ಬೆಂಗಳೂರು:ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ಬೀಟ್ ವ್ಯವಸ್ಥೆಯನ್ನು ಜಾರಿಗೆ ತಂದಿರುವ ಸರ್ಕಾರ, ಮುಂದಿನ ಭಾಗವಾಗಿ ಸರ್ಕಾರಿ ದಾರಿಗಳ ಒತ್ತುವರಿ ತೆರವು ಮಾಡಿಸುವ ಕಡೆ ಕಾರ್ಯೋನ್ಮುಖವಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ರಾಜ್ಯಾದ್ಯಂತ ಸರ್ಕಾರಿ ದಾರಿಗಳ ಒತ್ತುವರಿಯ ಬಗ್ಗೆ ಹೆಚ್ಚು ದೂರುಗಳು ಬರುತ್ತಿವೆ. ಮದ್ದೂರು ತಾಲೂಕೊಂದರಲ್ಲಿಯೇ 750 ಅರ್ಜಿಗಳು ಬಂದಿವೆ ಎಂದು ಮಂಗಳವಾರ ಸುದ್ದಿಗಾರರಿಗೆ ವಿವರಿಸಿದರು.
ನಕಾಶೆಯಲ್ಲಿರುವ ದಾರಿಗಳು ಒತ್ತುವರಿ ಆಗಿದ್ದರೆ ಅದನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಅಧಿಕಾರಿಗಳು ಸಹ ಇಂತಹ ರಸ್ತೆಗಳ ತೆರವಿಗೆ ಯಾವುದೇ ನೆಪ ಹೇಳುವಂತಿಲ್ಲ ಎಂದು ಸ್ಪಷ್ಟಪಡಿಸಿದರು. ಸರ್ಕಾರಿ ದಾರಿಯಲ್ಲದೇ ರೂಢಿಗತ ರಸ್ತೆ ಇದ್ದರೂ ಸಹ ಕೃಷಿ ಚಟುವಟಿಕೆಗಳಿಗೆ ಹೋಗಿ ಬರುವವರಿಗೆ ಯಾವುದೇ ಅಡ್ಡಿ ಮಾಡುವಂತಿಲ್ಲ. ಒಂದು ವೇಳೆ ಅಡ್ಡಿ ಮಾಡಿದರೆ ಅಂಥವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲು ಆದೇಶ ಹೊರಡಿಸಲಾಗಿದೆ ಎಂದರು.
ಮದ್ದೂರು ತಾಲೂಕಿನ ರೀತಿಯಲ್ಲಿಯೇ ಪ್ರತಿ ತಾಲೂಕಿನಲ್ಲಿಯೂ ನೂರಾರು ಅರ್ಜಿಗಳು ಸರ್ಕಾರಿ ದಾರಿಗಳ ತೆರವಿಗೆ ಸಂಬಂಧಿಸಿದಂತೆ ಬಂದಿವೆ. ಒಟ್ಟಾರೆ ರಾಜ್ಯಾದ್ಯಂತ ಎಷ್ಟು ಕಡೆ ಒತ್ತುವರಿಯಾಗಿದೆ ಎಂಬ ನಿಖರ ಅಂಕಿ-ಅಂಶವಿಲ್ಲ. ಆದರೆ ಪ್ರತಿ ಹಳ್ಳಿಯಲ್ಲಿಯೂ ಇಂತಹ ಸಮಸ್ಯೆ ಇರುವುದು ಖಚಿತವಾಗಿದೆ ಎಂದು ಹೇಳಿದರು. ಸರ್ಕಾರಿ ಸರ್ವೆಯರ್ ಇಂತಹ ಜಾಗಗಳ ಸರ್ವೆ ಮಾಡಬೇಕು. ಒಂದು ತಿಂಗಳಿಗಿಂತ ಹೆಚ್ಚು ಕಾಲ ಅರ್ಜಿ ವಿಲೇವಾರಿ ಮಾಡದಿದ್ದರೆ, ಲೈಸನ್ಸ್ ಪಡೆದಿರುವ ಬೇರೆ ಸರ್ವೆಯರ್ ಮೂಲಕ ಮಾಡಿಸಬೇಕು. ಅರ್ಜಿ ತಾನಾಗಿಯೇ ವರ್ಗಾವಣೆಯಾಗಬೇಕಾಗುತ್ತದೆ ಎಂದರು.
ಬೀಟ್ ವ್ಯವಸ್ಥೆ ಜಾರಿ:ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ಬೀಟ್ ಆಪ್ ಅಭಿವೃದ್ದಿ ಮಾಡಲಾಗಿದೆ. ಸರ್ಕಾರಿ ಭೂಮಿಯ ಮಾಹಿತಿ ಅಪ್​ಡೇಟ್ ಮಾಡಲು ಡಿಸೆಂಬರ್ ತನಕ ಅವಕಾಶ ನೀಡಲಾಗಿತ್ತು. ಆದರೆ, ರೈತರಿಗೆ ಪರಿಹಾರ ಹಾಗೂ ಚುನಾವಣಾ ಕೆಲಸ ಬಂದಿದ್ದರಿಂದ ನಿಧಾನವಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿವರಿಸಿದರು. ಮಾರ್ಚ್​ನೊಳಗೆ ಸರ್ಕಾರಿ ಭೂಮಿಯ ವಿಸ್ತೀರ್ಣ ಹಾಗೂ ಗಡಿಯನ್ನು ಆಪ್ ಮೂಲಕ ಗುರುತಿಸಲಾಗುತ್ತದೆ. ಅದರ ಆಧಾರದಲ್ಲಿ ಮೊಬೈಲ್ ಆಪ್ ಮೂಲಕ ಜಮೀನಿನ ನಕ್ಷೆ ಸಹ ಸಿದ್ಧವಾಗುತ್ತದೆ. ಡಿಜಿಟಲ್ ಆಗಿ ರೆಕಾರ್ಡ್ ಮಾಡಲಾಗುತ್ತದೆ ಎಂದರು. ಒತ್ತುವರಿಯನ್ನು ಗುರುತಿಸಿ ಗ್ರಾಮ ಲೆಕ್ಕಾಧಿಕಾರಿಗಳು ತಹಸೀಲ್ದಾರರಿಗೆ ಬೀಟ್ ಆಪ್ ಮೂಲಕವೇ ಮಾಹಿತಿ ನೀಡಬೇಕು. ಅಧಿಕಾರಿಗಳು 15 ದಿನದಲ್ಲಿ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಪ್ರತಿ ಮೂರು ತಿಂಗಳಿಗೊಮ್ಮೆ ಗ್ರಾಮ ಲೆಕ್ಕಾಧಿಕಾರಿಗಳು ಸರ್ಕಾರಿ ಜಮೀನಿನ ಬಳಿ ಹೋಗಿ ಒತ್ತುವರಿ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಗಮನಿಸಿ ತಹಸೀಲ್ದಾರ್ ಅವರಿಗೆ ಮಾಹಿತಿ ರವಾನಿಸಬೇಕು ಎಂದರು.
ಯಾವುದು ತೆರವಿಲ್ಲ?:ಸರ್ಕಾರಿ ಭೂಮಿಯಲ್ಲಿ ಸಣ್ಣ ರೈತರು ಸಾಗುವಳಿ ಮಾಡುತ್ತ ಸಕ್ರಮಕ್ಕಾಗಿ ಫಾರಂ 57 ಅಥವಾ ಬೇರೆ ರೂಪದಲ್ಲಿ ಅರ್ಜಿ ಸಲ್ಲಿಸಿದ್ದರೆ ಅಂತಹ ಭೂಮಿಯನ್ನು ತೆರವು ಮಾಡಿಸುವುದಿಲ್ಲ. ಒತ್ತುವರಿ ಜಮೀನಿನಲ್ಲಿ ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದರೂ ತೆರವು ಸೂಕ್ತವಲ್ಲ ಎಂಬ ತೀರ್ವನಕ್ಕೆ ಸರ್ಕಾರ ಬಂದಿದೆ. ಯಾರೊಬ್ಬರೂ ಆತಂಕಪಡುವ ಅಗತ್ಯವಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದರು. ಬೇರೆ ರೀತಿಯಲ್ಲಿ ಒತ್ತುವರಿಗಳು ಆಗಿದ್ದಲ್ಲಿ ಅಂತಹ ಒತ್ತುವರಿಗಳನ್ನು ತಕ್ಷಣದಿಂದಲೇ ತೆರವು ಮಾಡಿಸಲು ತಹಸೀಲ್ದಾರರು ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
