ಬೆಂಗಳೂರು:ಲೋಕಸಭೆ ಚುನಾವಣೆ ನೀತಿಸಂಹಿತೆ ಸಡಿಲಗೊಂಡ ಬಳಿಕ ಗುರುವಾರ ನಡೆದ ಮೊದಲ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಹೋದ್ಯೋಗಿಗಳಿಗೆ ಆಡಳಿತದ ಮೇಲೆ ಬಿಗಿ ಹಿಡಿತ ಸಾಧಿಸುವ ಪಾಠ ಮಾಡಿ, ಚುರುಕು ಮುಟ್ಟಿಸಿದ್ದಾರೆ.
ಸಂಪುಟದಲ್ಲಿ ತೀರ್ವನವಾಗಬೇಕಾದ 110 ವಿಷಯಗಳಿದ್ದರೂ 11ನ್ನು ಮಾತ್ರ ಚರ್ಚೆಗೆ ಪರಿಗಣಿಸಲು ಸೂಚಿಸಿದ್ದ ಸಿಎಂ, ಮನದಿಂಗಿತವನ್ನು ತಮ್ಮ ತಂಡಕ್ಕೆ ತಿಳಿಸುವುದಕ್ಕೆ ಈ ಸಭೆಯನ್ನು ಆದ್ಯತೆ ಮೇಲೆ ಬಳಸಿಕೊಂಡಿದ್ದು ವಿಶೇಷ.
ಮುಖ್ಯವಾಗಿ ಗ್ಯಾರಂಟಿ ಯೋಜನೆ ಅನುಷ್ಠಾನ ಹಾಗೂ ಕೇಂದ್ರ ಸರ್ಕಾರದಿಂದ ತೆರಿಗೆ ಅನ್ಯಾಯ ಎಂದು ಮನವರಿಕೆ ಮಾಡಿಕೊಡಲು ಅಭಿಯಾನ ನಡೆಸಿದರೂ ಜನ ಓಗೊಟ್ಟಿಲ್ಲ ಎಂಬುದು ಲೋಕಸಭೆ ಚುನಾವಣೆಯ ಫಲಿತಾಂಶದಲ್ಲಿ ಪ್ರತಿಫಲನವಾಗಿದೆ. ಜತೆಗೆ ಮಹರ್ಷಿ ವಾಲ್ಮೀಕಿ ಹಾಗೂ ಅಂಬೇಡ್ಕರ್ ನಿಗಮದಲ್ಲಿನ ಹಗರಣವು ಸರ್ಕಾರದ ಇಮೇಜ್​ಗೆ ಧಕ್ಕೆ ತಂದಿರುವುದರಿಂದ ಸಿಎಂ ಸಹಜವಾಗಿ ತಮ್ಮ ಆಲೋಚನಾ ಲಹರಿಯನ್ನು ಆಡಳಿತ ವ್ಯವಸ್ಥೆ ಬಿಗಿಗೊಳಿಸಲು ಸಚಿವರ ಜವಾಬ್ದಾರಿ ಬಗ್ಗೆ ಎಚ್ಚರಿಸಿದ್ದಾರೆ.
ವಿಳಂಬವನ್ನು ನಿರ್ಲಕ್ಷಿಸಬೇಡಿ:ವಾಲ್ಮೀಕಿ, ಅಂಬೇಡ್ಕರ್ ನಿಗಮದಲ್ಲಿನ ಬೆಳವಣಿಗೆ ಉದಾಹರಿಸುತ್ತಲೇ ಸಚಿವರು ಹಾಗೂ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ಹಾಗೂ ಮಾರ್ಗದರ್ಶನ ಮಾಡಿದ ಸಿಎಂ, ಆಡಳಿತವನ್ನು ಇನ್ನಷ್ಟು ಸುಧಾರಿಸುವಂತೆ ಮಾಡಲು ನೀವುಗಳು ಬಿಗುವಾಗಬೇಕು. ನಮ್ಮ ವ್ಯವಸ್ಥೆ ಜನಸ್ನೇಹಿ, ಜನಪರ ಆಗಬೇಕು. ಮುಖ್ಯವಾಗಿ ವಿಳಂಬ ಆಗುವುದನ್ನು ನಿರ್ಲಕ್ಷ್ಯಿಸಕೂಡದು ಎಂದು ತಾಕೀತು ಮಾಡಿದರು.
ಸಚಿವರು ಮೊದಲು ಇಲಾಖೆ ಮುಖ್ಯಸ್ಥರನ್ನು ಜತೆಗೆ ಕೂರಿಸಿಕೊಂಡು ಯಾವೆಲ್ಲ ಕೆಲಸ ಆಗಬೇಕಾಗಿದೆ, ಯಾವ ಕೆಲಸ ಯಾವ ಕಾರಣಕ್ಕೆ ತಡವಾಗಿದೆ, ಸಮಸ್ಯೆ ಪರಿಹಾರಕ್ಕೆ ಏನು ಕ್ರಮವಾಗಬೇಕೆಂದು ಆಕ್ಷನ್ ಪ್ಲಾನ್ ಮಾಡಿಕೊಂಡು ಅದರ ಅನುಷ್ಠಾನಕ್ಕೆ ಗಮನ ಕೊಡಬೇಕು. ಸುಮ್ಮನೆ ಬಂದೆ ಹೋದೆ ಎಂಬಂತಾಗಬಾರದು. ಉಸ್ತುವಾರಿ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿ ಸರ್ಕಾರ ಆದೇಶದ ಬಳಿಕವೂ ತಳ ಮಟ್ಟದಲ್ಲಿ ಯಾವ ಕೆಲಸ ಆಗುತ್ತಿಲ್ಲ, ಕಾರ್ಯಗತವಾಗಲು ಯಾವ ಕ್ರಮಕೈಗೊಳ್ಳಬೇಕೆಂದು ತೀರ್ಮಾನ ಮಾಡಿ ಅನುಷ್ಠಾನ ಮಾಡಿಸುವ ಜವಾಬ್ದಾರಿ ತೆಗೆದುಕೊಳ್ಳಿ ಎಂದು ತಿಳಿಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಡಿದ ಜನತಾದರ್ಶನಕ್ಕೆ ಸಣ್ಣಸಣ್ಣ ಸಮಸ್ಯೆ ಹೊತ್ತು ರಾಜ್ಯದ ಮೂಲೆಮೂಲೆಗಳಿಂದ ಜನ ಬಂದಿದ್ದರು. ಪಂಚಾಯಿತಿ ಮಟ್ಟದ, ತಹಸೀಲ್ದಾರ್, ಜಿಲ್ಲಾಡಳಿತದಲ್ಲಿ ಆಗಬೇಕಾದ ಕೆಲಸ ಆಗದ ಪರಿಣಾಮ ಜನ ಬೆಂಗಳೂರಿಗೆ ಅಲೆಯಬಾರದು. ಉಸ್ತುವಾರಿ ಸಚಿವರು ಜನತಾದರ್ಶನ ಮಾಡಿ ಸಮಸ್ಯೆ ಪರಿಹರಿಸಿಕೊಡಬೇಕೆಂದು ಸ್ಪಷ್ಟ ಸೂಚಿಸಿದರು.
ಹಗರಣದ ಬಗ್ಗೆ ವ್ಯಥೆ:ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಹಗರಣವನ್ನು ಗಂಭೀರವಾಗಿ ಪರಿಗಣಿಸಿದ್ದಾಗಿ ಸಿಎಂ ಸಭೆಯಲ್ಲಿ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೂ ಇಲ್ಲ. ಅಲ್ಲದೇ ನಿಗಮದ ಹಣವನ್ನು ಪೂರ್ಣ ಪ್ರಮಾಣದಲ್ಲಿ ವಾಪಸ್ ತರಿಸುವ ಕೆಲಸ ಮಾಡಲಾಗುತ್ತದೆ ಎಂದು ಸಿಎಂ ವಾಗ್ದಾನ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಹಾಗೆಯೇ, ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ ಬಳಿಕ ಸಿಎಂ ಬಳಿ ಇರುವ ಪರಿಶಿಷ್ಟ ಪಂಗಡ ಕಲ್ಯಾಣ ಖಾತೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಿಗೆ ವಹಿಸುವ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ. ತಂಗಡಗಿ ಖಾತೆ ಬೇಡವೆಂದು ನಿವೇದಿಸಿಕೊಂಡಿದ್ದಾರೆ. ಉಳಿದ ಸಚಿವರೂ ನೀವೇ ಇಟ್ಟುಕೊಳ್ಳಿ ಎಂದು ಸಿಎಂಗೆ ಸಲಹೆ ನೀಡಿದರು.
ಟೆಂಡರ್ ಪ್ರಕ್ರಿಯೆ ನಿಧಾನಕ್ಕೆ ಗರಂ: ಕಳೆದ ಸಚಿವ ಸಂಪುಟ ಸಭೆಯಲ್ಲಿ 147 ಟೆಂಡರ್​ಗಳಿಗೆ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿತ್ತು. ಈ ಪೈಕಿ ಎಷ್ಟು ಟೆಂಡರ್ ಕರೆದು ಕೆಲಸ ಪ್ರಾರಂಭವಾಗಿದೆ ಎಂದು ಅವಲೋಕಿಸಲಾಯಿತು. ಆಡಾಳಿತಾತ್ಮಕ ಮಂಜೂರಾತಿ ನೀಡಿರುವ ಎಲ್ಲಾ ಟೆಂಡರ್​ಗಳಿಗೆ ಮುಂದಿನ ಒಂದು ತಿಂಗಳೊಳಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಮುಖ್ಯಮಂತ್ರಿ ಸೂಚಿಸಿದರು.
ಬಂಡವಾಳ ಆಕರ್ಷಣೆಗೆ ಹೂಡಿಕೆದಾರರ ಸಮಾವೇಶ:ಉದ್ಯಮಿಗಳು ಹಾಗೂ ಬಂಡವಾಳ ಆಕರ್ಷಿಸಲು ‘ಇನ್ವೆಸ್ಟ್ ಕರ್ನಾಟಕ’ ‘ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ’ವನ್ನು ಫೆಬ್ರವರಿ 12 ರಿಂದ 14ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲು ತೀರ್ವನಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ಮಾಹಿತಿ ನೀಡಿದರು. ಇತ್ತೀಚಿನ ವರ್ಷಗಳಲ್ಲಿ ಹೂಡಿಕೆದಾರರ ಸಮಾವೇಶವು ಮಹತ್ವ ಪಡೆದಿದ್ದು, ನೆರೆಯ ರಾಜ್ಯಗಳೂ ಪೈಪೋಟಿಗೂ ಇಳಿದಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮೊದಲ ಸಮಾವೇಶದ ಪೂರ್ವ ಸಿದ್ಧತೆಗಳಿಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಸಚಿವ ಸಂಪುಟ ಸಭೆಯಲ್ಲಿ ಗುರುವಾರ ಈ ಬಗ್ಗೆ ರ್ಚಚಿಸಿ ಒಪ್ಪಿಗೆ ನೀಡಲಾಯಿತು ಎಂದು ಎಚ್.ಕೆ.ಪಾಟೀಲ ಮಾಹಿತಿ ನೀಡಿದರು.
ಖಾಸಗಿ ಸಂಸ್ಥೆ ಸಹಭಾಗಿತ್ವ:ಉದ್ಯಮಗಳು ಹಾಗೂ ಬಂಡವಾಳ ಆಕರ್ಷಣೆಗಾಗಿ ರಾಜ್ಯ ಸರ್ಕಾರದ ಜತೆಗೆ ಜ್ಞಾನ ಹಂಚಿಕೆಯ ಸಹಭಾಗಿತ್ವವನ್ನು ಬೋಸ್ಟನ್ ಸಲಹಾ ಸಮೂಹಕ್ಕೆ ಗುತ್ತಿಗೆ ನೀಡಲಾಗಿದೆ. ಭಾರತದ್ದೇ ಖಾಸಗಿ ಸಂಸ್ಥೆ ಇದಾಗಿದ್ದು, ಸಮಾವೇಶದ ರೂಪರೇಷೆ, ಬಂಡವಾಳ ಆಕರ್ಷಣೆಗೆ ಏನೆಲ್ಲ ವಸ್ತು-ವಿಷಯ ಒಳಗೊಂಡಿರಬೇಕು ಇತ್ಯಾದಿ… ವಿಷಯಗಳ ಬಗ್ಗೆ ಸರ್ಕಾರಕ್ಕೆ ಮಾರ್ಗದರ್ಶನ ಮಾಡಲಿದೆ ಎಂದು ಸಚಿವರು ವಿವರಿಸಿದರು.
ಫಲಪ್ರದ ಉದ್ದೇಶ:ವಾರ್ಷಿಕೋತ್ಸವ ರೀತಿಯಲ್ಲಿ ಹೂಡಿಕೆದಾರರ ಸಮಾವೇಶ ನಡೆಸುವುದು ಅರ್ಥಹೀನ. ಬಿಡುವಿಲ್ಲದ ವೇಳಾಪಟ್ಟಿ, ವಿವಿಧ ರಾಜ್ಯಗಳ ಪೈಪೋಟಿ ಪರಿಣಾಮ ಬಹುತೇಕ ಕಂಪನಿಗಳು, ಪ್ರತಿನಿಧಿಗಳು ಇಲ್ಲವೇ ಕೆಳಹಂತದ ಅಧಿಕಾರಿಗಳನ್ನು ಕಳುಹಿಸಿ ಕೈತೊಳೆದುಕೊಳ್ಳುತ್ತಿವೆ. ದೇಶ-ವಿದೇಶಗಳಿಗೆ ಹೋಗಿ ಪ್ರತಿಷ್ಠಿತ ಉದ್ಯಮ, ಹೂಡಿಕೆದಾರರಿಗೆ ಕರ್ನಾಟಕದ ಸಾಮರ್ಥ್ಯ ತಿಳಿಸಿ, ಆಹ್ವಾನಿಸುವುದು ಪರಿಣಾಮಕಾರಿಯಾಗುತ್ತದೆ. ಬಹುರಾಷ್ಟ್ರೀಯ ಸೇರಿ ಪ್ರತಿಷ್ಠಿತ ಕಂಪನಿಗಳು, ಹೂಡಿಕೆ ಕ್ಷೇತ್ರದ ದಿಗ್ಗಜರು ಪಾಲ್ಗೊಳ್ಳಲು ಸಾಧ್ಯವಾಗಲಿದ್ದು, ಉದ್ದೇಶ ಸಫಲವಾಗಲಿದೆ ಎಂಬ ಕಾರಣಕ್ಕೆ 2-3 ವರ್ಷಗಳಿಗೊಮ್ಮೆ ಇಂತಹ ಸಮಾವೇಶ ಏರ್ಪಡಿಸಬೇಕು ಎನ್ನುವುದು ಸರ್ಕಾರದ ನಿಲುವು. ಬಿಜೆಪಿ ಸರ್ಕಾರ 2022ರ ನವೆಂಬರ್​ನಲ್ಲಿ ‘ಸಾಹಸೋದಯ’ ಪರಿಕಲ್ಪನೆಯಡಿ ಈ ಸಮಾವೇಶ ಏರ್ಪಡಿಸಿತ್ತು. ಇದೀಗ ಎರಡು ವರ್ಷ ಮೂರು ತಿಂಗಳ ನಂತರ ಸಮಾವೇಶ ನಡೆಸಲು ಮುಂದಾಗಿದೆ.
ಕೆಜಿಎಫ್​ನಲ್ಲಿ ಗಣಿ ಚಟುವಟಿಕೆ ನಿರ್ಧಾರ ಮುಂದಕ್ಕೆ:ಕೋಲಾರ ಗೋಲ್ಡ್ ಫೀಲ್ಡ್​ನ ಭಾರತ್​ಗೋಲ್ಡ್ ಮೈನ್ಸ್ ಕಂಪನಿ ನಿಯಮಿತವು ಹೊರತೆಗೆದ ಅದಿರಿನಲ್ಲಿ ಗಣಿ ಚಟುವಟಿಕೆ ನಡೆಸುವ ನಿರ್ಧಾರವನ್ನು ರಾಜ್ಯ ಸರ್ಕಾರ ಮತ್ತೆ ಮುಂದೂಡಿದೆ. ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರ ಸಲ್ಲಿಸಿದ ಈ ಪ್ರಸ್ತಾವನೆ ಬಗ್ಗೆ ರ್ಚಚಿಸಲಾಯಿತು. ಇನ್ನಷ್ಟು ಮಾಹಿತಿ, ಹೆಚ್ಚಿನ ತಾಂತ್ರಿಕ ವಿವರಗಳು ಅಗತ್ಯವಿರುವುದರಿಂದ ಇದನ್ನು ಮುಂದಿನ ವಾರಕ್ಕೆ ಮುಂದೂಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.
ವೇತನ ಆಯೋಗದ ಶಿಫಾರಸು ಜಾರಿ ಮುಂದಕ್ಕೆ:ಸರ್ಕಾರಿ ನೌಕರರು ಹಾಗೂ ನಿವೃತ್ತ ನೌಕರರು ಚಾತಕ ಪಕ್ಷಿಯಂತೆ ಕಾಯುತ್ತಿರುವ ಏಳನೇ ವೇತನ ಆಯೋಗದ ಜಾರಿ ಮುಂದಕ್ಕೆ ಹೋಗಿದೆ. ಗುರುವಾರ ನಡೆಯುವ ಸಂಪುಟ ಸಭೆಯಲ್ಲಿ ವೇತನ ಆಯೋಗದ ಶಿಫಾರಸು ಅಂಗೀಕರಿಸುವ ನಿರ್ಣಯ ಮಾಡಬೇಕಾಗಿತ್ತು, ಫಿಟ್​ವೆುಂಟ್, ಜಾರಿಯ ದಿನಾಂಕದ ಬಗ್ಗೆ ಒಂದು ತೀರ್ಮಾನ ಆಗಬೇಕಾಗಿತ್ತು. ಮಾಹಿತಿಗಳ ಪ್ರಕಾರ ಸಭೆಯಲ್ಲಿ ಚರ್ಚೆಯಾದರೂ ತೀರ್ಮಾನ ಕೈಗೊಳ್ಳಲಿಲ್ಲ.
ಜುಲೈನಲ್ಲಿ ಅಧಿವೇಶನ:ಮಳೆಗಾಲದ ಅಧಿವೇಶನ ನಡೆಸಲು ಸರ್ಕಾರ ಸಜ್ಜಾಗಿದ್ದು, ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಯಿತಾದರೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಮುಂದಿನ ಸಂಪುಟ ಸಭೆಯಲ್ಲಿ ದಿನಾಂಕವನ್ನು ಪ್ರಸ್ತಾಪಿಸುವ ಸಾಧ್ಯತೆ ಇದೆ. ಮಾಹಿತಿಗಳ ಪ್ರಕಾರ ಜುಲೈ 8 ಅಥವಾ 15ರಿಂದ 10 ದಿನ ಕಲಾಪ ನಡೆಸಲು ಉದ್ದೇಶಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − three =
Remember me
