ಹಂಪಿಯ ಶ್ರೀ ವಿರೂಪಾಕ್ಷಸ್ವಾಮಿಯ ಮುಂದೆ 1990 ಜುಲೈ 11ರಂದು ಡಾ. ಚಿದಾನಂದ ಮೂರ್ತಿ ಅವರು ತನ್ನ ಉಳಿದ ಆಯಸ್ಸಿನ ಭಾಗವನ್ನೆಲ್ಲ ಕನ್ನಡದ ಕೆಲಸಕ್ಕಾಗಿ ಮೀಸಲಿಡುವ ಸಂಕಲ್ಪವನ್ನು ಮಾಡಿದ್ದರು. ‘ನಾನು ಇಡೀ ಕರ್ನಾಟಕದಲ್ಲಿ ಒಂದು ಕನ್ನಡಪರ ಎಚ್ಚರ ಮೂಡಿ ಸುತ್ತೇನೆ. ಇಲ್ಲವಾದಲ್ಲಿ ಇಲ್ಲೇ ತುಂಗಭದ್ರೆಗೆ ನನ್ನನ್ನು ನಾನು ಒಪ್ಪಿಸಿಕೊಳ್ಳುತ್ತೇನೆ’ ಎಂಬ ಪ್ರತಿಜ್ಞೆ ಯನ್ನೂ ಮಾಡಿದ್ದರು. ಆದರೆ ಈ ಪ್ರತಿಜ್ಞೆಯನ್ನು ತೃಪ್ತಿಕರವಾಗಿ ನೆರವೇರಿಸಲು ಆಗುತ್ತಿಲ್ಲವೆಂದು, ಕನ್ನಡಿಗರಲ್ಲಿ ಕನ್ನಡದ ಪ್ರಜ್ಞಾವಂತಿಕೆಯನ್ನು ಮೂಡಿಸಲು 1997ರ ಆಗಸ್ಟ್ 23ರಂದು ತುಂಗಭದ್ರೆಯಲ್ಲಿ ‘ಆತ್ಮಬಲಿದಾನ’ಕ್ಕೆ ಸಿದ್ಧವಾಗಿ ನದಿಗೆ ಹಾರಿಯೇಬಿಟ್ಟಿದ್ದರು. ಕೆಲ ಅಂಬಿಗರು ಇದನ್ನು ನೋಡಿ, ಅವರ ಪ್ರಾಣ ಉಳಿಸಿದ್ದರು.
1988ರಲ್ಲಿ ಚಿದಾನಂದಮೂರ್ತಿ ಕನ್ನಡ ಶಕ್ತಿ ಕೇಂದ್ರವನ್ನು ಅಸ್ತಿತ್ವಕ್ಕೆ ತಂದರು. ಅದು ಕರ್ನಾಟಕದಾದ್ಯಂತ ವ್ಯಾಪಿಸಿದ ಸಂಘಟನೆ. ಕನ್ನಡದ ಕಾರಣಕ್ಕಾಗಿಯೇ ರಾಜ್ಯಾದ್ಯಂತ ವ್ಯಾಪಿಸಿದ ಏಕೈಕ ಸಂಘಟನೆ. ಶಕ್ತಿ ಕೇಂದ್ರದ ವತಿಯಿಂದ ಹೊರತಂದ ‘ಕನ್ನಡ-ಕನ್ನಡಿಗ-ಕರ್ನಾಟಕ’ ಎಂಬ ಪುಸ್ತಕ ‘ಕನ್ನಡಿಗರ ಅನಧಿಕೃತವಾದ ಸಂವಿಧಾನ’ ಎಂಬ ಪ್ರಶಂಸೆಗೆ ಪಾತ್ರವಾಗಿದೆ.
ಶಿಕಾಗೋ ವಿಶ್ವವಿದ್ಯಾಲಯದಲ್ಲೂ ಕನ್ನಡ ಅಧ್ಯಾಪಕರಾಗಿದ್ದವರು ಚಿದಾನಂದಮೂರ್ತಿ. 1969ರಲ್ಲಿ ಮೈಸೂರಿನಿಂದ ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ರೀಡರ್ ಆದರು; ಅಂದಿನಿಂದ ಬೆಂಗಳೂರಿನಲ್ಲಿಯೇ ನೆಲೆಸಿದ್ದರು. 1990ರ ಅಕ್ಟೋಬರ್ 10ರಂದು ನಿವೃತ್ತಿ ಪಡೆದು ಕನ್ನಡದ ಕೆಲಸಗಳನ್ನು ನಿರಂತರವಾಗಿ ಮಾಡುತ್ತಿದ್ದರು. ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಇಟಲಿ, ಗ್ರೀಸ್, ಈಜಿಪ್ಟ್, ಥೈಲ್ಯಾಂಡ್, ಜಪಾನ್, ಹವಾಯ್, ಸ್ವಿಟ್ಜರ್ಲೆಂಡ್ ಮತ್ತಿತರ ದೇಶಗಳನ್ನು ಸುತ್ತಿದ್ದರು. ಸಂಶೋಧನೆಗೆ, ಕನ್ನಡದ ಕಾರಣಕ್ಕೆ ಕರ್ನಾಟಕದ ಬೇರೆ ಬೇರೆ ಪ್ರಾಂತ್ಯಗಳಲ್ಲೂ ಓಡಾಡಿದ್ದರು. ರ್ಬಕ್ಲಿ, ಫಿಲಡೆಲ್ಪಿಯ, ಸ್ಟಾನ್ಪೋರ್ಡ್ ಮುಂತಾದ ಹಲವು ವಿಶ್ವವಿದ್ಯಾಲಯ ಹಾಗೂ ವಿಶ್ವಮಟ್ಟದ ಐತಿಹಾಸಿಕ ಭಾಷಾ ವಿಜ್ಞಾನ ಸಮ್ಮೇಳನಗಳಲ್ಲಿ ಪ್ರಬಂಧ ಮಂಡಿಸಿದ್ದರು.
ಸಂಶೋಧಕ ಡಾ.ಎಂ. ಚಿದಾನಂದಮೂರ್ತಿ ಅವರ ಜೀವನದಲ್ಲಿ ಮಹತ್ತರವಾದ ತಿರುವನ್ನು ಕೊಟ್ಟ ಪ್ರಸಂಗವೆಂದರೆ ಗೋಕಾಕ್ ಚಳವಳಿ. ಕನ್ನಡ-ಕನ್ನಡಿಗರಿಗೆ ಒದಗಿದ್ದ ದುಃಸ್ಥಿತಿಯನ್ನು ಕೊನೆಗಾಣಿಸಬೇಕೆಂಬ ಸಂಕಲ್ಪ ಅವರಲ್ಲಿ ಸ್ಥಿರವಾದ ಸಮಯ. ‘1982ರಲ್ಲಿ ನಡೆದ ಗೋಕಾಕ್ ಚಳವಳಿ ನನ್ನ ಬದುಕಿಗೆ ತೀರಾ ಬೇರೆಯೇ ಆದ ತಿರುವನ್ನು ಕೊಟ್ಟಿತು. ಕನ್ನಡದ ಜತೆ ಕನ್ನಡಿಗರೂ ಸುರಕ್ಷಿತವಾಗಿದ್ದ ಮೈಸೂರಿನಿಂದ 1968ರ ಕೊನೆಯಲ್ಲಿ ಬೆಂಗಳೂರಿಗೆ ಬಂದಮೇಲೆ ಇಲ್ಲಿನ ಕನ್ನಡಿಗರ ದೈನ್ಯಸ್ಥಿತಿಯ ಅರಿವಾಗತೊಡಗಿತು. 82ಕ್ಕೆ ಮುಂಚೆ ಬೆಂಗಳೂರಿನ ದಂಡುಪ್ರದೇಶದಲ್ಲಿ ಮುಂಗಡ ಟಿಕೆಟ್ಟಿಗಾಗಿ ಸಾಲಲ್ಲಿ ನಿಂತು ಕನ್ನಡದಲ್ಲಿ ‘ನಾಲ್ಕು ಟಿಕೆಟ್ ಕೊಡಿ’ ಎಂದು ಕೇಳಿ ಅವಮಾನಿತನಾಗಿದ್ದೆ. ಆಗ ಸಿನಿಮಾ ಮ್ಯಾನೇಜರ್ ನಿಮ್ಮನ್ನು ಹೊರಹಾಕಿಸುತ್ತೇನೆ ಎಂದು ಅಬ್ಬರಿಸಿದುದಕ್ಕಿಂತಲೂ ಹೆಚ್ಚಾಗಿ ಅದನ್ನೆಲ್ಲ ಕನ್ನಡಿಗರು ಮೂಕಪ್ರೇಕ್ಷಕರಾಗಿ ನೋಡುತ್ತ ನಿಂತಿದ್ದುದು ಹೆಚ್ಚಿನ ನೋವುಂಟುಮಾಡಿತ್ತು. ಬೆಂಗಳೂರಿನಲ್ಲಿ ಕನ್ನಡ ಪರವಾದ ಚಳವಳಿ ಅಲ್ಲಲ್ಲಿ ನಡೆದರೂ ಅದರ ಬಗ್ಗೆ ವಿದ್ಯಾವಂತ ಜನಕ್ಕೆ ಸದಭಿಪ್ರಾಯವಿರಲಿಲ್ಲವೆಂದು ಹೇಳಿದರೆ ಅದರ ಮಹತ್ವವನ್ನು ನಾನು ಅಲ್ಲಗಳೆಯುತ್ತಿದ್ದೇನೆ ಎಂದು ಭಾವಿಸಬಾರದು. ಕನ್ನಡ ಚಳವಳಿಯ ನೇತಾರರಾಗಿದ್ದ ಅ.ನ.ಕೃ. ಅಲ್ಲಿಂದ ಹಿಂದೆ ಸರಿದಿದ್ದರು; ಮ. ರಾಮಮೂರ್ತಿ ಅವರು ಆ ಹೊತ್ತಿಗೆ ದಿವಂಗತರಾಗಿದ್ದರು. ವಿದ್ಯಾವಂತರ ಹಾಗೂ ಆಲೋಚನೆ ಮಾಡಬಲ್ಲವರ ಬುದ್ಧಿಜೀವಿಗಳ ಸಹಾನುಭೂತಿಯನ್ನು ಗಳಿಸಿಕೊಂಡು ಅವರನ್ನೂ ಕನ್ನಡ ಚಳವಳಿಯಲ್ಲಿ ತೊಡಗಿಸಿಕೊಳ್ಳುವ ಯತ್ನವನ್ನು ಯಾರೂ ಮಾಡಲಿಲ್ಲವಾದ ಕಾರಣ ಅನೇಕರು ಅದರಿಂದ ದೂರವೇ ಉಳಿದಿದ್ದರು. ಎಲ್ಲೋ ಸಭೆ ನಡೆಯುತ್ತಿದೆ, ಏನೋ ಮಾಡಿಕೊಳ್ಳುತ್ತಿದ್ದಾರೆ ಎಂಬ ಒಂದು ಬಗೆಯ ಉದಾಸೀನ ಅಥವಾ ಅಸಡ್ಡೆ ವಿದ್ಯಾವಂತರಲ್ಲಿತ್ತು. ನಾನೂ ಅದಕ್ಕೆ ಹೊರತಾಗಿರಲಿಲ್ಲ. ಗೋಕಾಕ್ ಚಳವಳಿಗೆ ಮುಂಚೆ ‘ಕನ್ನಡ ಉಳಿಸಿ’ ಸಮಿತಿಯೊಂದನ್ನು ರಚಿಸಿ ಅಲ್ಪಸ್ವಲ್ಪ ಕೆಲಸ ಮಾಡಿದ್ದೆವು. ಗೋಕಾಕ್ ಚಳವಳಿಯು ಒಂದು ರೀತಿಯಲ್ಲಿ ನನ್ನಂತಹ ಹಲವರನ್ನು ಕನ್ನಡ ಕಾರ್ಯಕರ್ತರನ್ನಾಗಿ ರೂಪಿಸಿದ ಬಹುದೊಡ್ಡ ಘಟನೆ’ ಎಂದು ಅವರು ಗೋಕಾಕ್ ಚಳವಳಿಯ ಮಹತ್ವವನ್ನು ಸ್ಮರಿಸಿಕೊಂಡಿದ್ದರು. ಗೋಕಾಕ್ ಚಳವಳಿಯ ಕಾವು ಕನ್ನಡಪರ ಬಳಗವೊಂದನ್ನು ಸೃಷ್ಟಿಸಿತು. ಈ ಬಳಗ ರೂಪುಗೊಳ್ಳುವುದರಲ್ಲೂ, ಸಂಘಟನೆಯಲ್ಲೂ ಚಟುವಟಿಕೆಯಲ್ಲೂ ಚಿದಾನಂದಮೂರ್ತಿಯವರ ಕೊಡುಗೆ ಅಪೂರ್ವ. ಡಾ. ಸರೋಜಿನಿ ಮಹಿಷಿ ಆಯೋಗ ವರದಿಯ ಅನುಷ್ಠಾನ, ಹಂಪೆಯಲ್ಲಿ ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆ, ದೂರದರ್ಶನದಲ್ಲಿ ಕನ್ನಡ ಕಾರ್ಯಕ್ರಮಗಳ ಪ್ರಸಾರ, ಬ್ಯಾಂಕುಗಳಲ್ಲಿ ಕನ್ನಡಿಗರ ನೇಮಕಾತಿ- ಹೀಗೆ ಹಲವು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಕನ್ನಡ-ಕನ್ನಡಿಗರಿಗಾಗಿ ದುಡಿದವರು ಚಿದಾನಂದಮೂರ್ತಿ. ಮುಂದೆ ಬಳಗದ ಚಟುವಟಿಕೆಗಳನ್ನು ಕರ್ನಾಟಕದಾದ್ಯಂತ ವಿಸ್ತರಿಸುವ ಉದ್ದೇಶದಿಂದ ‘ಕನ್ನಡ ಶಕ್ತಿಕೇಂದ್ರ’ ಸ್ಥಾಪನೆಯಾಯಿತು. ಚಿದಾನಂದಮೂರ್ತಿ ಅವರು ಕಾರ್ಯಾಧ್ಯಕ್ಷರಾದರು. ನಾಡಿನ ಉದ್ದಗಲಕ್ಕೂ ಶಕ್ತಿಕೇಂದ್ರ ಕನ್ನಡದ ಕೆಲಸವನ್ನು ಮಾಡಿದೆ. ಇದರಲ್ಲಿ ಚಿದಾನಂದಮೂರ್ತಿ ಕೊಡುಗೆ ಅಪಾರ.
ಚಿಮೂ ಅವರ ಬಾಲ್ಯವೆಲ್ಲ ಹಳ್ಳಿಯಲ್ಲೇ. ಅದೂ ಬಡತನದ ಬೇಗೆಯಲ್ಲಿ. ಓದಿನಲ್ಲಿ ಬಲು ಚುರುಕು. 14 ವರ್ಷ ಆಗುವವರೆಗೆ ಚಿಮೂ ವಿದ್ಯುತ್ ದೀಪವನ್ನೇ ಕಂಡಿರಲಿಲ್ಲ. ಚಿಮಣಿ ಬುಡ್ಡಿಯ ಬೆಳಕಲ್ಲೇ ಓದಿದ್ದರು. ಆದರೆ, ಇದೇ ಚಿಮೂ ಗೋಕಾಕ್ ಹೋರಾಟದಲ್ಲಿ ದೂರದರ್ಶನದ ಸ್ವತಂತ್ರ ಕಾರ್ಯನಿರ್ವಹಣೆಗಾಗಿ ಆಗ್ರಹಿಸಿ ಕಟ್ಟಡಕ್ಕೆ ನೀರು ಮತ್ತು ವಿದ್ಯುತ್ ಸಂಪರ್ಕ ಕಡಿದು ಹಾಕಲು ಮುಂದಾಗಿದ್ದರು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 1 =
Remember me
