|ರಮೇಶ ದೊಡ್ಡಪುರಬೆಂಗಳೂರು
ಹೋರಾಟದ ಫಲವಾಗಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕು ಒಂದೂವರೆ ದಶಕ ಸಮೀಪಿಸುತ್ತಿದ್ದರೂ ಉನ್ನತ ಅಧ್ಯಯನ ಸಂಸ್ಥೆ ಸ್ಥಾಪನೆ, ಸ್ವಾಯತ್ತತೆ, ಅನುದಾನ ತರುವಲ್ಲಿ ಕನ್ನಡಕ್ಕೆ ಹಿನ್ನಡೆ ಉಂಟಾಗಿದೆ. ರಾಜ್ಯದಲ್ಲಿ ಆಳ್ವಿಕೆ ನಡೆಸಿದ ಸರ್ಕಾರಗಳು, ಸಂಸದರ ಒಗ್ಗಟ್ಟಿನ ಪ್ರಯತ್ನದ ಕೊರತೆ ಹಾಗೂ ನಿರಾಸಕ್ತಿ ಇದಕ್ಕೆ ಮೂಲ ಕಾರಣ. ತಮಿಳುನಾಡಿನ ಎಲ್ಲ ಪಕ್ಷಗಳ ಒಗ್ಗಟ್ಟಿನ ಫಲವಾಗಿ ಅಲ್ಲಿಗೆ ದೊರಕಿರುವ ಕೇಂದ್ರದ ಸಹಾಯವು ಇದೀಗ ರಾಜಕೀಯ ಚರ್ಚೆ, ಕೇಂದ್ರ-ರಾಜ್ಯ ಸಂಘರ್ಷದತ್ತ ತಿರುಗಲು ಕರ್ನಾಟಕದ ಜನಪ್ರತಿನಿಧಿಗಳೇ ಕಾರಣರಾಗಿದ್ದಾರೆ ಎಂಬುದು ಸ್ಪಷ್ಟವಾದಂತಾಗಿದೆ.
ತಮಿಳು ಕೇಂದ್ರದ ಸ್ವಾಯತ್ತೆ:2004ರ ಅ.12ರಂದು ತಮಿಳಿಗೆ ಶಾಸ್ತ್ರೀಯ ಸ್ಥಾನಮಾನವನ್ನು ಕೇಂದ್ರ ಸರ್ಕಾರ ನೀಡಿತು. 2006ರಿಂದ 2008ರವರೆಗೆ ಮೈಸೂರಿನಲ್ಲಿರುವ ಭಾರತೀಯ ಭಾಷಾ ಸಂಸ್ಥಾನದಲ್ಲೆ(ಸಿಐಐಎಲ್) ಶಾಸ್ತ್ರೀಯ ತಮಿಳು ಅತ್ಯುನ್ನತ ಅಧ್ಯಯನ ಕೇಂದ್ರವಾಗಿತ್ತು. 2008ರರಲ್ಲಿ ಕೇಂದ್ರೀಯ ಶಾಸ್ತ್ರೀಯ ತಮಿಳು ಸಂಸ್ಥೆ(ಸಿಐಸಿಟಿ) ಸ್ಥಾಪಿಸಿ ಚೆನ್ನೈಗೆ ವರ್ಗಾವಣೆಯಾಯಿತು. ತಮಿಳುನಾಡು ಸೊಸೈಟಿ ಕಾಯ್ದೆಯಡಿಯಲ್ಲಿ 2009ರಲ್ಲಿ ನೋಂದಣಿಯಾಗಿ ಆಡಳಿತ ಮಂಡಳಿಗೆ ತಮಿಳುನಾಡು ಸಿಎಂರನ್ನು ಅಧ್ಯಕ್ಷರನ್ನಾಗಿಸಲಾಯಿತು. ನಂತರ ಸ್ವಾಯತ್ತತೆ ಪಡೆದು, ನೇರವಾಗಿ ಕೇಂದ್ರ ಶಿಕ್ಷಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಬಾಡಿಗೆ ಕಟ್ಟಡವೊಂದರಲ್ಲಿದ್ದ ಸಂಸ್ಥೆಗೆ ಇದೀಗ ಕೇಂದ್ರ ಸರ್ಕಾರವೇ 24 ಕೋಟಿ ರೂ. ಭರಿಸಿ ಮೂರು ಅಂತಸ್ತಿನ ಸುಸಜ್ಜಿತ ಕಟ್ಟಡವನ್ನು ನಿರ್ವಿುಸಿಕೊಟ್ಟಿದೆ.
ಈಗಾಗಲೆ ಮೈಸೂರು ವಿವಿ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಕಡತವನ್ನು ಕೇಂದ್ರ ಸರ್ಕಾರಕ್ಕೆ ಕಳಿಸಲಾಗಿದೆ ಎಂದು ಸಿಐಐಎಲ್ ತಿಳಿಸಿದೆ. ಇದಕ್ಕೆ ಬೇಗನೆ ಒಪ್ಪಿಗೆ ದೊರೆತರೆ ಕನ್ನಡಕ್ಕೂ ಹೆಚ್ಚು ಅನುದಾನವನ್ನು ತಂದು ಮತ್ತಷ್ಟು ಗುಣಾತ್ಮಕ ಸಂಶೋಧನೆಗಳನ್ನು ಕೈಗೊಳ್ಳಬಹುದಾಗಿದೆ.
|ಪ್ರೊ. ಶಿವರಾಮ ಶೆಟ್ಟಿಸಿಇಎಸ್​ಸಿಕೆ ಯೋಜನಾ ನಿರ್ದೇಶಕ
ಯಾವುದೇ ಕೇಂದ್ರ ಸರ್ಕಾರವಾಗಲಿ ಉದ್ದೇಶಪೂರ್ವಕವಾಗಿ ಕನ್ನಡವನ್ನು ಕಡೆಗಣಿಸಿದೆ ಎಂದು ನಾನು ಹೇಳುವುದಿಲ್ಲ. ಅವರಿಗಾಗಲಿ, ರಾಜ್ಯ ಸರ್ಕಾರಕ್ಕಾಗಲಿ ಕನ್ನಡ ಎನ್ನುವುದು ಆದ್ಯತೆಯ ವಿಷಯವಾಗಿಲ್ಲ. ನಮ್ಮ ಶಾಸಕರು, ಮುಖ್ಯಮಂತ್ರಿಗಳು, ಸಂಸದರು ಈ ಆದ್ಯತೆಯನ್ನು ಮನದಟ್ಟು ಮಾಡಿಕೊಟ್ಟರೆ ಕೆಲಸ ಆಗುತ್ತದೆ. ನಮ್ಮ ಸಂಪೂರ್ಣ ಸಹಕಾರ ಇದಕ್ಕೆ ಇರಲಿದೆ.
|ಮುಖ್ಯಮಂತ್ರಿ ಚಂದ್ರುಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ
ಕನ್ನಡ ಹಾಗೂ ತೆಲುಗಿಗೆ ಶಾಸ್ತ್ರೀಯ ಸ್ಥಾನಮಾನ ನೀಡಿದ್ದನ್ನು ಪ್ರಶ್ನಿಸಿ ತಮಿಳುನಾಡಿನ ವಕೀಲ ಆರ್. ಗಾಂಧಿ 2008ರಲ್ಲೆ ಮದ್ರಾಸ್ ಹೈಕೋರ್ಟ್​ನಲ್ಲಿ ಪ್ರಕರಣ ದಾಖಲಿಸಿದರು. ಕೇಂದ್ರ ಸರ್ಕಾರ ಮತ್ತಿತರರನ್ನು ಪ್ರತಿವಾದಿಯನ್ನಾಗಿಸಿದ್ದರು. ಬೆಂಗಳೂರಿನ ಐವರು ಸ್ವಯಂಪ್ರೇರಿತರಾಗಿ ಪ್ರತಿವಾದಿಯಾಗಿದ್ದರು. ಆಂಧ್ರಪ್ರದೇಶ ಸರ್ಕಾರ ನೇರವಾಗಿ ಪ್ರತಿವಾದಿಯಾಯಿತು. ಆದರೆ ಕರ್ನಾಟಕ ಸರ್ಕಾರ ಮಾತ್ರ ಇದರಲ್ಲಿ ತಲೆ ಹಾಕಿರಲಿಲ್ಲ. 2014ರಲ್ಲಿ ತನ್ನನ್ನೂ ಪ್ರತಿವಾದಿಯಾಗಿಸಿಕೊಳ್ಳಲು ಅರ್ಜಿ ಸಲ್ಲಿಸಿತು. 2016ರಲ್ಲಿ ನ್ಯಾಯಾಲಯ ತೀರ್ಪು ಕನ್ನಡ ಮತ್ತು ತೆಲುಗು ಪರವಾಗಿ ಬಂದಿತಾದರೂ ಇದರಲ್ಲಿ ಕರ್ನಾಟಕ ಸರ್ಕಾರದ ಪಾತ್ರ ಇದ್ದದ್ದು ಅತ್ಯಲ್ಪ.
ಸಮಿತಿ ರಚನೆಯಲ್ಲೆ ಎಡವಟ್ಟು:ಶಾಸ್ತ್ರೀಯ ಕೇಂದ್ರಕ್ಕೆ ಸಮಿತಿ ರಚಿಸುವ ಕುರಿತು ಗೊಂದಲಗಳು ಉಂಟಾದವು. ಮೊದಲಿಗೆ ಬೆಂಗಳೂರು ವಿವಿಯ ಕೆಲವು ಸಿಬ್ಬಂದಿಯನ್ನೇ ನೇಮಿಸಿ ಸಮಿತಿ ರಚಿಸಬೇಕೆಂದು ನಿರ್ಧರಿಸಿತು. ಇದು ಸರಿಯಾದ ಸ್ವರೂಪದಲ್ಲಿಲ್ಲ ಎಂಬ ಕಾರಣಕ್ಕೆ, ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಗೆ ಮುಂದಾಯಿತು. ಈ ಸಮಿತಿಯಲ್ಲಿ ಕೇಂದ್ರ ಸರ್ಕಾರದ ಪ್ರತಿನಿಧಿತ್ವ ಇಲ್ಲವಾದ್ದರಿಂದ ಮಾನ್ಯವಾಗದು ಎಂದು ಕೆಲವರು ಹೇಳಿದ ಕಾರಣಕ್ಕೆ, ಕೇಂದ್ರ ಮಾನವ ಸಂಪನ್ಮೂಲ ಸಚಿವರು ಅಧ್ಯಕ್ಷರಾಗಿರುವ, ಕರ್ನಾಟಕ ಮುಖ್ಯಮಂತ್ರಿ ಉಪಾಧ್ಯಕ್ಷರಾಗಿರುವಂತೆ ಕನ್ನಡ ಶಾಸ್ತ್ರೀಯ ಉನ್ನತ ಅಧ್ಯಯನ ಮಂಡಳಿಗಳನ್ನು ರಚನೆ ಮಾಡಲು 2014ರಲ್ಲಿ ತೀರ್ವನಿಸಿತು. ಈ ನಿರ್ಧಾರವೂ ಜಾರಿಯಾಗಲಿಲ್ಲ.
ನಿರ್ದೇಶಕರ ನೇಮಕದಲ್ಲಿ ಆಲಸ್ಯ:ಕೇಂದ್ರ ಸ್ಥಾಪನೆಯಾಗಿ ಅನೇಕ ವರ್ಷ ಯೋಜನಾ ನಿರ್ದೇಶಕರನ್ನೇ ನೇಮಕ ಮಾಡಿರಲಿಲ್ಲ. ಈ ಕುರಿತು ಸಿಐಐಎಲ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವ, ಒತ್ತಡ ಹೇರುವ ಗೋಜಿಗೆ ರಾಜ್ಯದ ಜನಪ್ರತಿನಿಧಿಗಳು ಹೋಗಲೇ ಇಲ್ಲ. ಮೊದಲ ಯೋಜನಾ ನಿರ್ದೇಶಕರು ನೇಮಕವಾಗಿದ್ದು 2016ರಲ್ಲಿ.
ಪುಡಿಗಾಸು ಅನುದಾನ:ಕನ್ನಡಕ್ಕೆ ಸ್ವಾಯತ್ತ ಸ್ಥಾನ ಸಿಕ್ಕಿಲ್ಲವಾದ್ಧರಿಂದ ತೆಲುಗು, ಮಲೆಯಾಳಂ ಹಾಗೂ ಒಡಿಯಾ ಜತೆಗೆ ಅನುದಾನವನ್ನು ಹಂಚಿಕೊಳ್ಳಬೇಕಿದೆ. ಇದೇ ಕಾರಣಕ್ಕೆ ಕನ್ನಡ ಹಾಗೂ ತಮಿಳಿಗೆ ಸಿಗುವ ಅನುದಾನದಲ್ಲಿ ಅಗಾಧ ಅಂತರವಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − ten =
Remember me
