ಮುಂದಿನ ಪೀಳಿಗೆಗೆ ಪ್ರಕೃತಿ ಸಂಪತ್ತನ್ನು ಉಳಿಸಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿರುವುದರಿಂದ ಅಗತ್ಯ ಸಂಪನ್ಮೂಲ ಕ್ರೋಡೀಕರಣದ ದೊಡ್ಡ ಸವಾಲು ರಾಜ್ಯ ಸರ್ಕಾರಕ್ಕೆ ಎದುರಾಗಿದೆ. ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಡೆಗಟ್ಟಲು ರೂಪಿಸಿರುವ ರಾಜ್ಯ ಕ್ರಿಯಾ ಯೋಜನೆ ಜಾರಿಗೆ ಅಗತ್ಯ ಅನುದಾನ ಹಾಗೂ ಲಭ್ಯ ಹಣಕಾಸಿನ ನಡುವೆ ದೊಡ್ಡ ಕಂದಕವೇ ಇದೆ. ಸಂಪನ್ಮೂಲ ಕ್ರೋಡೀಕರಣದ ಮೂಲಕ ಪರಿಣಾಮಗಳನ್ನು ತಗ್ಗಿಸುವ ಹಾಗೂ ರೂಪಾಂತರ ಮಾಡುವಂತಹ ಯೋಜನೆಗಳನ್ನು ರೂಪಿಸುವ ಕಡೆ ಗಮನಹರಿಸಬೇಕಾಗಿದೆ. ಕ್ರಿಯಾ ಯೋಜನೆ ಜಾರಿಗೆ 2030ರ ವೇಳೆಗೆ 52827.44 ಕೋಟಿ ರೂ.ಗಳ ಅಗತ್ಯವಿದೆ. ಸಂಬಂಧಿಸಿದ ಇಲಾಖೆಗಳಲ್ಲಿ ಹವಾಮಾನ ಬದಲಾವಣೆ ಪರಿಣಾಮಗಳ ನಿಯಂತ್ರಣ ಯೋಜನೆಗಳನ್ನು ರೂಪಿಸಿದರೂ ಅನುದಾನದ ಅಗತ್ಯತೆ ತುಂಬಾ ಇದೆ. ಆದ್ದರಿಂದಲೇ ಸರ್ಕಾರಕ್ಕೆ ದೊಡ್ಡ ಸಮಸ್ಯೆ ಎದುರಾಗಿದೆ. ಇಡೀ ದೇಶಕ್ಕೆ 11 ಲಕ್ಷ ಕೋಟಿ ರೂ.ಗಳ ಅಗತ್ಯವಿದೆ ಎಂಬ ಅಂದಾಜಿದೆ.
ಪ್ರತ್ಯೇಕ ಆಯವ್ಯಯ ಬೇಕು
ಕ್ರಿಯಾ ಯೋಜನೆ ರೂಪಿಸಿಕೊಟ್ಟಿರುವ ತಜ್ಞರ ಪ್ರಕಾರ ಎಲ್ಲ ಇಲಾಖೆಗಳಲ್ಲಿ ಹವಾಮಾನ ನಿಯಂತ್ರಿಸುವ ಯೋಜನೆಗಳಿವೆ. ಆದರೆ ಅವುಗಳ ಪರಿಣಾಮಕಾರಿ ಅನುಷ್ಠಾನವಾಗುತ್ತಿಲ್ಲ. ಕಲ್ಯಾಣ ಕಾರ್ಯಕ್ರಮಗಳ ಕಡೆ ಹೆಚ್ಚಿನ ಒತ್ತು ಇದೆ ಹೊರತು, ಪರಿಣಾಮ ತಗ್ಗಿಸುವ ಕಾರ್ಯಕ್ರಮಗಳಿಲ್ಲ. ಆದ್ದರಿಂದಲೇ ಪ್ರತ್ಯೇಕ ಆಯವ್ಯಯದ ಅಗತ್ಯವಿದೆ.

ಸರ್ಕಾರವೇ ಭರಿಸಲಾಗದು
ರಾಜ್ಯ ಸರ್ಕಾರ ಗಂಗಾ ಕಲ್ಯಾಣ, ಕೆರೆಗಳ ಅಭಿವೃದ್ಧಿಯಂತಹ 38 ಯೋಜನೆಗಳನ್ನು ವೈಪರಿತ್ಯದ ಪರಿಣಾಮ ತಗ್ಗಿಸುವ ಕಾರ್ಯಕ್ರಮಗಳಿಗೆ ಬಳಕೆ ಮಾಡಬಹುದಾಗಿದೆ. ಅದೇ ರೀತಿಯಲ್ಲಿ ಕೃಷಿ ಭಾಗ್ಯ, ಸುಜಲಾ, ಸೋಲಾರ್, ತೋಟಗಾರಿಕೆ ಮಿಷನ್, ಡ್ರಿಪ್ ಇರಿಗೇಷನ್ ಸೇರಿ 51 ಯೋಜನೆಗಳ ಬಳಕೆಗೂ ಅವಕಾಶಗಳಿವೆ. ಆದರೆ ಅಷ್ಟು ಸಾಕಾಗುವುದಿಲ್ಲ.
ಸಂಪನ್ಮೂಲ ಕ್ರೋಡೀಕರಣ ಹೇಗೆ?
ಸಂಪನ್ಮೂಲ ಕ್ರೋಡೀಕರಣಕ್ಕೆ ಹಲವು ಮಾರ್ಗಗಳನ್ನು ಹುಡುಕಲಾಗುತ್ತಿದೆ. ವಿವಿಧ ಕಂಪನಿಗಳ ಸಿಎಸ್​ಆರ್ ನಿಧಿ ಬಳಕೆಗೆ ಮಾಗೋಪಾಯಗಳನ್ನು ರೂಪಿಸುವುದು, ಸಂಘ-ಸಂಸ್ಥೆಗಳನ್ನು ಕೈ ಜೋಡಿಸುವಂತೆ, ಸಾರ್ವಜನಿಕರನ್ನು ಒಳಗೊಳ್ಳುವಂತೆ ಮಾಡುವುದು ಹಾಗೂ ಕೇಂದ್ರ ಸರ್ಕಾರದಿಂದ ಹೆಚ್ಚಿನ ನೆರವಿಗೆ ಪ್ರಯತ್ನ ಮಾಡುವುದೂ ಸೇರಿದೆ. ಆ ನಿಟ್ಟಿನಲ್ಲಿ ಚರ್ಚೆಗಳು ನಡೆದಿವೆ.
ಹವಾಮಾನ ಬದಲಾವಣೆ ಕ್ರಿಯಾ ಯೋಜನೆ ಜಾರಿಗೆ ಅಭಿವೃದ್ಧಿ ಆಯುಕ್ತರ ನೇತೃತ್ವದಲ್ಲಿ ಸಭೆಗಳನ್ನು ನಡೆಸಲಾಗಿದೆ. ಪ್ರತಿ ಇಲಾಖೆಗೂ ಏನೇನು ಮಾಡಬೇಕೆಂಬ ಮನವರಿಕೆ ಮಾಡಲಾಗಿದೆ. ಸಂಪನ್ಮೂಲ ಸಂಗ್ರಹದ ಮಾರ್ಗಗಳ ಕುರಿತು ಸಂಪುಟದ ಮುಂದೆಯೂ ಚರ್ಚೆಯಾಗಲಿದೆ.
| ಬಿ.ಪಿ.ರವಿ ಪ್ರಧಾನ ಕಾರ್ಯದರ್ಶಿ, ಪರಿಸರ ಇಲಾಖೆ
ಪ್ರತಿ ವರ್ಷ 1.5 ಕೋಟಿ ಸಸಿ
ರಾಜ್ಯದಲ್ಲಿ ಇನ್ನೂ 10 ಕೋಟಿ ಮರಗಳ ಹೆಚ್ಚಳವಾಗಬೇಕಾಗಿದ್ದು, ಪ್ರತಿ ವರ್ಷ 1.5 ಕೋಟಿ ಮರಗಳನ್ನು ನೆಡುವ ಉದ್ದೇಶವಿದೆ. ಅದರಲ್ಲಿ 1 ಕೋಟಿ ಉಳಿದರೂ ಹತ್ತು ವರ್ಷಕ್ಕೆ 10 ಕೋಟಿ ಮರಗಳಾಗುತ್ತದೆ. ಆದರೆ ಅದಕ್ಕಾಗಿ ವರ್ಷಕ್ಕೆ 1 ಸಾವಿರ ಕೋಟಿ ರೂ.ಗಳ ಅಗತ್ಯವಿದೆ.
ತಜ್ಞರ ಸಲಹೆಗಳು
ಏನೇನು ಆಗಬೇಕು?
ಕ್ರಿಯಾ ಯೋಜನೆ ಜಾರಿ ಏಕೆ?
ರಾಜಸ್ಥಾನದ ನಂತರ ಕರ್ನಾಟಕವೇ ಹೆಚ್ಚಿನ ಬರಪೀಡಿತ ಪ್ರದೇಶವಾಗಿದೆ. ಆದರೆ ಜಾಗತಿಕ ತಾಪಮಾನದಲ್ಲಿನ ಏರಿಳಿತದಿಂದಾಗಿ ಅತಿಯಾದ ಮಳೆ ಹಾಗೂ ಬರ ಉಂಟಾಗುತ್ತಿದೆ. ಇದನ್ನು ತಡೆಗಟ್ಟಬೇಕೆಂದರೆ ಕ್ರಿಯಾ ಯೋಜನೆಯನ್ನು ಜಾರಿಗೆ ತರಲೇಬೇಕಾಗಿದೆ. ಜಾರಿ ಮಾಡದೇ ಪರಿಣಾಮಗಳು ಹೆಚ್ಚಾದರೆ ಕೃಷಿ ಉತ್ಪನ್ನ ಕಡಿಮೆಯಾಗುತ್ತದೆ. ಅರಣ್ಯ ನಶಿಸುತ್ತದೆ, ಡೆಂಘ, ಮಲೇರಿಯಾದಂತಹ ರೋಗಗಳೂ ಹೆಚ್ಚುತ್ತವೆ. ಆದ್ದರಿಂದಲೇ ಕ್ರಿಯಾ ಯೋಜನೆ ಬಗ್ಗೆ ಸರ್ಕಾರ ಗಂಭೀರವಾಗಿದ್ದರೂ ಸಂಪನ್ಮೂಲದ ಚಿಂತೆ ಆವರಿಸಿದೆ. ತಾಪಮಾನದಲ್ಲಿನ ಬದಲಾವಣೆಯನ್ನು ತಗ್ಗಿಸುವುದು, ರೂಪಾಂತರ ಮಾಡುವುದು ಸೇರಿ ವಿವಿಧ ಕಾರ್ಯಕ್ರಮಗಳನ್ನು ಮಾಡಬೇಕಾಗಿದೆ. ರಾಜ್ಯಕ್ಕೆ ಒಟ್ಟಾರೆ ಕ್ರಿಯಾ ಯೋಜನೆಯ ಜತೆಗೆ ನಗರಗಳಿಗೆ ಅಗತ್ಯ ಕ್ರಿಯಾ ಯೋಜನೆಗಳನ್ನು ಪ್ರತ್ಯೇಕವಾಗಿ ರೂಪಿಸಿ ಕೊಡಬೇಕಾಗಿದೆ.
ಕ್ರಿಯಾ ಯೋಜನೆ ಏನೇನು?
ಹವಾಮಾನ ಬದಲಾವಣೆ ನಿಯಂತ್ರಣಕ್ಕೆ ಬಹುದೊಡ್ಡ ಹಣಕಾಸಿನ ಅಗತ್ಯವಿದೆ. ಅದನ್ನು ಹೊಂದಿಸುವ ಸವಾಲು ನಮ್ಮ ಮುಂದಿದೆ. ಇದಕ್ಕಾಗಿ ಖಾಸಗಿ ವಲಯ, ಸಂಘ-ಸಂಸ್ಥೆಗಳ ಜತೆಗೂ ರ್ಚಚಿಸಲಾಗುತ್ತದೆ. ಪ್ರತ್ಯೇಕ ಬಜೆಟ್ ಮಾಡುವ ನಿಟ್ಟಿನಲ್ಲಿ ಸಿಎಂ ಅವರೊಂದಿಗೂ ಸಭೆ ನಡೆಸಲಾಗುತ್ತದೆ.
| ಈಶ್ವರ ಖಂಡ್ರೆ, ಅರಣ್ಯ ಮತ್ತು ಪರಿಸರ ಸಚಿವ
ಹವಾಮಾನ ಬದಲಾವಣೆಯ ಪರಿಣಾಮಗಳನ್ನು ನಿಯಂತ್ರಿಸದಿದ್ದರೆ ಅಪಾಯ ಎದುರಿಸಬೇಕಾಗುತ್ತದೆ. ಸಂಪನ್ಮೂಲ ಅಗತ್ಯತೆ ಎಷ್ಟು, ಕ್ರೋಡೀಕರಣ ಹೇಗೆ ಎಂಬ ಬಗ್ಗೆ ಅಧ್ಯಯನ ಮಾಡಿ ವರದಿ ನೀಡಲಾಗಿದೆ. ಪ್ರತಿ ಇಲಾಖೆಯಲ್ಲಿರುವ ಯೋಜನೆಗಳಿಗೆ ಪ್ರತಿವರ್ಷ ಶೇ.25 ಅನುದಾನ ಹೆಚ್ಚಳ ಮಾಡಬೇಕು.
| ಪ್ರೊ. ಕೃಷ್ಣರಾಜ್, ಪರಿಸರ ಆರ್ಥಿಕ ತಜ್ಞರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + two =
Remember me
