಿಗೆ ತಲಾ 28 ಎಕರೆ ಸೇರಿದೆ. ಓರ್ವ ಸಹೋದರಿಯ ಪುತ್ರರಾಗಿರುವ ಯದುವೀರ್​ಗೆ ಇನ್ನೂ ನೇರ ಹಕ್ಕು ಬಂದಿಲ್ಲ. ಅಲ್ಲದೆ ಪಾಲು ಹಂಚಿಕೆ ವಿಚಾರದಲ್ಲಿ ಶ್ರೀಕಂಠ ದತ್ತ ಒಡೆಯರ್ ವಿರುದ್ಧ ಅವರ ಸಹೋದರಿಯರು ಹೂಡಿರುವ ಪ್ರತ್ಯೇಕ ಪ್ರಕರಣ ನ್ಯಾಯಾಲ ಯದಲ್ಲಿದೆ. ಇಷ್ಟರ ಹೊರತಾಗಿ ಇಡೀ ಜಾಗ ಸರ್ಕಾರ ವಶಕ್ಕೆ ಪಡೆಯಲು ಕಾನೂನು ಮಾಡಿದ್ದು, ರಾಜ್ಯ ಹೈಕೋರ್ಟ್​ನಲ್ಲಿ ವಿಚಾರಣೆ ನಡೆದು ಸರ್ಕಾರದ ಪರ ತೀರ್ಪು ಬಂದಿದೆ. ಬಳಿಕ ಒಡೆಯರ್ ಕುಟುಂಬ ಸುಪ್ರಿಂಕೋರ್ಟ್​ನಲ್ಲಿ ಪ್ರಶ್ನೆ ಮಾಡಿದ ಬಳಿಕ ಸುಪ್ರಿಂಕೋರ್ಟ್ ಯಥಾಸ್ಥಿತಿ ಕಾಪಾಡುವಂತೆ ಸೂಚನೆ ನೀಡಿದೆ. ಹೀಗಾಗಿ ಒಡೆಯರ್ ಕುಟುಂಬದ ಹಿಡಿತದಲ್ಲೇ ಆ ಜಾಗ ಇದೆ.
ಸಂಪುಟದ ತೀರ್ಮಾನ ಏನು?:ಬೆಂಗಳೂರು ಅರಮನೆ ಜಾಗದಲ್ಲಿ ರಸ್ತೆ ಅಗಲೀಕರಣ ಮಾಡುವುದಾದರೆ ಟಿಡಿಆರ್ (ಅಭಿವೃದ್ಧಿ ಹಕ್ಕುಗಳ ವರ್ಗಾವಣೆ) ಕೊಡುವಂತೆ ಕೋರ್ಟ್ ಆದೇಶಿಸಿತ್ತು. ಆದರೆ ಸರ್ಕಾರ ರಸ್ತೆ ಅಗಲೀಕರಣದಿಂದ ಹಿಂದೆ ಸರಿಯಿತು. ಆದರೆ ರಸ್ತೆ ಅಗಲೀಕರಣಕ್ಕೆ ಅಗತ್ಯವಾದ ಹದಿನೈದೂವರೆ ಎಕರೆಯನ್ನು ತನ್ನ ವಶಕ್ಕೆ ಪಡೆದಿದ್ದ ಸರ್ಕಾರ ಕಾಂಪೌಂಡ್ ಹಾಕಿತ್ತು. ಸರ್ಕಾರ ಟಿಡಿಆರ್ ಕೊಟ್ಟು ರಸ್ತೆ ಅಭಿವೃದ್ಧಿಯನ್ನೂ ಮಾಡಲಿಲ್ಲ, ಬದಲಿಗೆ ಜಾಗವನ್ನು ವಶಕ್ಕೆ ಪಡೆದಿದೆ ಎಂದು ಒಡೆಯರ್ ಕುಟುಂಬ ನ್ಯಾಯಾಲಯಕ್ಕೆ ಮೊರೆ ಹೋಯಿತು. ಸರ್ಕಾರದ ನ್ಯಾಯಾಂಗ ನಿಂದನೆ ಮಾಡಿದಂತಾಗಿ, ಮುಖ್ಯಕಾರ್ಯದರ್ಶಿ, ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರ ಖುದ್ದು ಹಾಜರಾತಿಗೆ ನ್ಯಾಯಾಲಯ ಸೂಚನೆ ನೀಡಿತ್ತು.
ಈ ವಿಚಾರ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಚರ್ಚೆಯಾಯಾಗಿ, ಸರ್ಕಾರದ ನಿಲುವನ್ನು ಕೋರ್ಟ್​ಗೆ ತಿಳಿಸುವ ಸಂಬಂಧ ನಿರ್ಣಯಿಸಬೇಕಾಗಿತ್ತು. ಆ ಪ್ರಕಾರ ಚರ್ಚೆ ನಡೆದು, ರಸ್ತೆ ಅಗಲೀಕರಣ ಮಾಡಬೇಕೆಂಬ ನಿರ್ಧಾರಕ್ಕೆ ಬರಲಾಯಿತು. ಜತೆಗೆ ಹದಿನೈದೂವರೆ ಎಕರೆಗೆ ಟಿಡಿಆರ್ ಕೊಡಲು ತಾತ್ವಿಕ ತೀರ್ಮಾನ ಕೈಗೊಳ್ಳಲಾಯಿತು. ಆದರೆ, ಟಿಡಿಆರ್ ಯಾರಿಗೆ ಕೊಡಬೇಕೆಂಬುದು ಪ್ರಶ್ನೆ ಎದುರಾಯಿತು.
ಕೊನೆಗೆ ಪ್ರಕರಣದ ಮೂಲ ಕೆದಕಿ, ಅರಮನೆ ಮೈದಾನದ ಜಾಗವನ್ನು ಸರ್ಕಾರ ತನ್ನ ವಶಕ್ಕೆ ಪಡೆದುಕೊಳ್ಳಲು ಕಾನೂನು ರೂಪಿಸಿದೆ. ಅದನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಆದರೆ, ಸುಪ್ರಿಂಕೋರ್ಟ್ ಯಥಾಸ್ಥಿತಿ ಸೂಚನೆ ನೀಡಿದೆ ಎಂಬ ಅಂಶವನ್ನು ಅಧಿಕಾರಿಗಳು ಪ್ರಸ್ತಾಪಿಸಿದರು. ಬಹುಕಾಲದಿಂದ ಯಥಾಸ್ಥಿತಿಯಲ್ಲಿರುವುದೇಕೆ ಎಂದು ಸಿಡಿಮಿಡಿಗೊಂಡ ಸಿಎಂ ಆ ಜಾಗ ನಾಡಿನ ಜನರಿಗೆ ಸೇರಬೇಕು, ಸಾರ್ವಜನಿಕ ಉದ್ದೇಶಕ್ಕೆ ಬಳಕೆಯಾಗಬೇಕು. ಹೀಗಾಗಿ ಸರ್ಕಾರದ ಪರ ಸುಪ್ರಿಂನಲ್ಲಿ ವಾದಿಸಲು ಕೂಡಲೇ ಪ್ರಬಲ ವಕೀಲರನ್ನು ನೇಮಿಸಿ ಎಂದು ತಾಕೀತು ಮಾಡಿದರೆಂದು ತಿಳಿದುಬಂದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
