|ಎಂ.ಎಸ್.ಜೆ. ನಾಯಕ್ಹಿರಿಯ ವಾಕ್ ತಜ್ಞರು
ಕಣ್ಣಿಗೆ ಕಾಣದಂಥ ನ್ಯೂನತೆಯೇ ಶ್ರವಣದೋಷ. ಶ್ರವಣದೋಷಕ್ಕೆ ಮೊದಲು ಶಬ್ದಮಾಲಿನ್ಯ ಕಾರಣ ಎನ್ನಲಾಗುತ್ತಿತ್ತು. ಈಗ ಮನೆಯಲ್ಲಿಯೇ ಶಬ್ದಪ್ರಮಾಣ ಹೆಚ್ಚಾಗುತ್ತಿದೆ. ಮನರಂಜನೆ, ಟಿವಿ, ರೇಡಿಯೋ, ಮೊಬೈಲ್ ಅಪಾಯಕಾರಿ ಆಗಿವೆ. 100 ಯುವಕರಲ್ಲಿ 12 ಮಂದಿಗೆ ಶ್ರವಣ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದು ವಿಶ್ವಸಂಸ್ಥೆ ತನ್ನ ವರದಿ ಯಲ್ಲಿ ಉಲ್ಲೇಖಿಸಿದೆ. ಶ್ರವಣದೋಷ ಎನ್ನುವುದು ಮಧ್ಯ ಕಿವಿಯಲ್ಲಿ ಸಂವಹನದ ಕೊರತೆ. ಇದು 100 ಮಂದಿಯಲ್ಲಿ 10 ಜನಕ್ಕೆ ಗುಗ್ಗೆ, ಸೋರಿಕೆ, ತಮಟೆಯಲ್ಲಿ ರಂಧ್ರ, ಮಧ್ಯ ಕಿವಿ ಅಡಚಣೆಯಿಂದ ಸಮಸ್ಯೆ ಕಂಡುಬರುತ್ತದೆ. ಇದನ್ನು ಶಸ್ತ್ರಚಿಕಿತ್ಸೆ ಅಥವಾ ಔಷಧದಿಂದ ಗುಣಪಡಿಸಲು ಸಾಧ್ಯ. ಶ್ರವಣದೋಷದಿಂದ ಮುಕ್ತವಾಗಲು ಅತ್ಯಾಧುನಿಕ ಸಾಧನಗಳು ಮತ್ತು ಶಸ್ತ್ರಚಿಕಿತ್ಸೆಗಳಿವೆ.
ಕಿವಿ ಸಂರಕ್ಷಣೆ ಹೇಗೆ?:ಕಿವಿಗೆ ತನ್ನನ್ನು ತಾನು ಸಂರಕ್ಷಣೆ ಮಾಡಿಕೊಳ್ಳುವ ನೈಸರ್ಗಿಕಶಕ್ತಿ ಇದೆ. ಅದಕ್ಕಾಗಿ ಗುಗ್ಗೆ ಉತ್ಪತ್ತಿ ಆಗಿ ತಾನಾಗಿಯೇ ಬಿದ್ದುಹೋಗುತ್ತದೆ. ಹಾಗಾಗಿ ಗುಗ್ಗೆ ತೆಗೆಯಲು ಬಡ್ಸ್ ಬಳಕೆ ಮಾಡುವುದು ತಪು್ಪ. ಕಿವಿಯಲ್ಲಿ ಉತ್ಪತ್ತಿಯಾಗುವ ಮೇಣದ ದ್ರವವನ್ನು ಸ್ವಚ್ಛ ಮಾಡಿಕೊಳ್ಳುವುದು ತಪು್ಪ. ಕಿವಿಯ ಒಳಗೆ ನೀರು ಹೋಗದಂತೆ ನೋಡಿಕೊಳ್ಳಬೇಕು. ಕಿವಿಯ ಒಳಗೆ ಸೋಂಕು ಆಗಬಾರದು. ಕೆರೆತ ಉಂಟಾದಾಗ ಕೀ, ಪೆನ್ಸಿಲ್, ಪೆನ್, ಕಡ್ಡಿ ಇನ್ನಿತರ ವಸ್ತುಗಳಿಂದ ಕೆರೆದುಕೊಳ್ಳುವುದು ಸರಿಯಲ್ಲ. ಇದರಿಂದ ಸೂಕ್ಷ್ಮ ಗಾಯವಾಗಿ ಬಳಿಕ ದೊಡ್ಡಮಟ್ಟಕ್ಕೆ ತಿರುಗಿ ಅಪಾಯವಾಗಬಹುದು. ಕಿವಿನೋವು ಕಾಣಿಸಿಕೊಂಡಾಗ ವೈದ್ಯರ ಸಲಹೆ ಇಲ್ಲದೆ ಡ್ರಾಪ್ಸ್ ಅಥವಾ ಸ್ವಯಂಔಷಧ ಬಳಕೆಯೂ ಸರಿಯಲ್ಲ. ಶ್ರವಣತಜ್ಞರನ್ನು ಸಂಪರ್ಕ ಮಾಡಬೇಕು. ಕಿವಿಯ ಒಳಗೆ ಹರಳೆಣ್ಣೆ, ಕೊಬ್ಬರಿ ಎಣ್ಣೆ ಹಾಕಿಕೊಳ್ಳುವುದು ಅವೈಜ್ಞಾನಿಕ. ಕಿವಿಪರದೆ ಮೇಲೆ ಅದು ಹೆಚ್ಚು ಕಾಲ ಉಳಿದು ಶಬ್ದದ ಅಲೆಗಳು ಮಂದವಾಗುತ್ತವೆ.
ಸ್ವಯಂ ಶ್ರವಣ ಪರೀಕ್ಷೆ:ಮೊಬೈಲ್ ಫೋನ್ ಆ್ಯಪ್​ ಬಳಸಿ ಶ್ರವಣದೋಷ ಪರೀಕ್ಷೆ ಮಾಡಿಕೊಳ್ಳಬಹುದು. ಎತ್ತರ, ಸಾಧರಣ, ಕಡಿಮೆ ಮಟ್ಟದಲ್ಲಿ ವಿವಿಧ 20 ಸೌಂಡ್ ಮಾದರಿ ಶಬ್ದ ಪರಿಚಯವಿದೆ.
10 ನಿಮಿಷ ವಿಶ್ರಾಂತಿ ಕೊಡಿ:ಕಾಲ್​ಸೆಂಟರ್ ಅಥವಾ ಇಯರ್ ಫೋನ್ ಬಳಸಿ ನಿರಂತರವಾಗಿ ಶಬ್ದ ಕೇಳುತ್ತಿದ್ದರೆ ಅಂಥವರು ಮೊಬೈಲ್, ಟಿವಿ, ಕಂಪ್ಯೂಟರ್​ನಲ್ಲಿ ಶೇ.60ಕ್ಕಿಂತ ಕಡಿಮೆ ಶಬ್ದ (ವಾಲ್ಯುಮ್ ಇಟ್ಟುಕೊಳ್ಳಬೇಕು. 1 ಗಂಟೆಗೂ ಹೆಚ್ಚು ಕಾಲ ಬಳಸಿದರೆ 10 ನಿಮಿಷವಾರೂ ಕಿವಿಗೆ ವಿಶ್ರಾಂತಿ ಕೊಡಬೇಕು. ಇಲ್ಲವಾದರೆ, ಕಿವಿ ಶಕ್ತಿ ಕಳೆದುಕೊಳ್ಳಬಹುದು.
|ಡಾ. ರಮೇಶ್ ಕೆ. ಕೌಲಗುಡ್ಜಂಟಿ ಆಯುಕ್ತರು, (ಎನ್​ವಿಬಿ ಡಿಸಿಪಿ ವಿಭಾಗ) ಆರೋಗ್ಯ ಇಲಾಖೆ
ಪ್ರತಿಯೊಬ್ಬರೂ ತಮ್ಮದೇ ಆದ ಸಾಮರ್ಥ್ಯ ಹೊಂದಿರುತ್ತಾರೆ. ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕೆಂದರೆ ಆರೋಗ್ಯ ಬಹಳ ಮುಖ್ಯವಾಗುತ್ತದೆ. ಹಾಗಾಗಿ ಸಾಮರ್ಥ್ಯಕ್ಕೆ ಶ್ರವಣದೋಷ ಅಡ್ಡಿಯಾಗದಂತೆ ಎಚ್ಚರವಹಿಸಿ. ಈ ನಿಟ್ಟಿನಲ್ಲಿ ಶ್ರವಣಶಕ್ತಿ ರಕ್ಷಿಸಿಕೊಳ್ಳುವುದು ಪ್ರತಿಯೊಬ್ಬರ ಹೊಣೆ. ಶ್ರವಣ ಆರೋಗ್ಯವನ್ನು ಜನರು ಗಂಭೀರವಾಗಿ ಪರಿಗಣಿಸುವುದಿಲ್ಲ. ಸಮಸ್ಯೆಯ ಅರಿವಿದ್ದರೂ ಸಕಾಲದಲ್ಲಿ ಚಿಕಿತ್ಸೆ ಪಡೆಯದೆ ಕಿವುಡುತನಕ್ಕೆ ಒಳಗಾಗುತ್ತಿದ್ದಾರೆ. ಹಾಗಾಗಿ ಜನರಲ್ಲಿ ಜಾಗೃತಿ ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆ 2016ರ ಮಾರ್ಚ್ 3ರಂದು ಪ್ರಥಮ ಬಾರಿಗೆ ‘ವಿಶ್ವ ಶ್ರವಣ ದಿನ’ ಘೋಷಣೆ ಮಾಡಿತು.
ಜಗತ್ತಿನಲ್ಲಿ 36 ಕೋಟಿ ಜನರು ನಾನಾ ರೀತಿಯ ಶ್ರವಣದೋಷ ಹೊಂದಿದ್ದಾರೆ. ಅವರಲ್ಲಿ 3.5 ಕೋಟಿ, 0-14 ವಯಸ್ಸಿನ ಮಕ್ಕಳು ಇದ್ದಾರೆ. 65 ವರ್ಷ ಮೇಲ್ಪಟ್ಟ ಪ್ರತಿ ಮೂವರಲ್ಲಿ ಒಬ್ಬರು ಶ್ರವಣದೋಷ ಹೊಂದಿದ್ದಾರೆ. 2050ರ ವೇಳೆಗೆ ಜಗತ್ತಿನಲ್ಲಿ ಪ್ರತಿ ನಾಲ್ವರಲ್ಲಿ ಒಬ್ಬರು ಶ್ರವಣ ಸಮಸ್ಯೆಗೆ ಒಳಗಾಗಲಿದ್ದು, ಕಿವುಡು ಸಮಸ್ಯೆ ಹೊಂದಿರುವವರ ಸಂಖ್ಯೆ 70 ಕೋಟಿ ತಲುಪಲಿದೆ ಎಂದು ವಿಶ್ವಸಂಸ್ಥೆ ಅಂದಾಜು ಮಾಡಿದೆ. ಭಾರತದಲ್ಲಿ ಶೇ.6.3 ಜನರಿಗೆ ಶ್ರವಣ ಸಮಸ್ಯೆ ಇದೆ. ಇದರಲ್ಲಿ 0-14 ವಯಸ್ಸಿನ ಮಕ್ಕಳೇ ಹೆಚ್ಚಾಗಿದ್ದಾರೆ. ರಾಜ್ಯದಲ್ಲಿ 2011ರ ಜನಗಣತಿ ಪ್ರಕಾರ 1,939 ಮಕ್ಕಳು ಶ್ರವಣ ಸಮಸ್ಯೆಗೆ ಒಳಗಾಗಿದ್ದಾರೆ. ಹಾಗಾಗಿ ಜನರು ಶ್ರವಣ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಬಾರದು. ದೇಹದ ಇತರ ಅಂಗಾಂಗಗಳ ಬಗ್ಗೆ ಎಚ್ಚರ ವಹಿಸುವಂತೆ ಶ್ರವಣ ಆರೋಗ್ಯ ಬಗ್ಗೆಯೂ ಕಾಳಜಿ ವಹಿಸಬೇಕು.
ಮಕ್ಕಳಲ್ಲಿ ಮಾತಿನ ಬೆಳವಣಿಗೆ ಆಗಲು ಶ್ರವಣಶಕ್ತಿ ಅತ್ಯವಶ್ಯಕ. ಹಾಗಾಗಿ ಮಗು ಹುಟ್ಟಿದ ಮೂರು ತಿಂಗಳ ಒಳಗಾಗಿ ಅದರ ಶ್ರವಣ ಸಾಮರ್ಥ್ಯವನ್ನು ವೈದ್ಯರಲ್ಲಿ ಪರೀಕ್ಷಿಸಿ ಸಮಸ್ಯೆ ಇಲ್ಲದಿರುವುದನ್ನು ಖಾತ್ರಿಪಡಿಸಿಕೊಳ್ಳ ಬೇಕು. ಹಾಗೇನಾದರೂ ಸಮಸ್ಯೆ ಇದ್ದಲ್ಲಿ ಆರಂಭದಲ್ಲೇ ಚಿಕಿತ್ಸೆ ಕೊಡಿಸುವ ಮೂಲಕ ಮಗುವನ್ನು ಶ್ರವಣದೋಷದಿಂದ ಮುಕ್ತವಾಗಿಸಬಹುದು. ಶ್ರವಣದೋಷ ಹೊಂದಿರುವ ಮಕ್ಕಳಿಗೆ ಆರಂಭದಲ್ಲೇ ಚಿಕಿತ್ಸೆ ಒದಗಿಸಿದರೆ ಶೇ. 60 ಸಮಸ್ಯೆ ಪರಿಹಾರ ಸಾಧ್ಯ. ಇದಕ್ಕಾಗಿ ಸೂಕ್ತ ಸಮಯದಲ್ಲಿ ಸಮಸ್ಯೆ ಪತ್ತೆ ಮತ್ತು ಚಿಕಿತ್ಸೆಯ ಅಗತ್ಯವಿದೆ. ನಿರ್ಲಕ್ಷಿಸಿದರೆ ಮಕ್ಕಳು ಶಾಶ್ವತ ಕಿವುಡುತನಕ್ಕೆ ಒಳಗಾಗಬೇಕಾಗುತ್ತದೆ. ಪರಿಣಾಮ ಶ್ರವಣದೋಷದಿಂದ ಮಕ್ಕಳು ವಾಕ್ ಸಾಮರ್ಥ್ಯವನ್ನೂ ಕಳೆದುಕೊಳ್ಳುತ್ತಾರೆ. ಹಾಗಾಗಿ ಶ್ರವಣದೋಷವನ್ನು ನಿರ್ಲಕ್ಷ್ಯ ಮಾಡಬೇಡಿ.
ರಾಜ್ಯ ಸರ್ಕಾರ ಕಾಕ್ಲಿಯರ್ ಇಂಪ್ಲಾಂಟ್ ಯೋಜನೆ ಜಾರಿಗೊಳಿಸಿದ್ದು, ಶ್ರವಣದೋಷ ಹೊಂದಿರುವ ಮಕ್ಕಳಿಗೆ ಉಚಿತ ಚಿಕಿತ್ಸೆ ಒದಗಿಸುವ ಮೂಲಕ ರಾಜ್ಯವನ್ನು ಶ್ರವಣದೋಷಮುಕ್ತ ಗೊಳಿಸುವ ನಿಟ್ಟಿನಲ್ಲಿ ಮುನ್ನಡಿ ಇರಿಸಿದೆ. ಇದರ ಮೊದಲ ಹಂತವಾಗಿ ಬೆಂಗಳೂರಿನ ಕೆ.ಸಿ.ಜನರಲ್ ಸಾರ್ವಜನಿಕ ಆಸ್ಪತ್ರೆ ಹಾಗೂ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಕಾಕ್ಲಿಯರ್ ಇಂಪ್ಲಾಂಟ್ ಯೋಜನೆ ಪ್ರಾರಂಭಿಸಿದ್ದು, ಇಲ್ಲಿ 6 ವರ್ಷದೊಳಗಿನ ಮಕ್ಕಳಿಗೆ ಉಚಿತವಾಗಿ ಕಾಕ್ಲಿಯರ್ ಇಂಪ್ಲಾಂಟ್ ಚಿಕಿತ್ಸೆ ನೀಡಲಾಗುತ್ತದೆ. ಸದ್ಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಕ್ಕಳಿಗೆ ಉಚಿತ ಚಿಕಿತ್ಸೆ ಕಲ್ಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ಈ ಸೌಲಭ್ಯವನ್ನು ಶ್ರವಣದೋಷ ಹೊಂದಿರುವ ಎಲ್ಲ ಮಕ್ಕಳಿಗೂ ವಿಸ್ತರಿಸಲು ಸರ್ಕಾರ ಚಿಂತನೆ ನಡೆಸಿದೆ.
ಈ ವರ್ಷದ ಘೋಷವಾಕ್ಯ:ವಿಶ್ವ ಆರೋಗ್ಯ ಸಂಸ್ಥೆ ಈ ವರ್ಷ ‘ಜೀವನವಿಡೀ ಕೇಳಿಸಿಕೊಳ್ಳಲು ಜಾಗೃತಿಯಿಂದ ಆಲಿಸಿರಿ’ (To hear for life, listen with care) ಎಂಬ ಘೋಷವಾಕ್ಯದೊಂದಿಗೆ ಶ್ರವಣ ದಿನ ಆಚರಿಸುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
