|ಚಿಂತಾಮಣಿ ಕೊಡ್ಲೆಕೆರೆ
ಬಿ.ಆರ್.ಲಕ್ಷ್ಮಣರಾವ್ ಕಾವ್ಯಜೀವನದಲ್ಲಿ ಇದುವರೆಗೆ ಅನುವಾದಿಸಿರುವ ಎಲ್ಲ (ಬಹುಪಾಲು) ಕವಿತೆಗಳನ್ನು ಇಲ್ಲಿ ಸಂಕಲಿಸಿದ್ದಾರೆ. ಕಾವ್ಯವನ್ನು ಒಂದು ಕಲಾಮಾಧ್ಯಮವನ್ನಾಗಿ ಕಾಣುವ ಇಂಥ ಕವಿ ಗೈದ ಅನುವಾದ ಅಂದಿದ್ದೇ ಸಹಜವಾಗಿ ನಿರೀಕ್ಷೆ ಹೆಚ್ಚಾಗುತ್ತದೆ. ಒಂದು ಬಗೆಯಲ್ಲಿ ಇವು ಅವರ ಕಾವ್ಯ ಕಮ್ಮಟದೊಳಗೆ ಹೊಕ್ಕು ರೂಪ ತಳೆದ ಕವಿತೆಗಳು, ಅವರೇ ಬರೆಯಲೂಬಹುದಾಗಿದ್ದವು ಅನಿಸುವಂಥವು. ಸಾಧ್ಯವಾದಮಟ್ಟಿಗೂ ಮೂಲ ಕವನಗಳ ಲಯಗಾರಿಕೆ ಮತ್ತು ರಚನಾವಿನ್ಯಾಸ ಉಳಿಸಿಕೊಳ್ಳಲು ಯತ್ನಿಸಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಅದು ನಿಜ. ಅದೇ ಹೊತ್ತಿಗೆ ಈ ಕವಿತೆಗಳು ಅವರ ಸ್ವಂತ ಕವಿತೆಗಳ ಆಟ, ಓಟಗಳನ್ನು ನೆನಪಿಸುವಂತೆಯೂ ಇವೆ. ಆಯ್ಕೆಯ ಹಿಂದೆ ಯಾವುದೇ ನಿಶ್ಚಿತ ಸೂತ್ರ, ಸಿದ್ಧಾಂತಗಳಿಲ್ಲ ಎಂದಿರುವುದೂ ನಮ್ಮ ಕನ್ನಡ ಕವಿಯ (ಬಿಆರೆಲ್) ಸ್ವಭಾವದತ್ತಲೇ ಕೈ ತೋರಿಸುವಂತಿದೆ. ಹಾಗಿದ್ದೂ ಈ ಎಲ್ಲ ಭಿನ್ನ ಭಾಷೆ, ಪ್ರದೇಶ ಮತ್ತು ಕಾಲಗಳ ಕವಿತೆಗಳಲ್ಲಿ ಒಂದು ಸಾಮಾನ್ಯ ಸೂತ್ರವನ್ನು ಹುಡುಕಿದ್ದೇನೆ: ತಮ್ಮ ಮೂಲಸ್ವರೂಪದಲ್ಲಿ, ಭಾಷೆಯಲ್ಲಿ ಇವು ಮನಮುಟ್ಟುವ ಸಾರ್ಥಕ ಕವಿತೆಗಳು. ಹಾಗಲ್ಲದೆ ಈ ಕವಿ ಆ ಪದ್ಯಗಳ ಸಹವಾಸ ಬಯಸಲಾರರು. ಅದನ್ನು ಕೆಲವು ಪದ್ಯಗಳ ಓದಿನಿಂದ ಕಾಣಿಸಬಹುದು ಅಂದುಕೊಂಡಿದ್ದೇನೆ.
ಜಾಯ್ಸ್ ಕಿಲ್ಮರ್ ಎಂಬ ಕವಿಯ ‘ಮರ’ ಕವಿತೆ ಕಣ್ಣೆದುರು ಕಾಣುವ ಮರವನ್ನೇ ನೋಡುತ್ತಿದೆ. ‘ಮರ ಕವಿತೆಗಿಂತಲೂ ಸುಂದರ’ ಅನಿಸುತ್ತದೆ ಕವಿಗೆ. ಅದು ನೆಲತಾಯಿಯ ತುಂಬುಮೊಲೆಯ ಮೇಲೆ ತನ್ನ ಹಸಿದ ಬಾಯಿ ಒತ್ತಿರುವಂತೆ, ತನ್ನ ಹಸಿರು ಕೈಗಳಿಂದ (ಆಹಾ!) ದೇವರಿಗೆ ಕೈ ಮುಗಿದಿರುವಂತೆ, ಹಕ್ಕಿಗಳನ್ನು ಜಡೆಬಿಲ್ಲೆ ಮಾಡಿ ಮುಡಿದಂತೆ ಕಾಣುತ್ತದೆ.
ನನ್ನಂಥ ಕತ್ತೆ
ಬೇಕಾದರೂ ಕವಿತೆ ಕಟ್ಟುತ್ತೆ;
ಇಂಥ ಮರ ಮಾಡಲು ಆ ದೇವರಿಗಲ್ಲದೆ ಮತ್ತೆ
ಯಾರಿಗಾಗುತ್ತೆ?
ಹಠಾತ್ತನೆ ಎಂಥ ತಿರುವು! ಎಂಥ ಅರಿವು! ಕವಿಯಾಗಿ ತಾನು ಎಂದಿಗೂ ಒಂದು ಮರ ಸೃಷ್ಟಿಸಲು ಸಾಧ್ಯವಿಲ್ಲ, ಅವನ ಆ ಸೃಷ್ಟಿಯ ಮುಂದೆ ನನ್ನ ಕೆಲಸ ಏನು ಮಹಾ ದೊಡ್ಡದು?- ಕತ್ತೆಯೂ ಮಾಡಬಹುದು! ಸೃಷ್ಟಿಯ ಚೆಲುವಿನ ಮುಂದೆ ಹೀಗೆ ವಿಸ್ಮಯಗೊಂಡು ನಿಂತಿರುವವರಲ್ಲಿ ಕಿಲ್ಮರ್ ಜೊತೆ ಲಕ್ಷ್ಮಣರಾವ್ ಕೂಡ ಇದ್ದಾರೆ. ಈ ಕವಿಯೇ ಸ್ವತಂತ್ರವಾಗಿ ಬರೆದಾಗ ಕೆಲವು ಉದ್ಗಾರಗಳು ಬೇರೆ ಬರಬಹುದು, ಅಷ್ಟೇ.
ಭಾರತೀಯ ಭಾಷೆಗಳಲ್ಲಿ ತೆಲುಗು, ಮಲೆಯಾಳಂ ಮತ್ತು ಬಂಗಾಳಿ ಭಾಷೆಗಳ ಒಟ್ಟು ಹನ್ನೆರಡು ಪದ್ಯಗಳು ಇಲ್ಲಿವೆ. ಶ್ರೀ ಶ್ರೀ, ತಿಲಕ್, ದಂಡು ಎರನ್ನ, ದಾಶರಥಿ ಈ ನಾಲ್ಕು ತೆಲುಗು ಕವಿಗಳ ಒಂದೊಂದು ಪದ್ಯ ಇದೆ. ‘ಕೊಂಚ ಪುಣ್ಯ, ಕಿಂಚಿತ್ ಪಾಪ, ಒಂದಿಷ್ಟು ಕಣ್ಣೀರು, ಮತ್ತೊಂದಿಷ್ಟು ಸಂತೋಷದ ಪನ್ನೀರು, ಇಷ್ಟು ಸಾಕು ತಂದೆ’ ಎಂಬುದು ತಿಲಕ್ ಕವಿತೆಯ ಯಾಚನೆಯಾಗಿದ್ದರೆ, ‘ಕಾವ್ಯ ಒಂದು ತೀರದ ದಾಹ’ ಎಂಬ ಶ್ರೀ ಶ್ರೀ ಪದ್ಯದ ಸಾಲು ಪದ್ಯದಾಚೆಗೂ ಬಹು ಕಾಲ ಕಾಡುವಂತಿದೆ. ದಂಡು ಅವರ ‘ಸೋಷಲಿಸಂ ಬರ್ತಾ ಇದೆ’ ಪದ್ಯದ ಅಣಕ, ಸಂಜೆ ಬಾನ ಕೊಂಬೆಯಲ್ಲಿ ಕಂಡ ನೇಸರನನ್ನು ದಾಳಿಂಬೆ ಹಣ್ಣಿಗೆ ಹೋಲಿಸುವ ರುಬಾಯತ್​ದ ಚೆಲುವಿನ ಕಣ್ಣೋಟ ಸೆಳೆಯುವಂತಿವೆ. ಇಲ್ಲಿರುವ ಐವರು ಬಂಗಾಳಿ ಕವಿಗಳೂ ತಮ್ಮ ಭಿನ್ನ ಮಾತುಗಾರಿಕೆಗಳಿಂದ ಮನಸಿಗೆ ಆಘಾತ ಒಡ್ಡಬಲ್ಲವರು. ಆ ಪದ್ಯಗಳಲ್ಲಿ ಒಂದು ‘ನಮ್ಮ ಬಗ್ಗೆ’ (ಭಾಸ್ಕರ ಚಕ್ರವರ್ತಿ) ಎಂಬ ಹನ್ನೆರಡು ಸಾಲುಗಳ ಪುಟ್ಟ ಪದ್ಯ. ‘ಸ್ವಪ್ನ ದುಃಸ್ವಪ್ನಗಳ ಇಕ್ಕಟ್ಟು ಬೀದಿಯಲಿ ನಮ್ಮ ಚಲನೆ’. ನಮ್ಮ ‘ಚಿಲ್ಲರೆ ಚಮತ್ಕಾರ’ ಅಲ್ಲಲ್ಲಿ ಪ್ರದರ್ಶಿಸಿ ಗತಿಸಿಹೋಗುತ್ತೇವೆ,
ಅನಂತರವೂ ಉಳಿಯುತ್ತವೆ;
ಮಳೆಯ ಭಾಷೆ
ತಂತಿಬೇಲಿ
ಮುದ್ರಿತ ಧರಿತ್ರಿ
ಇದು ‘ನಮ್ಮ ಬಗೆಗೆ’ ಯೋಚಿಸುತ್ತಿದೆಯೋ, ಶಾಶ್ವತದ ಬಗೆಗೋ? ಶಾಶ್ವತದ ಬಗೆಗಾದರೆ ಅಲ್ಲಿ ತಂತಿಬೇಲಿಗೇನು ಕೆಲಸ? ಹಲವು ಬಗೆಯಲ್ಲಿ ನಮ್ಮನ್ನು ಆವರಿಸುವ ಈ ಪದ್ಯ ಬಂಗಾಳಿ ಭಾಷೆಯಲ್ಲಿ ಹೇಗೆ ಕೇಳುವುದೋ! (ಮಳೆಯ ಭಾಷೆಯಂತೆ?!). ಈ ಕವಿತೆಯೊಡನೆ ಇಲ್ಲಿರುವ ‘ಅಪೂರ್ಣತೆಯ ಸೌಂದರ್ಯ’ಎಂಬ ಮಲೆಯಾಳಂ ಕವಿತೆಯನ್ನು ಮಾತಾಡಲು ಬಿಡಬೇಕು. ‘ಶಿಲ್ಪದ ಗುಟ್ಟು ಅಪೂರ್ಣತೆಯಲ್ಲಿ’ ಎನ್ನುತ್ತದೆ, ನಾರಾಯಣ ಕುರುಪ್ ಬರೆದ ಈ ಪದ್ಯ. ಇದು ಚೆಂಗನ್ನೂರಿನ ದೇವಾಲಯದ ಕುರಿತ ಒಂದು ನಂಬಿಕೆಯನ್ನು ಆಧರಿಸಿದೆ. ಅಲ್ಲಿ ಉಳಿ ಸದ್ದು ಅಡಗಿದಾಗ ಪ್ರಳಯವೆಂಬ ಭಾವನೆಯಿದೆ (ಶಿವ ಮೂರನೆಯ ಕಣ್ಣು ತೆರೆಯುತ್ತಾನೆ). ಅಂದರೆ ಪ್ರಪಂಚ ಅಪೂರ್ಣ ಮತ್ತು ಅದು ಅಪೂರ್ಣವೆಂದು ದುಡಿಯುತ್ತಲೇ ಇರಬೇಕು! ಪೂರ್ಣತೆಯನ್ನು ನಾಶ ಹಿಂಬಾಲಿಸುವುದು! ಬೇರೆ ಭಾಷೆಗಳ ಈ ಎರಡು ಪದ್ಯಗಳು ಹೆಚ್ಚು ಕಡಿಮೆ ಒಂದೇ ಕಾಲದಲ್ಲಿ (1993 ಮತ್ತು 1996) ಬರೆದವು ಎಂಬುದು ಕುತೂಹಲದ ಸಂಗತಿ ಮತ್ತು ಇಂಥ ಅನುವಾದಗಳಿಲ್ಲದೆ ಅವು ಸಂಭಾಷಣೆ ನಡೆಸಲಾರವು.
ಎಮಿಲಿ ಡಿಕಿನ್ಸನ್ 1863 ರಷ್ಟು ಹಿಂದೆ ಬರೆದ ಸುಪ್ರಸಿದ್ಧ ಪದ್ಯದ (Because I could not stop for Death) ಕುರಿತು ಮತ್ತು ಅದರ ಅನುವಾದದ (ಸಾರೋಟು) ಕುರಿತು ಕೆಲವು ಮಾತುಗಳನ್ನು ಹೇಳಬಯಸುವೆ. ಇಲ್ಲಿ ಮೃತ್ಯು ಕರುಣಾಳುವಾಗಿ ಕವಯಿತ್ರಿಯನ್ನು (ಹಾಗಂದುಕೊಳ್ಳೋಣ) ಸಾರೋಟಿನಲ್ಲಿ ಹತ್ತಿಸಿಕೊಳ್ಳುತ್ತಾನೆ. ಆ ವಾಹನದಲ್ಲಿ ‘ಅಮರತ್ವ’ವೂ ಇದೆ. ಇದು ಮೃತ್ಯು ಮತ್ತು ಅಮರತೆ ಈ ಎರಡರ ಜೊತೆಗೂ ನಡೆಯುತ್ತಿರುವ ಪಯಣವಾದರೂ ಸಾರೋಟು ಮೃತ್ಯುವಿನದೇ. ಊರಶಾಲೆ, ಮಕ್ಕಳ ಆಟ, ತೆನೆ ತೂಗುವ ಹೊಲ, ಮುಳುಗುವ ಸೂರ್ಯ (ಬಾಲ್ಯದಿಂದ ಸಾವಿನವರೆಗಿನ ಚಿತ್ರಗಳು. ಮುಪ್ಪಿಗೆ ಅಥವಾ ಕಣ್ಮರೆಗೆ ಸೂರ್ಯ ಸಂಕೇತವಾಗಿ ಕಂಡರೂ ಮತ್ತೆ ಕಾಣಿಸಿಕೊಳ್ಳುವ ಸೂಚನೆಯೂ ಆ ಪ್ರಯೋಗದೊಳಗಿದೆ), ಸೂರ್ಯಾಸ್ತದ ನಂತರ ಚಳಿ, ಇಬ್ಬನಿ, ಮುಂದೆ ಕಂಡ ಸಮಾಧಿಯಂಥ ಒಂದು ನೆಲಮಟ್ಟದ ಸೂರು… ಇದು ನಮ್ಮ ನಿಶ್ಚಿತ ಸಾವಿನತ್ತಲೇ ಕೈ ತೋರುತ್ತಿರಬಹುದು ಅನಿಸತೊಡಗುವಾಗ ‘ಇವೆಲ್ಲ ಆಗಿ ಶತಮಾನಗಳೇ ಕಳೆದಿವೆ’ ಎನ್ನುತ್ತದೆ ಕವಿತೆ. ಹಾಗಾದರೆ ಶತಮಾನಗಳ ಹಿಂದಿನ ಈ ಮರ್ತಯ ಘಟನೆಯನ್ನು ಹೇಳುತ್ತಿರುವವರು ಯಾರು?’ ‘ನಮ್ಮ ನಡೆ ಅನಂತದೆಡೆಗೆ ಇದ್ದೀತು ಎಂದುಕೊಂಡಿದ್ದೆ’ ಅಂದರೆ ಹಾಗಾಗಲಿಲ್ಲ ಎಂದಾಯಿತು. ಈ ಕುದುರೆ, ಈ ಸಾರೋಟು ಅನಂತಕ್ಕೆ ಒಯ್ಯುವವಲ್ಲ ಎಂದೂ ಆಯಿತು. ಆದರೆ ಇದೇ ಸಾರೋಟಿನಲ್ಲಿ ಅಮರತ್ವ ಇದೆ ಮತ್ತು ಇಡೀ ಪ್ರಯಾಣದಲ್ಲಿ ಮೌನವಾಗಿದೆ. ನಮ್ಮ ಇಡೀ ಬದುಕನ್ನೇ ಈ ಪದ್ಯ ಅಭಿನಯಿಸಿ ತೋರುತ್ತಿದೆ, ಅಲ್ಲವೇ? ಸಾವು ಕರುಣಾಳು, ಅವಸರದಲ್ಲೂ ಇಲ್ಲ, ಆದರೆ ಅವನು ನಮ್ಮನ್ನು ನಡೆಸುತ್ತಿರುವುದು ‘ಅಂತ್ಯ’ದ ಕಡೆಗೆ. ಕವಿಯ ಮನಸು ‘ಅನಂತ’ದ ಕಡೆಗಿದೆ. ಅತ್ತ ಒಯ್ಯಬಹುದಾದ ‘ಅಮರತೆ’ ಸದ್ದಿಲ್ಲದೇ ಕವಿಯ ಜೊತೆ ಬರುತ್ತಿದೆ. ಅದರ ಅತಿವಿಶಾಲ ಪಯಣದಲ್ಲಿ ಮೃತ್ಯುವಿನದು ನಿರ್ಧರಿತ ಚಲನೆಗಳ ಲಘು ಪಯಣಗಳಿರಬಹುದು. ‘ಸೂರ್ಯನೇ ನಮ್ಮನ್ನು ದಾಟಿ ಹೋದ’ ಎಂಬರ್ಥದ ಸಾಲುಗಳು ಕವಿತೆಯಲ್ಲಿವೆ. ಕವಿಯ ಜೀವನ ಮುಗಿದಾಗಲೂ ಜಗತ್ತು ಇನ್ನೂ ಚಲಿಸುತ್ತಲೇ ಇರುತ್ತದೆ. ಎಮಿಲಿ ಪದ್ಯ ಪರಿಚಿತ ಪದ, ದೃಶ್ಯಗಳನ್ನು ಬಳಸಿಕೊಳ್ಳುತ್ತಲೇ ನಿಗೂಢತೆಯನ್ನು ಎದುರುಗೊಳ್ಳುವ ಬಗೆ ಕಾವ್ಯಾಸಕ್ತರನ್ನು ಅಂದಿನಿಂದ ಇಂದಿಗೂ ಕಾಡುತ್ತಲೇ ಇದೆ. ಇಂಥದೊಂದು ಪದ್ಯವನ್ನು ಎದುರುಗೊಳ್ಳುವುದರ ಮೂಲಕ ಲಕ್ಷ್ಮಣರಾವ್ ಅವರ ಕಾವ್ಯಶಕ್ತಿಯಾದರೂ ಎಂಥ ಸೆಣಸಾಟಕ್ಕೂ ತಾನು ಸಿದ್ಧ ಎಂದು ಸಾರುವಂತಿದೆ.
(ಲೇಖಕರು ಹಿರಿಯ ವಿಮರ್ಶಕರು, ಸಾಹಿತಿ)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 3 =
Remember me
