
|ಡಾ.ಎಚ್.ಎಸ್.ವೆಂಕಟೇಶಮೂರ್ತಿಖ್ಯಾತ ಸಾಹಿತಿ, ಪುತಿನ ಟ್ರಸ್ಟ್ ಅಧ್ಯಕ್ಷರು
ಕನ್ನಡ ನವೋದಯ ಸಾಹಿತ್ಯದ ರತ್ನತ್ರಯರಲ್ಲಿ ಒಬ್ಬರೆಂದು ಕಾವ್ಯರಸಿಕರ ಆದರ, ಗೌರವ ಪಡೆದವರು ಪುರೋಹಿತ ತಿರುನಾರಾಯಣ ನರಸಿಂಹಾಚಾರ್. 20ನೇ ಶತಮಾನವನ್ನು ಹೆಚ್ಚುಕಡಿಮೆ ಪೂರ್ತಿಯಾಗಿ ಜೀವಿಸಿದ ಪುಣ್ಯಜೀವಿ. ಮೇಲುಕೋಟೆಯಲ್ಲಿ ಉತ್ಸವ ನಡೆಯುತ್ತಿದ್ದ ದಿನವೇ ಅವರ ಜನನವಾಗಿದ್ದರಿಂದ ಭಕ್ತಿಯ ಎಳೆ ಕೊನೆಯವರೆಗೂ ಅವರಲ್ಲಿ ಉಳಿದುಕೊಂಡಿತು. ಮೈಸೂರಿನಲ್ಲಿ ಕಾಲೇಜ್ ವ್ಯಾಸಂಗ ಮಾಡುತ್ತಿರುವಾಗಲೇ ಕಾವ್ಯದ ಆಸಕ್ತಿಯನ್ನು ಬೆಳೆಸಿಕೊಂಡ ಪುತಿನ ಮುಂದೆ ಕಾವ್ಯಶಕ್ತಿಯ ಮೂಲಕವೇ ಕನ್ನಡಕ್ಕೆ ಅಸಾಧಾರಣ ಕೊಡುಗೆ ನೀಡಿದರು.
ಬಿಕ್ಕಟ್ಟಿನ ಸಂದರ್ಭದಲ್ಲಿ ಅರಳಿದ ಪ್ರತಿಭೆ:ಪುತಿನ ಕಾವ್ಯರಚನೆ ಮಾಡಿದ ಸಂದರ್ಭ ಸಾಮಾಜಿಕವಾಗಿಯೂ, ವೈಯಕ್ತಿಕವಾಗಿಯೂ ಬಿಕ್ಕಟ್ಟಿನ ಸಂದರ್ಭವಾಗಿತ್ತು. ಏಕೆಂದರೆ, ಅದು ಸ್ವಾತಂತ್ರ್ಯಪೂರ್ವದ ಘಟ್ಟವಾಗಿತ್ತು. ಸ್ವಾತಂತ್ರ್ಯ ಆಂದೋಲನಕ್ಕೆ ದನಿಯಾಗಬೇಕಿತ್ತು. ಕನ್ನಡ ನವೋದಯ ಸಾಹಿತ್ಯದಲ್ಲಿ ಅದಾಗಲೇ ಹೆಸರು ಮಾಡಿದ್ದ ಬೇಂದ್ರೆ, ಕುವೆಂಪು ಅವರಿಗಿಂತ ಭಿನ್ನವಾಗಿ ಬರೆಯುವ ಸವಾಲಿತ್ತು. ಪರಿಸ್ಥಿತಿಗಳು ಕೂಡ ಭಿನ್ನವಾಗಿದ್ದವು. ಕುವೆಂಪು ಮಲೆನಾಡಿನ ಮಡಿಲಲ್ಲಿ ಬೆಳೆದು, ಅಲ್ಲಿನ ಪರಿಸರದಲ್ಲಿ ಒಂದಾಗಿ ಸಾಹಿತ್ಯವನ್ನು ರಚಿಸಿದರು. ಬೇಂದ್ರೆ ಧಾರವಾಡದ ಪರಿಸರದಲ್ಲಿ ಬೆಳೆದು, ಸ್ಥಳೀಯ ಭಾಷಾಸೊಗಡನ್ನು ಸಾಹಿತ್ಯದಲ್ಲಿ ಶಕ್ತಿಯುತವಾಗಿ ತಂದರು. ಪುತಿನ ಸಂಸ್ಕೃತ ಮತ್ತು ತಮಿಳು ಭಾಷಾವಲಯದಲ್ಲಿ ಬೆಳೆದವರು. ಅವರು ಕನ್ನಡದಲ್ಲಿ ಕಾವ್ಯರಚನೆ ಮಾಡಿದ್ದು ಕನ್ನಡಿಗರ ಪುಣ್ಯ. ಪುತಿನ ಆಳವಾದ ಸಂಗೀತಪ್ರಜ್ಞೆಯನ್ನೂ ಹೊಂದಿದ್ದು, ಅವರ ಸಾಹಿತ್ಯಕ್ಕೆ ಇನ್ನಷ್ಟು ಗಟ್ಟಿತನ ಒದಗಿಸಿತು ಎನ್ನಬಹುದು. ಮೈಸೂರಿನಲ್ಲಿ ಕರ್ನಾಟಕ ಸಂಗೀತ ವಿದ್ವಾಂಸರ ಕಛೇರಿಗಳನ್ನು ಆಲಿಸುತ್ತಿದ್ದ ಅವರು, ಹಿರಿಯ ವಿದ್ವಾಂಸರಾದ ಎಂ.ಹಿರಿಯಣ್ಣ ಅವರಿಂದ ತಾತ್ವಿಕ ದರ್ಶನಗಳನ್ನೂ ಪಡೆದುಕೊಂಡರು. ವಾಲ್ಮೀಕಿ ಮತ್ತು ಕಾಳಿದಾಸ ಪುತಿನ ಅವರನ್ನು ತುಂಬ ಪ್ರಭಾವಿಸಿದ ಸಂಸ್ಕೃತ ಕವಿಗಳು.
ಚತುರ್ಮುಖ ಸಾಧನೆಗಳು:ಕಾವ್ಯ, ಕಾವ್ಯ ಮೀಮಾಂಸೆ, ಗೀತರೂಪಕ, ಪ್ರಬಂಧಗಳು- ಇವು ಪುತಿನ ಅವರ ಚತುಮುಖ ಸಾಧನೆಗಳು. ಅದರಲ್ಲೂ, ಗೀತರೂಪಕ. ಸಂಗೀತರೂಪಕಗಳು ಅವರಿಗೆ ಶಾಶ್ವತವಾದ ಸಾಹಿತ್ಯಿಕ ಸ್ಥಾನ ಒದಗಿಸಿದವು. ‘ಗೋಕುಲ ನಿರ್ಗಮನ’ ಮಹತ್ವದ ಗೀತರೂಪಕ. ‘ಅಹಲ್ಯೆ’ ಪ್ರಸಿದ್ಧವಾದ ಗೀತನಾಟಕ. ‘ವಿಕಟಕವಿ ವಿಜಯ’ ಗೀತನಾಟಕವಂತೂ ಅವರ ಪ್ರಯೋಗ ಪರಿಣಿತಿಗೆ ಸಾಕ್ಷಿ. ಹಲವಾರು ಲಲಿತಪ್ರಬಂಧಗಳು ಈಗಲೂ ಮತ್ತೆ ಮತ್ತೆ ಓದುವಂತೆ ಪ್ರೇರೇಪಿಸುತ್ತವೆ. ‘ಗೋಕುಲಾಷ್ಟಮಿ’ ಲಲಿತಪ್ರಬಂಧವಂತೂ ಪ್ರತಿ ಕನ್ನಡಿಗನೂ ಓದಲೇಬೇಕಾದ ಪ್ರಬಂಧ. ಅನುವಾದ ಕ್ಷೇತ್ರದಲ್ಲೂ ಪುತಿನ ಕೊಡುಗೆ ಗಮನಾರ್ಹ. ‘ಬದಲಿಸಿದ ತಲೆಗಳು’, ‘ಸಮಕಾಲೀನ ಭಾರತೀಯ ಸಾಹಿತ್ಯ’ ಇವೆಲ್ಲ ಅನುವಾದಿತ ಕೃತಿಗಳಾದರೂ, ‘ಮಹಾಪ್ರಸ್ಥಾನ’ ವಿಶಿಷ್ಟ ಕೃತಿ. ಶ್ರೀರಾಮಕೃಷ್ಣ ಪರಮಹಂಸ ಮತ್ತು ಇತರ ದಾರ್ಶನಿಕರ ಕೊನೆಯ ಕ್ಷಣಗಳನ್ನು ಇದರಲ್ಲಿ ದಾಖಲಿಸಿದ್ದಾರೆ.
ನಿರ್ಲಿಪ್ತ ಜೀವನ:ಪುತಿನ ಅವರಿಗೆ ಸುಧಾಮ ನಾಯಕನಾಗಿದ್ದ. ನಿರ್ಲಿಪ್ತವಾದ ಜೀವನ ಸಾಗಿಸುತ್ತಿದ್ದ ಅವರು ಬೇಂದ್ರೆ ಯವರ ಬಗ್ಗೆ ಅಪಾರವಾದ ಪ್ರೀತಿ ಹೊಂದಿದ್ದರು. ಕುವೆಂಪು ಶಿಷ್ಯರಾಗಿದ್ದರು. ಅವರೊಂದಿಗೆ ಮಾತನಾಡುವುದೇ ತೀರ್ಥಸ್ನಾನದಂತೆ- ಅಷ್ಟೊಂದು ಧನ್ಯತೆಯ ಅನುಭವ ಒದಗಿಸುತ್ತಿತ್ತು. ಕಾವ್ಯಚಿಂತನೆಯ ಹೊಸ ಎತ್ತರವನ್ನು ತಲುಪಿದರೂ, ಸಾಮಾನ್ಯರೊಂದಿಗೆ ಸಾಮಾನ್ಯರಾಗಿ ಇರುತ್ತಿದ್ದರು. ಕಿರಿಯರನ್ನೂ ಗೆಳೆಯರನ್ನಾಗಿ ನೋಡುವ ಘನತೆ ಅವರದ್ದಾಗಿತ್ತು. ‘ದೈನ್ಯವಿಲ್ಲದ ಜೀವನ, ಆಯಾಸವಿಲ್ಲದ ಮರಣ’ವನ್ನು ಅವರು ಪ್ರತಿಪಾದಿಸಿದರು. ಪುತಿನ ಅವರ ಜೀವನದರ್ಶನ ಮತ್ತು ಸಾಹಿತ್ಯ ನಮ್ಮನ್ನು ಒಳ್ಳೆಯ ಗುರಿಗೆ ಕೊಂಡೊಯ್ಯಲಿ.
ಪುತಿನ ವೈಯಕ್ತಿಕ ಬದುಕು:ಪುತಿನ ಜನಿಸಿದ್ದು ಮೇಲುಕೋಟೆಯಲ್ಲಿ. ಅವರ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಹುಟ್ಟೂರಿನಲ್ಲಿಯೇ ನಡೆಯಿತು. ಅವರ ತಂದೆಯವರಾದ ಪುರೋಹಿತ ತಿರುನಾರಾಯಣ ಅಯ್ಯಂಗಾರ್ ಅವರಿಂದ ಸಾಂಪ್ರದಾಯಿಕ ಶಾಸ್ತ್ರೀಯ ಶಿಕ್ಷಣವೂ ದೊರೆಯಿತು. ಧಾರ್ವಿುಕ ಆಚರಣೆಗಳು, ವೇದ ಉಪನಿಷತ್ತುಗಳ ಅಧ್ಯಯನ, ಸಂಸ್ಕೃತಜ್ಞಾನ, ಮಹಾಕಾವ್ಯಗಳ ಓದು ಇವೆಲ್ಲವೂ ಅವರಿಗೆ ಎಳವೆಯಲ್ಲಿಯೇ ದೊರೆತು ಅವರ ಕಾವ್ಯ ವ್ಯಕ್ತಿತ್ವಕ್ಕೆ ಒಂದು ಭದ್ರ ಬುನಾದಿ ಒದಗಿಬಂತು. ಮೈಸೂರಿನಲ್ಲಿ ಅವರ ಕಾಲೇಜು ಶಿಕ್ಷಣ, ಮುಂದೆ ಬೆಂಗಳೂರಿನಲ್ಲಿ ಸೈನ್ಯದ ಮುಖ್ಯಾಧಿಕಾರಿಗಳ ಕಚೇರಿಯಲ್ಲಿ ಗುಮಾಸ್ತರಾಗಿ ಸೇವೆ ಸಲ್ಲಿಸಿದರು.
ದೇಗುಲ ಸಂಸ್ಕೃತಿಯನ್ನು ಎತ್ತಿಹಿಡಿದರು:ಕುವೆಂಪು ಅವರು ದೇಗುಲಗಳನ್ನು ಶೋಷಣೆಯ ಕೇಂದ್ರಗಳು ಎಂದು ಕರೆದರೆ, ಮಾನವೀಯ ಅಂತಃಕರಣ ಹೊಕ್ಕಿದ ಬೇಂದ್ರೆ ಕೂಡ ದೇಗುಲಗಳ ಬಗ್ಗೆ ಅಷ್ಟೇನು ಒಲವು ಹೊಂದಿರಲಿಲ್ಲ. ಅಂದರೆ, ಕನ್ನಡ ಕಾವ್ಯ ದೇಗುಲ ಸಂಸ್ಕೃತಿಯ ವಿರೋಧದಲ್ಲಿತ್ತು. ಇಂಥ ಸಂದರ್ಭದಲ್ಲಿ ಪುತಿನ ದೇವಸ್ಥಾನವನ್ನು ಅಗತ್ಯವಾದ ಸಂಸ್ಥೆ ಎಂದು ಗಟ್ಟಿದನಿಯಲ್ಲಿಯೇ ಹೇಳಿದರು. ಇದು ಅನೇಕರ ಹುಬ್ಬೇರಿಸುವಂತೆ ಮಾಡಿದ್ದು ನಿಜ. ಕಾವ್ಯಸೃಷ್ಟಿಯಲ್ಲಿ ನಾವೀನ್ಯವನ್ನು ತಂದ ಪುತಿನ ಅವರ ಎಲ್ಲ ಕವನ ಸಂಕಲನಗಳು, ಬಿಡಿ ಕವನಗಳು ಮೌಲಿಕವೇ. ಅದರಲ್ಲೂ ‘ಮಲೆದೇಗುಲ’ ಉತ್ಕ ೃ್ಟ ಕೃತಿ ಎಂಬುದು ನನ್ನ ಅನಿಸಿಕೆ. ದೇಗುಲಗಳ ಪರಿಕಲ್ಪನೆ ಮೇಲೆ ಬರೆದ 52 ಕವಿತೆಗಳು ಈ ಕೃತಿಯಲ್ಲಿವೆ. ದೇವಾಲಯ, ಮೂರ್ತಿ, ಭಕ್ತರು, ಅಲ್ಲಿನ ಪರಿಸರ, ಅಧ್ಯಾತ್ಮ, ಭಕ್ತಿ- ಹೀಗೆ ಎಲ್ಲ ಅಂಶಗಳನ್ನೂ ಈ ಕವಿತೆಗಳು ಒಳಗೊಂಡಿವೆ. ‘ವ್ಯಕ್ತಿ ಸಮಾಜದಲ್ಲಿ ಎದೆಎತ್ತಿ ನಡೆಯಬೇಕಾದರೆ ತಲೆ ತಗ್ಗಿಸುವ ಜಾಗವೊಂದು ಇರಬೇಕು, ಅದುವೇ ದೇಗುಲ’ ಎಂಬುದು ಪುತಿನ ಅಭಿಪ್ರಾಯವಾಗಿತ್ತು.
ಶ್ರೀಹರಿ ಚರಿತೆ ಮಹಾಕಾವ್ಯ:ಶ್ರೀಹರಿ ಚರಿತೆ ಮಹಾಕಾವ್ಯವನ್ನು ಪುತಿನ ವಿಶೇಷವಾದ ದೃಷ್ಟಿಕೋನದಿಂದಲೇ ಮಾಡಿದ್ದಾರೆ. ಆಧುನಿಕ ಯುಗದಲ್ಲಿ ಶ್ರೀಕೃಷ್ಣನ ಚಿಂತನೆಯನ್ನು ಸಾಕ್ಷಾತ್ಕರಿಸುವ ಪ್ರಯತ್ನವನ್ನು ಇದರಲ್ಲಿ ಮಾಡಲಾಗಿದೆ. ‘ನಿನಗೆ ಕರ್ಮವನ್ನು ಮಾಡು ಅಂತ ಹೇಳುವವರು ಯಾರು?’ ಎಂಬ ಪ್ರಶ್ನೆ ಬಂದಾಗ, ಅದನ್ನು ಗೀತೆಯಲ್ಲಿ ಹೇಳಿದ್ದು ಶ್ರೀಕೃಷ್ಣ. ಇಲ್ಲಿ ಪುತಿನ ಅವರು ಸಮಾಜವನ್ನೇ ಕೃಷ್ಣನ ಪ್ರತೀಕವಾಗಿಕೊಂಡಿದ್ದಾರೆ. ವ್ಯಷ್ಟಿ ಮತ್ತು ಸಮಷ್ಟಿಯ ಹಿತದ ಬಗ್ಗೆ ಇಲ್ಲಿ ಅನೇಕ ಸಂಗತಿಗಳು ಪ್ರಸ್ತಾಪವಾಗಿವೆ. ಆಧುನಿಕವಾದ ವಿಚಾರವನ್ನು, ಪ್ರಾಚೀನ ಕಥೆಯ ಮೂಲಕ ಹೊಸ ವಿಧಾನದಲ್ಲಿ ಹೇಳಿರುವ ಪರಿಯೇ ಅನನ್ಯ.

|ಕವಿತಾ ಆಡೂರುಸಾಹಿತಿ
ಕನ್ನಡದ ಪ್ರಮುಖ ಲೇಖಕರು ಹಾಗೂ ದಾರ್ಶನಿಕ ಕವಿ ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ. ಜೀವನದ ಎಲ್ಲ ಮಜಲುಗಳನ್ನು ಪರಿಚಯಿಸುವ ‘ಮಂಕುತಿಮ್ಮನ ಕಗ್ಗ’ ಪದ್ಯಗಳ ಮೂಲಕ ಹೆಸರುವಾಸಿಯಾದವರು. ಆತ್ಮೋನ್ನತಿಯ ಹಾದಿಯಲ್ಲಿ ಅರಿವಿನಿಂದ ನಡೆದವರು. ಎಲ್ಲರೊಳಗೊಂದಾಗಿ ಬದುಕಿದ ಪ್ರಾತಃಸ್ಮರಣೀಯರು.
ಡಿವಿಜಿ ಅವರ ಎಲ್ಲ ಕೃತಿಗಳಲ್ಲೂ ಅಮಿತವಾದ ಜೀವನೋತ್ಸಾಹ, ಜೀವನ್ಮುಖಿ ನಿಲುವನ್ನು ಕಾಣುತ್ತೇವೆ. ಎಂಥ ಪ್ರತಿಕೂಲ ಪರಿಸ್ಥಿತಿಯಲ್ಲೂ ವಿಚಲಿತರಾಗದೆ ಜೀವನೋತ್ಸಾಹದಿಂದ ಬದುಕಿದವರು ಅವರು. ಅದನ್ನೇ ತಮ್ಮ ಕೃತಿಯಲ್ಲೂ ಹೇಳಿದ್ದಾರೆ. ನಮ್ಮ ಸುತ್ತಲೂ ಒಳ್ಳೆಯದು ಬಹಳಷ್ಟಿದೆ. ಅದನ್ನು ಎಳೆವೆಯಿಂದಲೇ ತಿಳಿಯುವ ಕಾರ್ಯವಾಗಬೇಕು. ಹಾಗಾದಲ್ಲಿ ದೌರ್ಬಲ್ಯ ಕಳಚಿಕೊಂಡು ಗುಣಾತೀಶಯರಾಗಿ ಬದುಕಲು ಸಾಧ್ಯ.
ಡಿವಿಜಿ ಅವರು ತಮಗೆ ದೊರೆತ ಪ್ರಶಸ್ತಿಯ ಮೊತ್ತಗಳನ್ನು ಎಂದಿಗೂ ಬಳಸಿಕೊಳ್ಳಲಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಹಲವು ಪ್ರಶಸ್ತಿಗಳನ್ನು ಪಡೆದರೂ, ಅದರಿಂದ ಬಂದ ಹಣವನ್ನು ತಾವೇ ಸ್ಥಾಪಿಸಿದ ಗೋಖಲೆ ಸಾರ್ವಜನಿಕ ಸಂಸ್ಥೆಗೆ ದಾನವಾಗಿ ನೀಡಿದರು. ಆರ್ಥಿಕವಾಗಿ ದುರ್ಬಲರಾಗಿದ್ದರೂ, ಶ್ರೀಮಂತಿಕೆ ಬಯಸದ ಅವರು, ದಾನ ಮಾಡುವ ಗುಣವನ್ನು ರೂಢಿಸಿಕೊಂಡಿದ್ದರು.
ಮಹತ್ವದ ಕೃತಿಗಳು:ಡಿವಿಜಿ ಕೃತಿಗಳ ಬಗ್ಗೆ ಹೇಳುವುದಾದರೆ ‘ಜ್ಞಾಪಕ ಚಿತ್ರಶಾಲೆ’ ಆ ಕಾಲದ ಸಾಮಾಜಿಕ ಚಿತ್ರಣವನ್ನು ಪರಿಚಯಿಸು ತ್ತದೆ. ಅವರ ಕೃತಿಗಳನ್ನು ಓದಿದಾಗ ಕೆಟ್ಟದ್ದು ಕಾಣುವುದೇ ಇಲ್ಲ. ಎಲ್ಲರದಲ್ಲೂ ಒಳ್ಳೆಯದನ್ನೇ ಹುಡುಕುವವರು. ನಾಡು-ನುಡಿಯ ಬಗ್ಗೆ ಅವರ ನಿಲುವು ಹೇಳುವುದಾದರೆ ಸಹೃದಯ ವಾತಾವರಣ ಇಲ್ಲದೆ ಯಾವ ಭಾಷೆ, ಬರಹವೂ ಉಳಿಯಲು ಸಾಧ್ಯವಿಲ್ಲ ಎಂದು ನಂಬಿದ್ದವರು. ಒಂದೆರಡು ಕಗ್ಗ ಓದಿ ಡಿವಿಜಿಯವರ ಇಡೀ ವ್ಯಕ್ತಿತ್ವವನ್ನು ಅರಿಯಲು ಸಾಧ್ಯವಿಲ್ಲ. ಅವರ ತಮ್ಮ ಕಗ್ಗದ ಮೂಲಕ ಇಡೀ ಜೀವನದ ಚಿತ್ರಣವನ್ನೇ ಕಟ್ಟಿಕೊಟ್ಟಿದ್ದಾರೆ. ಬದುಕು, ಪ್ರೀತಿ ಎಲ್ಲವನ್ನೂ ಕಗ್ಗದಲ್ಲಿ ಕಾಣಬಹು ದಾಗಿದೆ. ಕಗ್ಗ ಮನಸ್ಸಿಗೊಂದು ಯೋಗ, ಅದನ್ನು ಓದಿದಲ್ಲಿ ಒಳಗನ್ನು ಅರಿಯಲು, ಬದುಕಿನ ವಿಸ್ತಾರ ತಿಳಿಯಲು ಸಾಧ್ಯ.
ಜೀವನದ ಹಾದಿ:ನುಡಿದಂತೆ ನಡೆದ, ಬರೆದಂತೆ ಬದುಕಿದ ಡಿವಿಜಿ ಅವರು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ 1887ರ ಮಾರ್ಚ್ 17ರಂದು ಜನಿಸಿದರು. ಬಾಲ್ಯವನ್ನು ಉತ್ತಮವಾಗಿ ಕಳೆದ ಅವರು 1898ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣ ಮುಗಿಸಿದರು. ಅವರೇ ಹೇಳುವಂತೆ ‘ಶಿಕ್ಷಣ ಎನ್ನುವುದು ತರಗತಿಯಲ್ಲಿ ಕುಳಿತು ಕಲಿಯುವುದಷ್ಟೇ ಅಲ್ಲ, ಪರಿಸರ, ಪ್ರಕೃತಿ ಸೌಂದರ್ಯಗಳಿಂದಲೂ ಕಲಿಯುವುದು ಬಹಳಷ್ಟಿದೆ’. ಅದೇ ರೀತಿಯಲ್ಲಿ ಅವರು ಶಾಲೆಯೊಳಗೆ ಮಾತ್ರವಲ್ಲದೇ ಹೊರಗಿನ ಪರಿಸರದಿಂದಲೂ ಬಹಳಷ್ಟು ಕಲಿತಿದ್ದರು. ಇದಕ್ಕೆ ಪೂರಕವಾಗಿ ಮನೆಯಲ್ಲೂ ನಿತ್ಯ ಕಾವ್ಯ-ಕೃತಿ ವಾಚನಗಳು ನಡೆಯುತ್ತಿದ್ದವು. ಕನ್ನಡದ ಜತೆಗೆ ಸಂಸ್ಕೃತ, ಇಂಗ್ಲಿಷ್ ಭಾಷೆಯಲ್ಲೂ ಪಾಂಡಿತ್ಯ ಹೊಂದಿದ್ದರು. ಹಾಗಾಗಿ ಅವರು 2ನೇ ತರಗತಿಯಲ್ಲಿ ಇರುವಾಗಲೇ 4ನೇ ತರಗತಿಗೆ ಬಡ್ತಿ ಪಡೆದುಕೊಂಡಿದ್ದರು. ಪ್ರೌಢಶಾಲೆ ಹಂತದವರೆಗೂ ಶಾಲೆ ಮತ್ತು ಸಮಾಜದಿಂದ ಅವರಿಗೆ ಉತ್ತಮ ಶಿಕ್ಷಣ ಲಭಿಸಿತು. ಆದರೆ, ಪ್ಲೇಗ್​ನಿಂದ ಅಜ್ಜ-ಅಜ್ಜಿಯನ್ನು ಕಳೆದುಕೊಂಡ ನಂತರ ಕೋಲಾರದಲ್ಲಿ ಶಿಕ್ಷಣ ಮುಂದುವರಿಸಬೇಕಾಯಿತು. ಆರ್ಥಿಕ ಸಂಕಷ್ಟದಿಂದಾಗಿ ತಮ್ಮ ಶಿಕ್ಷಣದ ಖರ್ಚನ್ನು ತಾವೇ ಭರಿಸಬೇಕಾಯಿತು. ಇದಕ್ಕಾಗಿ ಅವರು ಅನುವಾದ ಮಾಡುವುದನ್ನು ಪ್ರಾರಂಭಿಸಿದರು. ಈ ಕುರಿತು ‘ಮಸಿ ಕುಡಿಕೆಯಿಂದ ನನ್ನ ಜೀವನ ಪ್ರಾರಂಭವಾಯಿತು’ ಎಂದು ಅವರೇ ಹೇಳಿಕೊಂಡಿದ್ದಾರೆ.
ಖ್ಯಾತ ಗಾಯಕರಾದ ಗಣೇಶ್ ದೇಸಾಯಿ, ರಾಘವೇಂದ್ರ ಬೀಜಾಡಿ, ಅಭಿಜ್ಞಾ ಅವರು ಪುತಿನ ಮತ್ತು ಡಿವಿಜಿ ಅವರ ಹಲವು ಗೀತೆಗಳನ್ನು ಸುಶ್ರಾವ್ಯವಾಗಿ ಪ್ರಸ್ತುತಪಡಿಸಿದರು. ಅರ್ಥಪೂರ್ಣ ಸಂವಾದದ ಮಧ್ಯೆ ಇವರು ಹರಿಸಿದ ಸಂಗೀತಸುಧೆ ಕೇಳುಗರ ಮೆಚ್ಚುಗೆಗೆ ಪಾತ್ರವಾಯಿತು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
